ಮೈಕೇಲ್ ಫ್ಯಾರಡೆ
ಮೈಕೇಲ್ ಫ್ಯಾರಡೆ
ಮೈಕೇಲ್ ಫ್ಯಾರಡೆ ವಿಜ್ಞಾನಲೋಕದ ಒಂದು ವಿಸ್ಮಯ. ಅತ್ಯಲ್ಪ ವಿದ್ಯಾಭ್ಯಾಸ ಗಳಿಸಿದ ಈತ ಮಹಾನ್ ವಿಜ್ಞಾನಿಯಾಗಿ ಬೆಳೆದ. ಈತ ರಸಾಯನ ಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿಯಾಗಿದ್ದು ವಿದ್ಯುತ್ಕಾಂತತೆ ಹಾಗೂ ವಿದ್ಯುದ್ರಸಾಯನಶಾಸ್ತ್ರ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ. ತಂತ್ರಜ್ಞಾನ ಯುಗದಲ್ಲಿ ವಿದ್ಯುಚ್ಚಕ್ತಿಯ ಬಳಕೆ ಸಾಧ್ಯವಾಗಿರುವುದಕ್ಕೆ ಈತನ ಕೊಡುಗೆ ಮಹತ್ವದ್ದು.
ಮೈಕೇಲ್ ಫ್ಯಾರಡೆ 1791ರ ಸೆಪ್ಟೆಂಬರ್ 22ರಂದು ಈಗಿನ ಲಂಡನ್ ಬರೋ ಆಫ್ ಸೌತ್‍ವಾಕ್ ಭಾಗವಾಗಿರುವ ನೆವಿಂಗ್ಟನ್ ಬಟ್ಸ್ ಎಂಬಲ್ಲಿ ಜನಿಸಿದ. ಅವನ ತಂದೆಯಾದ ಜೇಮ್ಸ್, ಕ್ರಿಶ್ಚಿಯನ್ ಧರ್ಮದ ಗ್ಲಾಸ್ಸೈಟ್ ಪಂಗಡದ ಓರ್ವ ಸದಸ್ಯನಾಗಿದ್ದ. ನಾಲ್ಕು ಮಕ್ಕಳ ಪೈಕಿ ಮೂರನೆಯವನಾಗಿದ್ದ ಮೈಕೇಲ್ ಫ್ಯಾರಡೆಯು ಕೇವಲ ಪ್ರಾರಂಭಿಕ ಶಾಲಾ ಶಿಕ್ಷಣವನ್ನಷ್ಟೇ ಪಡೆದ. ಆತ ಹದಿನಾಲ್ಕು ವರ್ಷ ವಯಸ್ಸಿನವನಾಗಿದ್ದಾಗ, ಪುಸ್ತಕ ವ್ಯಾಪಾರಿ ಮತ್ತು ಬೈಂಡ್ ಮಾಡುವ
ಜಾರ್ಜ್ ರೈಬೌ ಎಂಬುವನ ಬಳಿಯಲ್ಲಿ ಕೆಲಸಕ್ಕೆ ಸೇರಿದ. ತನ್ನ ಈ ಏಳು-ವರ್ಷಗಳ ಕಾಯಕದ ಈ ಅವಧಿಯಲ್ಲಿ ಆತ ಐಸಾಕ್ ವ್ಯಾಟ್ಸ್‌ನ ದಿ ಇಂಪ್ರೂವ್‌ಮೆಂಟ್ ಆಫ್ ದಿ ಮೈಂಡ್ ಪುಸ್ತಕವೂ ಸೇರಿದಂತೆ ಅನೇಕ ಪುಸ್ತಕಗಳನ್ನು ಓದಿದ. ಜೊತೆಗೆ ಅವು ಒಳಗೊಂಡಿದ್ದ ತತ್ತ್ವಗಳು ಹಾಗೂ ಸಲಹೆಗಳನ್ನು ಉತ್ಸಾಹದಿಂದ ಅಳವಡಿಸಿಕೊಂಡ. ಜೇನ್ ಮಾರ್ಸೆಟ್ ಎಂಬಾತ ಬರೆದಿದ್ದ ಕಾನ್ವರ್ಸೇಷನ್ಸ್ ಇನ್ ಕೆಮಿಸ್ಟ್ರಿ ಎಂಬ ಪುಸ್ತಕದಿಂದ ಆತ ಅತೀವವಾಗಿ ಪ್ರಭಾವಿತನಾಗಿದ್ದ.
ಮೈಕೇಲ್ ಫ್ಯಾರಡೆ 1812ರಲ್ಲಿ ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ರಾಯಲ್ ಇನ್‌ಸ್ಟಿಟ್ಯೂಷನ್ ಹಾಗೂ ರಾಯಲ್ ಸೊಸೈಟಿಯ ಶ್ರೇಷ್ಠ ಇಂಗ್ಲಿಷ್ ರಸಾಯನ ಶಾಸ್ತ್ರಜ್ಞನಾದ ಹಂಫ್ರಿ ಡೇವಿ, ಹಾಗೂ ಸಿಟಿ ಫಿಲಸಾಫಿಕಲ್ ಸೊಸೈಟಿಯ ಸಂಸ್ಥಾಪಕನಾದ ಜಾನ್ ಟ್ಯಾಟಮ್ ಇವರುಗಳು ನೀಡುತ್ತಿದ್ದ ಉಪನ್ಯಾಸಗಳಿಗೆ ಹಾಜರಾದ. ಇದಾದ ನಂತರ, ಉಪನ್ಯಾಸಗಳ ಅವಧಿಯಲ್ಲಿ ತಾನು ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಸಿದ್ಧಪಡಿಸಿದ ಮುನ್ನೂರು ಪುಟಗಳ ಪುಸ್ತಕವೊಂದನ್ನು ಡೇವಿಗೆ ಫ್ಯಾರಡೆ ಕಳಿಸಿದ. ಇದಕ್ಕೆ ಡೇವಿಯು ತತ್‌ಕ್ಷಣದ, ಸ್ನೇಹಮಯವಾದ, ಹಾಗೂ ಪ್ರೋತ್ಸಾಹಕರ ಮೆಚ್ಚುಗೆಯ ಜವಾಬನ್ನು ನೀಡಿದ. ನೈಟ್ರೋಜೆನ್ ಟ್ರೈಕ್ಲೋರೈಡ್‌ನಿಂದಾಗಿ ಡೇವಿಯು ಆಕಸ್ಮಿಕವಾಗಿ ತನ್ನ ಕಣ್ಣಿನ ದೃಷ್ಟಿಗೆ ಹಾನಿಮಾಡಿಕೊಂಡಾಗ, ಫ್ಯಾರಡೆಯನ್ನು ತನ್ನ ಓರ್ವ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳಲು ನಿರ್ಧರಿಸಿದ.
ಒಂದು DC ವಿದ್ಯುತ್ ಪ್ರವಾಹವನ್ನು ಹೊತ್ತೊಯ್ಯುತ್ತಿರುವ ವಾಹಕವೊಂದರ ಸುತ್ತ ಇರುವ ಕಾಂತೀಯ ಕ್ಷೇತ್ರವನ್ನು ಫ್ಯಾರಡೆ ಅಧ್ಯಯನ ಮಾಡಿದ, ಮತ್ತು ಭೌತಶಾಸ್ತ್ರದಲ್ಲಿನ ವಿದ್ಯುತ್ಕಾಂತೀಯ ಕ್ಷೇತ್ರದ ಪರಿಕಲ್ಪನೆಗೆ ಸಂಬಂಧಿಸಿದಂತಿರುವ ತಳಹದಿಯನ್ನು ಪ್ರಮಾಣೀಕರಿಸಿದ. ವಿದ್ಯುತ್ಕಾಂತೀಯ ಪ್ರೇರಣೆ, ಪಾರಕಾಂತೀಯತೆ, ಹಾಗೂ ವಿದ್ಯುದ್ವಿಚ್ಛೇದನದ ನಿಯಮಗಳನ್ನು ಆವಿಷ್ಕರಿಸಿದ. ಬೆಳಕಿನ ಕಿರಣಗಳ ಮೇಲೆ ಕಾಂತೀಯತೆಯು ಪ್ರಭಾವ ಬೀರಬಲ್ಲದು ಎಂಬುದನ್ನು ಹಾಗೂ ಈ ಎರಡೂ ವಿದ್ಯಮಾನಗಳ ನಡುವೆ ಒಂದು ಆಧಾರವಾಗಿರುವ ಸಂಬಂಧವಿದೆ ಎಂಬುದನ್ನು ಅವನು ಪ್ರಮಾಣೀಕರಿಸಿದ. ಅವನ ವಿದ್ಯುತ್ಕಾಂತೀಯ ಆವರ್ತಕ ಸಾಧನಗಳ ಆವಿಷ್ಕಾರಗಳು ವಿದ್ಯುತ್ ಮೋಟಾರಿನ ತಂತ್ರಜ್ಞಾನದ ಬುನಾದಿಯಾಗಿ ಮಾರ್ಪಟ್ಟವು. ತಂತ್ರಜ್ಞಾನದಲ್ಲಿ ವಿದ್ಯುಚ್ಚಕ್ತಿಯ ಬಳಕೆ ಸಾಧ್ಯವಾಗಿರುವುದಕ್ಕೆ ಅವನ ಪ್ರಯತ್ನಗಳೇ ಪ್ರಮುಖ ಕಾರಣ ಎನ್ನಬಹುದು.
ಓರ್ವ ರಸಾಯನ ಶಾಸ್ತ್ರಜ್ಞನಾಗಿ, ಮೈಕೇಲ್ ಫ್ಯಾರಡೆ ಬೆನ್‌ಜೀನ್‌ನ್ನು ಆವಿಷ್ಕರಿಸಿದ, ಕ್ಲೋರೀನ್‌ನ ಕ್ಲಾಥರೇಟ್ ಹೈಡ್ರೇಟ್‌ನ್ನು ಪತ್ತೆಹಚ್ಚಿದ, ಬುನ್‌ಸೆನ್ ಬರ್ನರಿನ ಒಂದು ಆರಂಭಿಕ ಪ್ರಕಾರ ಹಾಗೂ ಉತ್ಕರ್ಷಣ ಸಂಖ್ಯೆಗಳ ಪದ್ಧತಿಯನ್ನು ಆವಿಷ್ಕರಿಸಿದ, ಮತ್ತು ಧನ ವಿದ್ಯುದ್ವಾರ (ಆನೋಡ್), ಋಣ ವಿದ್ಯುದ್ವಾರ (ಕ್ಯಾಥೋಡ್), ವಿದ್ಯುದ್ವಾರ (ಇಲೆಕ್ಟ್ರೋಡ್), ಹಾಗೂ ಅಯಾನು ಇವೇ ಮೊದಲಾದ ಪಾರಿಭಾಷಿಕ ಪದಗಳನ್ನು ಜನಪ್ರಿಯಗೊಳಿಸಿದ.
ಫ್ಯಾರಡೆಯು ಅತ್ಯಲ್ಪ ಪ್ರಮಾಣದಲ್ಲಿ ಔಪಚಾರಿಕ ಶಿಕ್ಷಣವನ್ನು ಪಡೆದುಕೊಂಡನಾದರೂ, ಕ್ಯಾಲ್ಕ್ಯುಲಸ್ ಅಂತಹ ಉನ್ನತ ಗಣಿತಶಾಸ್ತ್ರದ ಕುರಿತು ಸೀಮಿತ ಜ್ಞಾನವನ್ನು ಹೊಂದಿದ್ದರೂ, ಇತಿಹಾಸದಲ್ಲಿನ ಅತ್ಯಂತ ಪ್ರಭಾವಿ ವಿಜ್ಞಾನಿಗಳಲ್ಲಿ ಒಬ್ಬನಾದ. ವಿಜ್ಞಾನದ ಕೆಲವೊಂದು ಇತಿಹಾಸಕಾರರು ಅವನನ್ನು ವಿಜ್ಞಾನದ ಇತಿಹಾಸದಲ್ಲಿನ ಅತ್ಯುತ್ತಮ ಪ್ರಯೋಗ ಪರೀಕ್ಷಕ ಎಂದು ಉಲ್ಲೇಖಿಸುತ್ತಾರೆ. ಧಾರಣಶಕ್ತಿಯ SI ಏಕಮಾನವಾದ ಫ್ಯಾರಡ್‌ನ್ನು ಅವನ ಹೆಸರಿನಲ್ಲಿ ನಾಮಕರಣ ಮಾಡಲಾಗಿದೆ; ಅದೇ ರೀತಿಯಲ್ಲಿ ಒಂದು ಮೋಲ್‌ನಷ್ಟು ಇಲೆಕ್ಟ್ರಾನುಗಳ (ಸುಮಾರು 96,485 ಕೂಲಾಮ್‌ಗಳು) ಮೇಲಿನ ವಿದ್ಯುದಾವೇಶಕ್ಕೆ ಫ್ಯಾರಡೆ ನಿಯತಾಂಕ ಎಂದು ಹೆಸರಿಸಲಾಗಿದೆ. ಫ್ಯಾರಡೆಯ ಚೋದನಾ ನಿಯಮವು ತಿಳಿಸುವ ಪ್ರಕಾರ, ಕಾಲಕ್ರಮೇಣ ಬದಲಾಗುತ್ತಿರುವ ಕಾಂತೀಯ ಪ್ರಸರವು ಒಂದು ಅನುಗುಣವಾದ ವಿದ್ಯುಚ್ಚಾಲಕ ಬಲವನ್ನು ಸೃಷ್ಟಿಸುತ್ತದೆ.
ದಿ ರಾಯಲ್ ಇನ್‌ಸ್ಟಿಟ್ಯೂಷನ್ ಆಫ್ ಗ್ರೇಟ್ ಬ್ರಿಟನ್‌ನಲ್ಲಿ ಫ್ಯಾರಡೆಯು ಮೊದಲ ಹಾಗೂ ಅಗ್ರಗಣ್ಯ ರಸಾಯನ ಶಾಸ್ತ್ರದ ಫುಲ್ಲೇರಿಯನ್ ಪ್ರಾಧ್ಯಾಪಕನಾಗಿದ್ದ, ಮತ್ತು ಈ ಸ್ಥಾನಕ್ಕೆ ಅವನನ್ನು ಆಜೀವ ಪರ್ಯಂತದ ಅವಧಿಗೆ ನೇಮಿಸಲಾಗಿತ್ತು. ಆಲ್ಬರ್ಟ್ ಐನ್‌ಸ್ಟೀನ್ ತನ್ನ ಅಧ್ಯಯನ ಕೋಣೆಯ ಗೋಡೆಯ ಮೇಲೆ ಐಸಾಕ್ ನ್ಯೂಟನ್ ಹಾಗೂ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್‌ರವರ ಚಿತ್ರಗಳ ಜೊತೆಜೊತೆಗೆ ಫ್ಯಾರಡೆಯ ಒಂದು ಛಾಯಾಚಿತ್ರವನ್ನು ಇರಿಸಿಕೊಂಡಿದ್ದ.
ಕಟ್ಟಾ ಧಾರ್ಮಿಕ ವ್ಯಕ್ತಿಯಾಗಿದ್ದ ಫ್ಯಾರಡೆ ಸ್ಯಾಂಡೆಮ್ಯಾನಿಯನ್ ಚರ್ಚ್‌ನ ಓರ್ವ ಸದಸ್ಯನಾಗಿದ್ದ. ಇದು 1730ರಲ್ಲಿ ಸಂಸ್ಥಾಪಿಸಲ್ಪಟ್ಟ ಒಂದು ಕ್ರಿಶ್ಚಿಯನ್ ಪಂಗಡವಾಗಿದ್ದು, ಸಂಪೂರ್ಣ ವಿಶ್ವಾಸ ಹಾಗೂ ಬದ್ಧತೆಯನ್ನು ಬಯಸುತ್ತಿತ್ತು. "ಫ್ಯಾರಡೆಯ ಜೀವನ ಹಾಗೂ ಕೆಲಸದ ತುಂಬ ದೇವರು ಮತ್ತು ಪ್ರಕೃತಿಯ ಒಂದು ಪ್ರಬಲವಾದ ಏಕತಾಪ್ರಜ್ಞೆಯು ಆವರಿಸಿಕೊಂಡಿತ್ತು" ಎಂಬುದಾಗಿ ಕೆಲವು ಜೀವನಚರಿತ್ರೆಕಾರರು ಉಲ್ಲೇಖಿಸಿದ್ದಾರೆ.
ಮೈಕೇಲ್ ಫ್ಯಾರಡೆ 1867ರ ಆಗಸ್ಟ್ 25ರಂದು ನಿಧನನಾದ.
On the birth anniversary of Michael Faraday, a great scientist who contributed to the study of electromagnetism and electrochemistry
ಕಾಮೆಂಟ್‌ಗಳು