ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೋಳಾಲ ಗೀತಾ


 ಕೋಳಾಲ ಗೀತಾ


ಕೋಳಾಲ ಗೀತಾ ಅವರು ಕಲಾತ್ಮಕ ಆಸಕ್ತಿಗಳುಳ್ಳ ಹಸುರು ಪ್ರೀತಿಯ  ವಾಣಿಜ್ಯೋದ್ಯಮಿ, ಲೇಖಕಿ ಮತ್ತು ಸಮಾಜ ಸೇವಕಿ. 

ಗೀತಾ ಅವರು ತುಮಕೂರು ಜಿಲ್ಲೆಯ ಕೋಳಾಲ ಗ್ರಾಮದಲ್ಲಿನ ಅವಿಭಕ್ತ ಕುಟುಂಬದಲ್ಲಿ ಹುಟ್ಟಿ, ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಸಹೋದರಿಯರು ಮತ್ತು ಸಹೋದರರೊಂದಿಗೆ ಸಂತೋಷದಿಂದ ಬೆಳೆದರು. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಇವರು ಆ ಪುಟ್ಟ ವಯಸ್ಸಿನಲ್ಲೇ ಮನೆ ನಿರ್ವಹಣೆಯ ಜವಾಬ್ದಾರಿಗಳನ್ನು ಮೈಗೂಡಿಸಿಕೊಂಡರು. ಜೊತೆಗೆ ತುಮಕೂರಿನ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನೂ ಕೈಗೊಂಡರು. ಸಸ್ಯಶಾಸ್ತ್ರ ಅವರ ಅಧ್ಯಯನ ಕ್ಷೇತ್ರ ಮಾತ್ರವಲ್ಲದೆ, ಆಸಕ್ತಿಯ ಕ್ಷೇತ್ರವೂ ಆಗಿ ಇಂದು ಅವರನ್ನು ಆ ಕ್ಷೇತ್ರದಲ್ಲಿ ಮಹತ್ವದ ಸಾಧಕಿಯನ್ನಾಗಿ ರೂಪಿಸಿದೆ.‍
ಮನೆಯಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲು ಸಣ್ಣ ನರ್ಸರಿಗಳನ್ನು ಮೂಡಿಸುವಲ್ಲಿ ಆರಂಭಗೊಂಡ ಅವರ ಆಸಕ್ತಿಗಳು ಮುಂದೆ ಅವರನ್ನು ಲ್ಯಾಂಡ್ಸ್ಕೇಪಿಂಗ್ ‍ಎಂದು ಹೆಸರಾದ ಭೂದೃಶ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಯಾಗಿಸಿದೆ. ಅವರು ಟೆರ್ರಾ ಗ್ರೀನೇರಿಯಾ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.  ಅವರೊಡನೆ ಅವರ ಪತಿ ಪಿ .ಎನ್. ಬಸವಣ್ಣ ಅವರು ಈ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದಾರೆ. 2013ರಲ್ಲಿ ಆರಂಭಗೊಂಡ ಈ ಸಂಸ್ಥೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿಗೆ ಶ್ರೇಷ್ಠಮಟ್ಟದ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿಕೊಟ್ಟಿದೆ.  ಈ ದಂಪತಿಗಳು ಕನ್ನಡ ಸಾಹಿತ್ಯದಲ್ಲೂ ಅಪಾರ ಆಸಕ್ತಿ ಹೊಂದಿದ್ದು ಓದು, ಬರೆವಣಿಗೆ ಮತ್ತು ಸಮಾಜಮುಖಿ ಸೇವೆಗಳಲ್ಲಿಯೂ ನಿರತರಾಗಿದ್ದಾರೆ. 

ಕೋಳಾಲ ಗೀತಾ ಅವರು ಕರೋನಾ  ಪರಿಸ್ಥಿತಿಯಲ್ಲಿ ತಮ್ಮ ನಿರ್ವಹಣೆಯ ಫೇಸ್‌ಬುಕ್ 'ಕನ್ನಡ ಕಥಾಗುಚ್ಚ' ಗ್ರೂಪ್ನಲ್ಲಿ ಅನೇಕ ಲೇಖನಗಳನ್ನು ಹರಿಸಿದರು. ಅವರ ಅಭಿಮಾನಿ ಬಳಗ ವಿಶಾಲವಾದದ್ದು. ಈ ಗುಂಪಿಗಾಗಿ ಅವರು ತಮ್ಮ ಸ್ವಂತ ಪ್ರಾಯೋಜನೆಯಲ್ಲಿ  ಕನ್ನಡ ಮತ್ತು ಕನ್ನಡ ಭಾಷೆಯ ಕುರಿತು ಸಾಹಿತ್ಯ ಸ್ಪರ್ಧೆಗಳನ್ನು  ನಡೆಸಿದ್ದಾರೆ. ಈ ಸ್ಪರ್ಧೆಯಲ್ಲಿ ಮೂಡಿಬಂದ ಉತ್ತಮ ಬರಹಗಳನ್ನು ಆಯ್ಕೆ ಮಾಡಿ ‘ಜೇನ ಹನಿ’ ಎಂಬ ಸಂಕಲನವನ್ನು ಪ್ರಕಟಿಸಿದ್ದಲ್ಲದೆ ವಿಜೇತರಿಗೆ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪುಸ್ತಕಗಳ ರೂಪದ ಬಹುಮಾನಗಳನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ. ಅನುಪಮ ಬರಹಗಾರ್ತಿಯಾಗಿ ಸಹಾ ಅವರಿಗೆ ಬಹುಮಾನಗಳು ಮತ್ತು ಮೆಚ್ಚುಗೆಗಳು ಸಂದಿದ್ದು, ಅವರ ಬರಹಗಳು ನಾಡಿನ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ. ಪ್ರೇರಣಾತ್ಮಕ ಮಾತುಗಾರರಾಗಿ ಸಹಾ ಅವರ ಉಪನ್ಯಾಸಗಳು ಅನೇಕರಿಗೆ, ಅದರಲ್ಲೂ ಗ್ರಾಮೀಣ ಪ್ರದೇಶದ‍ ವಿದ್ಯಾರ್ಥಿಗಳಿಗೆ ಸಲ್ಲುತ್ತಿವೆ. 

ಕೋಳಾಲ ಗೀತಾ ಅವರು ಗ್ರಾಮೀಣ ಭಾಗದ ಮೂಲ ಸೌಕರ್ಯಗಳಿಲ್ಲದ ವಿದ್ಯಾರ್ಥಿಗಳನ್ನು ಬೆಂಬಲಿಸುವ ಮತ್ತು  ಪ್ರೇರೇಪಿಸುವ ಅನೇಕ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ. ಇವರು ಗ್ರಾಮೀಣಾಭಿವೃದ್ಧಿಯ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಂಡು, ಪುಸ್ತಕ, ಸಮವಸ್ತ್ರ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತ ಬಂದಿದ್ದಾರೆ. ಟೈಮ್ಸ್ ಮಹಿಳಾ ಡ್ರೈವ್ ಮತ್ತು ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಆಯೋಜಿಸಿದ ಸ್ತನ ಕ್ಯಾನ್ಸರ್ ರೋಗಿಗಳಿಗಾಗಿ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಸಹಾ ಭಾಗಿಯಾಗಿದ್ದಾರೆ.

ಕೋಳಾಲ ಗೀತಾ ಅವರ ಪ್ರವಾಸ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಜನಪರ ಕಾಳಜಿ ಹೀಗೆ ಪ್ರತಿಯೊಂದೂ ಆಕರ್ಷಕ ಎನಿಸುವಂತದ್ದು.  ಮೌನ, ಗಾಂಭೀರ್ಯ, ಚತುರತೆ, ಸಾಹಸ ಮನೋಧರ್ಮ, ಸಾಂಸ್ಕೃತಿಕ ಒಲವು, ಹಾಸ್ಯ ಪ್ರಜ್ಞೆ, ಸೂಕ್ತ ಭಾಷಾಭಿವ್ಯಕ್ತಿ ಮತ್ತು ಭಾವಾಭಿವ್ಯಕ್ತಿ ಇವೆಲ್ಲ ಅವರ ವ್ತಕ್ತಿತ್ವದಲ್ಲಿ ಹಿತಮಿತವಾಗಿ ಮೇಳೈಸಿದಂತಿವೆ.‍ ಅವರ ಆತ್ಮೀಯ ಸರಳ ಗುಣ ಇವೆಲ್ಲಕ್ಕೂ ಮೆರುಗಿಟ್ಟಂತದ್ದು. 

Kolala Geetha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ