ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ15


 ಸೋಮೇಶ್ವರ ಶತಕ 15ನೇ ದಿನ


ಪದ್ಯ  71
*ವರ ಬಿಂಬಾಧರೆಯಾಗಿ ಚಂದ್ರಮುಖಿ ತಾನಂಭೋಜ ಶೋಭಾಕ್ಷಿಯಾ , ಗೆರವಂ ಮಾಡದಳಾಗಿ ಚಿತ್ತವರಿದೆಲ್ಲಾ ಸೌಖ್ಯಮಂ ತೋರ್ಪ ಸುಂ ,  ದರಿ ತಾನುತ್ತಮ ಜಾತಿಯಾಗಿ ಸೊಗಸಿಂದಂ ಕೂಡುವಳ್ ಸೇರಲಾ ,  ಹರುಷಕ್ಕಿಂದುರು ಸೌಖ್ಯವೇ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

 ಬಿಂಬಾಧರೆಯೂ, ಚಂದ್ರಮುಖಿಯೂ, ಕಮಲದಂತಹ ಕಣ್ಣುಗಳಿಂದ ಶೋಭಿತಳೂ, ತಡವಿಲ್ಲದೆ ಮನಸ್ಸನ್ನರಿತು ಎಲ್ಲಾ ರೀತಿಯ ಸೌಖ್ಯವನ್ನೂ ತೋರಿಸುವ ಸುಂದರಿಯು ಉತ್ತಮ ಜಾತಿಯವಳಾಗಿ ಸೇರುವಳೆಂದರೆ ಆ ಸಂತಸಕ್ಕಿಂತ ಹೆಚ್ಚಿನದು ಯಾವುದಿದೆ ?

ಪದ್ಯ  72
*ಚತುರಾಸ್ಯಂ ಮುಖವಿತ್ತ ಶಂಕರಜಟಾಜೂಟಾಗ್ರಮಂ ಮೆಟ್ಟಿದಳ್,  ಗತಿಯಿಂ ಕೃಷ್ಣನ ವಕ್ಷದೊಳ್ ನೆಲಸಿದಳ್ ದೇವೇಂದ್ರ ನಾ ಮುದ್ರೆಯಂ ,  ಹಿತದಿಂ ತಾಳಿದ ಮಿಕ್ಕಲೋಕಗಳ ನಾನೇವಣ್ಣಿಪೆಂ ನೋಡಲಾ ,  ಸತಿಯರ್ಗಾವನು ಸಿಕ್ಕನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಬ್ರಹ್ಮನ ಮುಖದಲ್ಲಿ ಸರಸ್ವತಿಯು ನೆಲೆಸಿದಳು. ಶಂಕರನ ಜಟಾಜೂಟವನ್ನು ಗಂಗೆಯು ಮೆಟ್ಟಿದಳು. ವಿಷ್ಣುವಿನ ವಕ್ಷಸ್ಥಳದಲ್ಲಿ ಲಕ್ಷ್ಮಿಯು ನೆಲೆಗೊಂಡಳು. ಇಂದ್ರನಾದರೋ ತನಗೆ ಬಂದ ಶಾಪವನ್ನೂ ತಾಳಿಕೊಂಡನು. ಹೀಗೆ ಸತಿಯರಿಗೆ ಸೋಲದವರಾರು ? ಯಾರೂ ಇಲ್ಲ.

ಪದ್ಯ  73
*ಕ್ಷಿತಿಯಂ ಶೋಧಿಸಲಕ್ಕು ತಾರೆಗಳ ಲೆಕ್ಕಂ ಮಾಡಲಕ್ಕಾಗಸೋ , ನ್ನತಿಯಂ ಕಾಣಲುಬಕ್ಕು; ಸಾಗರಗಳೇಳುಂ ದಾಂಟಲಕ್ಕು; ನಭೋ ,  ಗತಿಯಂ ಸಾಧಿಸಲಕ್ಕು ; ಬೆಟ್ಟಗಳ ಚೂರ್ಣಂ ಮಾಡಲಕ್ಕೀಕ್ಸಿಸ ,   ಲ್ಸತಿಯರ್ಚಿತ್ತವಭೇದ್ಯವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ*

ಭೂಮಿಯನ್ನು ಶೋಧಿಸಬಹುದು, ನಕ್ಷತ್ರಗಳನ್ನು ಎಣಿಸಬಹುದು, ಆಕಾಶದ ವಿಸ್ತಾರವನ್ನು ಕಾಣಬಹುದು, ಏಳು ಸಾಗರಗಳನ್ನು ಬೇಕಾದರೂ ದಾಟಬಹುದು, ಆಕಾಶದಲ್ಲಿ ಗಮನ ಮಾಡಬಹುದು, ಬೆಟ್ಟಗಳನ್ನು ಕುಟ್ಟಿ ಪುಡಿ ಮಾಡಬಹುದು ಆದರೆ ಸತಿಯರ, ಸ್ತ್ರೀಯರ ಚಿತ್ತವನ್ನು ನೋಡಲಾಗದು. ಇದು ಅಭೇದ್ಯವಾದುದು.

ಪದ್ಯ  74
*ಕಡುಮುಪ್ಪಾಗಿರೆ, ಕುಂಟನಾಗೆ, ಕುರುಡಂ ತಾನಾಗೆ,  ಯೆತ್ತೇರಿದಾ , ಮುಡುಬಾ, ಮೂಕೊರೆ, ಮೂಢ_ ಕಿವುಡಂ_ ಚಂಡಾಲತಾನಾದಡಂ , ಸುಡುವೈ, ಕುಷ್ಠ ಶರೀರಯಾಗಲೋಲಿವರ್ಪೊನ್ನಿತ್ತರಾ ಪೆಣ್ಗಳುಂ,  ಕೊಡುಗೈ ಸ್ತ್ರೀ ಜನವಶ್ಯ ವೈ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಕಡು ಮುಪ್ಪಾಗಿದ್ದರೂ, ಕುಂಟ, ಕುರುಡ,ಮೂಢ, ಮೂಕ, ಕಿವುಡ, ಎತ್ತಿನ ಮೇಲೆ ಕುಳಿತು ಬರುವ ಸೊಟ್ಟ ಮೈಯವ,  ಚಾಂಡಾಲನಾಗಿದ್ದರೂ, ಕುಷ್ಠಶರೀರವನ್ನು ಹೊಂದಿದ್ದರೂ ಸರಿ ಇಂತಹವರು ಹೊನ್ನನ್ನು ಕೊಟ್ಟರೆ ಮುಂದೆ ಬರುವ ಸ್ತ್ರೀಜನರು, ಅವಶ್ಯವಾಗಿಯೂ ದೊರೆಯುತ್ತಾರೆ. ಹಣದ ಮೋಹ ಅಂತಹುದು.

ಪದ್ಯ  75
*ಕೊರಚಾಡೆಲ್ಲರ ಮುಂದೆ ರಚ್ಚೆಗೆಳೆವುತ್ತಂ ಕಿತ್ತುಮೈಯೆಲ್ಲಮಂ , ಹರಿ ತಂದುಳ್ಳ ಸುವಸ್ತುವಂ ಕಡೆಯೋರ್ವಂಗಿತ್ತು ತಾಂ ಭಾಷೆಯಂ,  ಬರಿಗಂಟಿಕ್ಕುವೆನೆಂದು ತಾಯ ಹೊಸೆಯತ್ತಪ್ಪುತ್ತೆ ಕಾಪಟ್ಯದಿಂ ,  ಚರಿಪಳ್ತಾಂ ನೆರೆಸೂಳೆಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಎಲ್ಲರಮುಂದೆ ಅರಚಾಡುತ್ತ ತನ್ನ ಬಳಿಗೆ  ಬಂದವನೊಂದಿಗೆ ರಚ್ಚೆ ಹಿಡಿದು ಅವನಲ್ಲಿದ್ದ ಉತ್ತಮ ವಸ್ತುಗಳನ್ನೆಲ್ಲ ಕಿತ್ತುಕೊಂಡು ಇನ್ನೊಬ್ಬನಿಗೆ ಭಾಷೆಯನ್ನು ಕೊಟ್ಟು ಹಣವಿಲ್ಲದವನೆಂದು ಇವನ ಜೊತೆ ಜಗಳಕ್ಕೆ ತಾಯಿಯನ್ನು ಬಿಟ್ಟು ಕಪಟದಿಂದ ನಡೆದುಕೊಳ್ಳುವವಳೇ ಸೂಳೆಯು. ಅವಳಿಗೆ ಹಣ ಮಾತ್ರ ಮುಖ್ಯವಾಗುತ್ತದೆ.

ವಿವರಣೆ: ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ