ರಮೇಶಚಂದ್ರ
ರಮೇಶಚಂದ್ರ
ರಮೇಶಚಂದ್ರ ಎಂಬ ಹೆಸರನಿಂದ ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತ ಬಂದಿರುವವರು ಆತ್ಮೀಯರಾದ ಎಚ್. ವಿ. ರಮೇಶ.
ರಮೇಶಚಂದ್ರ ಅವರು ಜನಿಸಿದ್ದು 1946 ಅಕ್ಟೋಬರ್ 18ರಂದು. ತಂದೆ ಎಚ್. ವೆಂಕಟರಾವ್. ತಾಯಿ ತಾರಾಬಾಯಿ. ಹೊನ್ನುಡಿಕೆಯ ಮೂಲದವರಾದರೂ ಬೆಂಗಳೂರಿನಲ್ಲೇ ಬಾಲ್ಯ ಕಳೆದರು. ಇವರ ವಿದ್ಯಾಭ್ಯಾಸ ಬೆಂಗಳೂರಿನ ಮಾದರಿ ವಿದ್ಯಾಶಾಲೆ ಹಾಗೂ ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ಶಿಕ್ಷಣಾಲಯದಲ್ಲಿ ನಡೆಯಿತು.
ರಮೇಶಚಂದ್ರ ಅವರು ಕೆ.ಜಿ.ಎಫ್‌ನ
ಬಿ.ಎ.ಎಂ.ಎಲ್ ಸಂಸ್ಥೆಯಲ್ಲಿ ತಂತ್ರಜ್ಞರಾಗಿ ಸೇರಿ 37 ವರ್ಷಗಳ ಸೇವೆ ಸಲ್ಲಿಸಿ ಹಿರಿಯ ಅಧಿಕಾರಿಗಳಾಗಿ ನಿವೃತ್ತರಾದರು.
ರಮೇಶಚಂದ್ರ ಅವರಿಗೆ ತಂದೆ ತಾಯಿಯರು ಮತ್ತು ಶಾಲೆಯ ಅಧ್ಯಾಪಕ ವರ್ಗದಲ್ಲಿದ್ದ ಶ್ರೀ ನಂಜುಂಡಯ್ಯ, ಶ್ರೀಮತಿ ಕೆ.ಟಿ.ಬನಶಂಕರಮ್ಮ ಮುಂತಾದವರ ಉತ್ತೇಜನ ದೊರೆತು ಬಾಲ್ಯದಲ್ಲೇ ಸಾಹಿತ್ಯದ ಆಸಕ್ತಿ ಮೂಡಿತು. ಶಾಲಾ ಸ್ಮರಣ ಸಂಚಿಕೆಗಳಲ್ಲಿ ಇವರ ಬರವಣಿಗೆಗಳು ಪ್ರಕಾಶಿಸಿದವು. ಮುಂದೆ ಇವರ ಲೇಖನಗಳು ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ.
ರಮೇಶಚಂದ್ರರ 'ಸಾಗರಗಾಥಾ' ಕವನ ಸಂಕಲನವನ್ನು ಖ್ಯಾತ ಕವಿ ನರಸಿಂಹಸ್ವಾಮಿ ಬಿಡುಗಡೆಗೊಳಿಸಿ ಬೆನ್ನು ತಟ್ಟಿದರು. ಆ ದೃಶ್ಯ ಈಗಲೂ ಕಣ್ಣಲ್ಲೇ ಇದೆ ಎಂದು ವಿನಮ್ರವಾಗಿ ನೆನೆಯುತ್ತಾರೆ ರಮೇಶರು. ಹನಿಗವನ, ಲಲಿತ ಪ್ರಬಂಧ, ಸಣ್ಣಕತೆ ಮತ್ತು ನಾಟಕಗಳ ರಚನೆ, ಪ್ರವಾಸ ಸಾಹಿತ್ಯ ಹೀಗೆ ಅವರ ಬರಹಗಳಲ್ಲಿ ಎಲ್ಲ ವೈವಿಧ್ಯಗಳಿವೆ.
ರಮೇಶಚಂದ್ರ ಅವರು ಬೆಮೆಲ್ ಕನ್ನಡ ಮಿತ್ರರು ಪ್ರತಿವರ್ಷ ನಡೆಸುತ್ತಿದ್ದ ನಾಟಕ ಸ್ಪರ್ಧೆಗಳಿಗೆ ತಾವೇ ನಾಟಕ ಬರೆದು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಅನೇಕ ನಾಟಕಗಳಿಗೆ ಪುರಸ್ಕಾರಗಳು ಸಂದಿವೆ. ಕೆಲವು ಬಾರಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರು ರಚಿಸಿದ ‘ಕಣ್ಣುಕಾಣದ ಗಾವಿಲರು’ ನಾಟಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ‘ವಿಜಯೋತ್ಸವ’, 'ಕೊರಗು’, ‘ಒಸಗೆ’, ‘ಸಂಜೆಗೆಂಪು’, ಇವರ ಕವನ ಸಂಕಲನಗಳು. 'ನೆನಪಿನ ಅಂಗಳ’ ಅನುಭವ ಕಥನ, ಪುಷ್ಪರಾಗ, ಹನಿಗವನಗಳ ಗುಚ್ಛ, ರಜನಿಗಂಧ, ಕಾರ್ಮಿಕ ಜಗತ್ತಿನ ಮಾಯಾದರ್ಪಣ ಮುಂತಾದವುಗಳನ್ನು ತಮ್ಮದೇ ಆದ ಶ್ರೀನಿಧಿ ಪ್ರಕಾಶನದಿಂದ ಹೊರತಂದಿದ್ದಾರೆ. ಹಲವು ಗ್ರಂಥಗಳನ್ನು ಸಂಪಾದಿಸಿದ್ದಾರೆ. ‘ನಾ ಕೊಂದ ಹುಡುಗಿ’, ‘ಪ್ರತಿಮಾ ಗೃಹ’, ‘ಹಬ್ಬಿದ ಮಲೆ ಮಧ್ಯದೊಳಗೆ’, ‘ಫಿರ್ದೌಸಿ’, 'ಕೀರ್ತಿ ಪತಾಕೆ’, ‘ಮೈಸೂರು ಹುಲಿ’, ‘ಅಸ್ತಂಗತ’ ಮುಂತಾದ ನಾಟಕಗಳು ಇವರಿಗೆ ಹೆಸರನ್ನು ತಂದುಕೊಟ್ಟಿವೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ತುಕ್ಕೂಜಿ’ ನಾಟಕದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ರಮೇಶಚಂದ್ರರಿಗೆ ಸಂದ ಗೌರವಗಳು ಅನೇಕ. ಕರ್ನಾಟಕ ನಾಟಕ ಅಕಾಡಮಿಯು ‘ಕಾರ್ಮಿಕ ರಂಗೋತ್ಸವ' ಗೌರವ ನೀಡಿದೆ. ಸಂಸ್ಕಾರ ಭಾರತಿ ಪ್ರತಿಷ್ಠಾನ '2012ರ ವರ್ಷದ ವ್ಯಕ್ತಿ'ಯೆಂದು ಗೌರವಿಸಿದೆ. ರಾಜರಾಜೇಶ್ವರಿ ನಗರದ ಹಿರಿಯ ನಾಗರೀಕ ವೇದಿಕೆಯು ಇವರ ಲಲಿತ ಪ್ರಬಂಧಗಳ ಸಂಕಲನ ‘ನನ್ನ ಗಾಡಿ ಎಂಬ ಮೋಡಿ’ ಯನ್ನು ಹೊರತಂದಿದೆ. ಇದಲ್ಲದೆ ಅನೇಕ ಗೌರವಗಳೂ ಇವರನ್ನರಸಿ ಬಂದಿವೆ.
ಒಮ್ಮೆ ಬೆಂಗಳೂರು, ಒಮ್ಮೆ ಸ್ಯಾನ್ ಫ್ರಾನ್ಸಿಸ್ಕೋ ಎಂದು ಬರೆಯುವ ಇವರ ವ್ಯಕ್ತಿತ್ವವೂ ಪ್ರತಿಭೆಯೂ ಬಹು ವಿಸ್ತಾರವುಳ್ಳ ವಿಶ್ವವ್ಯಾಪ್ತಿಯದ್ದು.
ಆತ್ಮೀಯ ಹಿರಿಯರೂ, ಸಾಧಕರೂ, ನಿರಂತರ ಕ್ರಿಯಾಶೀಲರೂ ಆದ ರಮೇಶಚಂದ್ರ ಅವರಿಗೆ ಜನ್ಮದಿನದ ಶುಭಹಾರೈಕೆಗಳು.
Ramesh Chandra
ಕಾಮೆಂಟ್‌ಗಳು