ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ7


 ತಿರುಪ್ಪಾವೈ 

ಹಕ್ಕಿಗಳ ಚಿಲಿಪಿಲಿ, ಕಡಗೋಲಿನ ಧ್ವನಿ, ಬಳೆಗಳ ಝಣಝಣತ್ಕಾರ ಎಲ್ಲವೂ ಅವನ ಸ್ಮರಣೆಯೇ 
Thiruppavai 7

ಕೀಶು ಕೀಶೆನ್ರೆಂಗುಂ  ಆನೈಚ್ಚಾತ್ತಮ್  ಕಲನ್ದು  
ಪೇಶಿನ ಪೇಚ್ಚರವಮ್ ಕೇಟ್ಟಿಲೈಯೋ ಪೇಯಿಪ್ಪೆಣ್ಣೇ  
ಕಾಶುಮ್ ಪಿರಪ್ಪುಂ  ಕಲಹಲಪ್ಪ ಕ್ಕೈ ಪೇರ್ತು   
ವಾಶನರುಂ ಕುಳಲಾಚ್ಚಿಯರ್ ಮತ್ತಿನನಾಲ್ 
ಓಶೈಪಡುತ್ತ ತಯಿರರವಮ್ ಕೇಟ್ಟಿಲೆಯೋ 
ನಾಯಹಪೆಣ್ ಪಿಳ್ಳಾಯ್ ನಾರಾಯಣನ್ ಮೂರ್ತಿ 
ಕೇಶವನೈಪ್ಪಾಡವುಂ ನೀ ಕೇಟ್ಟೇ   ಕಿಡತ್ತೀಯೋ 
ತೇಶಮುಡೈಯೂಯ್  ತ್ತಿರವೇಲೋರೆಂಬಾವಾಯ್

ಭಾವಾನುವಾದ - 7

ಹಕ್ಕಿಗಳಿಂಚರ ಹೊನ್ನಕಾಂತಿಯ ಬೆಳಗು ದುಂಬಿಗಳ ಝೇಂಕಾರದಲಿ
ಕಡೆಗೋಲ್ದನಿಯೊಡನೆ ಅಂದಚೆಂದದ ಬಳೆಗಳ ಝಣಝಣಕ್ಕಾರ ಕೇಳಿಸದೇ 
ಸಾಕು ನಿದ್ರೆಯ ನಟನೆ ನೋಡೈದಿಹರು ಭಕ್ತಶೇಖರರು ದರ್ಶನಕೆ 
ಭಕುತಿ ಚೆಲುವೆ ನೀ ಬಂಧಿತಾ ಸಿಂಧುಶಯನ ನಿನಗತಿಶಯದಿ ಓ ಸಖಿಯೆ 
ಹರಿಭಕ್ತಿಸಾರ ಸಾಗರಕೆ ನಡೆಸಮ್ಮ ಕಾಲ ಸರಿಯುವ ಮುನ್ನ 
ಮಾರ್ಗಶಿರ ನೋಂಪಿಗೆಮ್ಮನನುಗೊಳಿಸಿ ನಡೆಸು ಬಾ
ಗೋಪತಿಯಡೆಗೆ 
ಯೋಗಿಜನ ಹೃತ್ಕಮಲವಾಸನನು ಭವಭೀತಿ ಬಿಡಿಸೆಂದು
ನುತಿಸೋಣ 
ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು.

ಸಂಕ್ಷಿಪ್ತ ಭಾವಾರ್ಥ

ಈ ಪಾಶುರವು ಗೋದಾದೇವಿಯು ತನ್ನ ಅತ್ಯಂತ ಪ್ರಿಯಳಾದ ಹಾಗೂ ಪರಮಾತ್ಮನ ಗುಣಗಾನಗಳಲ್ಲಿ ತಲ್ಲೀನಳಾಗಿರುವ ನಾಯಕಿ ಎನಿಸಿಕೊಂಡ ಗೋಪ ಬಾಲಿಕೆಯನ್ನು ಎಬ್ಬಿಸುತ್ತಿರುವಂತೆ ಪಾಡಿದ ಗೀತೆ.

ನೋಡಮ್ಮಾ, ಮೂಡಣದಲ್ಲಿ ಬಾಲನೇಸರನು ಉದಯಿಸುತ್ತಿದ್ದಾನೆ. ಭಾರಧ್ವಾಜ ಪಕ್ಷಿಗಳು ಪರಸ್ಪರ ಗುಂಪು ಕಟ್ಟಿಕೊಂಡು ಚಿಲಿಪಿಲಿ ಗಾನ ಮಾಡುತ್ತಿವೆ. ಗೋಕುಲದ ಮನೆ ಮನೆಗಳಿಂದ ಗೋಪಿಯರೆಲ್ಲರು ಮೊಸರು ಕಡೆಯುತ್ತಿರುವ ಕಡಗೋಲಿನ ಧ್ವನಿ, ಬಳೆಗಳ ಝಣಝಣತ್ಕಾರ ಕೇಳಿ ಬರುತ್ತಿದೆ. ಈ ಎಲ್ಲಾ ನಾದವೂ ನಾರಾಯಣನ ನಾಮಸ್ಮರಣೆಯೇ ಎಂದು ನೀನು ಭಾವುಕಳಾಗಿದ್ದೀಯೆ! ನನಗೆ ಗೊತ್ತು ನಿನ್ನದು ಕಪಟ ನಿದ್ರೆ ಎಂದು. ನೊಡು ನೀನು ಭಕ್ತಾಗ್ರಗಣ್ಯೆ ಎಂದು ಕುಲಶೇಖರರೂ ಸಹ ಬಂದು ನಿನ್ನ ಮನೆಯ ಬಾಗಿಲಲ್ಲಿ ಭಕ್ತಿಯಿಂದ ನಿನ್ನ ದರ್ಶನಕ್ಕಾಗಿ ನಿಂತಿದ್ದಾರೆ. ನಿನ್ನ ಭಕ್ತಿ ಎಂಬ ಚೆಲುವಿನಲ್ಲಿ ನಮ್ಮ ರಂಗನಾಥನನ್ನು ಬಂಧಿಸಿರುವುದರಿಂದ ನೀನು ನಮ್ಮ ಮೇಲೆ ಕರುಣೆ ತೋರಿಸಿ ಎದ್ದು ಬಾ.
ಯೋಗಿಗಳ ಹೃತ್ಕಮಲವಾಸನಾದ ಶ್ರೀಹರಿಯ ದರ್ಶನವನ್ನು ಮಾಡಿಸೆಮಗೆ. ಗೆಳತಿಯರೆಲ್ಲಾ ಆದಾಗಲೇ ಸ್ನಾನಘಟ್ಟವನ್ನು ಸೇರಿದ್ದಾರೆ. ನಿನಗಾಗಿ ಎದುರುನೋಡುತ್ತಿದ್ದಾರೆ. ವೇಳೆ ವ್ಯರ್ಥವಾಗುವ ಮುನ್ನವೇ ಆ ಪರಂಧಾಮನನ್ನು ಧ್ಯಾನಿಸಿ ಅವನನ್ನು ಕೂಡಿ ಆಡಲು ನಮಗೆ ನಿನ್ನ ಸಹಾಯ ಬೇಕಾಗಿದೆ. ನೀನೇ ನಮಗೆ ಮಾರ್ಗದರ್ಶಿ ಎಂದು ಬಂದಿದ್ದೇವೆ. ನೀನು ನಮ್ಮೊಡನಿದ್ದರೆ ಸಾಕು ನಾವು ಶ್ರೀಕೃಷ್ಣನಲ್ಲಿ ನಮ್ಮನ್ನು ಈ ಭವಬಂಧನದ ಭಯದಿಂದ ರಕ್ಷಿಸೆಂದು ಪ್ರಾರ್ಥಿಸುತ್ತೇವೆ.

ಯಾವ ದೇವ ದೇವ ಜಗನ್ನಾಥನನ್ನು ಯೋಗಿಗಳು ಸದಾಕಾಲ ತಮ್ಮ ಹೃತ್ಕಮಲದಲ್ಲಿ ಸ್ಥಾಪಿಸಿಕೊಂಡು ಆನಂದ ತುಂದಿಲರಾಗಿರುತ್ತಾರೋ ಅಂತಹ ಶ್ರೀವಿಷ್ಣುಚಿತ್ತ ಮುನಿ ಹೃದಯ ವಿಹಾರನಾದ ಅಪ್ರಮೇಯನನ್ನು ಭವಸಾಗರದಿಂದ ಪಾರುಗಾಣಿಸೆಂದು ಪ್ರಾರ್ಥಿಸೋಣ. ನೀನು ನಮ್ಮೊಡನಿದ್ದರೆ ಸಾಕು ನೀನು ನಮಗೆ ತೋರುವ ಕರುಣೆಯಿಂದ ಶ್ರೀ ಹರಿಯೂ ಸಹ ನಮ್ಮಲ್ಲಿ ಕರುಣೆ ತೋರಿಸಿ ರಕ್ಷಿಸುತ್ತಾನೆ. ಇದರಿಂದ ನಮ್ಮವ್ರತವೂ ಈಡೇರಿ ಸಕಲ ಲೋಕಕ್ಕೂ ಮಂಗಳ ಉಂಟಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ

Art credits: Keshav (©KrishnaforToday)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ