ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾತಂತ್ರ್ಯ ನೋಟ - 5


 ಸ್ವಾತಂತ್ರ್ಯ ನೋಟ - 5


ವೆಲ್ಲೂರು ಕೋಟೆಯಲ್ಲಿ ಬಂಧನದಲ್ಲಿದ್ದ ಟಿಪ್ಪುವಿನ ಮಗ ಫತೆಹೈದರ್‍ನ ಹೆಸರಿನಲ್ಲಿ 1806ರಲ್ಲಿ ವೆಲ್ಲೂರು ಕೋಟೆಯಲ್ಲಿದ್ದ ಸಿಪಾಯಿಗಳು ಜುಲೈ 10ರಂದು ಬಂಡೆದ್ದರು. 113 ಐರೋಪ್ಯರೂ 350 ಸಿಪಾಯಿಗಳೂ ಹತರಾಗಿ 500 ಸಿಪಾಯಿಗಳ ಬಂಧನದ ಅನಂತರ ಜುಲೈ 13ಕ್ಕೆ ಬಂಡಾಯ ಹತ್ತಿಕ್ಕಲ್ಪಟ್ಟಿತು. 

ತಿರುವಾಂಕೂರಿನ ದಿವಾನ ವೇಲಿತಂಬಿದಳವಾ 1809ರಲ್ಲಿ ಬಂಡೆದ್ದ. ಆ ಬಂಡಾಯವನ್ನೂ ಹತ್ತಿಕ್ಕಲಾಯಿತು.
1818ರಲ್ಲಿ ಪೇಶ್ವೆಯ ರಾಜ್ಯ ಕೊನೆಗೊಂಡ ವರ್ಷವೇ ಪೇಶ್ವೆಬಾಜಿರಾಯನ ಬಲಗೈ ಬಂಟ ತ್ರಿಂಬಕಜಿ ಡೇಂಗಲೇ ಖಾನ್ ದೇಶದ ಭಿಲ್ಲರನ್ನು ಪ್ರಚೋದಿಸಿ ಬಂಡುಹೊಡಿದ (1817-18). ಇದಕ್ಕೂ ಮೊದಲು, ಬಾಜೀರಾಯನ ಪ್ರೇರಣೆಯಿಂದ ಕಾಠೆವಾಡದ ರಾವ್ ಭಾರ್‍ಮಲ್ 1816ರಲ್ಲಿ ಬಂಡುಹೂಡಿದ್ದನಾದರೂ ಮುಂದೆ ಬ್ರಿಟೀಷರ ಜೊತೆ ಒಪ್ಪಂದ ಮಾಡಿಕೊಂಡ. 1816ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಬಂಡಾಯವೂ ಪ್ರಸಿದ್ಧವಾಗಿದೆ. 1819ರಲ್ಲಿ ಕಾಠೆವಾಡದ ಭಾರ್‍ಮಲ್ ಭುಜ್ ಊರನ್ನು ಕೇಂದ್ರವಾಗಿಟ್ಟುಕೊಂಡು ಬಂಡಾಯ ಹೂಡಿದ. ಆಗಲೇ ಅದೇ ಪ್ರದೇಶದ ವಾಘ ಮತ್ತು ಜಜೇರಾ ಪಂಗಡದ ಜನ ಬಂಡಾಯ ನಡೆಸಿದರು. 

ಕರ್ನಾಟಕದ ಕೊಪ್ಪಳ ಪರಿಸರದ ವೀರಪ್ಪನೆಂಬ ಜಮೀನ್ದಾರ ಕಂದಾಯದ ಹೆಚ್ಚಳದ ವಿರುದ್ಧ ಬಂಡೆದ್ದಾಗ ಮೇ 17ಕ್ಕೆ ಮೇಜರ್ ಡ್ರಿಸ್ಲರ್ ಕೊಪ್ಪಳ ಕೋಟೆಯನ್ನು ಗೆದ್ದು ಬಂಡಾಯ ಹತ್ತಿಕ್ಕಿದ. 1820-21ರಲ್ಲಿ ಮೆರ್‍ವಾರಾದಲ್ಲಿ ಮೆರ್ ಪಂಗಡದ ಜನರೂ ಬಿದರ್ ಜಿಲ್ಲೆಯ ದೇಶ್‍ಮುಖರೂ ಬಂಡಾಯ ನಡೆಸಿದರು.

1824ರಲ್ಲಿ ಉತ್ತರ ಭಾರತದಲ್ಲಿ ಎಲ್ಲೆಡೆ ಬಂಡಾಯಗಳ ಸರಣಿಯೇ ನಡೆದಿದ್ದು ಯಾವೊಂದು ಜಿಲ್ಲೆಯಲ್ಲೂ ಒಂದಲ್ಲ ಒಂದು ರೀತಿಯ ಅಸಮಾಧಾನದ ಪ್ರಕರಣ ನಡದೇ ಇತ್ತು. ಮೊದಲು ಆಂಗ್ಲೋ ಬರ್ಮ ಯುದ್ಧದಲ್ಲಿ ಬ್ರಿಟಿಷರಿಗೂ ಸೋಲಾಗಿದೆ ಎಂಬ ವದಂತಿ ಹರಡಿದ್ದೇ ಈ ಬಂಡಾಯಗಳಿಗೆ ಕಾರಣ. ಷಹರಾನ್‍ಪುರದ ಗುರ್ಜರರ ನಾಯಕ ರಾಮದಯಾಳ್ 1813ರಲ್ಲಿ ತೀರಿಕೊಂಡಾಗ ಅವನ ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡರು. ಆಗ ನಡೆದ ಬಂಡಾಯವನ್ನು ಬ್ರಿಟಿಷರು ಹತ್ತಿಕ್ಕಿದ್ದರಾದರೂ ರಾಮದಯಾಳನ ಸಂಬಂಧಿ ರೂರ್ಕಿ ಬಳಿಯ ಕುಂಜಾದ ತಾಲೂಕುದಾರ ಬಿಜಯ್‍ಸಿಂಗ್ 1824ರಲ್ಲಿ ಬಂಡೆದ್ದ. ಗೂರ್ಖಾದಳ ಕಳುಹಿಸಿ 200 ಬಂಡಾಯಗಾರರನ್ನು ಕೊಂದಾಗಲೇ ಈ ಉತ್ಥಾನ ಕೊನೆಗೊಂಡದ್ದು. 2ನೆಯ ಆಂಗ್ಲೋ ಮರಾಠಯುದ್ಧದ ನಂತರ ಭರತಪುರದ ಜಾಟರು 1805ರಲ್ಲಿ ನಡೆಸಿದ ಬಂಡಾಯ ವಿಫಲವಾಯಿತು. 1824ರಲ್ಲಿ ಇದೇ ಜಾಟರು ಮೇವಾತಿ ಮತ್ತು ಭಟ್ಟಿ ಜನರ ನೆರವಿನಿಂದ ಬಂಡೆದ್ದರು. ಸೂರಜಾಮಲ್ ಜಾಟಬೆಹಟ್ ಕೋಟೆ ಗೆದ್ದುಕೊಂಡ. ರೇವಾರಿಯಲ್ಲೂ ಇದೇ ರೀತಿ ಉತ್ಥಾನವಾಯಿತು. ದೆಹಲಿ ರೋರತ್ ಸಂಪರ್ಕ ತಪ್ಪಿಹೋಯಿತು. ಬ್ರಿಟಿಷರು ಈ ಎಲ್ಲ ಬಂಡಾಯಗಳನ್ನು ಗೂರ್ಖಾ ತುಕಡಿ ಕಳುಹಿಸಿ ಹತ್ತಿಕ್ಕಿದರು. ಬುಂಡೇಲ ಖಂಡದ ಜಾಲಿನ್ನಿನ ಜಾಗಿರ್ದಾರ ನಾನಾಪಂಡಿತ್ ಇದೇ ವರ್ಷ ಬ್ರಿಟಿಷರ ವಶವಿದ್ದ ಕಾಲ್ಪಿಯನ್ನು ವಶಪಡಿಸಿಕೊಂಡ. ಇವನನ್ನು ಹತ್ತಿಕ್ಕುವಷ್ಟರಲ್ಲಿ ತಾಪಿ ಕಣಿವೆಯಲ್ಲಿ ದಲ್ಲಿ ಎಂಬ ಪಿಂಡಾರಿ ನಾಯಕ ಬಂಡೇಳಲು ಬಾಜೀರಾಯನ ತಮ್ಮ ಚಿಮಾಜಿ ಅಪ್ಪ ತಾನೆಂದು ಹೇಳಿಕೊಳ್ಳುವವನೊಬ್ಬ ಅವನನ್ನು ಸೇರಿಕೊಂಡ. ಭಿಲ್ಲರೂ ಅವರನ್ನು ಸೇರಿಕೊಂಡರು. ಕಚ್ಛ್‍ನಲ್ಲಿ ರಾವ್ ಭಾರ್‍ಮಲ್‍ನ ಪರ ಬಂಡೆದ್ದು ಅಂಜರ್ ಬಳಿಯ ಬಲಾರಿ ಕೋಟೆ ಗೆದ್ದರು. ಸಿಂಧನ ಅಮಿರನೂ ಅವರಿಗೆ ನೆರವಾದ. ಕರ್ನಲ್ ನೇಪಿಯರ್, 1825ರಲ್ಲಿ ಈ ಬಂಡಾಯ ಕೊನೆಗೊಳಿಸಿದ. ಖಾನ್ ದೇಶದ ಬಲ್ಗಾನಾದಲ್ಲಿ ಮತ್ತೆ 1825ರಲ್ಲಿ ಭಿಲ್ಲರು ಬಂಡೆದ್ದರು. ಬರೋಡಾ ಸಂಸ್ಥಾನದ ನೆರೆಯ ದುಡಮ ಮತ್ತು ಕೈರಾಗಳಲ್ಲಿ ಇದೇ ಕಾಲದಲ್ಲಿ ಜನ ಬಂಡೆದ್ದರು. ಬ್ರಿಟಿಷರು ಇವರನ್ನು ಬೆನ್ನಟ್ಟಲು ಕಚ್‍ನ ರಣಕ್ಕೆ ಓಡಿಹೋಗಿ 1825ರಲ್ಲಿ ಮರಳಿಬಂದರು. ಅವರನ್ನು ಹತ್ತಿಕ್ಕಿದರೂ 1828ರಲ್ಲಿ ಮತ್ತೆ ತಲೆಯೆತ್ತಿದರು. 

1825ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ದಿವಾಕರ ದೀಕ್ಷಿತನೆಂಬಾತ ಬಂಡೆದ್ದು ತಾನೇ ಕಂದಾಯ ಸಂಗ್ರಹಿಸಲು ಹೊರಟಾಗ ಸೊಲ್ಲಾಪುರದಿಂದ ಬಂದ ಬ್ರಿಟಿಷ್ ಸೇನೆ ಅನೇಕ ಸೇನಾನಿಗಳನ್ನು ಕಳೆದುಕೊಂಡೇ ಈತನನ್ನು ಸೋಲಿಸಿತು. 

ಕಿತ್ತೂರ ರಾಣಿ ಚನ್ನಮ್ಮ 1824 ಅಕ್ಟೋಬರಿನಲ್ಲಿ ಹೂಡಿದ ಬಂಡಾಯ ಸರ್ವವಿದಿತ. ಇದರ ಹಿಂದೆಯೇ 1829ರಲ್ಲಿ ಸಂಗೊಳ್ಳಿರಾಯಣ್ಣ ಕಿತ್ತೂರಲ್ಲಿ ಬಂಡು ಹೂಡಿದ್ದ. ಮುಂದೆ 1833, 1836 ಹಾಗೂ 1837-38ರಲ್ಲಿ ಕೂಡ ಕಿತ್ತೂರಲ್ಲಿ ಬಂಡಾಯಗಳಾದುವು. 1830ರಲ್ಲಿ ಆದ ಶಿವಮೊಗ್ಗ ಜಿಲ್ಲೆಯ ನಗರ ಬಂಡಾಯ, 1831ರಲ್ಲಿ ಕರಾವಳಿ ಕನ್ನಡ ಜಿಲ್ಲೆಗಳ ರೈತ ಬಂಡಾಯ, 1836-37ರಲ್ಲಾದ ಕೊಡಗಿನ ಬಂಡಾಯ, 1841ರಲ್ಲಿ ನರಸಪ್ಪ ಪೇಟ್‍ಕರ್ ನಡೆಸಿದ ಛತ್ರಪತಿ ಪರವಾದ ಬಾದಾಮಿಯ ಬಂಡಾಯ, 1830-33ರ ನಡುವೆ ಆಂಧ್ರದಲ್ಲಿ ನಡೆದ ವೀರಭದ್ರ ರಾಜುವಿನ ದಂಗೆ, 1846-47ರ ಕರ್ನೂಲು ನರಸಿಂಹರೆಡ್ಡಿಯ ದಂಗೆ, ಹೀಗೆ ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳ ಪಟ್ಟಿಗೆ ಕೊನೆಯಿಲ್ಲ. ವಿದೇಶೀಯ ಆಡಳಿತ ವಿರುದ್ಧ ಅಸಮಾಧಾನ ಸ್ಫೋಟವಾಗುತ್ತಲೇ ಇತ್ತು.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ