ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಟೇಶ ಬಾಬು


 ನಟೇಶ ಬಾಬು


"ವೃತ್ತಿಯಲ್ಲಿ ಪತ್ರಕರ್ತ, ಗೊತ್ತಿರುವುದು ಅಕ್ಷರ ಬೇಸಾಯ. ನಮ್ಮ ಹೊಲದ ತುಂಬೆಲ್ಲಾ ಕನಸಿನ ಪೈರುಗಳು" ಹೀಗೆ ತಮ್ಮನ್ನು ಕಂಡುಕೊಂಡವರು ಪತ್ರಿಕಾಲೋಕದ ಸಾಧಕ ಹ.ಚ. ನಟೇಶ ಬಾಬು. 

ಅಕ್ಟೋಬರ್ 18 ನಟೇಶ ಬಾಬು ಅವರ ಹುಟ್ಟುಹಬ್ಬ.  ಇವರು ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹರಳಾಪುರದವರು. ಓದಿದ್ದು ಕನ್ನಡ ಎಂ.ಎ, ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ. ಪ್ರಸ್ತುತ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ಪ್ರೀತಿ, ಸಂಘಟನಾ ಕೆಲಸ ಮತ್ತು ಬರಹದ ಪ್ರೀತಿಗಳನ್ನು ತುಂಬಿಕೊಂಡು ಬೆಳೆದ ನಟೇಶ ಬಾಬು ಹಲವು ರೀತಿಯಲ್ಲಿ ಬರೆವಣಿಗೆ ಮಾಡುತ್ತ ಬಂದಿದ್ದು, ಪತ್ರಿಕಾಲೋಕದಲ್ಲಿನ ಮತ್ತು ತಮ್ಮ ಕೃತಿಗಳಲ್ಲಿನ ಬರಹಗಳ ಮೂಲಕ ಎದ್ದುಕಾಣುವ ಉತ್ಸಾಹಿ ಪ್ರತಿಭೆಯಾಗಿ ಕಂಗೊಳಿಸುತ್ತ ಸಾಗಿದ್ದಾರೆ. 

ನಟೇಶ ಬಾಬು ಅವರ ಪ್ರಕಟಿತ ಕೃತಿಗಳಲ್ಲಿ
'ಸಿರಿ’ (ತುಮಕೂರು ಜಿಲ್ಲಾ ಕವಿಗಳ ಕವನ ಸಂಕಲನ ಸಂಪಾದನೆ), ಬ್ರಿಟನ್ ವ್ಯಂಗ್ಯಚಿತ್ರಕಾರರು, ಅಮೆರಿಕ ವ್ಯಂಗ್ಯಚಿತ್ರಕಾರರು, ಭಾರತದ ವ್ಯಂಗ್ಯಚಿತ್ರಕಾರರು (ಖ್ಯಾತ ಕಾರ್ಟೂನ್ ಕಿಂಗ್ ಗಳಿಗೆ ಸಂಬಂಧಿಸಿದ ಮೂರು ಪುಸ್ತಕಗಳು), ಅಮಿತಾಭ್ ಬಚ್ಚನ್ (ವಿಶ್ವವಿಖ್ಯಾತರ ವ್ಯಕ್ತಿಚಿತ್ರ ಮಾಲೆಗಾಗಿ ಕಿರು ಪುಸ್ತಕ), ಸಿಂಗ್ ಈಸ್ ಕಿಂಗ್ (ಡಾ.ಮನಮೋಹನ್ ಸಿಂಗ್ ಜೀವನ-ಸಾಧನೆ), ಗಿಫ್ಟೆಡ್ (ವಿಶೇಷ ಚೇತನರ ಸ್ಫೂರ್ತಿದಾಯಕ ಕತೆಗಳ ಅನುವಾದ), ಲೈಫ್ ಸೂಪರ್ ಗುರು (ಋತುಪರ್ಣ ಶರ್ಮಾ ಅವರ ಕೃತಿ ಅನುವಾದ) ಸೇರಿವೆ.  2016ರಲ್ಲಿ ಇವರ 'ಗಿಫ್ಟೆಡ್' ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿದೆ.

ವಿಜಯ ಕರ್ನಾಟಕದ 'ಟರ್ನಿಂಗ್ ಪಾಯಿಂಟ್' ಅಂಕಣ, 'ಕಾಸ್‍ಬಾತ್' ಮೂಲಕ ಕಾಸೇಶ್ವರನಾಗಿ ಹಣಕಾಸು ಸಲಹೆ, ಕಾರ್ಪೊರೇಟ್ ಆಧ್ಯಾತ್ಮ, ಇವೇ ಮುಂತಾದ ಹಲವು ತೆರನಾದ ವೈವಿಧ್ಯಗಳು ಹಾಗೂ 'ವಿಕ ಮನಿ'ಯಲ್ಲಿನ ಬಹುಮುಖಿ ನಿರ್ವಹಣೆಗಳು ನಟೇಶ ಬಾಬು ಅವರ ಖಜಾನೆಯಲ್ಲಿವೆ. 'ಕನಸಿನರಮನೆ' ಬ್ಲಾಗಿನ ವೈವಿಧ್ಯಕೂಡ ಅವರ ವಿಶಾಲ ಹರಹನ್ನು ಅಭಿವ್ಯಕ್ತಿಸುವಂತಿದೆ.

ಪ್ರತಿಭಾನ್ವಿತ ಹ.ಚ. ನಟೇಶ ಬಾಬು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Natesh Babu 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ