ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ1


 ಇಂದಿನಿಂದ ಮುಂದಿನ 21 ದಿನಗಳವರೆಗೆ

"ಸೋಮೇಶ್ವರ ಶತಕ"

ಪದ್ಯ1

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಿಂ ಕೇಳುತ 
ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತ 
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂತೆ, ಕೇ_‌
ಳ್ಪಲವಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚನ್ನಸೋಮೇಶ್ವರಾ. 1

ಮೊದಲ ಶತಕವಾದ ಇದರಲ್ಲಿ ಕವಿಯು ತನ್ನ ಕಾವ್ಯದ ಉದ್ದೇಶವನ್ನು ಹೇಳಿಕೊಂಡಿದ್ದಾನೆ. ತಾನು ಇತರರಿಂದ ಕಲಿತದ್ದನ್ನು ಮತ್ತೆ ಹಂಚುವ ಕೆಲಸ ಮಾಡುತ್ತಿದ್ದೇನೆಂದು ಹೇಳಿರುತ್ತಾನೆ. ಕೆಲವೊಂದು ವಿಷಯಗಳನ್ನು ತಿಳಿದವರಿಂದ ಕಲಿತು, ಮತ್ತೆ ಕೆಲವನ್ನು ಶಾಸ್ತ್ರಗಳನ್ನು ಕೇಳುತ್ತ, ಕೆಲವೊಂದನ್ನು ಮಾಡುವವರನ್ನು ಕಂಡು ಕಲಿಯುತ್ತ ಇನ್ನೂ ಕೆಲವು ವಿಚಾರಗಳನ್ನು ಬುದ್ಧಿವಂತಿಕೆಯಿಂದ ಗ್ರಹಿಸುತ್ತ ಸಜ್ಜನರ ಸಂಗದಲ್ಲಿರುತ್ತ ಸರ್ವಜ್ಞನಂತೆ ಆಗಬೇಕು. ಹಲವಾರು ಹಳ್ಳಗಳು ಹರಿದು ನದಿಗಳಾಗಿ ಅವುಗಳೆಲ್ಲ ಸೇರಿ ಸಮುದ್ರವಾಗುವುದಿಲ್ಲವೆ?

ಪದ್ಯ 2

ಅದರಿಂ ನೀತಿಯೆ ಸಾಧನಂ ಸಕಲ ಲೋಕಕ್ಕಾಗಬೇಕೆಂದು ಪೇ_
ಳಿದ ಸೋಮಂ ಸುಜನರ್ಕಳೀ ಶತಕದೊಳ್ ತಪ್ಪಿರ್ದೊಡಂ ತಿದ್ದಿ ತೋ_
 ರ್ಪುದು ನಿಮ್ಮುತ್ತಮ ಸದ್ಗುಣಂಗಳ ಜಗದ್ವಿಖ್ಯಾತಮಂ ಮಾಳ್ಪುದಾ_
ಮುದದಿಂ ನಿಮ್ಮವನೆಂಬುದೈ ಹರಹರಾ ಶ್ರೀಚೆನ್ನಸೋಮೇಶ್ವರಾ.

ಇಲ್ಲಿ ಕವಿಯು ವಿನಯದಿಂದ ಹೇಳಿಕೊಳ್ಳುವ ಮಾತುಗಳಿವೆ. ಲೋಕಕ್ಕೆ ನೀತಿಯೇ ಸಾಧನವಾಗಬೇಕೆಂದು ಹೇಳಿದ ಈ ಶತಕಗಳಲ್ಲಿ ಏನಾದರೂ ತಪ್ಪುಗಳಿದ್ದರೆ ಸುಜನರು ಅವುಗಳನ್ನು ತಿದ್ದಿ ತೋರಿಸಬೇಕು ಎಂದು ಕೇಳುತ್ತಾನೆ. ಸಹೃದಯರು ತಮ್ಮ ಉತ್ತಮ ಗುಣಗಳಿಂದ ಜಗದ್ವಿಖ್ಯಾತರಾಗಿ ಪ್ರೀತಿಯಿಂದ ತಮ್ಮವನೆಂದು ಆದರಿಸಬೇಕೆಂದು ಕೇಳಿಕೊಂಡಿದ್ದಾನೆ. ಇಲ್ಲಿ ತನ್ನ ಹೆಸರನ್ನು ಸೋಮಂ ಎಂದು ಹೇಳಿರುತ್ತಾನೆ.

ಪದ್ಯ 3

*ಗಿಡವೃಕ್ಷಂಗಳಿಗಾರು ನೀರನೆರೆವರ್ನಿತ್ಯಂ ಮಹಾ ಬೆಟ್ಟಗ_
ಳ್ಕಡು ಕಾರ್ಪಣ್ಯದಿ ಕೇಳ್ಪವೆ? ನೆಲ ಜಲಾಗ್ನಿರ್ವಾಯುವಾಕಾಶಮಂ ಪಡದಂಡಂಗಳನಾವ ಸಾಕುವ ಜಗತ್ಪ್ರೇರಕಂ ನೀನಿರ_
ಲ್ಕೊಡುವರ್ಕೊಂಬರು ಮರ್ತ್ಯರೇ? ಹರಹರಾ ಶ್ರೀ ಚನ್ನಸೋಮೇಶ್ವರಾ.*

ಪ್ರತಿನಿತ್ಯವೂ ಕಾಡಿನ ಗಿಡಮರಗಳಿಗೆ ನೀರನ್ನು ಯಾರು ಎರೆಯುವರು?  ದೊಡ್ಡ ದೊಡ್ಡ ಬೆಟ್ಟಗಳು ತಮ್ಮ ಕಡುಕಷ್ಟವನ್ನು ಕೇಳುವವೆ? ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳು ಈ ಎಲ್ಲ ಪಂಚಮಹಾಭೂತಗಳು ಸಮಸ್ತವನ್ನೂ ನೀನಲ್ಲದೆ ಮತ್ತಾರು ರಕ್ಷಿಸುವವರಿದ್ದಾರೆ? ಎಲ್ಲವನ್ನೂ ನೀನೇ ಕಾಪಾಡುವವನು ಎಂದು ಶಿವನಲ್ಲಿ ಶರಣಾಗತನಾಗಿದ್ದಾನೆ.

ಪದ್ಯ 4

*ಧರೆಯೇ ಬೀಜವನುಂಗೆ, ಬೇಲಿ ಹೊಲನೆಲ್ಲಂ ಮೆದ್ದಡಂ, ಗಂಡ ಹೆಂ_
ಡರನತ್ಯುಗ್ರದಿ ಶಿಕ್ಷಿಸಲ್, ಪ್ರಜೆಗಳಂ ಭೂಪಾಲನೇ ಬಾಧಿಸ_
ಲ್ತರುವೇ ಪಣ್ಗಳ ಮೆಲ್ಲೆ, ಮಾತೆ ವಿಷಮಂ ಪೆತ್ತರ್ಭಕಂಗೂಡಿಸಲ್
ಹರ ಕೊಲ್ಲಲ್ ಪರ ಕಾಯ್ವನೇ? ಹರಹರಾ ಶ್ತೀಚೆನ್ನಸೋಮೇಶ್ವರಾ*

ಬೆಳೆಯಲೆಂದು ಬಿತ್ತಿದ ಬೀಜವನ್ನು ಭೂಮಿಯೇ ನುಂಗಿದರೆ, ರಕ್ಷಣೆಗೆಂದು ಹಾಕಿದ ಬೇಲಿಯೇ ಹೊಲವನ್ನು ಮೇಯ್ದರೆ, ಗಂಡನು ತನ್ನ ಹೆಂಡತಿಯನ್ನು ಅತ್ಯಂತ ಉಗ್ರವಾಗಿ ಶಿಕ್ಷಿಸಿದರೆ, ರಾಜ ತನ್ನ ಪ್ರಜೆಗಳನ್ನು ಕಾಡಿಸಿದರೆ ಗತಿಯೇನು? ಹಾಗೆಯೇ ಮರವು ತನ್ನ ಹಣ್ಣುಗಳನ್ನು ತಾನೇ ತಿಂದರೆ, ಹೆತ್ತ ತಾಯಿಯು ತನ್ನ ಮಕ್ಕಳಿಗೆ ವಿಷವನ್ನು ಕುಡಿಸುವುದಾದರೆ ಮತ್ತೆ ಯಾರನ್ನು ನಂಬುವುದು? ಕಾಪಾಡಬೇಕಾದವರೇ ಹೀಗೆ ಮಾಡಿದರೆ ಏನು ಗತಿ? ಹರನೇ ಕೊಲ್ಲಲು ಬಂದರೆ ಬೇರೆಯವರಿಂದ ಕಾಪಾಡುವುದು ಸಾಧ್ಯವೆ? ಎಂದಿಗೂ ಇಲ್ಲ.

ಪದ್ಯ 5

*ಮದನಂ ದೇಹವ ನೀಗಿದಂ ನೃಪವರಂ ಚಂಡಾಲಗಾಳಾದ ಪೋ_
ದುದು ಬೊಮ್ಮಂಗೆ ಶಿರಸ್ಸು ಭಾರ್ಗವನು ಕಣ್ಗಾಣಂ ನಳಂ ವಾಜಿಪಂ 
ಸುಧೆಯಂ ಕೊಟ್ಟು ಸುರೇಂದ್ರ ಸೋಲ್ತ ಸತಿಯಂ ಪೋಗಾಡಿದಂ ರಾಘವಂ ವಿಧಿಯಂ ಮೀರುವನಾವನೈ ಹರಹರಾ ಶ್ರೀಚೆನ್ನಸೋಮೇಶ್ವರಾ.*

ಜೀವನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ವಿಧಿಯನ್ನು ಮೀರಲಾಗದು ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.
ಶಿವನನ್ನು ಕೆಣಕಲು ಹೋಗಿದ್ದಕ್ಕೆ ಮದನನು ತನ್ನ ದೇಹವನ್ನು ಕಳೆದುಕೊಳ್ಳಬೇಕಾಯಿತು. ರಾಜ ಹರಿಶ್ಚಂದ್ರ ಚಂಡಾಲನಿಗೆ ಆಳಾಗಬೇಕಾಯಿತು. ಬ್ರಹ್ಮನಿಗೆ ಒಂದು ತಲೆಯೇ ಹೋಯಿತು. ಪರಶುರಾಮನು ತನ್ನ ತಾಯಿಯನ್ನು ಕೊಲ್ಲಬೇಕಾಯಿತು. ನಳ ಚಕ್ರವರ್ತಿಯು ಕುದುರೆಗಳನ್ನು ನೋಡಿಕೊಳ್ಳುವ ಅಧಿಕಾರಿಯಾದನು. ಅಮೃತದ  ದೆಸೆಯಿಂದ ಇಂದ್ರನೂ ರಾಕ್ಷಸರೊಡನೆ ಯುದ್ಧ ಮಾಡಿ ಕಂಗೆಟ್ಟನು. ರಾಮಚಂದ್ರನು ತನ್ನ ಸತಿಯನ್ನು ಕಳೆದುಕೊಂಡು ಗೋಳಾಡಿದನು. ಇವೆಲ್ಲವೂ ವಿಧಿಯ ಆಟಗಳೇ ಆಗಿವೆ. ಇದನ್ನು ಮೀರುವವರಾರೂ ಇಲ್ಲ.

ವಿವರಣೆ:‍ ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರಿಯುವುದು ....


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ