ಸ್ವಾತಂತ್ರ್ಯ ನೋಟ - 7
ಸ್ವಾತಂತ್ರ್ಯ ನೋಟ - 7
ಪಾಶ್ಚಾತ್ಯ ಶಿಕ್ಷಣ, ಪಾಶ್ಚಾತ್ಯ ಉದಾರವಾದಿ ಹಾಗೂ ಪ್ರಜಾತಂತ್ರ ವಿಚಾರಗಳು, ಆರ್ಯ ಸಮಾಜ, ಬ್ರಹ್ಮ ಸಮಾಜ, ಥಿಯೋಸಫಿಕಲ್ ಸೊಸೈಟಿ ಮುಂತಾದ ಸಂಘಟನೆಗಳ ಪ್ರಭಾವ ಸಾಂಸ್ಕೃತಿಕ ನವೋದಯ, ಬುದ್ಧಿಜೀವಿಗಳ ವ್ಯವಹಾರ ಮಾಧ್ಯಮವಾಗಿ ಇಂಗ್ಲಿಷ್ ಬೆಳೆದುದು, ಅಂಚೆ ತಂತಿ ರೈಲುಗಳಿಂದ ದೇಶದ ವಿವಿಧ ಭಾಗಗಳ ನಿಕಟಸಂಪರ್ಕ, ವೃತ್ತಪತ್ರಿಕೆಗಳ ಪ್ರಕಟಣೆ, ನೌಕರಿಗಳಲ್ಲಿ ಹಾಗೂ ಬಡ್ತಿಗಳಲ್ಲಿ ಬಿಳಿಯರ ಹಾಗೂ ಭಾರತೀಯರ ನಡುವೆ ಮಾಡುತ್ತಿದ್ದ ತಾರತಮ್ಯ, ದೇಶದ ಉದ್ದಿಮೆಗಳನ್ನು ಹಾಳುಗೆಡವಿ ಭಾರತವನ್ನು ಬರಿಯ ಕಚ್ಚಾವಸ್ತುಗಳನ್ನು ಬೆಳೆಸುವ ಹಾಗೂ ಇಂಗ್ಲೆಂಡಿನ ಕಾರ್ಖಾನೆಗಳ ಸಿದ್ಧವಸ್ತುಗಳನ್ನು ಕಾಯಮ್ ಆಗಿಕೊಳ್ಳುವ ಮಾರುಕಟ್ಟೆಯಾಗಿ ಪರಿವರ್ತಿಸಿದ ಸನ್ನಿವೇಶ ಮತ್ತು ಹಲವು ವಿಧಗಳಿಂದ ಭಾರತವನ್ನು ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಸಂಪತ್ತನ್ನು ದೋಚುವ ಪರಿಸ್ಥಿತಿ ಹಾಗೂ ತಮ್ಮ ಪ್ರಾಚೀನ ಇತಿಹಾಸ ಸಂಸ್ಕೃತಿಗಳ ಬಗ್ಗೆ ಭಾರತೀಯರಲ್ಲಿ ಮೂಡಿಬಂದ ಜ್ಞಾನ ಮತ್ತು ಗೌರವ ಇವೆಲ್ಲ ನವರಾಷ್ಟ್ರೀಯ ಪ್ರಜ್ಞೆಯ ಉದಯಕ್ಕೆ ದಾರಿ ಮಾಡಿಕೊಟ್ಟುವು.
ಬಂಗಾಳದಲ್ಲಿ 1839ರಲ್ಲಿ ಸ್ಥಾಪಿತವಾದ ಭೂಮಾಲಿಕರ ಸಂಘ, 1840ರ ಅನಂತರ ಆರಂಭವಾದ ಬಂಗಾಳದ ಬ್ರಿಟಿಷ್ ಇಂಡಿಯಾ ಸೊಸೈಟಿ ಇವುಗಳ ಐಕ್ಯದಿಂದ 1851ರಲ್ಲಿ ಮೂಡಿದ ಬ್ರಿಟಿಷ್ ಇಂಡಿಯನ್ ಅಸೋಸಿಯೇಶನ್, 1875ರಲ್ಲಿ ಹುಟ್ಟಿದ ಕಲ್ಕತ್ತೆಯ ಇಂಡಿಯಾ ಲೀಗ್, 1876ರಲ್ಲಿ ಸ್ಥಾಪನೆಗೊಂಡ ಇಂಡಿಯನ್ ಅಸೋಸಿಯೇಶನ್, 1852ರಲ್ಲಿ ಮುಂಬೈಯಲ್ಲಿ ಸ್ಥಾಪಿತವಾದ ದಿ ಬಾಂಬೆ ಅಸೋಸಿಯೇಶನ್, 1885ರಲ್ಲಿ ಹುಟ್ಟಿದ ಬಾಂಬೆ ಪ್ರೆಸಿಡೆನ್ಸಿ ಅಸೋಸಿಯೇಶನ್, 1867ರ ಪುಣೆಯ ಸಾರ್ವಜನಿಕ ಸಭಾ, 1852ರಲ್ಲಿ ಸ್ಥಾಪಿತವಾದ ಮುದ್ರಾಸ್ ನೇಟಿವ್ ಅಸೋಸಿಯೇಶನ್, 1884ರ ಮದ್ರಾಸ್ ಮಹಾಜನ ಸಭಾ ಇವೆಲ್ಲವೂ ಒದಗಿಸಿದ ಹಿನ್ನೆಲೆ ಅವುಗಳ ಚಟುವಟಿಕೆಗಳು, ಅವುಗಳ ಕಾರ್ಯಕರ್ತರ ಓಡಾಟ ಇವೆಲ್ಲವುಗಳಿಂದ ಕಾಂಗ್ರೆಸ್ ಸಂಸ್ಥೆಯ ಸ್ಥಾಪನೆಗೆ ಬೇಕಾದ ಭೂಮಿಕೆ ಸಿದ್ಥವಾಯಿತು. ಜೊತೆಗೆ ಘಟನಾಬದ್ಧ ಚಳವಳಿಗೆ ದಾರಿಯಾಯಿತು.
ಸರ್ಕಾರಿ ನೌಕರಿಗಾಗಿ ಭರ್ತಿ ಮಾಡುವಾಗ ಪ್ರವೇಶದ ವಯಸ್ಸನ್ನು 21ರಿಂದ 19ಕ್ಕೆ ಇಳಿಸಿದ 1876ರ ಕ್ರಮ (ಇದರಿಂದ ಭಾರತೀಯರಿಗೆ ಪ್ರವೇಶಾವಕಾಶ ಕಡಿಮೆ ಆಯಿತು) ವರ್ನಾಕ್ಯುಲರ್ ಪ್ರೆಸಾ ಆಕ್ಟ್ (1878) ಎಂಬ ದೇಶ ಭಾಷಾ ಪತ್ರಿಕೆಗಳ ಮೇಲೆ ಪ್ರತಿಬಂಧಗಳನ್ನು ಹೇರುವ ಕಾನೂನು ಬಿಳಿಯ ಅಪರಾಧಿಗಳನ್ನು ಭಾರತೀಯ ನ್ಯಾಯಾಧೀಶರು ವಿಚಾರಣೆ ನಡೆಸಲು ಅವಕಾಶ ನೀಡುವ ಇಲ್ಬರ್ಟ್ ಮಸೂದೆ (1883) ವಿರುದ್ಧ ನಡೆದ ಬಿಳಿಯರ ಯಶಸ್ವೀ ಚಳುವಳಿ ಮುಂತಾದವುಗಳಿಂದ ಮಧ್ಯಮ ವರ್ಗದಲ್ಲಿ ಹೆಚ್ಚಿನ ಜಾಗೃತಿ ಆಯಿತು. ನೌಕರಿಗೆ ಪ್ರವೇಶದ ವಯಸ್ಸನ್ನು ಇಳಿಸಿದ್ದರ ವಿರುದ್ಧ ನಡೆದ ಚಳವಳಿಯಲ್ಲಿ ಸುರೇಂದ್ರನಾಥ್ ಬ್ಯಾನರ್ಜಿ ಅಗ್ರಪಾತ್ರ ವಹಿಸಿ ಅನೇಕ ನಗರಗಳಲ್ಲಿ ಭಾಷಣ ಮಾಡಿದ್ದು ಇಂಡಿಯನ್ ಅಸೋಸಿಯೇಶನ್‍ನಂಥ ಸಂಸ್ಥೆಗೆ ಹೆಚ್ಚಿನ ಪ್ರಾಧಾನ್ಯ ಬರಲು ಅವಕಾಶ ಒದಗಿಸಿತು.
ಕಲ್ಕತ್ತಾದಲ್ಲಿ ಅಂತರರಾರಾಷ್ಟ್ರೀಯ ಪ್ರದರ್ಶನದ ಕಾಲಕ್ಕೆ (1883) ಅಖಿಲ ಭಾರತ ರಾಷ್ಟ್ರೀಯ ಸಮ್ಮೇಳನವೊಂದನ್ನು ಈ ಸಂಸ್ಥೆ ಸಂಘಟಿಸಿತು. ಮುಂದೆ 1885 ಡಿಸೆಂಬರ್‍ನಲ್ಲೂ ಇಂಥದೇ ಎರಡನೆಯ ಸಮ್ಮೇಳನವನ್ನು ಈ ಸಂಸ್ಥೆ ಸಂಘಟಿಸಿತು. ಉತ್ತರ ಭಾರತದ 30 ಸಂಸ್ಥೆಗಳ ಪ್ರಾತಿನಿಧ್ಯ ಇದರಲ್ಲಿ ಆಯಿತು. ಮುಂದೆ ಈ ಸಂಸ್ಥೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಸಮಾವಿಷ್ಟವಾಯಿತು.
ಭಾರತೀಯರ ಮನಗಳಲ್ಲಿ ಮೂಡುವ ಸರ್ಕಾರದ ಬಗೆಗಿನ ವಿವಿಧ ಸ್ವರೂಪದ ಅಸಮಾಧಾನಗಳ ಹಾಗೂ ಆಡಳಿತದ ಬಗೆಗಿನ ಕುಂದುಕೊರತೆಗಳ ಪರಿಹಾರಕ್ಕೆ ಅಂಥ ಸಂಗತಿಗಳು ಸರ್ಕಾರದ ಗಮನಕ್ಕೆ ಬಾರದೇ ಉಳಿಯುವ ಅಂಶಗಳು ತೀವ್ರ ತರದ ಕ್ಷೋಭೆಗೂ 1857ರ ರೀತಿಯ ದಂಗೆಗೂ ಹಾದಿಮಾಡಿತು. ಇದನ್ನು ತಪ್ಪಿಸಲು ಜನಮನದ ಭಾವನೆಗಳ ಪ್ರಕಟೀಕರಣಕ್ಕಾಗಿ ರಕ್ಷಣಾಕವಾಟದಂತೆ ಕೆಲಸಮಾಡಬಲ್ಲ ಒಂದು ವ್ಯವಸ್ಥೆಯನ್ನು ರೂಪಿಸಬೇಕೆಂದು ಅನೇಕ ಆಂಗ್ಲ ಅಧಿಕಾರಿಗಳು ಆಲೋಚಿಸುತ್ತಿದ್ದರು. ಅಂಥವರಲ್ಲಿ ಒಬ್ಬರಾದ ಎ.ಓ. ಹ್ಯೂಮ್ ಎಂಬ ಅಧಿಕಾರಿ, ಭಾರತೀಯರ ಮಾನಸಿಕ, ನೈತಿಕ, ಸಾಮಾಜಿಕ ಮತ್ತು ರಾಜಕೀಯ ಪುನರುತ್ಥಾನಕ್ಕಾಗಿ ಒಂದು ಸಂಸ್ಥೆ ಸ್ಥಾಪಿಸಬೇಕೆಂದು ಕಲ್ಕತ್ತಾ ವಿಶ್ವವಿದ್ಯಾಲಯದ ಪದವೀಧರರಿಗೆ ಬಹಿರಂಗ ಪತ್ರ ಬರೆದರು. ಆಗಿನ ವೈಸ್‍ರಾಯ್ ಡಫರಿನ್ ಈ ಕಲ್ಪನೆಗೆ ಬೆಂಬಲ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಉಮೇಶಚಂದ್ರ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ 1885 ಡಿಸೆಂಬರಿನಲ್ಲಿ ಸ್ಥಾಪಿತವಾಗಿ ದೇಶದ ವಿವಿಧ ಭಾಗಗಳಿಂದ 72ಜನ ಪ್ರತಿನಿಧಿಗಳು ಅದರಲ್ಲಿ ಪಾಲುಗೊಂಡರು. ದೇಶೀಯ ಸಂಪತ್ತಿನ ಬೀಜ ಇದಾಗಬೇಕು ಎಂದು ಹ್ಯೂಮ್ ತಮ್ಮ ಆಶಯ ವ್ಯಕ್ತಪಡಿಸಿದರು. ಮರುವರ್ಷ ಕಾಂಗ್ರೆಸ್ಸು ಕಲ್ಕತ್ತಾದಲ್ಲಿ ಸೇರಲು ಸುರೇಂದ್ರನಾಥ ಬ್ಯಾನರ್ಜಿ ಅದರ ಕ್ರಿಯಾಶೀಲ ಸದಸ್ಯರಾದರು. ಅವರ ಇಂಡಿಯಾ ಅಸೋಸಿಯೇಷನ್ ಕಾಂಗ್ರೆಸ್‍ನಲ್ಲಿ ಲೀನವಾಯಿತು. ಭಾರತ ಸರ್ಕಾರದಲ್ಲಿ ಸುಧಾರಣೆ ಭಾರತೀಯರಿಗೆ ಕೇಂದ್ರ ಮತ್ತು ಪ್ರಾಂತಮಟ್ಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಮತ್ತು ಸ್ವಯಮಾಡಳಿತದ ವಿಸ್ತರಣೆ, ತಾಂತ್ರಿಕವೂ ಸೇರಿ ಶಿಕ್ಷಣದ ವಿಸ್ತರಣೆ, ಸೇನಾ ವೆಚ್ಚದಲ್ಲಿ ಕಡಿತ, ಅಧಿಕಾಧಿಕ ಭಾರತೀಯರನ್ನೂ ಸೇನೆಯಲ್ಲಿ ಭರ್ತಿ ಮಾಡುವುದು, ಐಸಿಎಸ್ ಪರೀಕ್ಷೆಗಳನ್ನು ಭಾರತದಲ್ಲೂ ನಡೆಸಲು ಒತ್ತಾಯ ಮುಂತಾದ ಠರಾವುಗಳನ್ನು ಆರಂಭದಲ್ಲಿ ಕಾಂಗ್ರೆಸ್ ತನ್ನ ಅಧಿವೇಶನಗಳಲ್ಲಿ ಮಾಡಿತು. ಮೂರನೆಯ ಅಧಿವೇಶ ಮದ್ರಾಸ್‍ನಲ್ಲಿ (1887)ನಡೆಯಿತು. ಆರಂಭದ ಮೂರು ವರ್ಷಗಳ ಕಾಂಗ್ರೆಸ್ ಅಧಿವೇಶನಗಳ ಕಾಲಕ್ಕೆ ಆಯಾ ಪ್ರಾಂತದ ರಾಜ್ಯಪಾಲರು ಪ್ರತಿನಿಧಿಗಳಿಗೆ ಉಪಾಹಾರಕೂಟ ಏರ್ಪಡಿಸಿದರಾದರೂ ಮುಂದೆ ಇಂಥ ಸ್ನೇಹನಿಲುವನ್ನು ಬ್ರಿಟಿಷ್ ಸರ್ಕಾರ ಇಟ್ಟುಕೊಳ್ಳಲಿಲ್ಲ. ಆರಂಭದಲ್ಲಿ ಪ್ರಾರ್ಥನೆ ಮುಂದೆ ಅಲ್ಪಸ್ವಲ್ಪ ಟೀಕೆಯ ಸ್ವರೂಪದಲ್ಲಿ ಇದ್ದ ಠರಾವುಗಳು ಕಟುಭಾಷೆಯ ಅಥವಾ ಸರ್ಕಾರದ ವಿರುದ್ಧವಾದ ನಿಲುವಿನವಾಗಿರಲಿಲ್ಲ.
ಮುಂದೆ ಸರ್ಕಾರ ಇದೊಂದು ವಿದ್ಯಾವಂತ ಅಲ್ಪಸಂಖ್ಯಾತರ ಸಂಸ್ಥೆಯೆಂದು ಕಾಂಗ್ರೆಸ್ಸನ್ನು ತಿರಸ್ಕಾರದಿಂದ ಕಾಣಲಾರಂಭಿಸಿತು. 1892ರ ಇಂಡಿಯಾ ಕೌನ್ಸಿಲ್‍ಬಿಲ್ (ಅದು ಕೂಡ ಬ್ರಿಟಿಷ್ ಎಂ. ಪಿ. ಬ್ರಾಡ್ಲೊರ ಯತ್ನದಿಂದ ಆದುದು) ಬಿಟ್ಟರೆ ಬೇರೆ ಯಾವುದೂ ಹೇಳಿಕೊಳ್ಳುವಂಥ ಸಾಧನೆಯನ್ನು ಕಾಂಗ್ರೆಸ್ ಆರಂಭದ ವರ್ಷಗಳಲ್ಲಿ ಮಾಡದ್ದರಿಂದ ಭಾರತದ ರಾಜಕೀಯದಲ್ಲಿ ತೀವ್ರಗಾಮಿ ಮತ್ತು ಕ್ರಾಂತಿಕಾರಿಪಂಥದ ಉದಯವಾಯಿತು.
ಕಾಂಗ್ರೆಸ್ಸಿನ ವಯಸ್ಸಾದ ಹಿರಿಯನಾಯಕರು ಮನವಿ ಪತ್ರಗಳಲ್ಲಿ ಮತ್ತು 1892ರ ಶಾಸನ ಸಭೆಗಳಲ್ಲಿ ಪಾಲ್ಗೊಂಡು ಬ್ರಿಟಿಷರ ಬರಿಯ ಆಶ್ವಾಸನೆಗಳನ್ನು ನಂಬಿದವರು ಆಗಿನ ನವಸುಶಿಕ್ಷಿತ ತರುಣರಿಗೆ ಸ್ಫೂರ್ತಿ ನೀಡಲು ಸಮರ್ಥರಾಗಲಿಲ್ಲ. ಅಬಿಸೀನಿಯದಲ್ಲಿ ಇಟಲಿಗೂ (1896) ಜಪಾನ್‍ನಲ್ಲಿ ರಷ್ಯಾಕ್ಕೂ (1905) ಆದ ಸೋಲಿನಿಂದ ಬಿಳಿಯರನ್ನು ಇತರ ಜನ ಯುದ್ಧದಲ್ಲಿ ಸೋಲಿಸಲು ಸಾಧ್ಯವೆಂದು ಮನವರಿಕೆ ಮಾಡಿಕೊಂಡ ಈ ತರುಣರಿಗೆ ಅರ್ಜಿ ಮನವಿಗಳ ಶಾಸನ ಬದ್ಧ ಕ್ರಮದಲ್ಲಿ ನಂಬಿಕೆ ಬರಲಿಲ್ಲ.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
ನಾಳೆ ಮುಂದುವರೆಸೋಣ .....
ಕಾಮೆಂಟ್‌ಗಳು