ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ.ಎಸ್.ಮೂರ್ತಿ


 ಎಂ.ಎಸ್.ಮೂರ್ತಿ


ಡಾ. ಎಂ.ಎಸ್.  ಮೂರ್ತಿ ಅವರು ಚಿತ್ರಕಲಾವಿದರಾಗಿ, ಶಿಲ್ಪಿಯಾಗಿ, ಬರಹಗಾರರಾಗಿ, ಅಂಕಣಕಾರರಾಗಿ, ನಾಟಕಕಾರರಾಗಿ, ಸಂಘಟನಕಾರರಾಗಿ, 'ಭೂಮಿ' ಎಂಬ ಕಲಾ ಅಧ್ಯಯನ ಕೇಂದ್ರದ ಸಂಸ್ಥಾಪಕರಾಗಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷರಾಗಿ ಹೀಗೆ ಬಹುಮುಖಿಯಾಗಿ ಹೆಸರಾಗಿದ್ದಾರೆ.  

ಎಂ.ಎಸ್.ಮೂರ್ತಿ ಅವರು 1960ರ ನವೆಂಬರ್ 25ರಂದು ಜನಿಸಿದರು. ಅವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ.  1982ರಲ್ಲಿ ಅವರು ಫೈನ್ ಆರ್ಟ್ಸ್ ಮತ್ತು ಮಾಡೆಲಿಂಗ್ ಕ್ಷೇತ್ರದ ಡಿಪ್ಲೋಮಾ  ಪಡೆದರು. ಕಾಲೇಜು ಶಿಕ್ಷಣದಲ್ಲಿ ಅವರು ಮನಃಶಾಸ್ತ್ರ ಓದಿದರು. 2010ರಲ್ಲಿ ಮಕ್ಕಳ ಮನಸ್ಸಿನ ಚಿತ್ರಗಳ ಕುರಿತಾದ ಇವರ ಸಂಶೋಧನೆಗೆ ಹಂಪಿ ವಿಶ್ವವಿದ್ಯಾಲಯವು ಡಿ-ಲಿಟ್ ಗೌರವವನ್ನು ನೀಡಿದೆ.

ಎಂ.ಎಸ್.ಮೂರ್ತಿ ಅವರು ಪತ್ರಿಕಾ ಲೋಕದಲ್ಲಿ ಇಲಸ್ಟೇಟರ್ ಆಗಿ, ವಿನ್ಯಾಸಕಾರರಾಗಿ, ಕಲಾ ನಿರ್ದೇಶಕಾಗಿ ಉದ್ಯೋಗ ಮಾಡಿದರು.  ನಂತರದಲ್ಲಿ ಉದ್ಯೋಗ ತ್ಯಜಿಸಿ ಪೂರ್ಣಾವಧಿ ಕಲಾವಿದರಾಗಿದ್ದಾರೆ.  

ಎಂ.ಎಸ್.ಮೂರ್ತಿ ಅವರು 1986ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕಲೆ ಮತ್ತು ಸಾಹಿತ್ಯದ ಬಗ್ಗೆ ತಮ್ಮ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ನಡೆಸಿದರು. ಅವರ ಭಾಗವಹಿಸಿದ ಪ್ರಸಿದ್ಧ ಕಲಾಪ್ರದರ್ಶನಗಳಲ್ಲಿ  ರವೀಂದ್ರ ಕಲಾ ಕುಂಜ್ ಆರ್ಟ್ ಗ್ಯಾಲರಿ (1994), ವೈ.ಬಿ. ಚವಾಣ್ ಗ್ಯಾಲರಿ (1994), ಗ್ರಿಂಡ್ಲೇಸ್ ಬ್ಯಾಂಕ್ (1994), ಚಿತ್ರಕಲಾ ಪರಿಷತ್ (2000 ಮತ್ತು 2010), KYNKYNY ಆರ್ಟ್ ಗ್ಯಾಲರಿ (2011), ವೆಂಕಟಪ್ಪ ಆರ್ಟ್ ಗ್ಯಾಲರಿ (1978), ಅಲಯನ್ಸ್ ಫ್ರಾನ್ಚೈಸ್ (1995), ಸುಮುಖ ಗ್ಯಾಲರಿ (1999), ಕ್ರಿಮ್ಸನ್ ಆರ್ಟ್ ರಿಸೋರ್ಸಸ್ (1994),
ಟೈಮ್ ಅಂಡ್ ಸ್ಪೇಸ್ ಗ್ಯಾಲರಿ (1995 ಮತ್ತು 2008), ಲಕ್ಷಣ ಆರ್ಟ್ ಗ್ಯಾಲರಿ (2004), ಜಹಾಂಗೀರ್ ಆರ್ಟ್ ಗ್ಯಾಲರಿ (1997 ಮತ್ತು 2012), ಕೆ.ಸಿ.ದಾಸ್ (1995), ರಿಲಯನ್ಸ್ ಪ್ರೈವೇಟ್ ಲಿಮಿಟೆಡ್, ಮುಂಬೈ (1994), ಇರಾನಿನ ಇರಾನ್ ಅಕಾಡೆಮಿ ಆಫ್ ಆರ್ಟ್ಸ್ (2003), ಟ್ಯಾಮರಿಂಡ್ ಆರ್ಟ್, ನ್ಯೂಯಾರ್ಕ್ (1995) ಮುಂತಾದವು ಸೇರಿವೆ. 2018ರಲ್ಲಿ ಬೆಂಗಳೂರಿನ 'ಗ್ಯಾಲರಿ ಮನೋರ'ದಲ್ಲಿ 'ದಿ ಬೌಲ್' ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಕಲಾ ಕೃತಿಗಳನ್ನು ಪ್ರದರ್ಶಿಸಿದರು. ಕ್ರಾಸ್‌ರೋಡ್ಸ್‌ನಲ್ಲಿ ನಡೆದ 'ಫ್ಯೂಷನ್ ಆರ್ಟ್ ಫೆಸ್ಟಿವಲ್ ಹೋಮ್'‌ನಲ್ಲಿ ಪ್ರದರ್ಶಿಸಿದರು. 2020ರಲ್ಲಿ ವೆಲಿಕೊ ಟರ್ನೋವೊದಲ್ಲಿನ ರಾಫೆಲ್ ಮಿಹೈಲೋವ್ ಗ್ಯಾಲರಿಯಲ್ಲಿ ಪ್ರದರ್ಶಿಸಿದರು. ಕಳೆದ ವರ್ಷ ಕಲೆಗಳಿಗೆ ವಿಶ್ವಪ್ರಸಿದ್ಧವಾದ ಇಟಲಿಯ ವೆನಿಸ್ ನಗರದಲ್ಲಿ ಇವರ ಏಕವ್ಯಕ್ತಿ ಕಲಾಪ್ರದರ್ಶನ ವಿಶ್ವದೆಲ್ಲೆಡೆಯ ಗಮನ ಸೆಳೆದಿದೆ. 

ಎಂ.ಎಸ್.ಮೂರ್ತಿ ಅವರು ಬೆಂಗಳೂರಿನಲ್ಲಿ ಸ್ಥಾಪಿಸಿರುವ 'ಭೂಮಿ' ಎಂಬ ಕಲಾಸಂಸ್ಥೆ,  'ಕಲಾವಿದರ ಕೇಂದ್ರ' ಎಂಬ ಹೆಗ್ಗಳಿಕೆ ಹೊಂದಿದೆ. ಈ ಕೇಂದ್ರ ಅನೇಕ ಕಲೆಗಳ ವೇದಿಕೆ ಮತ್ತು ಕೇಂದ್ರವೂ ಆಗಿದ್ದು, ವಿಶಿಷ್ಟ ಪ್ರಾಕೃತಿಕ ಮತ್ತು ಕಲಾತ್ಮಕ ಶೋಭೆಗಳಿಂದ ಪ್ರಸಿದ್ಧಗೊಂಡಿದೆ. ಇಲ್ಲಿ ಮೂರ್ತಿ ಅವರು 'ಕಲಾಸಂಸ್ಕಾರ್'  ಎಂಬ ಕಲಾ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ.  ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ದೃಶ್ಯಪ್ರಜ್ಞೆ ಪುನಶ್ಚೇತನಕ್ಕಾಗಿ ರೈತರೊಂದಿಗೆ ಸಂವಾದದ ಮೂಲಕ ದೃಶ್ಯ ಚಳುವಳಿಯ ಕಾರ್ಯಕ್ರಮ ಮಾಡಿದ್ದಾರೆ. ಕಲಾವಿದ್ಯಾರ್ಥಿಗಳಿಗಾಗಿ ಮ್ಯೂರಲ್ ಇಲಸ್ಟ್ರೇಷನ್ ಮತ್ತು ಕಲಾವಿಕಾಸದಂತಹ ಶಿಬಿರಗಳ ನಿರ್ದೇಶನ, ಮಕ್ಕಳ ಚಿತ್ರಕಲೆ ಕುರಿತಂತೆ ಪೋಷಕರಿಗೆ ಕೌನ್ಸಲಿಂಗ್ ಹೀಗೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ.

ಮೂರ್ತಿ ಅವರ ಕೃತಿಗಳು ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್, ಫೆದರ್‌ಲೈಟ್ ಪ್ರೈ. ಲಿಮಿಟೆಡ್, ನಾಮಧಾರಿ ಸೀಡ್ಸ್, ಕ್ಯಾಟರ್‌ಪಿಲ್ಲರ್ ಇನ್ಕಾರ್ಪೊರೇಷನ್, ಬೆಂಗಳೂರಿನ CICOPA, ಅಲಯನ್ಸ್ ಫ್ರಾಂಚೈಸ್, ಕರ್ನಾಟಕ ಚಿತ್ರಕಲಾ ಪರಿಷತ್, ಕೇಜ್ರಿವಾಲ್ ಆರ್ಟ್ ಗ್ಯಾಲರಿ, ಆರ್ಟ್ಸ್‌ಏಕರ್ ಫೌಂಡೇಶನ್, ಕೋಲ್ಕತ್ತಾದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕ್ರಿಯೇಟಿವಿಟಿ ಮತ್ತು ಕಲ್ಚರಲ್ ವಿಷನ್, ರಾಜ್ಯ, ರಾಷ್ಟ್ರೀಯ ಅಕಾಡೆಮಿಗಳು ಮತ್ತು ಅನೇಕ ಭಾರತದಲ್ಲಿನ ಮತ್ತು ವಿದೇಶದಲ್ಲಿನ ಖಾಸಗಿ ಸಂಗ್ರಹಣೆಗಳಲ್ಲಿ ಸೇರ್ಪಡೆಗೊಂಡಿವೆ. 

ಮೂರ್ತಿ ಅವರು ಕನ್ನಡ ಸಾಹಿತ್ಯಲೋಕದಲ್ಲೂ ಹೆಸರಾಗಿದ್ದಾರೆ. ಕನ್ನಡದ ಎಲ್ಲ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಇವರ ಲೇಖನಗಳು, ಪದ್ಯಗಳು, ಅಂಕಣಗಳು ಮೂಡಿ ಹೆಸರಾಗಿವೆ.  'ದೇಸಿ ನಗು' ಎಂಬ ಇವರ ಪ್ರಬಂಧ ಸಂಗ್ರಹ ಕೃತಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿಯ 2006 ವರ್ಷದ ಪ್ರಶಸ್ತಿ ಸಂದಿದೆ. ಬುದ್ಧನ ತತ್ವಶಾಸ್ತ್ರವನ್ನು ಆಧರಿಸಿದ 'ಯಶೋಧರೆ ಮಲಗಿಲ್ಲ’ ಎಂಬ ಇವರ ನಾಟಕಕ್ಕೆ 2007ರಲ್ಲಿ ಬೆಂಗಳೂರು ಆಕಾಶವಾಣಿಯಿಂದ ಅತ್ಯುತ್ತಮ ಪ್ರಾದೇಶಿಕ ನಾಟಕ ಪ್ರಶಸ್ತಿ ಸಂದಿದೆ.  ಇವರು ಪ್ರಕಟಿಸಿದ 'ದೃಶ್ಯ'  ಎಂಬುದು ಪ್ರಪಂಚದ ಮೊದಲ ದೃಶ್ಯ ಕಾದಂಬರಿ.  ಇದಕ್ಕೆ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ವರ್ಷದ ಅತ್ಯುತ್ತಮ ಪುಸ್ತಕಕ್ಕೆ ಸಲ್ಲುವ 'ಪುಸ್ತಕ ಸೊಗಸು' ಬಹುಮಾನ ಸಂದಿತು. 2016 ರಲ್ಲಿ ಇವರ ಪ್ರಬಂಧಗಳ ಸಂಗ್ರಹ 'ನಿಜದ ನೆರಳು' ಪ್ರಕಟಗೊಂಡಿತು. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, 2016ರಲ್ಲಿ ಇವರ 'ಮಹಾತ್ಮ ಗಾಂಧಿಯವರ ರೇಖಾಚಿತ್ರಗಳ ಸಂಗ್ರಹ'ವನ್ನು ಪ್ರಕಟಿಸಿದೆ. 2023ರಲ್ಲಿ ಇವರ ‘ಬೌಲ್' ಎಂಬ ಕಾದಂಬರಿ ಪ್ರಕಟಗೊಂಡು ಓದುಗರಿಂದ ಮತ್ತು ವಿದ್ವಾಂಸರಿಂದ ಅಪಾರ ಮೆಚ್ಚುಗೆ ಗಳಿಸಿದೆ. 

ಮೂರ್ತಿ ಅವರಿಗೆ 2003ರಲ್ಲಿ ಇರಾನಿನ ಅಕಾಡೆಮಿ ಆಫ್ ಅರ್ಟ್ಸ್ ಇಂದ 'ಇಂಟರ್ನ್ಯಾಷನಲ್ ಬೈನಿಯಲ್ ಅವಾರ್ಡ್' ಸಂದಿದೆ.  2010ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. 2016 ರಲ್ಲಿ ಮೈಸೂರು ಕಲಾ ಗೌರವ ಪ್ರಶಸ್ತಿ ಸಂದಿದೆ. 2016 ರಲ್ಲಿ ಹಾಲಭಾವಿ ರಾಷ್ಟ್ರೀಯ ಟ್ರಸ್ಟ್ ಪ್ರಶಸ್ತಿ ಸಂದಿದೆ.  2017 ರಲ್ಲಿ ಕರ್ನಾಟಕ ಸರ್ಕಾರವು ಕಲಾವಿದರಿಗೆ ಜೀವಮಾನ ಸಾಧನೆಗೆ ನೀಡುವ  ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಎಂ.ಎಸ್.ಮೂರ್ತಿ ಅವರು ಬೆಂಗಳೂರಿನ ಜೈನ್ ಕಾಲೇಜ್ ಆಫ್ ವಿಷುಯಲ್ ಆರ್ಟ್ಸ್‌ನಲ್ಲಿ ಅಕಾಡೆಮಿಕ್ ಕೌನ್ಸಿಲ್ ಮುಖ್ಯಸ್ಥರಾಗಿದ್ದರು. ಅವರು ಅನೇಕ ಪ್ರತಿಷ್ಠಿತ ಕಲಾ ಸೆಮಿನಾರ್‌ಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.  ಅಮೂಲ್ಯ  ಕಲೆಗಳನ್ನು ಸಂಗ್ರಹಿಸಿದ್ದಾರೆ.  ವಿವಿಧ ರಾಜ್ಯ ಮತ್ತು ರಾಷ್ಟ್ರೀಯ ಕಲಾ ಪ್ರದರ್ಶನಗಳಿಗೆ ತೀರ್ಪುಗಾರರ ಸಮಿತಿ ಸದಸ್ಯರಾಗಿದ್ದಾರೆ. ಡಾ. ಎಂ ಎಸ್ ಮೂರ್ತಿ ಅವರು  ಕರ್ನಾಟಕದ ಜಾನಪದ ವಿಶ್ವವಿದ್ಯಾಲಯದ ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿದ್ದರು. ಡಾ. ಎಂ ಎಸ್ ಮೂರ್ತಿ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ 2015-2017ರವರೆಗೆ ಸೇವೆ ಸಲ್ಲಿಸಿದ್ದಾರೆ. 

ಮಹಾನ್ ಕಲೆ ಮತ್ತು ಸಾಹಿತ್ಯ ಸಾಧಕರಾದ ಡಾ. ಎಂ.ಎಸ್.ಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to great artiste and writer Dr. M S Murthy  Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ