ಸೋಮೇಶ್ವರಶತಕ17
ಸೋಮೇಶ್ವರ ಶತಕ 17ನೇ ದಿನ
ಪದ್ಯ 81
*ಕರೆಯಲ್ ಕರ್ಣಗಳಿರ್ದು ಕೇಳರು ಕರಂಗಳ್ ಚೆಲ್ವನಾಂತಿರ್ದೊಡಂ, ಮುರಿದಂತಿರ್ವರ ಮೇಲೆ ಹೇರಿ ನಡೆವರ್ಮಾತಿದೊಡಂ ಮೂಕರ, ಪ್ಪರು ಕಾಲಿರ್ದೊಡೆ ತಾಕುತಿರ್ಪರೆಡಗಾಲಂ ಪೂರ್ವಪುಣ್ಯಂಗಳಿಂ, ಸಿರಿವಂತರ್ನೆಲೆಕಾಣರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಪೂರ್ವಪುಣ್ಯದಿಂದ ಲಭಿಸಿದ ಧನದಿಂದ ಸಿರಿವಂತರಾದವರು ಗರ್ವದಿಂದ ನಡೆಯುವರು. ಕಿವಿಯಿದ್ದೂ ಕೇಳದಂತಿರುವರು. ಚೆನ್ನಾಗಿರುವ ಕೈಗಳಿದ್ದರೂ ಇತರರ ಮೇಲೆ ಭಾರ ಹಾಕಿ ನಡೆಯುವರು. ಮಾತು ಬಂದರೂ ಮೂಕರಂತೆ ಇರುವರು. ಕಾಲುಗಳಿದ್ದರೂ ನಡೆಯಲು ತೊಡರುವರು. ಇವರಿಗೆ ಹಣದ ಮದವು ಹೀಗೆಲ್ಲ ಮಾಡಿಸುತ್ತದೆ.
ಪದ್ಯ 82
*ರಣದೊಳ್ ಶಕ್ರನ ತೇರನೇರಿದ ಮಹಾಶೈವಾಳಿ ಬೆಂಬತ್ತೆ ಮಾ , ರ್ಗಣದಿಂ ಚಿಮ್ಮಿದ ಸಪ್ತಸಾಗರಗಳಂ ದಿಕ್ಕೆಂಟು ಮೂಲೋಕಮಂ, ಕ್ಷಣದೊಳ್ವೆಚ್ಚವ ಮಾಡಿ ಬೇಡೆ ಬಲಿಸಾಲಕ್ಕಂಜಿ ಬಿಟ್ಟೋಡಿದಂ, ಋಣಭಾರಕ್ಕೆಣೆಯಾವುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಬಲಿ ಚಕ್ರವರ್ತಿಯು ಇಂದ್ರನ ರಥವನ್ನು ಏರಿದವನು. ದೊಡ್ಡ ದೊಡ್ಡ ಪರ್ವತಗಳು ಬೆನ್ನಟ್ಟಿ ಬರಲು ಬಾಣಗಳಿಂದ ಚೂರಾಗಿಸಿದವನು. ವಾಮನನಿಗೆ ಸಪ್ರಸಾಗರಗಳನ್ನೂ, ಮೂರುಲೋಕಗಳನ್ನೂ ಕ್ಷಣಮಾತ್ರದಲ್ಲಿ ಕೊಟ್ಟವನು. ಆದರೆ ಇಂತಹವನೂ ಸಾಲಕ್ಕೆ ಹೆದರಿ ಓಡಿದನೆಂದರೆ ಸಾಲದ ಭಾರಕ್ಕಿಂತ ಹೆಚ್ಚಿನದು ಯಾವುದೂ ಇಲ್ಲ.
ಪದ್ಯ 83
*ಪೊರಬೇಡಂಗಡಿಸಾಲದೂರ ಪೊಣೆಯಂ ನಿಂದ್ಯಂಗಳಂ ಪಾಪಮಂ, ಮರೆಬೇಡಾತ್ಮಜ ಮಿತ್ರನಂ, ಸತಿಯಳಂ ನ್ಯಾಯಂಗಳೊಳ್ಸತ್ಯಮಂ, ಸೆರೆ ಬೇಡಂಗನೆ ಪಕ್ಷಿವೃದ್ಧತರಳರ್ಗೋವಿಪ್ರದಾರಿದ್ರರಂ, ತೆರಬೇಡೊತ್ತೆಗೆ ಬಡ್ಡಿಯಂ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಅಂಗಡಿಯಲ್ಲಿ ಸಾಲವನ್ನು ಮಾಡಬೇಡ. ಊರ ಹೊಣೆಯನ್ನು ಹೊರಬೇಡ. ನಿಂದೆಗಳನ್ನೂ, ಪಾಪವನ್ನೂ ನಿನ್ನದೆಂದು ಹೊಣೆ ಹೊರಬೇಡ. ಮಗನನ್ನೂ, ಮಿತ್ರನನ್ನೂ, ಸತಿಯನ್ನೂ ಮರೆಯಬೇಡ. ನ್ಯಾಯದಲ್ಲಿ ಸತ್ಯವನ್ನು ಮರೆಯಬೇಡ. ಅಂಗನೆ, ವೃದ್ಧರು, ಪಕ್ಷಿಗಳು,ಗೋವು, ವಿಪ್ರರು ಮತ್ತು ಮಕ್ಕಳನ್ನು ಸೆರೆಯಲ್ಲಿಡಬೇಡ. ಒಡವೆಗಳನ್ನು ಸಾಲಕ್ಕೆ ಒತ್ತೆಯಿಟ್ಟು ಬಡ್ಡಿಯನ್ನು ತೆರಬೇಡ. ಹೀಗೆ ಮನುಷ್ಯನಿಗೆ ನೀತಿಯನ್ನು ಹೇಳಲಾಗಿದೆ.
ಪದ್ಯ 84
*ಕೊಡಬೇಕುತ್ತಮನಾದವಂಗೆ ಮಗಳಂ, ಸತ್ಪಾತ್ರದೊಳ್ ದಾನಮಂ, ಇಡಬೇಕೀಶ್ವರನಲ್ಲಿ ಭಕ್ತಿರಸಮಂ, ವಿಸ್ವಾಸಮಂ ಸ್ವಾಮಿಯೋ, ಳ್ಬಿಡಬೇಕೈ ಧನಲೋಭ, ಬಂಧುಜನರೊಳ್ದುಷ್ಟಾತ್ಮರೋಳ್ಗೋಷ್ಠಿಯಂ , ಇಡಬೇಕಿದ್ದುಣಬೇಕಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಮಗಳನ್ನು ಉತ್ತಮನಾದವನಿಗೆ ಕೊಡಬೇಕು. ದಾನವನ್ನು ಅರ್ಹತೆಯುಳ್ಳವರಿಗೆ ನೀಡಬೇಕು. ಈಶ್ವರನಲ್ಲಿ ಭಕ್ತಿಯನ್ನು ಇಡಬೇಕು. ಒಡೆಯನಲ್ಲಿ ವಿಶ್ವಾಸವನ್ನಿಡಬೇಕು. ಬಂಧು ಜನರಲ್ಲಿ ಹಣದ ಆಸೆಯನ್ನೂ ದುಷ್ಟರೊಂದಿಗೆ ಸಂಪರ್ಕವನ್ನೂ ಇಟ್ಟುಕೊಳ್ಳಬಾರದು. ತನಗೆ ದೇವರು ಕೊಟ್ಟದ್ದರಲ್ಲಿ ಇತರರಿಗೂ ಕೊಟ್ಟು ತಾನೂ ತಿನ್ನಬೇಕು. ಇದು ಉತ್ತಮವಾದ ನೀತಿಯು.
ಪದ್ಯ 85
*ಅಡಿಮೂರೀಯೆನಲೀಯನೇ ಬಲಿ ನೃಪಂ ಮೂಲೋಕಮಂ ? ದೇಹವಂ , ಕಡಿದೀಯೆಂದೆನೆ ಪಕ್ಕಿಗೀಯನೆ ನೃಪಂ ತನ್ನಂಗವಾದ್ಯಂತವಂ, ಮೃಡ ಬೇಕೆಂದೆನೆ ಸೀಳ್ದು ತನ್ನ ಸುತನಂ ನೈವೇದ್ಯಮಂ ಮಾಡನೇ ? , ಕೊಡುವರ್ಗಾವುದು ದೊಡ್ಡಿತೈ ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಹಿಂದೆ ಬಲಿ ಚಕ್ರವರ್ತಿಯು ವಾಮನನು ಮೂರಡಿ ನೆಲವನ್ನು ಬೇಡಿದಾಗ ಮೂರು ಲೋಕವನ್ನೇ ಕೊಟ್ಟನು. ಶಿಬಿ ಚಕ್ರವರ್ತಿಯು ಪಕ್ಷಿಯನ್ನು ಉಳಿಸಲು ತನ್ನ ದೇಹದ ಭಾಗಗಳನ್ನೇ ಕತ್ತರಿಸಿ ಕೊಟ್ಟನು. ಶಿವನು ಬೇಡಲು ಸಿರಿಯಾಳ ದಂಪತಿಗಳು ಮಗನನ್ನೇ ಕತ್ತರಿಸಿ ನೈವೇದ್ಯ ಮಾಡಿದರು. ಕೊಡಬೇಕು ಎನ್ನುವವರಿಗೆ ಯಾವುದೂ ದೊಡ್ಡದಲ್ಲ. ಕೊಡುವ ಮನಸ್ಸು ಮುಖ್ಯ ಅಷ್ಟೇ.
ವಿವರಣೆ: ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...
ಕಾಮೆಂಟ್‌ಗಳು