ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರೀಮುದ್ದೀನ್


ಕರೀಮುದ್ದೀನ್ 

ಶ್ರೀರಂಗಪಟ್ಟಣದ  ಪ್ರೊ. ಕರೀಮುದ್ದೀನ್‌ ಅಪ್ಪಟ ಗಾಂಧಿವಾದಿಯಾಗಿ ಮತ್ತು ಬಹುಭಾಷಾ ವಿದ್ವಾಂಸರಾಗಿ ಹೆಸರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ. 

ಮೂರೂವರೆ ಮೈಲಿ ಉದ್ದ ಎರಡೂವರೆ ಮೈಲಿ ಅಗಲವಿರುವ ದ್ವೀಪ ಪಟ್ಟಣದ ಶಹರ್‌ ಗಂಜಾಂನಲ್ಲಿ 1932ರಲ್ಲಿ ಹಕೀಂ ಅಬ್ದುಲ್‌ ಅಲಿ ಮತ್ತು ರಹೀಮ್‌ ಉನ್ನೀಸಾ ಅವರ ಪುತ್ರನಾಗಿ ಜನಿಸಿದ ಕರೀಮುದ್ದೀನ್‌ 6 ವರ್ಷದ ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡರು. ಗಂಜಾಂ ಮತ್ತು ಶ್ರೀರಂಗಪಟ್ಟಣಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್ ಬಿ.ಎ. ಹಾಗೂ ಕನ್ನಡ ಎಂ.ಎ ಪದವಿ ಪಡೆದರು. ಇವರ ತಾತಂದಿರು ಟಿಪ್ಪು ಆಳ್ವಿಕೆ ಕಾಲದಲ್ಲಿ ವಿದ್ಮಾಂಸರಾಗಿದ್ವು ಟಿಪ್ಪುವಿನ ಹತ್ತಿರದ ಸಂಬಂಧಿಯೂ ಆಗಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಯುನಾನಿ ಔಷಧವನ್ನು ಉಚಿತ ನೀಡುತ್ತಿದ್ದ ಹಕೀಂ ಸಾಹೇಬರ ಕಿರಿಯ ಮಗ ಕರೀಮುದ್ದೀನ್‌ ಅವರಿಗೆ ಕನ್ನಡದ ಬಗ್ಗೆ ವ್ಯಾಮೋಹ ಹುಟ್ಟಿಸಿದವರು ಅವರ ಗುರುಗಳಾಗಿದ್ದ ಕುವೆಂಪು. ಪ್ರೊ. ಡಿ. ಎಲ್. ನರಸಿಂಹಾಚಾರ್ಯರಿಗೆ ಕರೀಮುದ್ದೀನ್ ಅಂದರೆ ಅಪಾರ ಪ್ರೀತಿ.

ಕರೀಮುದ್ದೀನ್‌ ಮೈಸೂರಿನ ತಾಲ್ಲೂಕು ಬೋರ್ಡ್‌ ಕಾಲೇಜಿನ ಪ್ರಾಂಶುಪಾಲರಾಗಿ, ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಹಾಗೂ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ
ಸಲ್ಲಿಸಿದ್ದರು.

ಕರೀಮುದ್ದೀನ್ ಅವರು ಕ್ಯಾಲಿಗ್ರಫಿ ಬರವಣಿಗೆ ಕಲೆಯಲ್ಲಿ ಪ್ರಸಿದ್ದರಾಗಿದ್ದು ಪರ್ಷಿಯನ್‌ ಹಾಗೂ ಅರೇಬಿಕ್‌ ಭಾಷೆ ಬಳಸಿ ಕ್ಯಾಲಿಗ್ರಫಿಯಲ್ಲಿ ಕುರಾನ್‌ ಬರೆದಿದ್ದರು.

ಕರೀಮುದ್ದೀನ್ ಅರೇಬಿಕ್‌, ಪರ್ಷಿಯನ್‌, ಉರ್ದು, ಇಂಗ್ಲಿಷ್‌, ಕನ್ನಡ ಮತ್ತು ಹಿಂದಿ-ಈ ಆರು ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಜಗತ್ತಿನ ಎಲ್ಲ ಧರ್ಮಗಳ ತಿರುಳನ್ನು ಅಧ್ಯಯನ ಮಾಡಿದ್ದರು. ಬರೆದದ್ದು ತೀರಾ ಕಡಿಮೆ (ಸಂಚಿತ ಚಿಂತನೆ ಇತರ ಕೃತಿಗಳು) ಎನಿಸಿದರೂ ಅಪಾರ ವಿದ್ವತ್ತುಳ್ಳವರು ಎಂಬುದಕ್ಕೆ ಹಳೇ ಮೈಸೂರು ಭಾಗದಲ್ಲಿ ಅವರು ನೀಡುತ್ತಿದ್ದ ನೂರಾರು ಸರಣಿ ಉಪನ್ಯಾಸಗಳು ಸಾಕ್ಷಿಯಾಗಿದ್ದವು. ಶ್ರೀರಂಗಪಟ್ಟಣದ ವಸ್ತುನಿಷ್ಠ ಇತಿಹಾಸವನ್ನು ಅರಿತಿದ್ದ ಕರಿಮುದ್ದೀನ್‌, ಆ ಕುರಿತು ಅಪಾರ ಸಂಶೋಧನೆ ನಡೆಸಿದ್ದರು. ಉಪನಿಷತ್‌ನ "ಮಾವಿದ್‌ ವಿಷಾವ ಹೈ" (ನಾವಿಬ್ಬರೂ ಪರಸ್ಪರ ದ್ವೇಷಿಸದೇ ಇರೋಣ), ಕುರಾನ್‌ನ “ನೂರುನ್‌ ಅಲಾನೂರ್‌' ವಾಕ್ಯಗಳು ಮಾತ್ರವಲ್ಲದೆ, ಯೇಸುಕ್ರಿಸ್ತ, ತತ್ವಜ್ಞಾನಿ ಹೆರಾಕ್ಸಿಟಸ್‌ ಹಾಗೂ ಮಿಲ್ಟನ್‌ ಕವಿಯ 'ಪ್ಯಾರಡೈಸ್‌ ಲಾಸ್ಟ್‌' ಮಹಾಕಾವ್ಯ ಅವರ ಜೀವನದ ಮೇಲೆ ಬೀರಿದ ಪ್ರಭಾವದ ಪ್ರಸ್ತಾಪವೂ ಅವರ ಬರಹಗಳಲ್ಲಿದೆ. 

ಕರೀಮುದ್ದೀನ್‌ ಅವರದ್ದು ತ್ಯಾಗದ ಬದುಕು. ತಮ್ಮ ಸೋದರ, ಸೋದರಿ, ತಾಯಿಯ ಹಿತವೇ ಮುಖ್ಯವೆಂದು ಭಾವಿಸಿದ ಇವರು ಅವಿವಾಹಿತರಾಗಿಯೇ ಉಳಿದರು.

"12 ವರ್ಷಗಳಿಂದ ನನ್ನ, ಬೆಂಬಿಡದೆ ಜತೆಯಲ್ಲೇ ಇರುವ ಬೆಕ್ಕು ನೆಚ್ಚಿನ ಪ್ರಾಣಿ" ಎಂದು ಕರಿಮುದ್ದೀನ್‌ ಒಮ್ಮೆ ಕಕ್ಕುಲತೆಯಿಂದ ಹೇಳಿಕೊಂಡಿದ್ದರು. 

ಪ್ರೊ. ಕರೀಮುದ್ದೀನ್‌ 2023ರ ಸೆಪ್ಟೆಂಬರ್ 2ರಂದು ನಿಧನರಾದರು. 

On Rememberance Day of Great scholar Prof. Kareemuddin 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ