ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ13


 ಸೋಮೇಶ್ವರ ಶತಕ 13ನೇ ದಿನ


ಪದ್ಯ  61
*ಸುಡು ಸೂಪ ಘೃತವಿಲ್ಲದೂಟವ, ಪರಾನ್ನಾಪೇಕ್ಷಿಪಾ ಜಿಹ್ವೆಯಂ, ಸುಡು ದಾರಿರ್ದ್ರ್ಯದ ಬಾಳ್ಕೆಯಂ, ಕಪಟಕೋಪಂ ಮಾಳ್ಪ ಸಂಗಾತಿಯಂ, ಸುಡುತಾಂಬೂಲ ವಿಹೀನ ವಕ್ತ್ರ, ಪರವೆಣ್ಣಂ ನೋಡುವಾ ಕಂಗಳಂ, ನುಡಿದುಂ ತಪ್ಪುವ ರಾಜನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ*.

ತೊವ್ವೆ, ತುಪ್ಪಗಳಿಲ್ಲದ ಊಟ, ಪರರ ಮನೆಯ ಊಟವನ್ನು ಸದಾ ಬಯಸುವ ನಾಲಿಗೆ, ಬಡತನದ ಬಾಳ್ವೆ, ಸುಮ್ಮನೆ ಕೋಪವನ್ನು ಮಾಡುವ ಸಂಗಾತಿ, ತಾಂಬೂಲವಿಲ್ಲದ ವದನ, ಪರಸ್ತ್ರೀಯರನ್ನು  ಆಸೆಯಿಂದ ನೋಡುವ ಕಣ್ಣುಗಳು, ನುಡಿದಂತೆ ನಡೆಯದ ರಾಜ ಇವೆಲ್ಲ ಅತ್ಯಂತ ನೀಚವಾದುವೆನ್ನಲಾಗಿದೆ. ಇವುಗಳನ್ನು ಸುಟ್ಟರೂ ಸರಿ ಎನ್ನುತ್ತಾರೆ.

ಪದ್ಯ  62
*ಸತಿಯರ್ಮಾತಿಗೆ ಸೋಲ್ಪ, ಜೂಜಿಗೆ ಖಳರ್ಕೊಂಡಾಡುತಿಪ್ಪಲ್ಲಿಗಂ, ಮತಿ ಪಾಪಂ ಬಹ ಕಾರ್ಯಕಲ್ಪ ವಿಷಯಕ್ಕಂ ದಾಸೆಯರ್ಗೋಷ್ಠಿಗಂ ,  ಪ್ರತಿ ತಾನಿಲ್ಲದ ಮದ್ದು ಮಂತ್ರಮಣಿಗಂ, ಸಂದೇಹಗೊಂಡಲ್ಲಿಗಂ ,  ಮತಿವಂತರ್ಮರಳಪ್ಪರೇ ? ಹರಹರಾ ಶ್ರೀ ಚೆನ್ನಸೋಮೇಶ್ವರಾ*.

ಸತಿಯರ ಮಾತುಗಳಿಗೆ, ಸೋಲುವ ಜೂಜಾಟಕ್ಕೆ, ಕೆಟ್ಟ ಜನರ ಹೊಗಳಿಕೆಗಳಿಗೆ, ಪಾಪವು ಬರುವಂತಹ ಕಾರ್ಯಗಳಿಗೆ, ಅಲ್ಪವಿಷಯಗಳಿಗೆ, ಸೇವಕರ ಗೋಷ್ಠಿಗಳಿಗೆ, ಉಪಯೋಗವಿಲ್ಲದ ಮದ್ದು ಮಂತ್ರದ ಮಣಿಗಳಿಗೆ ಬುದ್ಧಿವಂತರಾದವರು ಯಾರೂ ಮರುಳಾಗುವುದಿಲ್ಲ.

ಪದ್ಯ  63
*ಪೊರೆದುಂ ಬಾಳವೆ ಪಂದಿ ನಾಯ್ಗಳೊಡಲಂ ? ಮಾತಾಡವೇ ಭೂತಗಳ್ ? , ತರುಗಳ್ಜೀವಿಗಳಲ್ಲವೇ ? ಪ್ರತಿಮೆಗಳ್ಕಾದಾಡವೇ ? ತಿದಿಗಳ್ ,  ಮೊರೆಯುತ್ತಂ ಉಸುರಿಕ್ಕವೇ ? ಗ್ರಹಗೃಹಂ ಚೆಲ್ವಾಗಿರಲ್ಲೇಸದೇ ? ,  ಇರಲಿಕ್ಕಜ್ಞರನೇಕದಿಂ ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಹಂದಿ ನಾಯಿಗಳು ಹೊಟ್ಟೆ ಹೊರೆದುಕೊಂಡು ಬದುಕುವುದಿಲ್ಲವೆ? ಭೂತಗಳು ಮಾತನಾಡುವುದಿಲ್ಲವೆ? ಮರಗಳು ಜೀವಿಸಿಲ್ಲವೆ? ಸೂತ್ರದ ಸಹಾಯದಿಂದ ಬೊಂಬೆಗಳು ಜಗಳಾಡುವುದಿಲ್ಲವೆ? ತಿದಿಗಳು ಒತ್ತಲು ಉಸಿರಾಡವೆ? ಗೃಹಗಳಲ್ಲಿ ಗ್ರಹಗಳು ಬಂದು ನೆಲೆಸುವುದಿಲ್ಲವೆ? ಹೀಗೆ ಅಜ್ಞರು ಅನೇಕಬಗೆಯಲ್ಲಿ ಇರುತ್ತಾರೆ.

ಪದ್ಯ  64
*ಕೊಲುವಂತೂಟವು ಕಷ್ಟಮಿರ್ಪಕೆಲಸಂ ಕೈಲಾಗದಾರಂಭಮುಂ , ಗೆಲವೇನಿಲ್ಲದ ಯುದ್ಧ ಪಾಳು ನೆಲದೊಳ್ಬೇಸಾಯ ನೀಚಾಶ್ರಯಂ , ಹಲುಬಲ್ಯೋಚನೆ ಜೂಜು ಲಾಭ ಮನೆ ಮಾರಾಟ ರಸಾದ್ಯೌಷಧಂ ,  ಫಲದ ಭ್ರಾಂತಿಯ ತೋರ್ಪುವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಕೊಲ್ಲುವವರೊಂದಿಗಿನ ಕೂಟವೂ, ಕಷ್ಟವಾದ ಕೆಲಸವೂ, ಮಾಡಲು ಅಸಾಧ್ಯವಾದ ಕೆಲಸದ ಪ್ರಾರಂಭವೂ , ಗೆಲುವು ದೊರೆಯದ ಯುದ್ಧವೂ, ಪಾಳು ನೆಲದಲ್ಲಿನ ಬೇಸಾಯವೂ, ನೀಚರ ಆಶ್ರಯವೂ, ಆಲೋಚನೆಯಿಲ್ಲದ ಮಾತುಗಳೂ, ಲಾಭವಿಲ್ಲದ ಜೂಜೂ, ಇದ್ದ ಮನೆಯ ಮಾರಾಟ, ರಸಾದಿ ಔಷಧಗಳು ಇವೆಲ್ಲವೂ ಒಳ್ಳೆಯದಾತೀತೆಂಬ ಬರಿದೇ ಭ್ರಾಂತಿಯ ವಿಷಯಗಳಾಗಿವೆ.

ಪದ್ಯ  65
*ಕೊಲುತಿರ್ಪಣ್ಣಗಳೋದು ವ್ಯಾಧಿಯೆನೆ ಕೊಲ್ಪಂತೌಷಧಂ ಪಾಳು ಬಿ,  ದ್ದುಳಿದಾರಂಭದ ಧಾನ್ಯ, ಶತ್ರುಜಯ, ಪುತ್ರೋತ್ಸಾಹಂ, ಕೈಗಿಕ್ಕುವಾ,  ಬಳೆ ರಾಜಾಶ್ರಯಮಶ್ವಲಾಭದ ಧನಂ ಬೇಹಾರ ಮಿಂತಿಷ್ಟು ಮು _,  ನ್ನಲಿ ಕಷ್ಟ ಕಡೆಲೇಸೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಶಿಕ್ಷೆಯಿಂದ ಪಡೆಯುವ ವಿದ್ಯೆ, ರೋಗವನ್ನು ವಾಸಿಮಾಡಲು ಕೊಡುವ ತೀಕ್ಷ್ಣವಾದ ಔಷಧ, ಪಾಳುಬಿದ್ದ ನೆಲದ ಮೊದಲ ಬೇಸಾಯ, ಶತ್ರುವನ್ನು ಜಯಿಸುವುದು, ಕೈಗೆ ತೊಡುವ ಬಳೆ, ರಾಜಾಶ್ರಯ, ಅಶ್ವಲಾಭ, ಹೆಚ್ಚು ಹಣದ ಗಳಿಕೆ, ವ್ಯಾಪಾರ ಇವುಗಳೆಲ್ಲವೂ ಮೊದಲಿಗೆ ಕಷ್ಟವಾಗಿ ತೋರಿದರೂ ಕೊನೆಯಲ್ಲಿ ಒಳಿತನ್ನು, ಹಿತವನ್ನು ತರುತ್ತವೆ.

ವಿವರಣೆ:. ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ