ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೈ.ಶೇ.ಅ.


 ಕೊಡಗಿನ ಅನಂತಪದ್ಮನಾಭರಾವ್


ಒಂದು ಕಾಲದಲ್ಲಿ ಕೊಡಗು ಒಂದು ಸ್ವತಂತ್ರ ಸಂಸ್ಥಾನವಾಗಿದ್ದು ಅಲ್ಲಿನ ಹಾಲೇರಿ ರಾಜ ಮನೆತನದವರು ಈ ರಾಜ್ಯವನ್ನು ಆಳುತ್ತಿದ್ದರು. ಅನಂತರದಲ್ಲಿ ಇದು ಒಂದು ಪ್ರತ್ಯೇಕ ರಾಜ್ಯವಾಗಿ 1956ರಲ್ಲಿ ರಾಜ್ಯ ವಿಭಜನೆಯಾದಾಗ ಕರ್ನಾಟಕಕ್ಕೆ ಸೇರಿ ಈಗ ಒಂದು ಜಿಲ್ಲೆಯಾಗಿದೆ. ಸಂಪೂರ್ಣ ಆಂಗ್ಲಾಡಳಿತಕ್ಕೆ ಒಳಪಟ್ಟಿದ್ದ ಕೊಡಗು ಆಂಗ್ಲಾನುಕರಣೆಯನ್ನೇ ರೂಢಿಸಿಕೊಂಡಿತ್ತು. ಕನ್ನಡ ಸಂಸ್ಕೃತಿ-ಭಾಷಾಭಿಮಾನದ ಬಗ್ಗೆ ಅಂತಹ ಕಾಳಜಿಯಿರಲಿಲ್ಲ. ಅಂತಹ ಒಂದು ಸಂದರ್ಭದಲ್ಲಿ ಮೈಸೂರಿನ  ಕುಟುಂಬವೊಂದು ಕೊಡಗಿಗೆ ವಲಸೆ ಹೋಯಿತು. ಅಲ್ಲಿಯೇ ನೆಲೆ ನಿಂತಿತು. ಇಂತಹ ಕುಟುಂಬದಿಂದ ಬಂದವರೇ 'ಮೈ.ಶೇ. ಅನಂತಪದ್ಮನಾಭರಾಯರು'. ಹೆಸರಾಂತ ಸಾಹಿತಿ, ಗಮಕಿ. 

ಅನಂತಪದ್ಮನಾಭರಾಯರು 1903ರ ಸೆಪ್ಟೆಂಬರ್  6ರಂದು ಮೈಸೂರಿನಲ್ಲಿ ಜನಿಸಿದರು. ಹಾಗಾಗಿ ಇವರು ಮೈಸೂರು ಶೇಷಗಿರಿ ಅನಂತಪದ್ಮನಾಭರಾವ್ (ಮೈ.ಶೇ.ಅ.). ಇವರ ಸಂಪೂರ್ಣ ವಿದ್ಯಾಭ್ಯಾಸ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ. ಇವರು ಹತ್ತನೇ ತರಗತಿಗೆ ಬರುವ ವೇಳೆಗೆ ಪಂಜೆಮಂಗೇಶರಾಯರು ಇವರ ಶಾಲೆಯ ಮುಖ್ಯೋಪಾಧ್ಯಾಯರಾಗಿ ಬಂದರು. ಪಂಜೆಯವರು ಇಲ್ಲಿನ ಭಾರತೀಯ ಮುಖ್ಯೋಪಾಧ್ಯಾಯರು ಎಂಬ ಖ್ಯಾತಿಗೂ ಒಳಗಾದವರು. ರಾಯರು ಇವರ ಪ್ರಥಮ ವಿದ್ಯಾರ್ಥಿ. ಪಂಜೆಯವರು ಇವರಲ್ಲಿ  ಸುಪ್ತವಾಗಿದ್ದ ಸಾಹಿತ್ಯಾಸಕ್ತಿಯನ್ನು ಕಂಡುಕೊಂಡು ಸಂಪೂರ್ಣ ಉತ್ತೇಜನ ನೀಡಿದರು. ರಾಯರು ಚೆನ್ನಾಗಿ ಹಾಡುತ್ತಿದ್ದರು. ತಂದೆ ಶೇಷಗಿರಿರಾಯರು ತುಂಬ ಸೊಗಸಾಗಿ ದೇವರನಾಮ ಹಾಡುತ್ತಿದ್ದರು. ಅದು ರಾಯರಲ್ಲೂ ಮೈಗೂಡಿ ಬಂದಿತ್ತು. ಅಲ್ಲದೇ ಮನೆಯ ಹತ್ತಿರದಲ್ಲೇ ಇದ್ದ ರಂಗನಟರೂ, ಒಳ್ಳೆಯ ಕೀರ್ತನಕಾರರೂ ಆಗಿದ್ದ ವೆಂಕಟಾದ್ರಿ ಶಾಮರಾಯರೆಂಬುವರ ಬಳಿ ಅಲ್ಪ ಸ್ವಲ್ಪ ಶಿಕ್ಷಣ ಮಾರ್ಗದರ್ಶನ ದೊರೆತಿತ್ತು. ಹೀಗಾಗಿ ಇವರು ಕೀರ್ತನರಂಗಕ್ಕೆ ಧುಮುಕಿ ಹರಿಕಥೆ ಮಾಡುತ್ತಿದ್ದರು. ಹರಿಕಥಾಭ್ಯಾಸಿಗಳಿಗೆ ಅನುಕೂಲವಾಗುವಂತೆ 'ಜಡಭರತೋಪಾಖ್ಯಾನ' ಎಂಬ ಕೀರ್ತನರೂಪದ ಪ್ರಸಂಗವನ್ನು ರಚಿಸಿದರು.

ರಾಯರು ಗಮಕಕಲೆಯ ಕಡೆ ವಾಲಿದ್ದೂ ಒಂದು ವಿಶೇಷವೇ. 1932ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ 18ನೇ ಸಾಹಿತ್ಯ ಸಮ್ಮೇಳನವನ್ನು ಕೊಡಗಿನ ಮಡಿಕೇರಿಯಲ್ಲಿ ಆಚರಿಸಿತು. ಪೂಜ್ಯ ಡಿ.ವಿ.ಗುಂಡಪ್ಪನವರು ಸಮ್ಮೇಳನಾಧ್ಯಕ್ಷರಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಗಮಕ ಭಗೀರಥರಲ್ಲಿ ಒಬ್ಬರೆನೆಸಿದ 'ಕಳಲೆ ಸಂಪತ್ಕುಮಾರಾಚಾರ್ಯರ' 'ಭಾರತ ವಾಚನ' ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈಗಾಗಲೇ ಕನ್ನಡಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಾಯರು ಸಮ್ಮೇಳನದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಲ್ಲಿ ಸಂಪತ್ಕುಮಾರಾಚಾರ್ಯರ ವಾಚನದ ಮೋಡಿಗೆ ಸಿಲುಕಿ ಗಮಕದ ಕಡೆ ವಾಲಿದರು. ಅಲ್ಲದೆ ಪಂಜೆಯವರು ಇವರಿಗೆ ಕಾವ್ಯವಾಚನದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು. ಮೈಸೂರಿನ ಭಾರತದ ಕೃಷ್ಣರಾಯರೆಂದೇ ಖ್ಯಾತರಾದ ಕೃಷ್ಣಗಿರಿ ಕೃಷ್ಣರಾಯರ ಬಳಿ ಗಮಕ ವಾಚಾನಾಭ್ಯಾಸವೂ ನಡೆಯಿತು. ಅನಂತಪದ್ಮನಾಭರಾವ್ ಅವರು  ಸ್ವಪರಿಶ್ರಮದಿಂದ ಉತ್ತಮ ಗಮಕಿ ಎನಿಸಿದರು .

ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ನಂತರ ಡಿ.ವಿ.ಜಿ.ಯವರು ಮಡಿಕೇರಿಯಲ್ಲಿ ಕೊಡಗು ಕರ್ನಾಟಕ ಸಂಘವನ್ನು ಸ್ಥಾಪಿಸಿ, ರಾಯರನ್ನೇ ಸಂಚಾಲಕರನ್ನಾಗಿ ನೇಮಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಶಾಖೆಯ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿ ಡಿ.ವಿ.ಜಿ.ಯವರ ಆದೇಶದಂತೆ 1942ರಲ್ಲಿ ಮಡಿಕೇರಿಯಲ್ಲಿ ಗಮಕ ತರಗತಿಗಳನ್ನು ನಡೆಸಲು ಆರಂಭಿಸಿದರು. ಗಮಕದ ಗಂಧವೇ ಇಲ್ಲದ ಕೊಡಗಿನಲ್ಲಿ ಗಮಕ ಸೌರಭದ ಸವಿಯನ್ನು ಉಣಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಯಾರು ಮಾಡಿದರು. ಇವರ ಈ ಅವಿರತ ಪರಿಶ್ರಮ ಮತ್ತು  ಕನ್ನಡ ಪರ ಚಟುವಟಿಕೆಗಳು ಕೊಡಗಿನ ಜನತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಮಡಿಕೇರಿಯೇ ಅಲ್ಲದೆ ವೀರಾಜಪೇಟೆ, ಸೋಮವಾರಪೇಟೆಗಳಲ್ಲೂ ಕರ್ನಾಟಕ ಸಂಘದ ಸ್ಥಾಪನೆಗೆ ಕಾರಣರಾದರು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೂ ಅವು ರಾಯರ  ಮೇಲ್ವಿಚಾರಣೆಯಲ್ಲೇ ನಡೆಯುವುದು ಸಾಮಾನ್ಯವಾಗಿತ್ತು.

ಅನಂತಪದ್ಮರಾಯರು ಕೊಡಗಿನಲ್ಲಿರುವಷ್ಟು ಕಾಲವೂ  ಪ್ರತಿವರ್ಷದ ಚೈತ್ರ ವೈಶಾಖದಲ್ಲಿ ಮೂರು ದಿನಗಳ ಅದ್ಧೂರಿ ವಸಂತ ಸಾಹಿತ್ಯೋತ್ಸವವನ್ನು ನಡೆಸಿಕೊಂಡು ಬಂದರು. ಆಚಾರ್ಯ ಬಿ.ಎಂ.ಶ್ರೀ ಅವರನ್ನು ಮೊದಲ್ಗೊಂಡು ಜಿ.ಎಸ್. ಶಿವರುದ್ರಪ್ಪನವರವರೆಗೆ ಕಳೆದ ಶತಮಾನದ ಎಲ್ಲಾ ಸಾಹಿತಿಗಳೂ ಇಲ್ಲಿಗೆ ಆಗಮಿಸಿದ್ದರು.   ಇವೆಲ್ಲಕ್ಕೂ ರಾಯರೇ ರೂವಾರಿಗಳು. 

ಸಾಹಿತ್ಯ ಕ್ಷೇತ್ರದಲ್ಲೂ ಅನಂತಪದ್ಮನಾಭ ರಾವ್ ಅವರ ಕೊಡುಗೆ ಅಪಾರ. ಮೊದಮೊದಲಿಗೆ ಪ್ರಬಂಧ, ಸಣ್ಣಕತೆಗಳನ್ನು ಬರೆಯಲು ಆರಂಭಿಸಿ ಮುಂದೆ ಬೃಹತ್ ಕಾವ್ಯ ಸಂಪುಟಗಳ ತನಕ ಇವರ ಬರವಣಿಗೆ ವಿಸ್ತರಿಸಿತು. ಇವರ ಪ್ರಪ್ರಥಮ ಕೃತಿ 'ಕಲಿ ಪ್ರಭುತ್ವ' ಮೈಸೂರಿನ ಸಾಧ್ವಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಕೊಡಗಿನ ಇತಿಹಾಸ, ಹಾಲೇರಿ ವಂಶದ ಕೊನೆಯ ರಾಜಕುಮಾರಿ 'ರಾಣಿ ದೇವಮ್ಮಾಜಿ' ಕುರಿತ ನಾಟಕ, ಅಲ್ಲದೆ 'ಶೃಂಗಿಯ ಶಾಪ', 'ಕೃಷ್ಣರಾಯಭಾರ', ರಾಮಕೃಷ್ನ ಪರಮಹಂಸರ ಕುರಿತ ರೂಪಕಗಳನ್ನು ರಚಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರು. ಮಾಸ್ತಿಯವರು ತಮ್ಮ 'ಜೀವನ' ಮಾಸಪತ್ರಿಕೆಯಲ್ಲಿ ಇವುಗಳನ್ನು ಪ್ರಕಟಿಸಿದ್ದರು. ದೊಡ್ಡಂಚಿನ ಸೀರೆ, ನಮ್ಮದಲ್ಲ, ಗೋಪೂ ಮದುವೆ(ಕತೆಗಾರ್ತಿ ಗೌರಮ್ಮನೊಡನೆ ಗೋಪಾಲಕೃಷ್ಣನ ವಿವಾಹ), ಅಯ್ಯೋ ಭೂತ, ನೆಗಡಿ ನಾಗಣ್ಣ, ಕಲಾವಿದ, ಹೇಡ್ಮುನ್ಷಿ ಮುಂತಾದ ಕಥೆಗಳು ಕತೆಗಾರ, ಕಥಾವಳಿ, ಉಷಾ, ಜಯ ಕರ್ನಾಟಕ, ಮುಂಬೈನ ಪ್ರಬೋಧಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕಾವೇರಿ ಕಥಾಮೃತಮ್ (ಮುಳಿಯರ ಮುನ್ನುಡಿ), ಮೀರಾಬಾಯಿ (ಚಂಪೂ), ಕಬೀರ್ ದಾಸ್ (ಭಾಮಿನಿ), ಕರ್ಣ (ಸರಳ ರಗಳೆ-ಬಿ.ಎಂ.ಶ್ರೀ. ಮುನ್ನುಡಿ), ಕನ್ನಡ ತುಲಸೀ ರಾಮಾಯಣ (ಡಿ.ವಿ.ಜಿ. ಮುನ್ನುಡಿ), ಶ್ರೀ ಕೃಷ್ಣ ಚರಿತಾಮೃತಮ್ (ವಾರ್ಧಕ), ಶ್ರೀಮನ್ಮಧ್ವಚರಿತಮಾನಸ (ವಾರ್ಧಕ), ವಿಶ್ವಾಮಿತ್ರ (ಭಾಮಿನಿ) ಅಲ್ಲದೇ, ಕರ್ಣಾಟ ಭಾರತ ಕಥಾಮಂಜರಿ (ಕೊನೆಯ ಅಷ್ಟಪರ್ವಗಳು ಅಂದರೆ ಕುಮಾರವ್ಯಾಸ ಬರೆಯದೇ ಬಿಟ್ಟ ಭಾಗ) ಎಂಬ 8,000 ಪದ್ಯಗಳ ಬೃಹತ್ ಸಂಪುಟ ಇವರಿಂದ ರಚಿತಗೊಂಡು ಮುದ್ರಣವನ್ನೂ ಕಂಡಿವೆ.

ಕರ್ನಾಟಕ ಗಮಕ ಕಲಾ ಪರಿಷತ್ತು ತನ್ನ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನಕ್ಕೆ ರಾಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ 'ಗಮಕ ರತ್ನಾಕರ' ಎಂಬ ಬಿರುದು ನೀಡಿ ಗೌರವಿಸಿತು.1977ರ ವರ್ಷದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ರಾಯರಿಗೆ ಪ್ರಶಸ್ತಿ ನೀಡಿ ಗೌರವಿಸಿತು. 1952ರಲ್ಲಿ ಇವರ ಕೃತಿ ಕನ್ನಡ ತುಲಸೀರಾಮಾಯಣಕ್ಕೆ ಮೈಸೂರಿನ ದೇವರಾಜ ಬಹದ್ದೂರ್ ದತ್ತಿ ಪ್ರಶಸ್ತಿ ಸಂದಿತು. 1960ರ ವರ್ಷದಲ್ಲಿ ರಾಯರು ಕೊಡಗು ಬಿಟ್ಟು ಶಿವಮೊಗ್ಗಕ್ಕೆ ವಲಸೆ ಹೋದಾಗ ಕೊಡಗಿನ ಜನತೆ ಇವರನ್ನು ಹಾರ್ದಿಕವಾಗಿ ಬೀಳ್ಕೊಟ್ಟು ರೂ.1001/- ನಿಧಿ ಸಮರ್ಪಣೆ ಮಾಡಿ ಗೌರವಿಸಿತು.

ಮಾಸ್ತಿಯವರು ತಾವು ಚಿಕವೀರರಾಜೇಂದ್ರ ಕಾದಂಬರಿ ಬರೆಯುವ ವೇಳೆ ರಾಯರ ಮನೆಯಲ್ಲೇ ಕೆಲವು ಕಾಲ ತಂಗಿದ್ದು ಹಲವಾರು ಮಾಹಿತಿಗಳನ್ನು ಪಡೆದರು. ಸಾಹಿತಿ ನಿರಂಜನ    ಕೊಡಗಿನ ಚರಿತ್ರೆಗೆ ಸಂಬಂಧಿಸಿದ ಸ್ವಾಮಿ ಅಪರಂಪಾರ, ಕಲ್ಯಾಣಸ್ವಾಮಿ ಕಾದಂಬರಿ ಬರೆಯುವಾಗ ರಾಯರ ಸಲಹೆ ಸಹಕಾರ ಪಡೆದಿದ್ದರು. ಅನಕೃ, ತರಾಸು, ಮಾಸ್ತಿ, ದ.ರಾ.ಬೇಂದ್ರೆ, ಆಚಾರ್ಯ ಡಿ.ಎಲ್.ಎನ್, ತ.ಸು.ಶ್ಯಾಮರಾಯರು, ಮುಳಿಯ ತಿಮ್ಮಪ್ಪಯ್ಯ, ತೀ.ತಾ.ಶರ್ಮಾ, ಶಿವರಾಮಕಾರಂತ, ಮೊ.ಶಂ.ಸುಬ್ರಹ್ಮಣ್ಯ ಶಾಸ್ತ್ರೀ, ರಾಷ್ಟ್ರಕವಿಗಳಾದ ಮಂ.ಗೋವಿಂದ ಪೈ, ಕುವೆಂಪು, ಜಿ.ಎಸ್.ಎಸ್. ಮುಂತಾದವರೆಲ್ಲ ರಾಯರ ಅಂತರಂಗದ ಅಭಿಮಾನಿಗಳಾಗಿದ್ದವರು. ಕುವೆಂಪುರವರು ಇವರನ್ನು 'ಕೊಡಗಿನ ಕೋಗಿಲೆ' ಎಂದು ಕರೆದಿದ್ದರು.

ವಿಜ್ಞಾನಿ, ಬರಹಗಾರ, ವಿಮರ್ಶಕ ಪ್ರೊ.ಜಿ.ಟಿ.ನಾರಾಯಣ ರಾವ್, ಸಾಹಿತಿ ಭಾರತೀಸುತ (ಎಸ್. ಆರ್. ನಾರಾಯಣ), ಕತೆಗಾರ್ತಿ ಗೌರಮ್ಮ ಇವರೆಲ್ಲರಿಗೂ ಸಾಹಿತ್ಯ ಕ್ಷೇತ್ರದಲ್ಲಿ ರಾಯರೇ ಮಾರ್ಗದರ್ಶಕರು. 

ಕೊಡಗಿನ ಏಕೈಕ ಕನ್ನಡ ಶೀಘ್ರಲಿಪಿಕಾರರೆನಿಸಿದ್ದ ರಾಯರು ಕೊಡಗು ರಾಜ್ಯ ವಿಧಾನಸಭೆಯ ಪ್ರಧಾನ ವರದಿಗಾರರಾಗಿದ್ದರು. ಅಲ್ಲದೆ ಕೊಡಗು ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿಗಳಾದ್ದರು. 

ಅನಂತಪದ್ಮನಾಭ ರಾವ್ ಅವರ ಪತ್ನಿ ಲಕ್ಷ್ಮಿದೇವಿ ಸಹ ಗಮಕ ಕಲಿತಿದ್ದು ಅನೇಕ ಗೃಹಿಣಿಯರಿಗೆ ಪಾಠ ಹೇಳುತ್ತಿದ್ದರು. ರಾಯರಿಗೆ ನಾಲ್ಕು ಜನ ಮಕ್ಕಳು. 3 ಗಂಡು, ಒಂದು ಹೆಣ್ಣು.  ರಾಯರ ಪ್ರಥಮ ಪುತ್ರ ಎಂ.ಎ. ಶೇಷಗಿರಿ ರಾವ್ ಅಪಾರ ಸಂಗೀತಾಸಕ್ತಿ ಹೊಂದಿದ್ದು, ಅರಣ್ಯ ಇಲಾಖೆಯಲ್ಲಿ ಹಿರಿಯ  ಅಧಿಕಾರಿಗಳಾಗಿ  ಸೇವೆ ಸಲ್ಲಿಸಿದ್ದವರು. ಎರಡನೆಯ ಪುತ್ರರಾದ ಎಂ.ಎ. ಜಯರಾಮ ರಾವ್ ಒಬ್ಬ ಹಿರಿಯ ಗಮಕಿಯಾಗಿ ತಂದೆಯ ಹೆಸರನ್ನು ಬೆಳಗಿದ್ದಾರೆ. ಕಿರಿಯ ಪುತ್ರ ಮಡಿಕೇರಿ ನಾಗೇಂದ್ರ ಹೆಸರಾಂತ ಸುಗಮ ಸಂಗೀತ ಗಾಯಕರಾಗಿದ್ದವರು. ಒಬ್ಬಳೇ ಮಗಳು ಪದ್ಮಿನಿ ಕೊಡಗಿನ ಕುಶಾಲನಗರದಲ್ಲಿ ಗಮಕ ತರಗತಿಗಳನ್ನು ನಡೆಸುತ್ತಿದ್ದಾರೆ. ವಿಶೇಷವೆಂದರೆ ಮೈ.ಶೇ ಅನಂತಪದ್ಮನಾಭರಾಯರು ಅಖಿಲ ಕರ್ನಾಟಕ ಗಮಕ ಸಮ್ಮೇಳನದ ಪ್ರಥಮ ಅಧ್ಯಕ್ಷರಾದರೆ, ಮಗ ಜಯರಾಮ ರಾವ್ ಮುಂಬೈನಲ್ಲಿ ನಡೆದ ಅಖಿಲ ಭಾರತ ಪ್ರಪ್ರಥಮ ಗಮಕ ಸಮ್ಮೇಳನದ ಅಧ್ಯಕ್ಷರಾಗಿದ್ದರು.  ಇದು  ನಿಜಕ್ಕೂ ಇದೊಂದು ದಾಖಲೆಯೇ ಸರಿ.

ಕವಿಯಾಗಿ, ಸಾಹಿತಿಯಾಗಿ, ಗಮಕಿಯಾಗಿ, ದಕ್ಷ ಆಡಳಿತಗಾರರಾಗಿ ಅನಂತಪದ್ಮನಾಭ ರಾವ್ ಅವರು  ಎಲ್ಲಾ ಕ್ಷೇತ್ರದ ಧ್ರುವತಾರೆ ಎನಿಸಿದವರು. ಈ ಮಹಾನ್ ಚೇತನರಾದ ರಾಯರು 1987ರ ನವೆಂಬರ್ 29ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.  

ಕೃಪೆ: ಗಮಕಿ ಎಂ.ಎ. ಜಯರಾಮ್ ರಾವ್ (ಗಮಕ ದಿಗ್ಗಜರು ಪುಸ್ತಕದಿಂದ) 

ಕೃತಜ್ಞತೆಗಳು: ಅನಂತಪದ್ಮನಾಭರಾವ್ ಅವರ ಮೊಮ್ಮಗಳು ಶ್ರೀಮತಿ ಕುಮುದವಲ್ಲಿ ಅರುಣ್ ರಾವ್

On the birth anniversary of great Scholar, Gamaki and writer K Ananta Padmanabha Rao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ