ಗೋಕುಲ ನಿರ್ಗಮನ 18
ಗೋಕುಲ ನಿರ್ಗಮನ 18
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಕೃಷ್ಣ
ರಾಗ - ಆಭೋಗಿ
ನಾನೆ ನಲ್ಲ ನಾನೆ ಎಲ್ಲ ನಾನು ನಾನಲ್ಲ ಇಂತೆನುವಿರೆಲ್ಲ
ಅರರೆ ನಿಮ್ಮಕ್ಕರೆಯ ಹಾಲೊಳು ಕರಗಿರುವೆನಲ್ಲ
ನನಗು ನಾನಿಲ್ಲ
ಸಕಲ ಸೌಭಾಗ್ಯಗಳು ಬಾಳೊಳು ನೆರೆಯುತಿರಲಿಂತು
ಪೂರ್ಣನೆನಿಪಂತು
ಏನನೆಂದರು ನೀವು ನಾನದನೊಪ್ಪಿಕೊಳುವಂದ
ತಿಳಿವಾಯ್ತು ಮಂದ
(ಕೃಷ್ಣ ನೃತ್ಯವನ್ನು ಪ್ರಾರಂಭಿಸುತ್ತಾನೆ - ಎಲ್ಲರೂ ಕುಣಿಯುತ್ತಾರೆ.)
ಎಲ್ಲರೂ
ಹಾಡು : ರಾಗ - ಬೇಹಾಗ್
ನಲವು ನಲವು ನಲವು - ಹರಿಹರಿ ||ಪ||
ಪ್ರೇಮಪೂರವೆಮ್ಮೆದೆಯೊಳಗೀ ಪರಿ
ಹರಿವುಗೊಂಡು ನೆರೆಯೇರುವ ತೆರವು ||ಅ.ಪ||
ಫಣಿಯೊಲು ಜಡೆಹೆಡೆಯೊಲೆದಾಡೆ
ಕುಣಿತದ ಗಣಿತಕೆ ಮೈ ಕೂಡೆ
ಸರಸವಿರಸದೊಳು ಹಿಂದೆನೆ ಮುಂದೆನೆ
ಹೆಜ್ಜೆ ನಡೆಯೆ ಕಿರುಗೆಜ್ಜೆಯ ನುಡಿತಕೆ – ನಲವು
ಹಿಗ್ಗಿನ ಹೊಳಹನ್ನು ಕಣ್‌ಕದಿರು
ಬಗ್ಗಿಸುತಿರೆಯಿರೆ ಇದಿರಿದಿರು
ತುಟಿದಳ ತೆರೆಯುವ ಹಾಡಿನ ಕಂಪನು
ಬಗೆಯೊಳಲೆವ ಒಲವೆಲರಿಗೆ ತೆರುತಿರೆ- ನಲವು
ಇರುಳಿನ ಬಗೆಬಗೆ ದನಿಯೊಳಗೆ
ರತುನದಂತೆ ಬಳೆದನಿ ಮಿನುಗೆಬೆಳುದಿಂಗಳಿನೊಳು ತಾರೆಗಳಂದದಿ ಕೊಳಲುಲಿವೊಳು ತೇಂಕಾಡುತ ನಾವಿರೆ –
ನಲವು ನಲವು ನಲವು
(ಇವರೆಲ್ಲ ಈ ತೆರ ನರ್ತಿಸುತ್ತಿರುವಾಗ ತಪಸ್ಸಿನಿಂದ ಸಿದ್ಧರಾದಂತೆ ಎದ್ದ ಋಷಿಗಳು
ಬೆರಗಿನ ಭಾವದಲ್ಲಿ ಬರುತ್ತಾರೆ.)
ಒಬ್ಬ ಋಷಿ
ರಾಗ - ನಾಟಿ
ಏನಾತ್ಮಕಂಪಮಿದು ತಪದ ಬಿಗಿ ಬಿರಿಯ ಪ್ರಾಣಸಾರವೆ ಮೇಲಕುಕ್ಕುಕ್ಕಿ ಹರಿಯೆ
ಇಂದ್ರಿಯಗ್ರಾಮಗಳ ಮೇಲುರುಳುತಿಂತು ಬಹುದು ಮಹದಾನಂದ ಪ್ರಳಯಮೆನಿಪಂತು
ಇನ್ನೊಬ್ಬ ಋಷಿ
ರಾಗ: ಆರಭಿ
ಮರಂಗಳೋ ಸಿದ್ಧರು ಪೊರೆಯೇರಿದ ತೆರಂಗಳೋ
ಜನಂಗಳೋ ಕೊಳಲಿಂ ಧುಮ್ಮಿಕ್ಕಿದ ಸರಂಗಳೋ
ಬೃಂದಾವನವೋ ಬಾನವರಾಡುವ ನಂದನವೋ
ನಂದನ ಮಗನೋ ಇಂದ್ರನೊ ಪರಶಿವನೋ ಹರಿಯೋ
ಮತ್ತೊಬ್ಬ ಋಷಿ
ರಾಗ - ವರಾಳಿ
ಸಾಸಿರ ಕಣ್ ಸಾಸಿರ ತಲೆ ಸಾಸಿರ ಪಾದ ಬಾಳಬಾಳಿಗು ಹಬ್ಬುತ್ತಿಹುದಿವನ ಹಸಾದ ಇವನಿಚ್ಛೆಯೆ ಹೃದಯವ ಹೊಕ್ಕಿವನವನೆನದೆ
ಇವನಂಗವೆ ನಾವೆನೆ ರಾಸಕೆ ಸೆಳೆಯುತಿದೆ
(ಕೃಷ್ಣ ಹೊರತು ಎಲ್ಲರೂ ಬೆಕ್ಕಸಬೆರಗಾಗುವಂತೆ ಋಷಿಗಳು ಈ ಮುಂದಿನ ಹಾಡನ್ನು ಹಾಡಿಕೊಂಡು ಕುಣಿಯುತ್ತಾ ರಾಸವೃಂದವನ್ನು ಬಳಸಿ ಆಮೇಲೆ ಮಧ್ಯೆ ನುಗ್ಗಿ ಕೃಷ್ಣನನ್ನು ಬಲಗೊಂಡು ಹೊರಟು ಹೋಗುತ್ತಾರೆ.)
**********
ಕೃಷ್ಣನು ಹಾಡುತ್ತ ಕುಣಿಯತೊಡಗುವನು. ನಾನೆ ನಿಮ್ಮ ಎಲ್ಲರಲ್ಲಿ ಇರುವವನು. ನಾನೇ ನಲ್ಲನು. ನಿಮ್ಮ ಅಕ್ಕರೆಯ ಹಾಲಿನಲ್ಲಿ ಕರಗಿರುವವನು. ಸಕಲ ಸೌಭಾಗ್ಯಗಳನ್ನೂ ಪಡೆದ ಪೂರ್ಣವಂತನು. ನೀವು ಏನನ್ನು ಹೇಳಿದರೂ ಅದನ್ನು ಒಪ್ಪಿಕೊಳ್ಳುವವನು ಎಂದು ಕುಣಿಯುವನು.ಎಲ್ಲರೂ ಸೇರಿ ಹಾಡುವರು.
ಆಹಾ, ಹರಿಯ ನಲವೇ ಚಂದ. ಒಲವೇ ಚಂದ. ನಮ್ಮೆದೆಯಲ್ಲಿ ಪ್ರೇಮದ ಮಹಾಪೂರವು ಹರಿಯುತ್ತಿದೆ. ಈ ಕುಣಿತದಲ್ಲಿ ಮೈಮನಗಳು ಒಲೆದಾಡುತ್ತಿವೆ. ಹಾವಿನ ಹೆಡೆಯಂತೆ ತೂಗುತ್ತಿವೆ. ಕಿರುಗೆಜ್ಜೆಯ ನಾದಕ್ಕೆ ಸರಸವಿರಸವೆನ್ನದೆ ಹಿಂದೆ ಮುಂದೆ ಹೆಜ್ಜೆಗಳು ಸಾಗುತ್ತಿವೆ. ತುಟಿಗಳಿಂದ ಹಾಡಿನ ಕಂಪು ಹೊರಸೂಸುತ್ತಿದೆ. ಹಿಗ್ಗಿನ ಹೊಳಹು ಉಕ್ಕುತ್ತಿದೆ. ಇರುಳಿನ ಬಗೆಬಗೆಯ ಶಬ್ದಗಳಲ್ಲಿ ರತ್ನದಂತೆ ಬಳೆಗಳ, ಗೆಜ್ಜೆಗಳ ದನಿ ಸೇರಿವೆ. ಬೆಳದಿಂಗಳಲ್ಲಿ ತಾರೆಗಳಂತೆ ನಾವು ಇದ್ದೇವೆ ಎನ್ನುತ್ತ ಹಾಡಿ ಕುಣಿಯುವರು.
( ಇವರುಗಳು ಈ ರೀತಿಯಲ್ಲಿ ಕುಣಿಯುತ್ತಿರುವಾಗ ತಪಸ್ಸಿನಿಂದ ಎದ್ದ ಋಷಿಗಳು ಬೆರಗಿನಿಂದ ಬರುವರು )
ಅವರಲ್ಲಿ ಒಬ್ಬರು ಹೇಳುವರು. ಎಂತಹಾ ಆತ್ಮಾನುಕಂಪವಿದು. ತಪದ ಬಿಗಿಯು ಬಿರಿದು ಮಹದಾನಂದ ಪ್ರಳಯವಾದಂತೆ.
ಇನ್ನೊಬ್ಬರ ಮಾತು ಮುಂದುವರಿಯುವುದು. ಇಲ್ಲಿಯ ಮರಗಳು ಸಿದ್ಧರಂತೆ ಕಾಣುತ್ತಿವೆ. ಜನರು ಕೊಳಲ ಗಾನದಂತಿದ್ದಾರೆ. ಈ ಬೃಂದಾವನ ನಂದನವನವಾಗಿದೆ. ನಂದನ ಮಗನೋ, ಇಂದ್ರನೊ, ಶಿವನೋ ಇಲ್ಲಿ ಇದ್ದಂತಿದೆ...
ಮತ್ತೊಬ್ಬರು ಹೇಳುವರು. ಸಾವಿರ ಕಣ್ಣು, ಸಾವಿರ ತಲೆ, ಸಾವಿರ ಪಾದಗಳಂತೆ ಇಲ್ಲಿ ಹರಿಯ ಪ್ರಸಾದ ಹಬ್ಬುತ್ತಿರುವುದು. ಇವನು ಅವನೆನ್ನದೆ ಇವನ ಇಚ್ಛೆಯೇ ಎಲ್ಲರ ಹೃದಯವನ್ನು ಹೊಕ್ಕಿರುವುದು. ರಾಸಕ್ಕೆ ನಮ್ಮನ್ನೂ ಸೆಳೆಯುತ್ತಿರುವುದು.
ಎಲ್ಲರೂ ಬೆರಗಾಗುವಂತೆ ಈ ಋಷಿಗಳು ಕುಣಿಯುತ್ತಾ ಗುಂಪನ್ನು ಬಳಸಿಕೊಂಡು ಹರಿಗೆ ನಮಿಸಿ ಹೊರಟುಹೋಗುತ್ತಾರೆ.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು