ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಎಸ್. ಶ್ರವಣಕುಮಾರಿ


 ಟಿ. ಎಸ್. ಶ್ರವಣಕುಮಾರಿ


ಟಿ. ಎಸ್. ಶ್ರವಣಕುಮಾರಿ ಅವರು ಬ್ಯಾಂಕಿಂಗ್ ಕ್ಷೇತ್ರದ ವೃತ್ತಿಯ ಜೊತೆ ಜೊತೆಗೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಸಕ್ತಿಗಳನ್ನು ಜೊತೆಗೂಡಿಸಿಕೊಂಡು, ಆಪ್ತ ಭಾವದಿಂದ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. 

ಶ್ರವಣಕುಮಾರಿ ಅವರು 1959ರ ನವೆಂಬರ್ 8ರಂದು ಶಿವಮೊಗ್ಗದಲ್ಲಿ ಜನಿಸಿದರು. ತಂದೆ ಟಿ ಎನ್ ಸುಬ್ರಹ್ಮಣ್ಯ ಶಾಸ್ತ್ರಿ. ತಾಯಿ ಸುಲೋಚನಮ್ಮ. ಪ್ರಸಿದ್ಧ ಕಾದಂಬರಿಕಾರ ತರಾಸು ಶ್ರವಣಕುಮಾರಿ ಅವರ ತಾಯಿಯ ಅಣ್ಣನಾಗಿ ಇವರಿಗೆ ಸೋದರಮಾವ. ಪೂಜನೀಯ ಟಿ ಎಸ್ ವೆಂಕಣ್ಣಯ್ಯ ಹಾಗೂ ತ ಸು ಶಾಮರಾಯರು ಇವರ ದೊಡ್ಡ ಮತ್ತು ಚಿಕ್ಕ ತಾತಂದಿರು.

ಶ್ರವಣಕುಮಾರಿ ಬಿಸಿನೆಸ್ ಮ್ಯಾನೇಜ್ ಮೆಂಟಿನಲ್ಲಿ ಪದವಿ ಗಳಿಸಿದ ನಂತರ, ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ 38 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 

ಶ್ರವಣಕುಮಾರಿ ಅವರಿಗೆ ಚಿಕ್ಕಂದಿನಿಂದಲೂ ಓದುವುದರಲ್ಲಿ ಆಸಕ್ತಿ. ಕಾಲೇಜಿನ ದಿನಗಳಲ್ಲಿ ಅಂತರ ಕಾಲೇಜು ಮತ್ತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ಅನೇಕ ಬಹುಮಾನ ಗಳಿಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿ  ಕನ್ನಡ ಸಂಘದ ಮತ್ತು ಕನ್ನಡ ಸಂಘಗಳ ಸಮನ್ವಯ ಸಮಿತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಬ್ಯಾಂಕಿನ ರಾಜ್ಯೋತ್ಸವ ಸ್ಪರ್ಧೆಗಳಲ್ಲಿ ಪ್ರತಿವರ್ಷವೂ ಬಹುಮಾನ ಗಳಿಸುತ್ತಿದ್ದರು. 

ಶ್ರವಣಕುಮಾರಿ ಅವರು 2018ರಲ್ಲಿ ನಿವೃತ್ತಿಯ ನಂತರ ಸಮನ್ವಯ ಸಮಿತಿಯ ವಾಟ್ಸಾಪ್ ಗುಂಪು ಆರಂಭವಾದಾಗ ಅಲ್ಲಿನ ಸಕ್ರಿಯ ಸದಸ್ಯರಾದರು.‍ ಅಲ್ಲಿನ ಸದಸ್ಯರ ನಿರಂತರ ಪ್ರೋತ್ಸಾಹದಿಂದಾಗಿ ಹೆಚ್ಚಿನ ಬರವಣಿಗೆಯಲ್ಲಿ ತೊಡಗಿಕೊಂಡರು. ಸಮನ್ವಯ ಸಮಿತಿಯ ಸಂಚಾಲಕರಾದ ಬೆಂ. ಶ್ರೀ. ರವೀಂದ್ರರ ಒತ್ತಾಯದ ಮೇರೆಗೆ ಮೊದಲ ಬರೆಹವನ್ನು 'ಅವಧಿ'ಗೆ ಕಳುಹಿಸಿದಾಗ ಒಂದೆರಡು ಗಂಟೆಯಲ್ಲಿಯೇ ಅದು ಸ್ವೀಕೃತಿಯಾಗಿದೆಯೆಂದು ತಿಳಿದಾಗ ಆತ್ಮವಿಶ್ವಾಸ ಮೂಡಿತು.

ಶ್ರವಣ ಕುಮಾರಿ ಅವರು 2020ರಲ್ಲಿ ಮೈತ್ರಿ ಪ್ರಕಾಶನದವರು ಏರ್ಪಡಿಸಿದ್ದ "ಮೈತ್ರಿ ಸಂಭ್ರಮ" ಕಥಾ ಸಂಕಲನದ ಹಸ್ತಪ್ರತಿ ಸ್ಪರ್ಧೆಯಲ್ಲಿ ಗೆದ್ದಾಗ,  ಅವರಿಂದಲೇ ಇವರ ಮೊದಲ ಕಥಾಸಂಕಲನ "ಅಸ್ಪಷ್ಟ ತಲ್ಲಣಗಳು" ಪ್ರಕಟಗೊಂಡಿತು.  ಮುಂದೆ ಇವರ ಲೇಖನಗಳ ಸಂಗ್ರಹ 'ಸಂಜೆಯ ಮಳೆ' ಪ್ರಕಟಗೊಂಡಿದೆ. 'ಅವಧಿ'ಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ ಪ್ರವಾಸ ಅನುಭವ ಕಥನ "ಅಮೇರಿಕಾ- ಬೊಗಸೆಯಲ್ಲಿ ಕಂಡಷ್ಟು ನೆನಪಿನಲಿ ಉಳಿದಷ್ಟು"  ಕೃತಿ ಎಚ್ಚೆಸ್ಕೆಯವರ ಜನ್ಮ ಶತಾಬ್ದಿಯ ನೆನಪಿನ ಅಂಗವಾಗಿ ಪ್ರಕಟವಾಗಿವೆ.

ಜನಮಿತ್ರ, ಸಮಾಜಮುಖಿ, ಲೇಖಿಕಾ ಹಾಗೂ ಮುಂಬಯಿಯ ಅಮೂಲ್ಯದವರು ನಡೆಸಿದ ಸ್ಪರ್ಧೆಗಳಲ್ಲಿ  ಶ್ರವಣಕುಮಾರಿ ಕತೆಗಳು ಬಹುಮಾನಗಳನ್ನು ಗೆದ್ದುಕೊಂಡಿವೆ. ಕರ್ನಾಟಕ ಲೇಖಕಿಯರ ಸಂಘದ  2022ನೆಯ ಸಾಲಿನ 'ನಿರುಪಮಾ ಸಣ್ಣ ಕತೆಗಳ ಪ್ರಶಸ್ತಿ' ಇವರ ಕತೆಗೆ ಸಂದಿದೆ.

"ಇರುವಷ್ಟು ಕಾಲ ಓದುವುದು, ಬರೆಯುವುದು ಮತ್ತು ನಾಲ್ಕು ಜನರಿಗೆ ಹಿತವಾಗಿರುವಂತೆ ಬಾಳುವುದು ಇಷ್ಟೇ" ನನ್ನ ಸದಾಶಯ ಎನ್ನುವ ಶ್ರವಣಕುಮಾರಿ ಎಲ್ಲರಿಗೂ ಆಪ್ತರು.

ಶ್ರವಣಕುಮಾರಿ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.

Happy birthday Shravana Kumari 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ