ಸೋಮೇಶ್ವರಶತಕ14
ಸೋಮೇಶ್ವರ ಶತಕ 14ನೇ ದಿನ
ಪದ್ಯ 66
*ತವೆ ಸಾಪತ್ನಿಯರಾಟ ಸಾಲ ಮಧುಪಾನಂ ಬೇಟದಾ ಜಾರಿಣೀ , ನಿವಹಂ ಮಾಡುವ ಮಾಟುಮಂತುಟಮಿತಂ ಮೃಷ್ಟಾನ್ನಮೆಂದೂಟ ದ್ಯೂ, ತವನಾಡುತ್ತಿಹ ಪೋಟ ಸೂಳೆಯರೊಳೊಲ್ದಿರ್ಪಾಟ ಮಿಂತೆಲ್ಲಮುಂ , ಸವಿಯಾಗಂತ್ಯದಿ ಕಷ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಸವತಿಯರು ಆಡುವ ಆಟಪಾಠಗಳು, ಸಾಲ ಮಾಡುವುದು, ಮಧುಪಾನ, ಜಾರಿಣಿಯರೊಡನೆ ಬೇಟ, ಪುಂಡರು ಮಾಡುವ ಹರಟೆ, ಸಿಕ್ಕಿತೆಂದು ಅತಿಯಾಗಿ ಮಾಡುವ ಮೃಷ್ಟಾನ್ನಭೋಜನ, ಸೂಳೆಯರೊಂದಿಗಿನ ಸಲ್ಲಾಪ, ಇವುಗಳೆಲ್ಲವೂ ಪ್ರಾರಂಭದಲ್ಲಿ ಸವಿಯಾಗಿ, ಹಿತವಾಗಿ ತೋರಿದರೂ ಕೊನೆಯಲ್ಲಿ ಕಷ್ಟವನ್ನು ತರುತ್ತವೆ.
ಪದ್ಯ 67
*ತ್ರಿಜಗಾಧೀಶ್ವರನೊಳ್ಮನೋಜ ಕಲಹಂ ತಾಳ್ದಗ್ನಿಗೀಡಾದ ವಾ, ರಿಜನಾಭಂಗಿದಿರಾಗಿ ಬಾಣ ಭುಜಸಾಹಸ್ರಂಗಳಂ ನೀಗಿದಂ , ದ್ವಿಜರಾಜಂ ಸರಿಯೆಂದು ಚಕ್ರಹತಿಯಿಂ ಸ್ವರ್ಭಾನು ತುಂಡಾಗನೇ ? , ಗಜದೊಳ್ ಸುಂಡಿಲಿ ಯುದ್ಧವೇ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಶಿವನೊಂದಿಗೆ ಹೋರಾಡಲು ಹೋಗಿ ಮನ್ಮಥನು ಸುಟ್ಟು ಬೂದಿಯಾದನು. ವಿಷ್ಣುವಿಗೆ ಇದಿರು ನಿಂತ ಬಾಣನು ತನ್ನ ಸಹಸ್ರ ತೋಳುಗಳನ್ನು ಕಳೆದುಕೊಂಡನು. ಚಂದ್ರನಿಗೆ ಸಮನೆಂದು ಅಡ್ಡ ಬಂದ ರಾಹುವು ಚಕ್ರದಿಂದ ತುಂಡಾದನು. ಗಜರಾಜನೊಡನೆ ಸುಂಡಿಲಿಯು ಯುದ್ಧಮಾಡಲು ಸಾಧ್ಯವೆ? ಬಲಶಾಲಿಗಳೆದುರು ಅಲ್ಪರಾದವರಿಗೆ ಯಾವಾಗಲೂ ಸೋಲು ಖಚಿತ.
ಪದ್ಯ 68
*ಅಗಲರ್ಸೂಳೆಯನಾಳರಾ ಕುಲಜೆಯಂ ಸಂಕೀರ್ಣವಂ ಮಾಳ್ಪರಾ , ವಗ ದುರ್ಗೋಷ್ಠಿಯೊಳಿರ್ಪರೇಳು ವ್ಯಸನಕ್ಕೀಡಪ್ಪರಾಚಾರಮಂ , ಬಗೆಯರ್ ಸ್ವಾರ್ಥವಿಚಾರಕಲ್ಪಮತಿಗೀವರ್ಧರ್ಮಮಂ ಪಾಲಿಸರ್ , ಯುಗಧರ್ಮಂ ನೃಪರೆಯ್ದುವರ್ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಸೂಳೆಯರಿಂದ ಅಗಲದವರು, ಕುಲಜೆಯನ್ನು ಪಾಲಿಸದವರು, ಯಾವಾಗಲೂ ಕೆಟ್ಟವರ ಸಂಗದಲ್ಲಿರುವವರು, ಸಪ್ತ ವ್ಯಸನಗಳಿಂದ ( ಮದ್ಯಪಾನ, ಜೂಜು, ಕಾಮುಕತೆ, ಬೇಟೆ, ಕ್ರೌರ್ಯ, ಕೆಟ್ಟಮಾತುಗಳು, ದುಂದುವೆಚ್ಚ ) ಬಳಲುತ್ತಿರುವವರು, ಆಚಾರವನ್ನು ತಿಳಿಯದವರು, ಸ್ವಾರ್ಥಮತಿಯುಳ್ಳವರು, ಅಲ್ಪಮತಿಗಳಾಗಿ ಅಧರ್ಮವಂತರಾಗಿರುವವರು ಯುಗಧರ್ಮವನ್ನು ಪಾಲಿಸುವುದರಿಂದ ರಾಜರಾಗುವರು. ಇದು ಕಹಿಸತ್ಯವು.
ಪದ್ಯ 69
*ಸುತೆಯೆಂದಳ್ಕಿದುದಿಲ್ಲ ಬೊಮ್ಮ, ಋಷಿ ತಾಂ ಚಂಡಾಲವೆಣ್ಣೆಂದರುಂ , ಧತಿಯಂ ಬಿಟ್ಟನೆ ? ವಿಷ್ಣು ಗೋಪವಧುಗಳ್ ಬೇಡೆಂದನೇ ? ಚಂದ್ರಮಂ , ಮತವಲ್ಲೆಂದನೆ ? ಭೀಮನಾದನುಜೆಯೆಂದುಂ ಮಾಣ್ದನೇ ನೋಡಿ ಮ , ನ್ಮಥನಂ ಗೆಲ್ವನಾವನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಮಗಳೆಂದೂ ಅಳುಕಲಿಲ್ಲ ಬ್ರಹ್ಮ. ಸರಸ್ವತಿಗೆ ಸೋತನು. ಅರುಂಧತಿಯು ಚಂಡಾಲ ಸ್ತ್ರೀಯಾಗಿದ್ದರೂ ಋಷಿಯು ಅಳುಕಲಿಲ್ಲ.( ತಾಂತ್ರಿಕ ವಿದ್ಯೆಯಲ್ಲಿ ನಕ್ಷತ್ರಗಳ ಉಪಾಸನೆ ಇದೆ .ಅರುಂಧತಿ ಈ ನಕ್ಷತ್ರ ಗಳ ಗುಂಪಿನಲ್ಲಿದ್ದವಳು. ಜೊತೆಗೆ ಅವಳ ಪೂರ್ವ ಜನ್ಮದಲ್ಲಿ ಕಾಮದೇವನ ಪ್ರಭಾವದಿಂದ ಅವಳನ್ನು ಎಲ್ಲರೂ ಮೋಹಿಸಿದ್ದರು. ಕೊನೆಯಲ್ಲಿ ಯುಗಯುಗಗಳ ತಪಸ್ಸಿನಿಂದ ಶುದ್ಧಳಾದಳು ಎಂದು ಮಹಾಶಿವಪುರಾಣದ ಕಥೆ. ( ಮಾಹಿತಿ _ಸೋದರಿ ಮುಕ್ತಾ.) ಅವಳನ್ನು ಮದುವೆಯಾದನು. ಗೋಪಸ್ತ್ರೀಯರನ್ನು ವಿಷ್ಣು ಬೇಡವೆನ್ನಲಿಲ್ಲ. ಚಂದ್ರನು ಮೋಹ ಬಿಡಲಿಲ್ಲ. ಭೀಮನು ರಕ್ಕಸ ಸ್ತ್ರೀಯೆಂದು ಹಿಡಿಂಬೆಯನ್ನೇನೂ ಕೈ ಬಿಡಲಿಲ್ಲ. ಆದುದರಿಂದ ಮನ್ಮಥನನ್ನು ಗೆಲ್ಲುವವರಾರು?
ಪದ್ಯ 70
*ಗತಿಯಿಂ ಗಾಡಿಯ ಸೊಂಪಿನಿಂ ಗಮಕದಿಂ ಗಾಂಭೀರ್ಯದಿಂ ನೋಟದಾ , ಯತದಿಂ ಸನ್ಮೃದುವಾಕ್ಯದಿಂ ಸರಸದಿಂ ಸಂಗೀತ ಸಾಹಿತ್ಯದಿಂ , ಪ್ರತಿಪಾಡಿಲ್ಲದ ರೂಪಿನಿಂ ಪ್ರವುಢಿಯಿಂದೈತಪ್ಪಪದ್ಮಾಕ್ಷಿಗಾ , ಯತಿಯುಂ ತಾನುರೆ ಸೋಲುವಂ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಉತ್ತಮ ನಡಿಗೆ, ಹೆಚ್ಚಿನ ರೂಪದ ಸೊಂಪು, ಸಂಗೀತ, ಗಮಕ, ಗಂಭೀರತೆ, ಕುಡಿನೋಟ, ಮೃದುವಾಕ್ಯಗಳಿಂದ ಕೂಡಿದ ಪ್ರೌಢಿಮೆಯಿಂದ ಪದ್ಮಾಕ್ಷಿಯು ಬರುತ್ತಿರಲು ಯತಿಯಾದವನೂ ಅವಳನ್ನು ಕಂಡು ಸೋಲುವನು. ಇನ್ನು ಉಳಿದವರ ಪಾಡೇನು?
ವಿವರಣೆ:. ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...
ಕಾಮೆಂಟ್‌ಗಳು