ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 19


ಗೋಕುಲ ನಿರ್ಗಮನ 19

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)


ಋಷಿಗಳು

ಹಾಡು: ರಾಗ ಪುನ್ನಗವರಾಳಿ


ಬಿಡುಗಡೆಯೋಹೋ ಬಿಡುಗಡೆ

ಎಲ್ಲ ತಪಕೂ ನಿಲುಗಡೆ

ತಪದಿ ಸೆಟದಿರುವ ಮೈಯ ಬಿರುವೆಲರು ಮರವ ಕುಲುಕುವಂತು

ನಲವು ಬಂದು ಮರುಳೊಂದ ತಂದು ಕುಣಿ ತಕ್ಕೆ ಸೆಳೆವುದಿಂತು - 

ಬಿಡುಗಡೆಯೋಹೋ ಬಿಡುಗಡೆ


ಹೊಟ್ಟಕಳೆದು ಸಸಿ ಬಿಟ್ಟಿತೋ

ಮೊಟ್ಟೆಯೊಡೆದು ಬಾಳ್ ಹುಟ್ಟಿತೋ

ಧ್ಯಾನಸುಪ್ತಿಯಿಂ ಜ್ಞಾನವೆದ್ದಿತೋ 

ಬಾಳಿಗಾನಂದ ಹೊತ್ತಿತೋ 

ತನ್ನತನವುರಿದು ಎಲ್ಲ ನಲವಾಗೆ ನಮ್ಮದೆಲ್ಲವನು ಮುತ್ತಿತೋ

ಬಿಡುಗಡೆಯೋಹೋ ಬಿಡುಗಡೆ

ಸಿಪ್ಪೆಯೊಗೆವುದಿಂತೋ

ಚಿಪ್ಪ ತೆಗೆವುದಿಂತೋ


ಆಸೆ ರಸವಾರಿ ಬಾಳ ಸಿಹಿಯೂರಿ

ಪ್ರಕೃತಿಯಪ್ಪು ತಪ್ಪಿ

ಬ್ರಹ್ಮಸವಿಸವಿದು ರುಚಿಗೆ ಆ ಎಂಬ

ನಲ್ಮೆಗಾತ್ಮವೊಪ್ಪಿ – 

ಸಿಪ್ಪೆ ತೆಗೆವುದಿಂತೋ

ಚಿಪ್ಪ ಕಳೆವುದಿಂತೋ 

ಬಿಡುಗಡೆಯೋಹೋ ಬಿಡುಗಡೆ


ನಲಿವೊಳಿರುವೆವಾಹಾ

ತಿರುಗಿ ಮರಳೆವಾಹಾ

ಕುಶಲಿ ಬಿಲ್ಲಾಳು ಬಿಡುವ ಸರಳಂತೆ ವೇಗವಾಂತೆವಾಹಾ

ಸಚ್ಚಿದಾನಂದದೆದೆಗೆ ನೇರಾಗಿ

ನಟ್ಟು ನಿಲುವೆವಾಹಾ

ತಿರುಗಿ ಮರಳೆವಾಹಾ

ನಲವೇ ಕೊನೆ ಆಹಾ -

ಬಿಡುಗಡೆಯೋಹೋ ಬಿಡುಗಡೆ

ಎಲ್ಲ ತಪಕೂ ನಿಲುಗಡೆ

( ಋಷಿಗಳು ಹೋಗುತ್ತಾರೆ. ರಾಸವೃಂದ ಕಲಕಿ ಹೋಗಿದೆ. )  ( ತೆರೆ ಬಿದ್ದು ಮತ್ತೆ ಏಳುತ್ತದೆ )


ಗೋಪಿಯರು

ಅಬ್ಬ ಅಬ್ಬ ಅಬ್ಬಬ್ಬ_ 

ಸುಂಟರಗಾಳಿಯ ತೆರದೊಳು ಬಂದರು

ಬೆಳೆದ ಹೊಲದೊಳಗೆ ತುರುಹಿಂಡಂತೆ

ನುಗ್ಗಿದರವ್ವಾ ಜೋಗಿಗಳು

ಬೆಟ್ಟದ ಕಿಬ್ಬಿಯ ಜೋಗಿಗಳು

ಎಲ್ಲೋಡಿದರೀ ಆಯ್ಯಗಳು

ಯಮುನೆಯ ಮೇಲೆಯೆ ನಡೆದು ಹೋದರೋ

ಹೋಹೋ ಎಲರೊಳೆ ತೇಲಿದರೋ

ಅಬ್ಬ ಅಬ್ಬ ಅಬ್ಬಬ್ಬ


( ಇಷ್ಟರಲ್ಲಿ ಊರಿನ ಹಿರಿಯರು ಬರುತ್ತಾರೆ; ಅವರನ್ನು ನೋಡಿ )

ಅಕ್ಕೊ ಆಕ್ಕೊ ನನ್ನಪ್ಪ

ಮಾವ ತಾತ ಚಿಕ್ಕಪ್ಪ

ರಾದೇ ರಾಧೇ ಮರೆಯಾಗು 

ನಾಗವೇಣಿ ನೀ ಜೊತೆಗಾಗು

ಏಗತಿ ಏಗತಿ ಏಗೆಯ್ವೊಂ


( ಗೋಪಿಯರೂ ಗೋಪಾಲಕರೂ ದಿಗಿಲಿನಿಂದ ಮರೆಯಾಗುತ್ತಾರೆ. ರಾಧೆ ಕೃಷ್ಣನ ಕೈ ಕೊಸರಿಕೊಂಡು ಓಡುವಳು, ನಾಗವೇಣಿ ಹಿಂಬಾಲಿಸುವಳು, ಕೃಷ್ಣ ಮಾತ್ರ ನಗುತ್ತ ನಿಂತಿರುತ್ತಾನೆ, ಹಿರಿಯರು ಹಾಡುತ್ತಾ ಬರುತ್ತಾರೆ )


**********

ಋಷಿಗಳಿಗೆ ಪರಮಾನಂದವಾಗಿದೆ. ಎಲ್ಲ ತಪಸ್ಸುಗಳಿಂದಲೂ ಬಿಡುಗಡೆಯು ಸಿಕ್ಕಂತೆ ಆಗಿದೆ. ಕಾರಣ ಮುರಳಿಮೋಹನನ ಗಾನ. ದರ್ಶನ. ತಪಸ್ಸು ಮಾಡಿ ಗಟ್ಟಿಯಾಗಿರುವ ದೇಹವೂ ಕುಣಿತಕ್ಕೆ ಸಿಕ್ಕಿ ಹಗುರಾಗಿದೆ.

ಬೀಜದಿಂದ ಮೊಳಕೆ ಬಂದು ಸಸಿ ಹೊರಟಂತೆ, ಮೊಟ್ಟೆಯೊಡೆದು ಹೊಸ ಜೀವ ಹೊರಬಂದಂತೆ ಧ್ಯಾನದಿಂದ ಜ್ಞಾನ ಮೂಡಿದೆ. ತನ್ನತನ ಎಂಬುದೆಲ್ಲ ಉರಿದು ಬಾಳು ಸಿಪ್ಪೆ ತೆಗೆದ ಹಣ್ಣಾಗಿದೆ. ಎಲ್ಲ ಅಹಂಗಳಿಂದ ಬಿಡುಗಡೆ ದೊರೆತ ಭಾವ.

ಆಸೆಗಳೆಲ್ಲ ಹೋಗಿ ಬಾಳಿನಲ್ಲಿ ರಸ ತುಂಬಿ ಪ್ರಕೃತಿಯಲ್ಲಿ ಬ್ರಹ್ಮದ ದರ್ಶನವಾಗಿದೆ. ಆತ್ಮದಲ್ಲಿ ತೃಪ್ತಿ ತಾನೇ ತಾನಾಗಿದೆ.

ನಾವೆಲ್ಲರೂ ನಲಿವಿನಲ್ಲಿರುವೆವು. ಮತ್ತೆ ಈ ಅಹಂ ಭಾವಕ್ಕೆ ಮರಳೆವು. ಸತ್ ಚಿತ್ ಅನಂದದ ಎದೆಯಲ್ಲಿ ಪೂರ್ಣ ತಲ್ಲೀನರಾಗುವೆವು. ಇನ್ನು ಎಲ್ಲ ತಪಸ್ಸುಗಳಿಂದ ಬಿಡುಗಡೆ. 

ಎಂದು ಹಾಡುತ್ತ ಕುಣಿಯುತ್ತ ಹೋಗುವರು. ಇವರ ಪ್ರವೇಶದಿಂದ ರಾಸವೃಂದ ದಿಕ್ಕೆಟ್ಟು ಹೋಗಿದೆ. ಎಲ್ಲರಿಗೂ ಭ್ರಾಂತಿ ಕವಿದಂತಾಗಿದೆ. ಗೋಪಿಯರು ಸ್ವಲ್ಪ ಚೇತರಿಸಿಕೊಂಡು ನುಡಿಯುವರು.

ಅಬ್ಬಾ! ಸುಂಟರಗಾಳಿ ಬೀಸಿದಂತೆ ಬಂದು ಹೋದರು ಈ ಋಷಿಗಳು. ಬೆಳೆದ ಹೊಲದಲ್ಲಿ ದನಗಳ ಹಿಂಡು ನುಗ್ಗಿದಂತಾಯಿತು.  ಇವರೆಲ್ಲ ಎಲ್ಲಿಂದ ಬಂದರು, ಎಲ್ಲಿಗೆ ಹೋದರು ಒಂದೂ ತಿಳಿಯದಂತಾಗಿದೆ. ಯಮುನೆಯ ಮೇಲೆ ನಡೆದುಕೊಂಡೇ ಹೋದರೋ? ಗಾಳಿಯಲ್ಲಿ ತೇಲಿಕೊಂಡು ಹೋದರೋ? ಅಬ್ಬಾ...!

ಅಷ್ಟರಲ್ಲಿ ಊರಿನ ಹಿರಿಯರು ಬರುವರು. ಅವರನ್ನು ಕಂಡು ಎಲ್ಲರೂ ದಿಗಿಲಿನಿಂದ ಓಡುವರು. ರಾಧೆ ಕೃಷ್ಣನಿಂದ ಬಿಡಿಸಿಕೊಂಡು ಓಡುವಳು. ನಾಗವೇಣಿಯೂ ಮರೆಯಾಗುವಳು. ಹಿರಿಯರು ಹಾಡು ಹೇಳಿಕೊಂಡು ಬರುವರು.

ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ