ಚಂದ್ರಕಲಾ ನಂದಾವರ
ಕೆ. ವಿ. ಚಂದ್ರಕಲಾ ನಂದಾವರ
ಚಂದ್ರಕಲಾ ನಂದಾವರ ಅವರು ಬರವಣಿಗೆ, ರಂಗಭೂಮಿ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.
ಚಂದ್ರಕಲಾ ಅವರು 1950ರ ನವೆಂಬರ್ 21 ರಂದು ಮಂಗಳೂರು ಬಳಿಯ ಕೊಂಡಾಣದಲ್ಲಿ ಜನಿಸಿದರು. ತಂದೆ ವಾಮನ ವಿದ್ವಾನ್. ತಾಯಿ ಸುಂದರಿ. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳನ್ನು ಗಳಿಸಿದರು.
ಚಂದ್ರಕಲಾ ಅವರು ಶಿಕ್ಷಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ, ಕುಡ್ಲದ ಗಣಪತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಸಹ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ, ದಕ್ಷಿಣ ಕನ್ನಡ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯತ್ವದ ಗೌರವ ಸಹ ಇವರಿಗೆ ಸಂದಿದೆ.
ಚಂದ್ರಕಲಾ ನಂದಾವರ ಅವರು ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ನೆಲೆಗಳ ಹಲವಾರು ವಿಚಾರ ಸಂಕಿರಣಗಳು ಮತ್ತು ಕಮ್ಮಟಗಳಲ್ಲಿ ಭಾಗಿಯಾಗಿದ್ದಾರೆ. ಅವರ ಕಥೆ, ಕವನ, ಜೀವನ ಚರಿತ್ರೆ, ಪ್ರಬಂಧ ಮತ್ತು ಅಂಕಣ ಸ್ವರೂಪದ ಬರೆಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಚಂದ್ರಕಲಾ ಅವರು ಅನುವಾದಿಸಿರುವ, ಜಾನಕಿ ಬ್ರಹ್ಮಾವರ ಅವರ ತುಳು ಕಾದಂಬರಿಯ ಅನುವಾದದ ಕೃತಿ 'ಯಾರಿಗೆ ಯಾರುಂಟು' ಕಾದಂಬರಿಯು, ಮಂಗಳೂರು ವಿ.ವಿ.ದ ಪದವಿಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು. 'ಕಯ್ಯಾರ ಕಾವ್ಯ' ವಿಮರ್ಶಾಲೇಖನಗಳ ಸಂಕಲನವನ್ನು ಮಂಗಳೂರು ವಿ.ವಿ.ದ ಪ್ರಸಾರಾಂಗ ಪ್ರಕಟಿಸಿದೆ. ಇವರ ಇತರ ಕೃತಿಗಳಲ್ಲಿ ಪ್ರೊ. ಎಂ. ಮರಿಯಪ್ಪ ಭಟ್ಟರ ಜೀವನ ಚರಿತ್ರೆಯ ಹೊತ್ತಗೆ; 'ನಾವು ಪ್ರಾಮಾಣಿಕರೆ’, ‘ಮತ್ತೆ ಚಿತ್ತಾರ ಬರೆ ಗೆಳತಿ’ ಕವನ ಸಂಕಲನಗಳು; 'ಹೊಸ್ತಿಲಿಂದೀಚೆಗೆ’ ಪ್ರಬಂಧ ಮತ್ತು ಭಾಷಣಗಳ ಸಂಗ್ರಹ; ‘ಮುಖಾ-ಮುಖಿ’, 'ಮನೆ ಲೆಕ್ಕ', 'ಭೂಮಿ ದುಂಡಗಿದೆ' ಕಥಾ ಸಂಕಲನಗಳು; ಸಾಕ್ಷರತಾ ಆಂದೋಲನದ ವಯಸ್ಕರಿಗಾಗಿ ನಿರಂತರ ಕಲಿಕೆಯ ಪಠ್ಯಪುಸ್ತಕ ‘ಅಜ್ಜಿ-ಅಮ್ಮ-ಮಗಳು’; ‘ಮಾತು-ಓದು-ಬರೆಹ’ ರೇಡಿಯೋ ಚಿಂತನಗಳ ಸಂಗ್ರಹ; 'ಹೆಣ್ಣಿಗೆ ವರ್ತಮಾನವಿಲ್ಲವೇ' ಚಿಂತನೆ; 'ನನ್ನೂರು, ನನ್ನ ಜನ' ಅಂಕಣಗಳ ಸಂಕಲನ ಮುಂತಾದ ಕೃತಿಗಳು ಸೇರಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಎಸ್. ವಿ. ಪರಮೇಶ್ವರ ಭಟ್ಟರ ಸಮಗ್ರ ಸಾಹಿತ್ಯ ಸಂಪುಟ - 3 (ಕಾವ್ಯ)ದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.
ಚಂದ್ರಕಲಾ ಅವರು ಕರಾವಳಿಯ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕ ಸದಸ್ಯೆಯಾಗಿ ನಂತರ ವಿವಿಧ ಹುದ್ದೆಗಳಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಸ್ತ್ರೀ ಶೋಷಣೆಯ ವಿರುದ್ಧ, ಹೆಣ್ಣಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ದಿಟ್ಟ ನಿಲುವು ತಾಳಿ ಇವರು ರೂಪಿಸಿದ ಕಾರ್ಯಕ್ರಮಗಳು ಹಲವಾರು.
ಚಂದ್ರಕಲಾ ನಂದಾವರ ಅವರಿಗೆ ಸಾಹಿತ್ಯ ಸಂಘಟನೆಗಾಗಿ ‘ಕೌದೆ ಆಂಡಾಳ್’ ಪ್ರಶಸ್ತಿ, ವಿಮರ್ಶಾಲೇಖನಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಶೇಷಂ ಭಾಸ್ಕರಾಚಾರ್ಯ ಪ್ರಶಸ್ತಿ’, ಆಳ್ವಾಸ್ ಎಜುಕೇಷನ್ ಟ್ರಸ್ಟ್‌ನಿಂದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ‘ಉತ್ತಮ ಶಿಕ್ಷಕಿ ಪ್ರಶಸ್ತಿ’, ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ', 'ನಿರತ ಸಾಹಿತ್ಯ ಪ್ರಶಸ್ತಿ’, 'ಅಬ್ಬಕ್ಕ ಪ್ರಶಸ್ತಿ' ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
On the birthday of writer and activist Chandrakala Nandavara 🌷🙏🌷
ಕಾಮೆಂಟ್‌ಗಳು