ಎಚ್. ಜಿ. ವೆಲ್ಸ್
ಎಚ್. ಜಿ. ವೆಲ್ಸ್
ಹಾರ್ಬರ್ಟ್ ಜಾರ್ಜ್ ವೆಲ್ಸ್ ಮಹತ್ವದ ಇಂಗ್ಲಿಷ್ ಕಾದಂಬರಿಕಾರ, ಚರಿತ್ರಕಾರರು ಮತ್ತು ಗದ್ಯಬರಹಗಾರರು.
ಎಚ್. ಜಿ. ವೆಲ್ಸ್ 1866ರ ಸೆಪ್ಟೆಂಬರ್ 21ರಂದು ಇಂಗ್ಲೆಂಡಿನ ಬ್ರೂಮ್‍ಲೆ ಕೆಂಟ್‍ನಲ್ಲಿ ಜನಿಸಿದರು. ಇವರ ತಂದೆ ವ್ಯಾಪಾರಿ ಮತ್ತು ಕ್ರಿಕೆಟ್ ಆಟಗಾರರಾಗಿದ್ದರು. ಒಬ್ಬ ಕೆಮಿಸ್ಟ್ ಬಳಿ ಔದ್ಯೋಗಿಕ ಶಿಕ್ಷಣಕ್ಕೆ ಸೇರಿದ ಇವರು ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಟಿ.ಎಚ್.ಹಕ್ಸ್ಲಿ ಯವರ ವಿದ್ಯಾರ್ಥಿಯಾದರು. ಮೊದಲ ವಿವಾಹ ಸಂತೋಷಕರವಾಗಿಲ್ಲದೆ ವಿಚ್ಛೇದನದಲ್ಲಿ ಕೊನೆಗಂಡಿತು. ಅನಂತರ ತನ್ನ ವಿದ್ಯಾರ್ಥಿನಿಯೊಬ್ಬಳನ್ನು ಈತ ಮದುವೆಯಾದರು.
ವೆಲ್ಸ್ ಕಾವ್ಯ, ನಾಟಕಗಳನ್ನು ಬಿಟ್ಟು ಉಳಿದೆಲ್ಲ ಸಾಹಿತ್ಯ ಪ್ರಕಾರಗಳನ್ನೂ ಬಳಸಿಕೊಂಡರು. ಆಂಟಿಸಿಪೇಷನ್ಸ್ (1901) ಎಂಬ ಕೃತಿಯಿಂದ ವಿಚಾರ ಸಾಹಿತ್ಯಕ್ಕೆ ಕಾಲಿಟ್ಟರು. ಸಾಮಾಜಿಕ ತತ್ತ್ವಶಾಸ್ತ್ರದಲ್ಲಿ ಎ ಮಾಡರ್ನ್ ಯುಟೋಪಿಯ (1905), ದಿ ವಾರ್ ದಟ್ ವಿಲ್ ಎಂಡ್ ವಾರ್ (1914), ದಿ ಓಪನ್ ಕಾನ್ಸ್ಪಿರೆಸಿ (1928), ದಿ ಸೈನ್ಸ್ ಆಫ್ ಲೈಫ್ (1928), ದಿ ವರ್ಕ್, ದಿ ವರ್ಲ್ಡ್ ಅ್ಯಂಡ್ ದಿ ಹ್ಯಾಪಿನೆಸ್ ಆಫ್ ಮಾನ್‍ಕೈಂಡ್ (1932), ಮೈಂಡ್ ಅಟ್ ದಿ ಎಂಡ್ ಆಫ್ ಇಟ್ ಟೆದರ್ (1945) ಕೃತಿಗಳನ್ನು ರಚಿಸಿದರು. ದಿ ಔಟ್‍ಲೈನ್ ಆಫ್ ಹಿಸ್ಟರಿ (1920) ಮತ್ತು ಎ ಷಾರ್ಟ್ ಹಿಸ್ಟರಿ ಆಫ್ ದಿ ವರ್ಲ್ಡ್ (1922) ಎಂಬ ಚಾರಿತ್ರಿಕ ಕೃತಿಗಳನ್ನು ರಚಿಸಿದರು. ಎಕ್ಸ್ಪೆರಿಮೆಂಟ್ಸ್ ಇನ್ ಆಟೊಬಯಾಗ್ರಫಿ (1934) ಇವರ ಆತ್ಮಚರಿತ್ರೆ. ವೈಜ್ಞಾನಿಕ ಊಹಾಪೋಹಗಳನ್ನು ಕಾಲ್ಪನಿಕ ಕಥೆಗಳ ರೂಪದಲ್ಲಿ ರಚಿಸಿದ ಇವರ ವೈಜ್ಞಾನಿಕ ಕಾದಂಬರಿಗಳು (ಸೈನ್ಸ್‍ಫಿಕ್ಷನ್ಸ್) ದಿ ಟೈಮ್ ಮಷೀನ್ (1895) ಮಾಲಿಕೆಯಲ್ಲಿ ಪ್ರಕಟವಾದುವು. ಇವುಗಳಲ್ಲಿ ಭವಿಷ್ಯತ್ತಿನ ವಿಜ್ಞಾನದ ಬಗ್ಗೆ ರೋಮಾಂಚಕಾರಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಇವರ ಜ್ಞಾನಸಂಪತ್ತು ಅಸಾಧಾರಣವಾದುದು. ವಿಜ್ಞಾನ, ಚರಿತ್ರೆ, ಅರ್ಥಶಾಸ್ತ್ರಗಳನ್ನು ಇವರು ಅಧ್ಯಯನ ಮಾಡಿ ಪಡೆದ ಪಾಂಡಿತ್ಯ ಆಶ್ಚರ್ಯಕರವಾದುದು. ಜೀವವಿಜ್ಞಾನದ ಅಧ್ಯಯನದಿಂದ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಇವರ ಬರೆಹಗಳಲ್ಲಿ ಹಲವು ಮಂದಿ ವಿಚಾರಶೀಲರಲ್ಲಿ ಕಾಣದ ಮೂರ್ತ ವಿಚಾರ ಕಾಣುತ್ತದೆ. ಇವರ ಕೃತಿಗಳಲ್ಲಿ ಅತಿ ಜನ ಪ್ರಿಯವಾದುದು ಔಟ್‍ಲೈನ್ ಆಫ್ ಹಿಸ್ಟರಿ. ಸೃಷ್ಟಿಯ ಪ್ರಾರಂಭದಿಂದ ಆಧುನಿಕ ಯುಗದವರೆಗೆ ಮಾನವನ ಪ್ರಗತಿಯನ್ನು ಇದು ಚಿತ್ರಿಸಿದೆ. ದಿ ವರ್ಲ್ಡ್ ಅ್ಯಂಡ್ ಹ್ಯಾಪಿನೆಸ್ ಆಫ್ ಮ್ಯಾನ್‍ಕೈಂಡ್ ಎಂಬ ಕೃತಿಯಲ್ಲಿ ಮತ್ತು ಹಕ್ಸ್ಲಿಯೊಡನೆ ಬರೆದ ದಿ ಸೈನ್ಸ್ ಆಫ್ ಲೈಫ್ ನಲ್ಲಿ ಇವರು ಮನುಷ್ಯ ಪ್ರಗತಿ ಸಾಧಿಸಬಲ್ಲನೆಂಬ ಮತ್ತು ಮಾನವಕೋಟಿ ಐಕ್ಯತೆಯನ್ನು ಸಾಧಿಸುವುದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಒಂದನೆಯ ಮಹಾಯುದ್ಧ ಇವರ ವಿಶ್ವಾಸವನ್ನು ದುರ್ಬಲಗೊಳಿಸಿತು. ತಮ್ಮ ಜೀವಮಾನದ ಕೊನೆಯ ಭಾಗದಲ್ಲಿ ಎರಡನೆಯ ಮಹಾಯುದ್ಧವನ್ನು ಮಾತ್ರವಲ್ಲದೆ ಅಣುಬಾಂಬಿನ ಪ್ರಯೋಗವನ್ನೂ ಕಂಡ ಇವರು ತುಂಬ ಆತಂಕಗೊಂಡರು. ದಿ ಮೈಂಡ್ ಎಟ್ ದಿ ಎಂಡ್ ಆಫ್ ಇಟ್ಸ್ ಟೆದರ್ ಎಂಬ ಕೃತಿಯಲ್ಲಿ ಇವರು ಭವಿಷ್ಯದಲ್ಲಿ ಕಾಣುವುದು ಯಾವ ಒಂದು ಕ್ರಮ ಅಥವಾ ವ್ಯವಸ್ಥೆಯನ್ನಲ್ಲ, ಆದರೆ ಜಾಗತಿಕ ಚೇತನ ಕ್ರಮೇಣ ದುರ್ಬಲಗೊಂಡು ನಿಂತುಹೋಗುವುದನ್ನು ಮಾತ್ರ ಎಂದು ಹೇಳಿದ್ದಾರೆ.
ವೆಲ್ಸ್, ಹೆನ್ರಿ ಜೇಮ್ಸ್ ಅವರೊಡನೆ ನಡೆಸಿದ ಸಂವಾದದಲ್ಲಿ ಕಲೆಗಾರನೆನ್ನಿಸಿಕೊಳ್ಳುವುದಕ್ಕಿಂತ ತಮಗೆ ಪತ್ರಿಕೋದ್ಯಮಿ ಎನಿಸಿಕೊಳ್ಳುವುದೆ ಪ್ರಿಯ ಎಂದಿದ್ದಾರೆ. ಇವರ ಕೃತಿಗಳು ಹೊಸ ವಿಚಾರಗಳ ಗಣಿ. ಇವರ ಕನಸುಗಳು ಬರಿಯ ಗಗನ ಸೌಧಗಳಲ್ಲ. ಮೊದಲು ಇವರು ನಿರೂಪಿಸಿದ, ಅಸಮಾಧಾನವನ್ನು ಉಂಟುಮಾಡಿದ ಹಲವು ವಿಚಾರಗಳು ಪ್ರಪಂಚ ಇಂದು ಒಪ್ಪಿಕೊಂಡ ತತ್ತ್ವಗಳಾಗಿವೆ.
ಎಚ್. ಜಿ. ವೆಲ್ಸ್ 1946ರ ಆಗಸ್ಟ್ 13ರಂದು ನಿಧನರಾದರು.
On the birth anniversary of great thinker ahead of times and writer H. G. Wells
ಕಾಮೆಂಟ್‌ಗಳು