ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ12


 ಸೋಮೇಶ್ವರ ಶತಕ 12ನೇ ದಿನ


ಪದ್ಯ  56
 *ಪಣವಿರ್ದೇನುಣಿಸಾಗದಾಗ ಸತಿಯಿರ್ದೇನ್ಯವ್ವನಂ ಪೋದಮೇ ,  ಲೊಣಗಲ್ಪೈರಿಗೆ ಬಾರದಿಪ್ಪ ಮಳೆ ತಾ ಬಂದೇನದಾಪತ್ತಿನೋ, ಳ್ಮಣಿದುಂ ನೋಡದ ಬಂಧುವೇತಕೆಣಿಸಲ್ಕಾಲೋಚಿತಕ್ಕೈದಿದಾ ,  ತೃಣವೇ ಪರ್ವತವಲ್ಲವೇ ?  ಹರಹರಾ ಶ್ರೀ ಚನ್ನಸೋಮೇಶ್ವರಾ.*

ತಿನ್ನಲು ಬಾರದ ಹಣವಿದ್ದರೇನು? ಯೌವನವು ಕಳೆದ ಮೇಲೆ ಹೆಂಡತಿಯಿದ್ದರೆ ಫಲವೇನು? ಬೆಳೆಯು ಒಣಗಿದ ನಂತರ ಮಳೆ ಬಂದರೆ ಏನು ಪ್ರಯೋಜನ? ಕಷ್ಟಕಾಲದಲ್ಲಿ ಬಂದು ನೋಡದ ಬಂಧುಗಳಿದ್ದರೇನು? ಸಮಯದಲ್ಲಿ ಒದಗಿಬರುವ ಹುಲ್ಲೂ ಸಹಾ ಪರ್ವತಕ್ಕೆ ಸಮವಾಗುತ್ತದೆ.

ಪದ್ಯ 57
*ತೆರನಂ ಕಾಣದ ಬಾಳ್ಕೆ, ಸ್ವಲ್ಪಮತಿ, ಕ್ಷುದ್ರಾರಂಭಮಲ್ಪಾಶ್ರಯಂ , ಕಿರಿದೋಟಂ, ಕಡೆವಳ್ಳಿ, ಬೀದಿಮನೆ, ಮುಂಗೈಯಾರ್ಭಟಂ, ಸಾಲದಾ , ಧೊರೆಗಾರ್ಯಂ, ಘೃತವಿಲ್ಲದೂಟದ ಸುಖಂ, ಮುಗ್ಧಾಂಗನಾ ಸಂಗಮಂ , ಬರಿಗೈಯಂ ಸವಿದಂದವೈ ಹರಹರಾ ಶ್ರೀಚೆನ್ನಸೋಮೇಶ್ವರಾ*

ರೀತಿಯಿಲ್ಲದ ಬದುಕು, ಅಲ್ಪಬುದ್ಧಿ, ಅಲ್ಪ ಕಾರ್ಯವನ್ನು ಹಿಡಿಯುವುದು, ನೀಚರನ್ನು ಆಶ್ರಯಿಸುವುದು, ಸಣ್ಣದಾದ ತೋಪು, ತೀರ ಕೊನೆಯಲ್ಲಿರುವ ಹಳ್ಳಿ, ಬೀಳುತ್ತಿರುವ ಮನೆ, ಮೊದಲಿಗೇ ಮಾಡುವ ಗದ್ದಲ ಅಂದರೆ ಆರಂಭಶೂರತ್ವ, ಸಾಲ ಮಾಡಿ ಮಾಡುವ ಆಡಂಬರ, ತುಪ್ಪವಿಲ್ಲದ ಊಟ, ಮುಗ್ಧ ಹೆಣ್ಣಿನಸಂಗ, ಇವೆಲ್ಲವೂ ಬರಿಗೈಯಲ್ಲಿ ಮೊಳ ಹಾಕಿದಂತೆ ವ್ಯರ್ಥವಾದವುಗಳು.

ಪದ್ಯ  58
*ತೆರನಂ ಕಾಣದ ತಾಣ ತಾಟಕಿತನಂತಾ ಮಾಳ್ಪರಿಪ್ಪಲ್ಲಿ ನಿ, ಷ್ಠುರ ಭಾಷಾನೃಪನಲ್ಲಿ ನಿಂದೆ ಬರಿದೇ ಬಪ್ಪಲ್ಲಿ, ಅನ್ನೋದಕಂ,  ಕಿರಿದಾದಲ್ಲಿ ರಿಪುವ್ರಜಂಗಳೆಡೆಯೊಲ್ದುಸ್ಸಂಗ ದುರ್ಗೋಷ್ಢಿಯೋ,  ಳಿರಸಲ್ಲಿರ್ದಡೆ ಹಾನಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ*

ಕೆಟ್ಟ ಸ್ಥಳಗಳಲ್ಲಿ, ಕಪಟತನವನ್ನು ಮಾಡುವ ಜನರಿರುವಲ್ಲಿ ಕೆಟ್ಟ ಭಾಷೆಯನ್ನಾಡುವ ರಾಜನ ಬಳಿಯಲ್ಲಿ, ನಿಂದೆ ಬರುವ ಸ್ಥಳದಲ್ಲಿ, ಅನ್ನ ನೀರುಗಳಿಗೆ ಕೊರತೆಯಿರುವೆಡೆಯಲ್ಲಿ, ಶತ್ರುಗಳಿರುವಲ್ಲಿ, ದುಸ್ಸಂಗದಲ್ಲಿ, ದುರ್ಗೋಷ್ಠಿಗಳಲ್ಲಿ ಇರಬಾರದು. ಇದ್ದರೆ ಹಾನಿಯಾಗುವುದು.

ಪದ್ಯ  59
*ಅವಿನೀತಂ ಮಗನೇ ? ಅಶೌಚಿ ಮುನಿಯೆ ? ಬೈವಾಕೆ ತಾಂ ಪತ್ನಿಯೇ ? ,  ಸವಿಗೆಟ್ಟನ್ನವದೂಟವೆ ? ಕುಜನರೊಳ್ಕೂಡಿರ್ಪವಂ ಮಾನ್ಯನೇ ? ,  ಬವರಕ್ಕಾಗದ ಬಂಟನೇ ? ಎಡರಿಗಂ ತಾನಾಗದಂ ನೆಂಟನೇ? , ಶಿವನಂ ಬಿಟ್ಟವ ಶಿಷ್ಟನೇ ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ವಿನಯವಂತನಲ್ಲದ ಮಗನೂ, ಅಶುಚಿಯಾದ ಮುನಿಯೂ, ನಿಂದಿಸುವ ಪತ್ನಿಯೂ, ಸವಿಯಿಲ್ಲದ ಊಟವೂ, ಕೆಟ್ಟವರಲ್ಲಿ ಕೂಡಿರುವವನೂ, ಯುದ್ಧಕ್ಕೆ ಒದಗದ ಬಂಟನೂ, ಕಷ್ಟಮಾಡದ ನೆಂಟನೂ, ಶಿವನನ್ನು ಬಿಟ್ಟವನೂ , ಇವರೆಲ್ಲರೂ ಆಯಾ ಹೆಸರಿಗೆ ಅರ್ಹರಲ್ಲ.

ಪದ್ಯ  60
*ಜಡನಂ ಮೂರ್ಖನ ಕೋಪಿಯಂ ಪಿಸುಣನಂ ದುರ್ಮಾರ್ಗದಿಂ ತಪ್ಪಿನೊಳ್ ,  ನಡೆಯುತ್ತಿರ್ಪನ ನೆಂಟರುಣಲುಡಲುಂಟಾಗಿರ್ದೊಡಂ ತಾಳದಾ , ಕಡುಪಾಪಿಷ್ಠನ ಜಾಣ್ಮೆಹೀನನ ಕನಿಷ್ಠಂ ಮಾಳ್ಪನಂ ನೋಡೆ ತಾಂ ,  ನುಡಿಯರ್ನೋಡರು ನಾರಿಯರ್ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಸೋಮಾರಿಯನ್ನು, ಮೂರ್ಖನನ್ನು, ಚಾಡಿಕೋರನನ್ನು, ಕೆಟ್ಟಮಾರ್ಗದಲ್ಲಿ ನಡೆಯುವವನನ್ನು, ನೆಂಟರು ಉಣಲು ಉಡಲು ನೀಡಿದರೂ ಸಹನೆಯಿಲ್ಲದಿರುವವನನ್ನು, ಕಡುಪಾಪಿಷ್ಠನನ್ನು, ಮತಿಹೀನನನ್ನು,  ಸಜ್ಜನರು ಮತ್ತು ಕುಲಸ್ತ್ರೀಯರು ನೋಡಿಯೂ ನೋಡದಂತೆ ಮಾತನಾಡಿಸದೆ ಇರುತ್ತಾರೆ.

ವಿವರಣೆ:. ಸುಬ್ಬುಲಕ್ಷ್ಮಿ

ನಾಳೆ ಮುಂದುವರೆಯುವುದು...


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ