ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾತಂತ್ರ್ಯ ನೋಟ - 4


ಯಾವ ಸುಖಕ್ಕೋಸ್ಕರ?
 ಸ್ವಾತಂತ್ರ್ಯ ನೋಟ - 4


ಸ್ವಾಂತಂತ್ರ್ಯ ಹೋರಾಟದ ಬಗ್ಗೆ ವಿವರ ನೋಡ್ತಾ ನಿನ್ನೆ 1800ರ ಇಸವಿ ಸಮೀಪದವರೆಗಿನ ವಿವರಗಳನ್ನು ಪ್ರಸ್ತಾಪಿಸಿದ್ದೆ.  ಮುಂದಿನ ವಿವರ ಪ್ರಸ್ತಾಪಿಸಬೇಕು ಅನ್ಕೊಂಡಾಗ ಪುನಃ ಒಂದಷ್ಟು ಯೋಚನೆ ಬಂತು.  

ಅಂದಿನ ಯುಗದಲ್ಲಿ ಹೋರಾಟ ಮಾಡಿದವರು ಸಾಮಾನ್ಯ ಜನವೋ, ಇಲ್ಲವೋ ಅಧಿಕಾರಸ್ಥರೊ ಅಂತ. ಸ್ವಾತಂತ್ರ್ಯ ಹೋರಾಟ ಹೋರಾಟ ಅನ್ನೋದು ಜನರ ಹೋರಾಟ ಅಗಿದ್ದು ಬಹುಶಃ ಇಪ್ಪತ್ತನೆಯ ಶತಮಾನದ ಪ್ರಾರಂಭದ ವೇಳೆಗೆ. ಜನರಿಗೆ  ಹೋರಾಟ ಮಾಡೊ ಸ್ವಾತಂತ್ರ್ಯ ಬಂದದ್ದು ಕೂಡಾ ಬ್ರಿಟಿಷ್ ಆಡಳಿತದಲ್ಲ?

ಹಿಂದೆ ರಾಜಾ, ಆತನ ಸಾಮಂತರು, ಪಾಳೆಯಗಾರರು ಇವರೆಲ್ಲ, ಒಬ್ಬರು ಮತ್ತೊಬ್ಬರ ಮೇಲೆ ಸದಾ ಯುದ್ಧ ಮಾಡ್ತಿದ್ರು.  ಭಾರತದಲ್ಲಂತೂ ಹೊರಪ್ರದೇಶಗಳಿಂದ ಬ್ರಿಟಿಷರಿಗಿಂತ ಹಲವು ಶತಮಾನಗಳ ಹಿಂದೆ ಬಂದ ಮೊಗಲರದು ಮತ್ತೊಂದೇ ಕಥೆ. ಈ ರಾಜಾ, ಮರಿ ರಾಜಾ, ದೊಣ್ಣೆ ನಾಯಕರಂತಹ ಪಾಳೆಯಗಾರರು ಇವರೆಲ್ಲರ ಜಗಳದಲ್ಲಿ ಆಗಾಗ ಯುದ್ಧ ಆಗ್ತಿತ್ತು ಎಂಬ ಸತ್ಯವನ್ನು ನೆನೆದಾಗ ಪ್ರತಿ ಊರುಗಳಲ್ಲಿದ್ದ ಜನಸಾಮಾನ್ಯರಿಗೆ "ಯಾವತ್ತು ತಮ್ಮನ್ನು ಯಾರು ಆಳ್ತಾರೆ ಎಂಬುದು ಸಂತಸಕರ ನಿರೀಕ್ಷೆ ಆಗಿರಲಿಕ್ಕೆ ಸಾಧ್ಯವಿತ್ತೆ?".  ಅಥವಾ ಅವರೂ ನಾವು ಇಂದಿನ ರಾಜಕಾರಣದಲ್ಲಿ ಬಯಸುವ ಹಾಗೆ "ಮುಂದೆ ಚುಕ್ಕಾಣಿ ಹಿಡಿದವನಾದರೂ ನಮಗೆ ಹಿತವಾಗಿರ್ತಾನೆಯೇ ಎಂಬ ನಿರೀಕ್ಷೆಯಲ್ಲಿ ಇದ್ದಿರಲಿಕ್ಕೂ ಸಾಕು".  ಅದೇನೇ ಇದ್ದರೂ ಅಂತಹ ಬದುಕೆಂಬುದು ಜನಸಾಮಾನ್ಯರಿಗೆ ಅತಂತ್ರವಾಗಿತ್ತು ಅಂದುಕೊಳ್ಳುವುದು ಸುಳ್ಳಾಗಿರಲಿಕ್ಕೆ ಸಾಧ್ಯವಿಲ್ಲ.  

ಚರಿತ್ರೆಗಳು ಕೆಲವೊಂದು ರಾಜರುಗಳ ಕಾಲ ಸುಭಿಕ್ಷವಾಗಿತ್ತು, ಸಂಪದ್ಭರಿತವಾಗಿತ್ತು ಎಂಬುದನ್ನು ನಿರ್ಣಯಿಸಿರುವುದು ಆತ ಎಷ್ಟು ಉಳಿದ ಪ್ರದೇಶಗಳನ್ನು ಕೊಳ್ಳೆ ಹೊಡೆದಿದ್ದ ಎಂಬ ಆಧಾರಿತ ಕಥೆಗಳಾಗಿದ್ದಿದ್ದಲ್ಲಿ ಅಚ್ಚರಿಯಿಲ್ಲ. 

ಹೀಗಾಗಿ ಸಾಮಾನ್ಯ ಪ್ರಜೆ ಅವನಿಗಿದ್ದ ನಾಯಕತ್ವದ ಬದಲಾವಣೆಗಳ ಬಗೆಗೆ "ಯಾವನು ಬಂದ್ರೆ ಏನು ಎಂದು ನಿರ್ಲಿಪ್ತತೆ ತಾಳಿದ್ದರೆ" ಅಥವಾ "ಯಾವನೋ ಬಲಾಢ್ಯ ಬಂದು ನಾನಿರುವ ನಾಡನ್ನು ಆಕ್ರಮಿಸಿಕೊಂಡರೆ ನನಗೆ ಮಾಡಲಿಕ್ಕೆ ಆಗುವುದಾದರೂ ಏನು?” ಎಂಬ ಅಸಹಾಯಕ ಭಾವ ತಳೆದಿದ್ದರೆ ಅಚ್ಚರಿಯಿಲ್ಲ.  ಅವನಿಗೆ ತನ್ನ ಆಸ್ತಿ, ಹೆಂಡತಿ, ಮಕ್ಕಳನ್ನು ನಿರಂತರವಾದ ಪುಂಡತನಗಳಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದ್ದೀತು.

ನಾ ಹೇಳುತ್ತಿರುವುದು ಸಾಮಾನ್ಯ ಮನುಷ್ಯ ನಿರ್ಜೀವಿಯಾಗಿದ್ದ ಅಂತ ಅಲ್ಲ.  ಯಾವ ಕ್ಷಣದಲ್ಲಿ ಏನೇ ಆಗಬಹುದು ಎಂದು ಜೀವಿಸುತ್ತಿದ್ದ ಆತ ಖಂಡಿತ ಜಾಗೃತನಾಗಿ ಇದ್ದಿರುತ್ತಾನೆ. ಹೆಚ್ಚು ಸ್ವಾವಲಂಬಿಯೂ ಆಗಿರ್ತಾನೆ. ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಇವೆಲ್ಲ ಸಾಗಿ ಹರಿದು ಬಂದದ್ದೂ ದುರಹಂಕಾರಿ ಆಧಿಕಾರಶಾಹಿಗಳು ಹರಿಸಿದ ಅನೇಕ ನಿರಂತರ ರಕ್ತಹೊಳೆಗಳ ನಡುವಿನ ಉಸಿರಿನ ನಾಳಗಳಲ್ಲಿ ಎಂಬುದು ಖಂಡಿತ ನಿಜ.  ಆದರೆ ಯಾವಾಗ ಏನೂ ಬೇಕಾದರೂ ಆಗಬಹುದು ಎಂಬ ಅನಿಶ್ಚಿಕತೆಯ ಆವರಣದಲ್ಲಿ ಜನ ಸಾಮಾನ್ಯನ ಹೋರಾಟ ಅವನ ಅಸ್ಥಿತ್ವದ ಕುರಿತದ್ದಾಗಿರುತ್ತದೆ.  ಆದರೆ ಯುದ್ಧ ಎಂಬುದು ಅಹಂಕಾರದ ಪ್ರತೀಕ.  ಅಹಂಕಾರಿಯಾದವ ಬಂದು ಯುದ್ಧ ಮಾಡಿದಾಗ, ಮತ್ತೊಬ್ಬನ ಅಹಂ ಗಾಸಿಗೊಂಡಾಗ ನಡೆಯುವ ಘಟನೆ ಯುದ್ಧ.  ಈ ಯುದ್ಧಗಳು ನಡೆದದ್ದು ವಸಾಹತು ಶಾಹಿಗಳಾದ ಬ್ರಿಟಿಷರು, ಪೋರ್ಚುಗೀಸರು ಇತ್ಯಾದಿಗಳು; ಒಬ್ಬ ಮತ್ತೊಬ್ಬನ ಕೂಡ ಹೊಡೆದಾಡಿ ಇಟ್ಟುಕೊಂಡಿದ್ದ ರಾಜರುಗಳು, ಪಾಳೆಯಗಾರರು ಇತ್ಯಾದಿಗಳ ನಡುವಣ ಘರ್ಷಣೆ.  ಇಲ್ಲಿ ಸಾಮಾನ್ಯನ ನಿಟ್ಟಿನಲ್ಲಿ ಮೊಗಲರೇನು, ಬ್ರಿಟಿಷರೇನು, ಪೋರ್ಚುಗೀಸರೇನು, ಪಕ್ಕದ ರಾಜ್ಯದಲ್ಲಿದ್ದ ದುರಹಂಕಾರಿ ಸಂಪತ್ತು ದೋಚುವವನಾದರೇನು?  ಭಾರತೀಯ ಸಾಮಾನ್ಯ ಹಲವು ಘರ್ಷಣೆಗಳ ನಡುವೆ ಬಸವಳಿದು ಹೋಗಿದ್ದ.  

ಚರಿತ್ರೆ ಎಂಬುದನ್ನು ಜನಸಾಮಾನ್ಯನನ್ನು ನಿರ್ಲಕ್ಷಿಸುವ ಓದು ಮಾಡಿಕೊಳ್ಳುವುದರಿಂದ ಹೆಚ್ಚಿನ ಲಾಭವಿಲ್ಲ.  

ಕಾರ್ಲ್ ಮಾರ್ಕ್ಸ್ (1818-1883) ಭಾರತದ ಸ್ಥಿತಿಯ ಕುರಿತು ಬರೆದಿದ್ದ ಬರಹಗಳ ಪುಸ್ತಕ ಓದಿದ್ದು ಅಸ್ಪಷ್ಟ ನೆನಪಾಗುತ್ತಿದೆ.  ಅದು ಓದಿ ನಾಲ್ಕು ದಶಕ ಕಳೆದಿರಬಹುದು.  ಅಸ್ಪಷ್ಟವಾಗಿ  ಆತನ ಮಾತುಗಳ ಅಭಿಪ್ರಾಯ ನನಗೆ ಹೀಗೆ ನೆನಪಲ್ಲಿದೆ:. “ಬ್ರಿಟಿಷರು ಭಾರತವನ್ನು ದೋಚುತ್ತಿರುವುದರ ಬಗ್ಗೆ ನನಗೆ ವಿರೋಧವಿದೆ.  ಆದರೆ ಭಾರತದ ಸ್ಥಿತಿ ಏನೆಂದರೆ ಅದನ್ನು ಯಾರು ಬೇಕಾದರೂ ಹೇಗೆ ಬೇಕಾದರೂ ದೋಚಬಹುದು. ಭಾರತ ಯಾವುದೇ ಚಕ್ರಾಧಿಪತ್ಯದ ಅಡಿಯಲ್ಲೂ ಸಮಗ್ರ ದೇಶವಾಗಿರಲಿಲ್ಲ.  ಪಟ್ಟಣಗಳಲ್ಲಿ ಬ್ರಿಟಿಷರ ವಿರುದ್ಧ ಕೆಲವರು ಹೋರಾಡಿ ಹತರಾಗುತ್ತಿದ್ದರೆ, ಸಾಮಾನ್ಯ ಜನ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಜೀವಿಸುತ್ತಿದ್ದಾರೆ" ಎಂದು.  

ಕಾರ್ಲ್ ಮಾರ್ಕ್ಸ್ ಹೇಳಿದ ರೀತಿಗೆ ಅದರದ್ದೇ ಆದ ವಿಶ್ಲೇಷಣಗಳಿವೆ.  ಆದರೆ ಅಂದಿನ ಜನಸಾಮಾನ್ಯ ಜವಾಬ್ಧಾರಿಯುತನಾಗಿರಲಿಲ್ಲ ಎಂದು ಭಾವಿಸುವುದಕ್ಕಿಂತ ಆತ ಹಲವು ದುರಹಂಕಾರಿಗಳ ನಿರಂತರ ಯುದ್ಧಗಳ ನಡುವೆ ತನ್ನ ಉಸಿರನ್ನು ಹೇಗೆ ಹಿಡಿದಿಟ್ಟುಕೊಳ್ಳುವುದು ಎಂಬ ಅಸಹಾಯಕತೆಯ ಸಂಸ್ಕೃತಿಗೆ ತನ್ನ ಹಲವು ಶತಮಾನಗಳ ಪೂರ್ವಿಕರಂತೆ ಒಗ್ಗಿಕೊಂಡು ಬಿಟ್ಟಿದ್ದ.

ನಾಳೆ 1800 ವರ್ಷಗಳ ಮುಂದಿನ ಘಟನಾವಳಿಗೆ ಬರುತ್ತೇನೆ.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ