ಮಂಜುಶ್ರೀ ಎಂ. ಕಡಕೋಳ
ಮಂಜುಶ್ರೀ ಎಂ. ಕಡಕೋಳ
ಪ್ರಜಾವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ಡಾ. ಮಂಜುಶ್ರೀ ಎಂ. ಕಡಕೋಳ ಪತ್ರಿಕಾಲೋಕದ ಪ್ರಸಿದ್ಧ ಹೆಸರು.
ನವೆಂಬರ್ 11, ಮಂಜುಶ್ರೀ ಅವರ ಜನ್ಮದಿನ. ಇವರು ದಾವಣಗೆರೆ ಮೂಲದವರು. ದಾವಣಗೆರೆಯಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದ ನಂತರ ಶಿವಮೊಗ್ಗದಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಗಳಿಸಿದರು. "ದಾವಣಗೆರೆ ಪರಿಸರದ ವೃತ್ತಿ ರಂಗಭೂಮಿ" ವಿಷಯವಾಗಿ ಅಧ್ಯಯನ ನಡೆಸಿ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ. ರಂಗರಾಜ ವನದುರ್ಗ ಅವರ ಮಾರ್ಗದರ್ಶನದಲ್ಲಿ ಇವರು ಸಲ್ಲಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ ಗೌರವ ನೀಡಿದೆ.
ಮಂಜುಶ್ರೀ ಅವರು ದಾವಣಗೆರೆಯ ಸ್ಥಳೀಯ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ನಂತರದಲ್ಲಿ, "ಕನ್ನಡ ಪ್ರಭ" ಪತ್ರಿಕೆಯಲ್ಲಿ ಕೆಲಕಾಲ ಕಾರ್ಯನಿರ್ವಹಿಸಿ, ಮುಂದೆ ಕಳೆದ ಹದಿನೇಳು ವರ್ಷಗಳಿಂದ ಪ್ರಜಾವಾಣಿ ಬಳಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತದಲ್ಲಿ, ಆ ಪತ್ರಿಕೆಯ ಹಿರಿಯ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ತಮ್ಮ ವೃತ್ತಿಯಲ್ಲಿ ಎಷ್ಟು ಆಪ್ತತೆ ಎಂದರೆ, ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಲು ಆಹ್ವಾನ ಬಂದರೂ, ಪತ್ರಿಕಾ ಕೆಲಸದಲ್ಲೇ ಆಪ್ತವಾಗಿ ಮುಂದುವರೆದರು.
ಮಂಜುಶ್ರೀ ಅವರು ಮಾಡಿರುವ ಲೇಖನಗಳು, ಸಂದರ್ಶನಗಳು ಬಹುಮುಖಿಯಾದದ್ದು. ಮಹಿಳೆ, ರಂಗಭೂಮಿ, ಆರೋಗ್ಯ ಹೀಗೆ ವಿವಿಧ ವಿಷಯಗಳ ಕುರಿತ ಇವರ ವರದಿ, ಲೇಖನಗಳು ಗಮನ ಸೆಳೆದಿವೆ. ಇವರ ಅನೇಕ ಬರಹಗಳು ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿವೆ. ಈ ನಿಟ್ಟಿನಲ್ಲಿ ನೋಡುವಾಗ, ದೇವದಾಸಿ ಮಹಿಳೆಯರ ಕುರಿತು 15ಕ್ಕೂಹೆಚ್ಚು ಲೇಖನ-ವರದಿಗಳನ್ನು ಪ್ರಕಟಿಸಿರುವ ಇವರು 2012ರಲ್ಲಿ ಬರೆದ 'ಸಿಡಿ ವಿರುದ್ಧ ಸಿಡಿದೆದ್ದ ರತ್ನಮ್ಮ ವರದಿಯು ಪರಿಶಿಷ್ಟ ಮಹಿಳೆ ಸಿಡಿ ಆಡುವುದನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ದರ್ಶನದಲ್ಲಿ ಮೂಡಿಬಂದ 'ಸ್ಮಶಾನದಲ್ಲಿ ಕಮರುವ ಕುಸುಮಗಳು' ಲೇಖನವನ್ನು ಅಂದಿನ ಸಚಿವೆ ಮೋಟಮ್ಮ ಅವರು ಸದನದಲ್ಲಿ ಚರ್ಚಿಸಿದ್ದರು. ಹೀಗೆ ಹಲವು ಸಂಗತಿಗಳು ನಮ್ಮ ಕಣ್ಮುಂದೆ ಬಂದು ನಿಲ್ಲುತ್ತವೆ.
ಮಂಜುಶ್ರೀ ಅವರು ಲಾಡ್ಲಿ ಸಮೂಹದಿಂದ ಫಲೋಶಿಪ್ ಗೌರವಕ್ಕೆ ಭಾಜನರಾಗಿದ್ದರು. ಮುಂದೆ ಅವರು ಪ್ರಜಾವಾಣಿಯಲ್ಲಿ ರೂಮಿ ಹರೀಶ್ ಕುರಿತು ಬರೆದ "ಲಿಂಗದ ಹಂಗು ತೊರೆದು..." ಎಂಬ ಅಗ್ರಲೇಖನಕ್ಕೆ ಲಾಡ್ಲೀ ಮೀಡಿಯಾ ಪ್ರಶಸ್ತಿ ಸಂದಿತು. ಅವರಿಗೆ 2018 ವರ್ಷದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಇದಲ್ಲದೆ 2010ರಲ್ಲಿ ಚರಕ ಪ್ರಶಸ್ತಿ, 2013ರಲ್ಲಿ ವನಿತಾ ಸಾಹಿತ್ಯಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಡಾ.ಮಂಜುಶ್ರೀ ಎಂ. ಕಡಕೋಳ ಅವರ ಬರಹಗಳ ಪ್ರಸ್ತುತಿ ಎಷ್ಟು ಮಧುರವೋ ಅವರ ನಯ ವಿನಯ, ಸ್ನೇಹ, ಸರಳತೆಗಳೂ ಅಷ್ಟೇ ಮಧುರ. ಆತ್ಮೀಯ ಮಂಜುಶ್ರೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.
Happy birthday Manjushree Kadakola 🌷🌷🌷

ಕಾಮೆಂಟ್‌ಗಳು