ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಸೀಮಾ ಚಟರ್ಜಿ


 ಅಸೀಮಾ ಚಟರ್ಜಿ


ಅಸೀಮಾ ಚಟರ್ಜಿ ಭಾರತದ ಪ್ರಸಿದ್ಧ ರಸಾಯನ ಶಾಸ್ತ್ರಜ್ಞೆ.  ಇವರು ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಳಿಗಾಗಿ ಸಲ್ಲುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಸ್ವೀಕರಿಸಿದ ಮತ್ತು ಭಾರತೀಯ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷತೆಯನ್ನು ಅಲಂಕರಿಸಿದ ಪ್ರಥಮ ಮಹಿಳೆ.

ಅಸೀಮಾ ಚಟರ್ಜಿ ಆರ್ಗಾನಿಕ್ ಕೆಮಿಸ್ಟ್ರಿ ಮತ್ತು ಫೈಟೋ ಮೆಡಿಸಿನ್ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದವರು. ವಿಂಕಾ ಆಲ್ಕಲಾಯಿಡ್ಸ್ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆ  ಮಾಡಿದ ಇವರು ಮೂರ್ಛೆ ರೋಗ ನಿವಾರಣೆ ಮತ್ತು ಮಲೇರಿಯಾ ನಿವಾರಣೆ ಔಷಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಪಾರ ಶ್ರಮಿಸಿದವರು.

ಅಸೀಮಾ ಚಟರ್ಜಿಯವರು 1917ರ  ಸೆಪ್ಟೆಂಬರ್ 23 ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದ ಇವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಿಶ್ ಚರ್ಚ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು.  1938ರಲ್ಲಿ ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವೀಧರೆಯಾದ ಅಸೀಮಾರವರು ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡಲು ಪ್ರಾರಂಭಿಸಿ, ಸಸ್ಯಗಳಿಂದ ಉತ್ಪಾದನೆ ಮಾಡಬಹುದಾದ ರಾಸಾಯನಿಕಗಳು ಮತ್ತು ಸಿಂಥೆಟಿಕ್ ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗಗಳಲ್ಲಿ ಕೆಲಸಮಾಡಿದರು. ಅವರ ಮಾರ್ಗದರ್ಶಕರಾಗಿ ರಸಾಯನ ಶಾಸ್ತ್ರದ ಆಗಿನ ದಿಗ್ಗಜರಾದ ಪ್ರಫುಲ್ಲ ಚಂದ್ರ ರೇ ಮತ್ತು ಸತ್ಯೇಂದ್ರನಾಥ್ ಬೋಸ್ ಇದ್ದರು.

ಅಸೀಮಾ ಅವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಲೇಡಿ ಬ್ರಾಬೋರ್ನ್ ಕಾಲೇಜಿನ ರಸಾಯಶಾಸ್ತ್ರ ವಿಭಾಗದ ಪ್ರಾರಂಭಿಕ ಮುಖ್ಯಸ್ಥರಾಗಿ 1940ರಲ್ಲಿ ಕೆಲಸಕ್ಕೆ ಸೇರಿದರು. ಅವರಿಗೆ ಪಿಎಚ್.ಡಿ ಪದವಿ 1944ರಲ್ಲಿ ಸಂದಿತು. ಇವರು ಪಿಎಚ್.ಡಿ ಪದವಿಗೆ ಭಾಜನರಾದ ಪ್ರಪ್ರಥಮ ಭಾರತೀಯ ಮಹಿಳೆ. 1954ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ನಲ್ಲಿ ರೀಡರ್ ಹುದ್ದೆಗೆ ಸೇರಿದರು. 1962ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದ ಪ್ರತಿಷ್ಟಿತ ಖೈರಾ ಪ್ರೊಫೆಸರ್ ಹುದ್ದೆಯನ್ನು ಅಲಂಕರಿಸಿ, 1982ರ ವರೆಗೂ ಆ ಸ್ಥಾನದಲ್ಲಿದ್ದರು. 1972 ರಲ್ಲಿ ಯು.ಜಿ.ಸಿ. ಪ್ರಾಯೋಜಿತ ನೈಸರ್ಗಿಕ ರಸಾಯನ ಶಾಸ್ತ್ರದ ಶಿಕ್ಷಣ ಮತ್ತು ಪ್ರಶಿಕ್ಷಣ ಕಾರ್ಯಕ್ರಮದ ಗೌರವಾನ್ವಿತ ಸಂಚಾಲಕಿಯಾಗಿ ನೇಮಕಗೊಂಡರು. 

ಅಸೀಮಾ ಚಟರ್ಜಿ ಅವರು ಭರತ ಖಂಡದ ಔಷಧೀಯ ಸಸ್ಯಗಳ ಬಗ್ಗೆ ಮಹತ್ವದ ಕೃತಿ ಸಂಪುಟಗಳನ್ನು ರಚಿಸಿದ್ದಾರೆ.

ಅಸೀಮಾ ಚಟರ್ಜಿ ಅವರಿಗೆ ಕೊಲ್ಕತ್ತಾ ವಿಶ್ವವಿದ್ಯಾಲಯದ ಪ್ರೇಮ್ ಚಂದ್ ರಾಯ್ ಚಂದ್ ಸ್ಕಾಲರ್ ಗೌರವ ಹಾಗ 1960ರಲ್ಲಿ ಇಂಡಿಯನ್ ನ್ಯ್ಯಾಷನಲ್ ಸೈನ್ಸ್ ಅಕಾಡೆಮಿಯ ಫೆಲೋ ಗೌರವಗಳು ಸಂದವು. 1961ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಎನಿಸಿದರು. 1975ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾದರು.  ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಪ್ರಪ್ರಥಮ ಮಹಿಳೆ ಎನಿಸಿದರು. ಹಲವಾರು ವಿಶ್ವವಿದ್ಯಾಲಯಗಳಿಂದ ಡಿ.ಎಸ್ಸಿ ಪದವಿ ಸ್ವೀಕರಿಸಿದರು.  ಪಿ.ಸಿ.‍ರೇ ಮತ್ತು ಸಿ. ವಿ. ರಾಮನ್ ಗೌರವಗಳೂ ಸಂದವು. 1982-1990ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಜ್ಯಸಭಾ ಸದಸ್ಯರಾಗಿ ನಾಮಾಂಕಿತಗೊಂಡಿದ್ದರು.

ಅಸೀಮಾ ಚಟರ್ಜಿ 2006ರ ನವೆಂಬರ್ 22ರಂದು ಈ ಲೋಕವನ್ನಗಲಿದರು. 2017ರ ಸೆಪ್ಟೆಂಬರ್ 23ರಂದು ಅಸೀಮಾ  ಚಟರ್ಜಿಯವರ ಜನ್ಮಶತಮಾನೋತ್ಸವದ ಗೌರವಾರ್ಥ ಗೂಗಲ್ ತನ್ನ ಗೂಗಲ್ ಡೂಡಲ್ ಮೂಲಕ ಗೌರವ ಅರ್ಪಿಸಿತು. 

On the birth anniversary of great scientist  and First Lady Scientist to get Dr. Shanthi Swaroop Bhatnagar Award Dr. Asima Chatterjee  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ