ಬಿ. ಎಸ್. ಶ್ರೀವತ್ಸನ್
ಬಿ. ಎಸ್. ಶ್ರೀವತ್ಸನ್
ಲೇಖನ: Lrphks Kolar
ಬಿ. ಎಸ್. ಶ್ರೀವತ್ಸನ್ ಅವರಿಗೆ ಈಗ 91 ವರ್ಷಗಳು. ಅವರೊಬ್ಬ ಮಹಾನ್ ಗುರು.
ಪಾವಗಡದಲ್ಲಿ 1932ರ ನವೆಂಬರ್ 21ರಂದು
ಶ್ರೀ ಶೇಷಾಚಾರ್ ಮತ್ತು ಶ್ರೀಮತಿ ವಸುಧಮ್ಮನವರ ಪುತ್ರರಾಗಿ ಜನಿಸಿದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಾವಗಡದಲ್ಲಿ ಮುಗಿಸಿದರು. ನಂತರ ಬೆಂಗಳೂರಿನಲ್ಲಿ ಪದವಿ, ಮೈಸೂರಿನಲ್ಲಿ ಬಿ.ಎಡ್ ತರಬೇತಿ ನಡೆಯಿತು.
ಶ್ರೀವತ್ಸನ್ ಅವರು ಬೇರೆ ಬೇರೆ ಕೆಲಸಗಳಲ್ಲಿ ಪೂನಾ, ಗೋಕರ್ಣ, ಹಾಸನ, ಶಿವಮೊಗ್ಗ... ಹೀಗೆ ಓಡಾಡಿದರೂ ಕೊನೆಯಲ್ಲಿ ರಾಜ್ಯದಲ್ಲಿ ಹೆಸರಾದ ಮಲ್ಲಾಡಿಹಳ್ಳಿಗೆ ಬಂದು ಸೇರಿದರು. ಗುರುಗಳ ಅನುಗ್ರಹ ಅವರನ್ನು ಅಲ್ಲಿಗೆ ಕರೆತಂದದ್ದಲ್ಲದೆ ಅಲ್ಲಿಯ ಕೆಲಸದಲ್ಲಿ ಉಳಿಯುವಂತಾಯಿತು.
ಜನಸಂಖ್ಯಾ ಶಿಕ್ಷಣ, ಸಾಮಾಜಿಕ ಉಪಯುಕ್ತ ವಸ್ತುಗಳ ಉತ್ಪಾದನೆ( S.U.P.W) , ಕೇಪ್ ಯೋಜನೆ, ಆಂಗ್ಲ ಭಾಷೆಯಲ್ಲಿ ಬೋಧಿಸುವ ತರಬೇತಿ ಇತ್ಯಾದಿ ವಿಷಯಗಳಲ್ಲಿ ಶ್ರೀವತ್ಸನ್ ಪ್ರಸಿದ್ಧರಾದರು. ಇವರ ಸ್ವಭಾವ ಹೊರಗಿನಿಂದ ಹುಲಿಯಂತೆ. ಒಳಗೆ ಮಗುವಂತೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅನೇಕ ವಿದ್ಯಾರ್ಥಿಗಳಿಗೆ ತಮ್ಮ ಸಹಾಯಹಸ್ತ ನೀಡಿದ್ದಾರೆ. ಅಂತಃಕರಣದಿಂದ ಮಾತನಾಡಿಸಿದ್ದಾರೆ. ಸಮಾಧಾನ ಹೇಳಿದ್ದಾರೆ. ತಮ್ಮ ಪಾಂಡಿತ್ಯವನ್ನು ಶಿಕ್ಷಕ ತರಬೇತಿ ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದಾರೆ. ಕಂಚಿನಂತಹ ಕಂಠದಿಂದ ಇವರು ಮಾಡುತ್ತಿದ್ದ ಬೋಧನೆಯು ಎಲ್ಲರನ್ನೂ ತಲುಪುತ್ತಿತ್ತು. ಆಂಗ್ಲ ಭಾಷೆಯ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಇದರ ಪ್ರಭಾವದಿಂದಾಗಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಆಂಗ್ಲ ಭಾಷೆಯನ್ನು ತೆಗೆದುಕೊಂಡ ಅನುಭವ ನನ್ನದಾಗಿದೆ. ಮಲ್ಲಾಡಿಹಳ್ಳಿಯ ಆಶ್ರಮದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ( ಶೆಟ್ಟಿ ಹಳ್ಳಿ, ದುಮ್ಮಿ) ಕೆಲಸ ಮಾಡಿ ಅವುಗಳ ಪ್ರಗತಿಗೆ ಶ್ರಮಿಸಿದ್ದಾರೆ. ಮಲ್ಲಾಡಿಹಳ್ಳಿಯ ಸರ್ವಸೇವಾ ಬೋಧಕ ಶಿಕ್ಷಣಾಲಯದ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ್ದು 1992 ರಲ್ಲಿ ನಿವೃತ್ತಿ ಹೊಂದಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲಾ ಸಹೋದ್ಯೋಗಿಗಳೊಂದಿಗೆ ಪ್ರೀತಿಯಿಂದ ವರ್ತಿಸುತ್ತಿದ್ದದ್ದನ್ನು ನೋಡಿದ್ದೇನೆ.
ಕಳೆದ ವರ್ಷ ಅವರ ಶಿಷ್ಯವೃಂದದವರಲ್ಲಿ ಕೆಲವರು ಅವರನ್ನು ಭೇಟಿಯಾಗಿ, ಗುರುವಂದನಾ ಕಾರ್ಯಕ್ರಮ ನಡೆಸಿದೆವು. ಇದೊಂದು ಅಪೂರ್ವ ಅನುಭವ. ಕಳೆದ ವರ್ಷ 90 ರ ವಯಸ್ಸಿನಲ್ಲಿ ಮುಪ್ಪಾಗದ ಅವರ ಉತ್ಸಾಹ, ಚಟುವಟಿಕೆಗಳನ್ನು ಕಣ್ಣಾರೆ ಕಾಣುವ, ಅನುಭವಿಸುವ ಸೌಭಾಗ್ಯ ನನ್ನದಾಗಿತ್ತು. ಅವರು ತಮ್ಮ ಜೀವನದ ಅನೇಕ ಘಟನೆಗಳನ್ನು ಹಂಚಿಕೊಂಡರು. ನಮ್ಮೆಲ್ಲರನ್ನೂ ಹರಸಿದರು. ಊಟ ಹಾಕಿ ಸಂತೈಸಿದರು. ಮಕ್ಕಳಂತೆ ನಮ್ಮೊಂದಿಗೆ ಬೆರೆತರು. ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸಹಾ ಉತ್ಸಾಹದಲ್ಲಿ ಪಾಲ್ಗೊಂಡರು.
ಇದೆಲ್ಲ ಸಾಧ್ಯವಾದದ್ದು ಸರ್ವ ಸೇವಾ ಬೋಧಕರು ಎಂಬ ಗುಂಪಿನ ಅಡ್ಮಿನ್ ಮತ್ತು ಇತರ ಸದಸ್ಯರಿಂದ. ಗುರುಗಳ ಆಸೆಯಂತೆ ಈ ಅರಿವೇ ಗುರು ಕಾರ್ಯಕ್ರಮವನ್ನು ಆಗಾಗ್ಗೆ ಹಮ್ಮಿಕೊಳ್ಳುವ ಅವಕಾಶಗಳು ಬರುತ್ತಿರಲಿ. ಎಲ್ಲರಿಗೂ ಇದರಲ್ಲಿ ಪಾಲ್ಗೊಳ್ಳಲು ಸಮಯ ದೊರೆಯಲಿ. ನಮನಗಳೊಂದಿಗೆ.
ಕಾಮೆಂಟ್‌ಗಳು