ಷಡಕ್ಷರದೇವ
ಷಡಕ್ಷರದೇವ
ಷಡಕ್ಷರದೇವರ ಕಾಲ ಸುಮಾರು ಕ್ರಿ.ಶ.1650. ಇವರ ಜನ್ಮಸ್ಥಳ ಮಳವಳ್ಳಿ ತಾಲೂಕಿನ ದನಗೂರು. ಸಂಸ್ಕೃತ ಹಾಗೂ ಕನ್ನಡದಲ್ಲಿ ಪಾಂಡಿತ್ಯ ಪಡೆದು, ರಾಜಗೌರವಕ್ಕೆ ಪಾತ್ರರಾಗಿದ್ದ ಈ ಕವಿ, ಯಳಂದೂರು ಮಠದ ಮಠಾಧಿಪತಿಯಾಗಿ, ಅಲ್ಲಿಯೆ ಸಮಾಧಿ ಪಡೆದರು. ಷಡಕ್ಷರದೇವರ ಅಲಂಕಾರ ಶೈಲಿ "ಉತ್ಪ್ರೆಕ್ಷೆ"ಗೆ ಪ್ರಸಿದ್ಧಿಯಾಗಿದೆ.
ತಮ್ಮ ಕೃತಿಗಳಲ್ಲಿ ಗುರುಪರಂಪರೆಯನ್ನು ವಿವರಿಸಿರುವ ಷಡಕ್ಷರದೇವರು, ಧನುಗೂರು ಮಠದ ಅಧಿಪತಿಯಾಗಿದ್ದ ರೇವಣಸಿದ್ಧರ ಶಿಷ್ಯ ಚಿಕ್ಕವೀರದೇಶಿಕನ ಕರಸಂಜಾತ ಎಂದು ಹೇಳಿಕೊಂಡಿದ್ದಾರೆ. ಇವರು ಎಳಂದೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಧನುಗೂರು ಮತ್ತು ಎಳಂದೂರು ಮಠಾಧಿಪತಿಗಳಾಗಿ ತಾವು ಗಳಿಸಿದ್ದ ಅಪಾರವಾದ ಪಾಂಡಿತ್ಯದಿಂದ ಪ್ರತಿಭಾಶಕ್ತಿ ಮತ್ತು ರಸಿಕತೆಗೆ ಪಾತ್ರವಾದ ಕಾವ್ಯಗಳನ್ನು ರಚಿಸಿ ರಾಜಗೌರವ ಪಡೆದಿದ್ದರು. ಕವಿಯು ಮೈಸೂರು ಅರಸ ಚಿಕ್ಕದೇವರಾಜ ಒಡೆಯರ ಮಿತ್ರ, ಸಲಹೆಗಾರರಾಗಿ ಅಲ್ಲದೆ ಹದಿನಾಡು ಶ್ರೀಮದ್ಭೂಪಾಲನ ಕುಲಗುರುವಾಗಿ ಕಂಡುಬರುತ್ತಾರೆ. ಇವರ ಕಾವ್ಯರಚನೆ ಮತ್ತು ವರ್ಣನಾ ಕೌಶಲ್ಯಗಳು ಸಮಕಾಲೀನ ಹಾಗೂ ಮುಂದಿನ ಕವಿಗಳ ಮೇಲೆ ಪ್ರಭಾವ ಬೀರಿವೆ. ಇವರು ’ಉಭಯಕವಿತಾ ವಿಶಾರದ’, ’ಸರಸಜನ ಮಾನಿತ’ ಇತ್ಯಾದಿ ಬಿರುದುಗಳನ್ನು ಪಡೆದಿದ್ದರು.
ಷಡಕ್ಷರದೇವರು ಸಂಸ್ಕೃತ ಭಾಷೆಯಲ್ಲಿ ಕವಿಕರ್ಣರಸಾಯನಮ್ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಕಾವ್ಯದಲ್ಲಿ ಸೌಂದರಚೋಳ ಮತ್ತು ಅವನ ರಾಣಿ ಕಲಾವತಿ ಇವರ ವಿಚಾರ ನಿರೂಪಿಸಲಾಗಿದೆ. ಇದರಲ್ಲಿ ಸುಕವಿ ಪ್ರತಿಪಾದನೆ, ದುಷ್ಕವಿನಿಂದಾ, ಕವಿಕಾವ್ಯವರ್ಣನೆ, ಕರಿಪುರದ ಚೋಲರಾಜನ ವಿಚಾರ, ಸಮುದ್ರ, ಮೇರುವರ್ಣನೆ, ಗಂಧರ್ವ ಮತ್ತು ಕಿನ್ನರಿಯರ ವಿಹಾರ ಇತ್ಯಾದಿಗಳು ವರ್ಣಿತವಾಗಿ ಇದರಲ್ಲಿ ಮಹಾಕಾವ್ಯದ ಲಕ್ಷಣಗಳು ಕಲಾತ್ಮಕವಾಗಿ ನಿರೂಪಿಸಲ್ಪಟ್ಟಿದೆ. ಈ ಕಾವ್ಯಕ್ಕೆ ವೆಂಗನಸುಧಿ ಎಂಬ ಪಂಡಿತರು ’ಸಾಹಿತ್ಯಸುಧೋದಯ’ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ 1975ರಲ್ಲಿ ವಿದ್ವಾನ್ ಎಂ.ಎಸ್.ಬಸವರಾಜಯ್ಯ ಎಂಬ ಪಂಡಿತರು ಉಪಲಭ್ಯವಿರುವ ಹಲವಾರು ಮಾತೃಕೆಗಳನ್ನು ಹಾಗೂ ಹಿಂದೆ ಪ್ರಕಟವಾಗಿದ್ದ ಕೆಲವು ಪ್ರತಿಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಹಾಗೂ ಸಂಶೋಧಿಸಿ ಹನ್ನೆರಡು ಸರ್ಗಗಳ ಈ ಮಹಾಕಾವ್ಯವನ್ನು ಪ್ರಕಟಿಸಿರುತ್ತಾರೆ. ಮೂಲಗ್ರಂಥದಲ್ಲಿ ಹತ್ತೊಂಬತ್ತು ಸರ್ಗಗಳಿದ್ದಿರಬಹುದೆಂದು ಪಂಡಿತರು ಊಹಿಸುತ್ತಾರೆ. ಪ್ರಕಟವಾಗಿರುವ ಈ ಗ್ರಂಥವು ಹನ್ನೆರಡನೇ ಸರ್ಗದಲ್ಲಿ ಅಪೂರ್ಣವಾಗಿ ಸಮಾಪ್ತಿಗೊಳ್ಳುತ್ತದೆ. ಇದರಲ್ಲಿ ಸುಮಾರು 1000 ಶ್ಲೋಕಗಳು ಲಭಿಸಿವೆ. ಇದರಲ್ಲಿ ಛಂದೋಬದ್ದವಾದ ಶ್ಲೋಕಗಳಿದ್ದು, ಲೊಕೋಕ್ತಿಗಳಿಂದ ಮತ್ತು ಹಲವಾರು ಅಪೂರ್ವತೆಯಿಂದ ಕೂಡಿವೆ. ಈ ಕಾವ್ಯದಲ್ಲಿ ವೆಂಗನಸುಧಿಯವರ ವ್ಯಾಖ್ಯಾನವೂ ಐದನೇ ಸರ್ಗದ 59ನೇ ಶ್ಲೋಕದವರೆಗೂ ದೊರಕಿದ್ದು, ಮುಂದಿನ ವ್ಯಾಖ್ಯಾನವು ಉಪಲಬ್ದವಾಗಿಲ್ಲ.
ಷಡಕ್ಷರದೇವರು ಶಿವಾಧಿಕ್ಯರತ್ನಾವಲೀ ಮತ್ತು ಭಕ್ತಾಧಿಕ್ಯರತ್ನಾವಲೀ ಲಘುಕಾವ್ಯಗಳನ್ನು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದು, ಅವುಗಳು ಸಿದ್ಧಾಂತ ಗ್ರಂಥಗಳೆಂದು ಪ್ರಸಿದ್ಧವಾಗಿವೆ. ಶಿವಾಧಿಕ್ಯರತ್ನಾವಲೀ ಕಾವ್ಯದಲ್ಲಿ 108 ಶ್ಲೋಕಗಳಿದ್ದು, ಶಿವನ ಆಧಿಕ್ಯವನ್ನು ಇದರಲ್ಲಿ ಪ್ರತಿಪಾದಿಸಲಾಗಿದೆ. ಕವಿಯು ವೇದ, ಆಗಮ, ಪುರಾಣಗಳ ಆಧಾರದ ಮೇಲೆ ಪೂರ್ವಾಚಾರ್ಯರ ಸಿದ್ಧಾಂತವನ್ನು ಅನುಸರಿಸಿದ್ದಾರೆ. ಈ ಕೃತಿಗೆ ಕನ್ನಡದಲ್ಲಿ ಮಹಾಂತ ಶಿವಯೋಗಿ ಎಂಬ ಪಂಡಿತರು ಪ್ರತಿಪದಟೀಕೆಯನ್ನು ಬರೆದಿದ್ದಾರೆ. ಇದನ್ನು ಪರಿಷ್ಕರಿಸಿ ಮೈಸೂರಿನ ಹೊಸಮಠದ ಶ್ರೀ ಬಸವಲಿಂಗ ಸ್ವಾಮಿಗಳು ಪ್ರಕಟಿಸಿದ್ದಾರೆ. ಭಕ್ತಾಧಿಕ್ಯರತ್ನಾವಲೀ ಕೃತಿಯಲ್ಲಿ 100 ಶ್ಲೋಕಗಳಿದ್ದು, ಶಿವಭಕ್ತಿಯ ಆಧಿಕ್ಯವನ್ನು ಹಾಗೂ ಶಿವಪಾರಮ್ಯವನ್ನು ಶೃತಿ, ಸ್ಮೃತಿ, ಆಗಮಾದಿ ಪ್ರಾಚೀನ ಗ್ರಂಥಗಳ ಆಧಾರದ ಮೇಲೆ ಕವಿಯು ಪ್ರತಿಪಾದಿಸಿದ್ದಾರೆ. ಈ ಕೃತಿಯನ್ನು ಕನ್ನಡದಲ್ಲಿ ‘ಭಕ್ತಾನಂದದಾಯಿನೀ‘ ಎಂಬ ತಾತ್ಪರ್ಯದೊಂದಿಗೆ ವಿ.ವಿ.ರುದ್ರಪ್ಪನವರು ಮೈಸೂರಿನಿಂದ ಪ್ರಕಟಿಸಿದ್ದಾರೆ.
ಶಿವಕವಿಯೆಂದು ಪ್ರಸಿದ್ಧಿ ಪಡೆದಿದ್ದ ಷಡಕ್ಷರದೇವರು ಶಿವನ ಹಾಗೂ ಶಿವಶರಣರ ಕುರಿತು ಹಲವಾರು ಸ್ತುತಿಗ್ರಂಥಗಳನ್ನು ರಚಿಸಿದ್ದಾರೆ. ಕವಿಯು ಶಿವಸ್ತವಮಂಜರೀ, ವೀರಭದ್ರದಂಡಕಮ್, ನಮಃಶಿವಾಯಾಷ್ಟಕಮ್, ವೀರಭದ್ರದ್ರೋದಾಹರಣಗದ್ಯಮ್, ಶಿವಸ್ತೋತ್ರಸುಮಂಗಲೀ, ಪಾದಪೂಜಾಸ್ತೋತ್ರಮ್, ಶಿವಮಾನಸಸ್ತೋತ್ರಮ್, ನೀಲಾಂಭಿಕಾಸ್ತೋತ್ರಮ್, ತತ್ವತ್ರಯಸ್ತೋತ್ರಮ್, ಷಡಕ್ಷರಮಂತ್ರಸ್ತೋತ್ರಮ್, ಬಸವಾಷ್ಟಕಮ್, ಇಷ್ಟಲಿಂಗಾಷ್ಟಕಮ್, ಮಂಗಲಾಷ್ಟಕಮ್, ಸಿದ್ದಲಿಂಗಸ್ತವನಮ್, ಇಷ್ಟಲಿಂಗಸ್ತವನಮ್ ಎಂಬ ಅನೇಕ ಸ್ತೋತ್ರಕಾವ್ಯಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ.
ಕವಿಯು ಕನ್ನಡದಲ್ಲಿ ರಚಿಸಿರುವ ರಾಜಶೇಖರವಿಳಾಸ, ವೃಷಭೇಂದ್ರವಿಜಯ ಮತ್ತು ಶಬರಶಂಕರವಿಳಾಸ ಎಂಬ ಕಾವ್ಯಗಳಲ್ಲಿ ಅನೇಕ ಸಂಸ್ಕೃತ ಶಬ್ದಗಳನ್ನು, ರಸಭಾವಗಳನ್ನು, ಪಾತ್ರಪೋಷಣೆಗಳನ್ನು, ಶೈಲಿ ಹಾಗೂ ವರ್ಣನೆಗಳನ್ನು ಸಹೃದಯರು ಮೆಚ್ಚುವಂತೆ ಲಕ್ಷಣಬದ್ದವಾಗಿ ರಚಿಸಿದ್ದಾರೆ.
ರಾಜಶೇಖರವಿಳಾಸ ಕಾವ್ಯದಲ್ಲಿ ಶಿವಭಕ್ತನೊಬ್ಬನ ಕಥೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ಬಸವ ಪುರಾಣಗಳಿಂದ ಪ್ರೇರಿತರಾಗಿ ಷಡಕ್ಷರದೇವರು ವೃಷಭೇಂದ್ರವಿಜಯವನ್ನು ಭಕ್ತಿರಸದಲ್ಲಿ ರಚಿಸಿದ್ದಾರೆ. ಇದರಲ್ಲಿ ಶ್ರೀ ಬಸವೇಶ್ವರರ ಚರಿತ್ರೆ ಮತ್ತು ಪವಾಡಗಳನ್ನು, ತಮಿಳುನಾಡಿನ 63 ಪುರಾತನರ ಹಾಗೂ ಶಿವಶರಣರ ಕಥೆಗಳನ್ನು, ವೀರಶೈವಧರ್ಮತತ್ತ್ವಗಳನ್ನು ನಿರೂಪಿಸಿದ್ದಾರೆ. ಸಂಸ್ಕೃತದ ಭಾರವಿಯ ಕಿರಾತಾರ್ಜುನೀಯದಂತೆ ಷಡಕ್ಷರದೇವರು ಕನ್ನಡದಲ್ಲಿ ಶಬರಶಂಕರವಿಳಾಸವನ್ನು ಶಿವಲೀಲೆಯ ಕಥೆಯೊಂದಿಗೆ ಬರೆದಿದ್ದಾರೆ.
shadaksharadeva
ಕಾಮೆಂಟ್‌ಗಳು