ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ2


 ಸೋಮೇಶ್ವರ ಶತಕ - 2ನೇ ದಿನ


ಪದ್ಯ 6
*ಮಧುರೇಂದ್ರಂ ಕಡು ದುಷ್ಟನಾಗಲ್ ಬಳಿಕ್ಕೀಡೇರಿತೇ ದ್ವಾರಕಾ, ಸದನಂ ವಾರ್ಧಿಯ ಕೂಡದೇ ಕುರುಕುಲಾಂಭೋರಾಶಿಯೋಳ್ ಸೈಂಧವಂ, ಪುದುಗಲ್ ಬಾಳ್ದನೆ? ಭೂಮಿಯಂ ಬಗಿದು ಪೊಕ್ಕಂ ದುಂದುಭೀರಾಕ್ಷಸಂ, ವಿಧಿಕಾಡಲ್ ಸುಖಮಾಂಪರೇ ಹರಹರಾ ಶ್ರೀಚೆನ್ನಸೋಮೇಶ್ವರಾ.*

ವಿಧಿಯ ಇಚ್ಛೆಯ ಮುಂದೆ ಯಾರ ಪ್ರಭಾವವೂ ನಡೆಯದು. ಮಧುರಾನಗರದಲ್ಲಿ ದುಷ್ಟರ ಕಾಟ ಹೆಚ್ಚಾಗಲು ದ್ವಾರಕೆಯು ನಿರ್ಮಾಣವಾಗಬೇಕಾಯಿತು. ಮುಂದೆ ಸಾಗರವನ್ನೇ ಸೇರಿತು. ಕುರುಕುಲದ ಅರಸನು ನೀರಿನಲ್ಲಿ ಮುಳುಗಿ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರೂ ಬಾಳಲಾಯಿತೆ? ಇಲ್ಲ. ದುಂದುಭಿಯೆಂಬ ರಾಕ್ಷಸನು ಭೂಮಿಯನ್ನೇ ಬಗಿದು ಹೊಕ್ಕರೂ ಉಳಿಯಲಿಲ್ಲ. ವಿಧಿಯು ಕಾಡಲು ಯಾರಿಗೇ ಆದರೂ ಸುಖವು ಸಿಗುವುದೆ?

ಪದ್ಯ 7
*ಹುಲುಬೇಡಂ ಮುರವೈರಿಯಂ ಕುರುಬನಾ ಶೂದ್ರೀಕನಂ ರಾವಣಂ , ಕುಲವೆಣ್ಣಿಂದೆ ಶಿಖಂಡಿ ಭೀಷ್ಮನುಮನಾ ದ್ರೋಣಾರ್ಯನಂ ಶಸ್ತ್ರವಂ ,ತಳೆದಾತಂ ಹತಮಾಡರೇ ಪಣೆಯೊಳಂ ಪೂರ್ವಾರ್ಜಿತಂ ಸಂದಿರಲ್, ಕೊಲನೇ ಕ್ಷುದ್ರ ಸಮರ್ಥನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಸಾಮಾನ್ಯ ಬೇಡನ ಕೈಯಲ್ಲಿ ಶ್ರೀಕೃಷ್ಣನು ಕೊನೆಯನ್ನು ಕಾಣಬೇಕಾಯಿತು. ಶೂದ್ರೀಕನೆಂಬ ಬಲಶಾಲಿಯು ಕುರುಬನೆದುರಿಗೆ ಸೋಲಬೇಕಾಯಿತು. ಹಾಗೆಯೇ ಹಲವರು ಸಾಮಾನ್ಯರ ಎದುರಿಗೆ  ನಿಲ್ಲುವ ಪ್ರಸಂಗ ಬಂದಿತು. ರಾವಣ, ಭೀಷ್ಮ, ದ್ರೋಣಾಚಾರ್ಯ ಮುಂತಾದವರ ಜೀವನದಲ್ಲಿ ಕುಲವತಿಯಾದ ಹೆಣ್ಣು, ಶಿಖಂಡಿ, ಧರ್ಮರಾಯ ಹೇಳಿದ ಅಶ್ವತ್ಥಾಮನೆಂಬ ಆನೆಯ ಸಾವಿನ ಸಂಗತಿ..ಇವೇ ಅವರಿಗೆ ವಿರುದ್ಧವಾದವು. ಹಣೆಬರಹದಲ್ಲಿ ಪೂರ್ವಾರ್ಜಿತ ಕರ್ಮಗಳು ಬರೆದಿದ್ದಲ್ಲಿ ಕ್ಷುದ್ರನೂ ಸಮರ್ಥರನ್ನು ಕೊಲ್ಲಲಾರನೇ?

ಪದ್ಯ  8
*ಮೃಡ ತಾಂ ಭಿಕ್ಷವ ಬೇಡನೇ? ದ್ರೌಪದಿ ತಾಂ ತೊತ್ತಾಗಳೇ? ಪಾಂಡವರ್, ಪಿಡಿದೋಡಂ ತಿರಿದುಣ್ಣರೆ? ಖಳನ ಕೈಯೊಳ್ ಸಿಕ್ಕಳೇ ಸೀತೆ? ತಾಂ, ಸುಡುಗಾಡಿಕ್ಕೆಗೆ ಭಂಟನಾಗನೆ ಹರಿಶ್ಚಂದ್ರಂ? ನರರ್ ಪೂರ್ವದೊಳ್, ಪಡೆದಷ್ಟುಣ್ಣದೆ ಪೋಗರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ತನ್ನ ಪಾಪ ಪರಿಹಾರಕ್ಕಾಗಿ ಶಿವನು ಭಿಕ್ಷವನ್ನು ಬೇಡಬೇಕಾಯಿತು. ದ್ರೌಪದಿ ದಾಸಿಯಾಗಬೇಕಾಯಿತು. ಪಾಂಡವರು ಭಿಕ್ಷಾಟನೆಯಿಂದ ಜೀವನ ನಡೆಸಿದರಲ್ಲವೆ? ಸೀತೆಯು ಕ್ರೂರಿಯಾದ ರಾವಣನ ಕೈಗೆ ಸಿಕ್ಕಿ ನರಳಬೇಕಾಯಿತು.  ಹರಿಶ್ಚಂದ್ರ ರಾಜನು ಸ್ಮಶಾನವನ್ನು ಕಾಯುವ ಭಂಟನಾದನು. ಹೀಗೆ ಮನುಷ್ಯರು ತಮ್ಮ ಪೂರ್ವಾರ್ಜಿತ ಕರ್ಮದಿಂದ ಪಡೆದಷ್ಟನ್ನು ಅನುಭವಿಸದೆ ಇರಲು ಸಾಧ್ಯವೇ ಇಲ್ಲ.

ಪದ್ಯ  9
ಕಡಿದಾಡಲ್ ರಣರಂಗದೊಳ್ ನೃಪರೊಳಂ ತಾನಗ್ಗದಿಂ ಕಾದೊಡಂ,  ಮೃಡನಂ ಮೆಚ್ಚಿಸಿಕೇಳ್ದೊಡಂ ತೊಳಲಿ ತಾಂ ದೇಶಾಟನಂಗೆಯ್ದೊಡಂ, ಕಡಲೇಳಂ ಮಗುಚಿಟ್ಟೊಡಂ ಕಲಿಯೆ ನಾನಾಹೃದ್ಯವಿದ್ಯಂಗಳಂ, ಪಡೆದಷ್ಟಲ್ಲದೆ ಬರ್ಪುವೇ? ಹರಹರಾ ಶ್ರೀಚೆನ್ನಸೋಮೇಶ್ವರಾ.

ರಣರಂಗದಲ್ಲಿ ಕಡು ಸಾಹಸದಿಂದ ಕಾದಿದರೇನು, ಶಿವನನ್ನೇ ಮೆಚ್ಚಿಸಿ ಬೇಕಾದ ವರವನ್ನು ಪಡೆದರೇನು, ತೊಳಲುತ್ತ ದೇಶಾಟನೆ ನಡೆಸಿದರೇನು, ಏಳು ಸಮುದ್ರಗಳನ್ನೂ ಮಗುಚಿಡುವಷ್ಟು ಪರಾಕ್ರಮಿಯಾದರೇನು, ನಾನಾ ವಿಧವಾದ ವಿದ್ಯೆಗಳನ್ನು ಕಲಿತರೇನು...ನಾವು ಪೂರ್ವಾರ್ಜಿತದಿಂದ ಗಳಿಸಿದ್ದಷ್ಟೇ ನಮಗೆ ದಕ್ಕುವುದಲ್ಲದೆ ಬೇರೆ ಅಲ್ಲ.

ಪದ್ಯ  10
*ಪುರಗಳ್ ಪುಟ್ಟವೆ? ನಿಂದುದಿಲ್ಲ ದಶಕಂಠಂಗಾಯಿತೇ ಲಂಕೆ? ಸಾ_,ಗರದೊಳ್ ಪೋಗದೆ ದ್ವಾರಕಾನಗರಿ? ಭಿಲ್ಲರ್ಗಾದುದೇ ಗೋಪುರಂ? , ದುರುಳರ್ಗಾದುದೆ ಷಟ್ಪುರಂ? ಮಧುರೆಯೊಳ್ ಕಂಸಾಸುರಂ ಬಾಳ್ದನೆ? , ಸಿರಿಬಂದು ನಿಲೆ ಪುಣ್ಯವೈ ಹರಹರಾ ಶ್ರೀಚೆನ್ನಸೋಮೇಶ್ವರಾ.*

ಪುರಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ನಿಲ್ಲುವುದಿಲ್ಲ. ಹಾಗೆಂದು ಶಾಶ್ವತವೂ ಅಲ್ಲ. ಅಷ್ಟು ದೊಡ್ಡ ಲಂಕೆ ರಾವಣನಿಗೆ ಉಳಿಯಲಿಲ್ಲ. ದ್ವಾರಕಾನಗರಿಯು ಸಾಗರದಲ್ಲಿ ಮುಳುಗಿತು. ಭಿಲ್ಲರಿಗೆ ಗೋಪುರವು ಉಳಿಯಲಿಲ್ಲ.  ತ್ರಿಪುರಾಸುರ ಕಟ್ಟಿ ಮೆರೆದ ತ್ರಿಪುರ ಶಿವನ ಕೋಪಕ್ಕೆ ಸಿಕ್ಕಿ ನಾಶವಾಯಿತು. ಮಧುರೆಯಲ್ಲಿ ಕಂಸನು ಬಾಳಲು ಸಾಧ್ಯವಾಗಲಿಲ್ಲ. ಅವನ ದುರುಳತನ ಅವನನ್ನು ನಾಶ ಮಾಡಿತು. ಸಿರಿಯು ಎಷ್ಟಿದ್ದರೇನು? ಅದನ್ನು ಅನುಭವಿಸಲು ಪುಣ್ಯ ಬೇಕಲ್ಲವೆ?

ವಿವರಣೆ:‍ ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ