ಸೋಮೇಶ್ವರಶತಕ16
ಸೋಮೇಶ್ವರ ಶತಕ 16ನೇ ದಿನ
ಪದ್ಯ 76
*ಒಲವಂ ಬೀರ್ವ ಕುಚಂಗಳುಂ ಮೃದುಲತಾಸತ್ಕೋಮಲಂ ಬಾಹು ಮುಂ, ದಲೆ ಮೇಘಾಯಿತಮೀಕ್ಷಣಂ ಶಫರಿಪೂರ್ಣೇಂದುಪ್ರಭಂ ವಕ್ತ್ರಮುಂ , ಕಳೆ ವಿದ್ಯುನ್ನಾಭ ಸರ್ವಭಾವ ಚೆಲುವಂಗಂ ನೋಡೆ ಮಾರ್ದರ್ಪಣಂ, ಬೆಲೆವೆಣ್ಣೆಂಬುದು ಮೋಹವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ*
ಪ್ರೀತಿಯನ್ನು ಮೂಡಿಸುವ ಸ್ತನಗಳು, ಲತೆಯಂತೆ ಕೋಮಲವಾದ ಬಾಹುಗಳು, ಮೋಡದಂತೆ ಕಪ್ಪಾದ ಮುಂಗುರುಳಿನ ಚೆಲುವು, ಚಂದ್ರಬಿಂಬದಂತಹ ಚೆಲುವಾದ ಮುಖವು, ಮಿಂಚಿನಂತಹ ಕಾಂತಿಯು, ಸರ್ವಾಂಗವೂ ಸುಂದರವಾದ ಬೆಲೆವೆಣ್ಣು ಒಂದು ರೀತಿಯ ಮೋಹವನ್ನು ಉಂಟುಮಾಡುವಂತಹವಳು.
ಪದ್ಯ 77
*ಹಣವುಳ್ಳಂ ಹೆಣನಾದಡಂ ಒಲಿದವೋಲಾರೆಂದಡೆಂ ಬಿಟ್ಟಿರಳ್, ಕ್ಷಣಮಾತ್ರಂ ಬಹುಕೂಟಬೇಟಗಳಲಿಂ ಸೋತಂದದಿ ಹಾಲ ಮುಂ, ದಣ ಬೆಕ್ಕಾಡುವೋಲಾಡಿ ಸರ್ವಧನ ತಾ ಪೋಗಲ್ಕೆ ಮಾತಾಡರೈ, ಗಣಿಕಾಸ್ತ್ರೀಗುಣ ಯಾತಕೈ ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಹಣವುಳ್ಳವನು ಹೆಣದಂತಿದ್ದರೂ ಸೂಳೆಯು ಅವನನ್ನು ಒಂದರೆಗಳಿಗೆಯೂ ಬಿಟ್ಟಿರದೆ ಓಲೈಸುವಳು. ಬಹಳವಾದ ಸರಸ ವಿನೋದಗಳಿಂದ ಹಾಲಿನ ಮುಂದೆ ಬೆಕ್ಕು ಸುಳಿದಾಡುವ ರೀತಿಯಲ್ಲಿ ಇರುವಳು. ಎಲ್ಲ ಹಣವೂ ಹೋದಮೇಲೆ ಮಾತನ್ನೂ ಆಡಿಸದೆ ತಿರುಗಿಯೂ ನೋಡದೆ ಹೋಗುವಳು. ಸೂಳೆಯರ ಗುಣವೇ ಇಷ್ಟು.
ಪದ್ಯ 78
*ಮದನಂಗೀಶ್ವರ ಶತ್ರು ಬಂಧುನಿಚಯಕ್ಕಂ ಜಾರೆಯೇ ಶತ್ರು ಪೇ, ಳದ ವಿದ್ಯಂಗಳ ತಂದೆ ಶತ್ರು ಕುವರರ್ಗಂ ಶತ್ರು ಮಾನ್ಯರ್ಗೆ ಈ, ಸದನಕ್ಕಂ ಕಡು ಸಾಲ ರೂಪವತಿ ತಾನೇ ಶತ್ರು ಗಂಡಂಗೆ ಮೇಣ್, ಮುದಿಗಾಯವ್ವನೆ ಶತ್ರುವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಮದನನಿಗೆ ಈಶ್ವರ ಶತ್ರು, ಜಾರೆಗೆ ಬಂಧು ಬಳಗದವರೆಲ್ಲ ಶತ್ರುಗಳು. ವಿದ್ಯೆಗಳನ್ನು ಕಲಿಸದ ತಂದೆ ಮಕ್ಕಳಿಗೆ ಶತ್ರು. ಮಾನ್ಯರಿಗೆ ಮನೆಗೆ ಮಾಡುವ ಸಾಲವೇ ದೊಡ್ಡ ಶತ್ರು. ರೂಪವತಿಯಾದ ಹೆಂಡತಿ ಗಂಡನಿಗೆ ಶತ್ರು. ಮುದಿತನಕ್ಕೆ ಯೌವ್ವನವೇ ಶತ್ರು. ಹೀಗೆ ಅಹಿತಕ್ಕೆ ಹಿತವೆಲ್ಲವೂ ಶತ್ರುರೂಪವಾಗಿರುತ್ತದೆ.
ಪದ್ಯ 79
*ಕುಲದೊಳ್ಕೂಡರು ಕೂಸನೀಯರು ನೃಪರ್ನಿಷ್ಕಾರಣಂ ದಂಡಿಪರ್, ಪೊಳಲೊಳ್ಸೇರರು ಪೋರುಗೆಯ್ದು ಸತಿತಾಂ ಪೋಗಟ್ಟುವಳ್ ಸಾಲಿಗರ್, ಕಲುಗುಂಡಂ ಮಿಗೆಪೇರುವರ್ ತೊಲಗಿರಲ್ ಲಕ್ಷ್ಮೀಕಟಾಕ್ಷೇಕ್ಷಣಂ, ನೆಲ ಮುಟ್ಟಲ್ಮುನಿದಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಲಕ್ಷ್ಮೀಕಟಾಕ್ಷವು ತಪ್ಪಿದವನನ್ನು ಅಂದರೆ ಹಣವಿಲ್ಲದವನನ್ನು ಕುಲದವರು ಹತ್ತಿರಕ್ಕೆ ಸೇರಿಸುವುದಿಲ್ಲ. ಹೆಣ್ಣನ್ನು ಕೊಡುವುದಿಲ್ಲ. ಅರಸನು ನಿಷ್ಕಾರಣವಾಗಿ ದಂಡಿಸುವನು. ಪಟ್ಟಣದವರು ಸೇರುವುದಿಲ್ಲ. ಮನೆಯಲ್ಲಿ ಹೆಂಡತಿಯು ಜಗಳವಾಡಿ ಅಟ್ಟುವಳು. ಸಾಲ ಕೊಟ್ಟವರು ತಲೆಯ ಮೇಲೆ ಕಲ್ಲು ಇಟ್ಟಂತೆ ಒತ್ತಾಯಪಡಿಸುವರು. ಬೇರಿನ್ನೇನು, ನೆಲವೂ ಕೂಡಾ ಮುಟ್ಟಿದರೆ ಮುನಿಯುವುದು. ಹೀಗೆ ಹಣವಿಲ್ಲದವನ ಬಾಳು ಗೋಳಾಗುವುದು.
ಪದ್ಯ 80
*ತೊನೆಯಲ್ ತಾಳುಮೆಯುಳ್ಳವಂ ಬೆರೆತೊಡಂ ನಿರ್ಗರ್ವಿಕೊಟ್ಟಾಡಲಾ , ತನುಸತ್ಯವ್ರತಿ ಸೂರುಳಿಟ್ಟು ಪುಸಿಯಲ್ ಭಾಷಾಪ್ರತೀಪಾಲಕಂ , ಕನಲಲ್ ಸೈರಣೆರಂತನಕ್ಕುಲಜನಾಗಲ್ ನಿರ್ಗುಣಂ ತೋರಲಾ , ಧನಿಕಂ ಸತ್ಕುಲಜಾತನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಧನಿಕನಾದವನು ತಾಳ್ಮೆಯಿಲ್ಲದಿದ್ದರೂ ಸಹನಾವಂತನೆನಿಸಿಕೊಳ್ಳುವನು. ಗರ್ವದಿಂದ ಮೆರೆಯುವವನಾದರೂ ನಿಗರ್ವಿಯೆನ್ನುವರು. ಸುಳ್ಳನ್ನು ಹೇಳುತ್ತಿದ್ದರೂ ಸತ್ಯವ್ರತಿಯೆನ್ನುವರು. ಮಾತಿಗೆ ತಪ್ಪಿದಾಗಲೂ ವಚನಪಾಲಕನೆನ್ನುವರು. ಕೋಪಗೊಂಡರೂ ಸೈರಣೆಯುಳ್ಳವನೆಂದು ಕೊಂಡಾಡುವರು. ಹೀಗೆ ಧನಿಕನಾದವನ ದುರ್ಗುಣಗಳು ಮುಚ್ಚಿ ಹೋಗಿ ನಿಗರ್ವಿಯೆಂದೇ ಹೇಳಿಸಿಕೊಳ್ಳುವನು.
ವಾಸ್ತವತೆಯು ಎಷ್ಟು ಕಟು ಸತ್ಯವಾಗಿರುವುದು.
ವಿವರಣೆ: ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...
ಕಾಮೆಂಟ್‌ಗಳು