ಸಂಧ್ಯಾ ರಾವ್
ಸಂಧ್ಯಾ ರಾವ್
"ಭಾವಗಳ ಬರಸೆಳೆದು
ಕಲ್ಪನೆಯ ಕನಸೇರಿ
ಚಿಂತನೆಯ ಚಿತ್ತದಿ ಮುಳುಗಿ
ನಾ ಕವಿತೆಯಾಗುವೆ!"
ಎಂದು ತಮ್ಮನ್ನು ತಾವು ಭಾವನಾಲೋಕದಲ್ಲಿ ಕಂಡುಕೊಂಡಿರುವ ಸಂಧ್ಯಾ ರಾವ್ ನಮ್ಮ ನಡುವಿನ ಗಮನ ಸೆಳೆಯುವ ಬರಹಗಾರ್ತಿ.
ನವೆಂಬರ್ 29, ಸಂಧ್ಯಾ ರಾವ್ ಅವರ ಜನ್ಮದಿನ. ಸೊರಬ ತಾಲ್ಲೂಕಿನ ಮೂಡುಗೋಡು ಇವರು ಹುಟ್ಟಿದ ಊರು. ತಂದೆ ಲಕ್ಷ್ಮೀನಾರಾಯಣ. ತಾಯಿ ಅರುಂಧತಿ. ವಾಣಿಜ್ಯ ಪದವಿ ಪಡೆದಿರುವ ಇವರು ವಿವಾಹದ ನಂತರ ಕುಟುಂಬದೊಂದಿಗೆ ಮಂಗಳೂರಿನಲ್ಲಿದ್ದಾರೆ.
ಸಂಧ್ಯಾ ಅವರಿಗೆ ಸಾಹಿತ್ಯದ ಕುರಿತು ಬಾಲ್ಯದಿಂದಲೇ ಆಸಕ್ತಿ. ಕಳೆದ 6-7 ವರ್ಷಗಳಿಂದ ಬರೆಯುವ ಹವ್ಯಾಸ ಹೆಚ್ಚು ಮೂಡಿದ್ದು, ಇವರ ಬಹುಮುಖಿ ಬರಹಗಳು ಸಾಮಾಜಿಕ ಜಾಲತಾಣಗಳು ಮತ್ತು ಅಂತರಜಾಲ ವಾಹಿನಿಗಳಲ್ಲಿ ಮೂಡುತ್ತ ಸಾಗಿವೆ. ಇವರ ಗೀತೆಗಳು ಅನೇಕ ಗಾಯಕರನ್ನು ಆಕರ್ಷಿಸಿದ್ದು ಆಕರ್ಷಕ ಗಾನರೂಪಗಳಲ್ಲಿ ಹೊರಹೊಮ್ಮಿವೆ. ಈ ನಿಟ್ಟಿನಲ್ಲಿ ಸಂಧ್ಯಾ ಅವರು 'ಸಂಜೆಹಾಡು' ಎಂಬ ಯೂಟ್ಯೂಬ್ ವಾಹಿನಿ ಸ್ಥಾಪಿಸಿದ್ದು, ಇಲ್ಲಿ ವಿವಿಧ ಗಾಯಕರು ಸಂಯೋಜಿಸಿ ಹಾಡಿರುವ ಇವರ ಗೀತೆಗಳು, ಸ್ವಯಂ ಇವರೇ ಸಂಯೋಜಿಸಿರುವ ದೃಶ್ಯರೂಪಕಗಳಾಗಿಯೂ ಕಂಗೊಳಿಸಿವೆ.
ಸಂಧ್ಯಾ ರಾವ್ ಅವರಿಗೆ ಕಲಾತ್ಮಕ ರೀತಿಯ ಹೊಲಿಗೆ, ಕರಕುಶಲ ಕಲೆ, ರಂಗೋಲಿಚಿತ್ರ ಮೂಡಿಸುವಿಕೆ ಮುಂತಾದವುಗಳಲ್ಲೂ ಆಪಾರ ತನ್ಮಯತೆಯಿದೆ.
ಪ್ರತಿಭಾನ್ವಿತರಾದ ಸಂಧ್ಯಾ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Sandhya Rao 🌷🌷🌷
ಕಾಮೆಂಟ್‌ಗಳು