ವಿಜಯ್ ಅಮೃತರಾಜ್
ವಿಜಯ್ ಅಮೃತರಾಜ್
ವಿಜಯ್ ಅಮೃತರಾಜ್ ವೃತ್ತಿಪರ ಟೆನಿಸ್ ಕ್ರೀಡೆಯಲ್ಲಿ ಮಹತ್ವದ ಸಾಧನೆ ಮಾಡಿದ ಸಾಮರ್ಥ್ಯಶಾಲಿ. ಹಾಲಿವುಡ್ ಚಲನಚಿತ್ರಗಳಲಲ್ಲಿ ನಟನೆ, ಕ್ರೀಡಾ ನಿರೂಪಣೆ, ಬರಹ, ವ್ಯಾಪಾರ ನಿರ್ವಹಣೆ, ಸಮಾಜಮುಖಿ ಕಾರ್ಯ ಹೀಗೆ ಹಲವು ವಿಧದಲ್ಲಿ ಅವರದು ಯಶಸ್ವಿ ವ್ಯಕ್ತಿತ್ವ.
ವಿಜಯ್ ಅಮೃತರಾಜ್ 1953ರ ಡಿಸೆಂಬರ್ 14ರಂದು ಚೆನ್ನೈನಲ್ಲಿ ಜನಿಸಿದರು. ತಾಯಿ ಮ್ಯಾಗಿ ಧೈರ್ಯಂ. ತಂದೆ ರಾಬರ್ಟ್ ಅಮೃತರಾಜ್. ಇವರ ಸಹೋದರರಾದ ಆನಂದ್ ಅಮೃತರಾಜ್ ಮತ್ತು ಅಶೋಕ್ ಅಮೃತರಾಜ್ ಸಹಾ ಅಂತರರಾಷ್ಟ್ರೀಯ ಟೆನಿಸ್ನಲ್ಲಿ ಗಣನೀಯ ಸಾಧನೆ ಮಾಡಿದವರು. ಇವರ ಮಗ ಮತ್ತು ಸಹೋದರರ ಮಕ್ಕಳೂ ಸಹಾ.
ವಿಜಯ್ ಅಮೃತರಾಜ್ ಶಾಲಾಶಿಕ್ಷಣವನ್ನು ಚೆನ್ನೈನ ಎಗ್ಮೋರ್ ನಲ್ಲಿರುವ ಡಾನ್ ಬೋಸ್ಕೊ ಶಾಲೆಯಲ್ಲಿ ಮುಗಿಸಿ, ಲೊಯಲಾ ಕಾಲೇಜಿನಿಂದ ಪದವೀಧರರಾದರು.
ವಿಜಯ್ ಅಮೃತರಾಜ್ ಮತ್ತು ಆನಂದ್ ಅಮೃತರಾಜ್ ಸಹೋದರರು 1976ರಲ್ಲಿ ವಿಂಬಲ್ಡನ್ ಪುರುಷರ ಡಬ್ಬಲ್ಸ್. ಪಂದ್ಯಾವಳಿಯಲ್ಲಿ ಸೆಮಿಫೈನಲ್ಸ್ ತಲುಪಿದ ಸಾಧನೆ ಮಾಡಿದರು. ವಿಜಯ್ 1970ರಲ್ಲಿ ವಿಶ್ವವೃತ್ತಿಪರ ಚತುರ ಟೆನಿಸ್ ಪಟುಗಳ ಅಂಗಳವಾದ ಗ್ರಾಂಡ್ ಪ್ರಿಕ್ಸ್ ಟೆನಿಸ್ ಆಟಕ್ಕೆ ಅಡಿಯಿಟ್ಟರು. ವಿಜಯ್ 1973ರಲ್ಲಿ ಎರಡು ಗ್ರಾಂಡ್ ಸ್ಲಾಮ್ ಪಂದ್ಯಾವಳಿಗಳ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಸಾಧನೆ ಮಾಡಿದರು. ವಿಜಯ್ ಅಮೃತರಾಜ್ ತಮ್ಮ ಆಟದ ಮೋಡಿಯಲ್ಲಿ ಗ್ರಾಂಡ್ ಸ್ಲಾಮ್ ಪಂದ್ಯಾವಳಿಗಳಲ್ಲಿ ಶ್ರೇಷ್ಠ ಚಾಂಪಿಯನ್ನರುಗಳಾದ ರಾಡ್ ಲೇವರ್, ಜಾನ್ ಬೋರ್ಗ್, ಜಿಮ್ಮಿ ಕಾನರ್ಸ್, ಅಂತಹ ಘಟಾನುಘಟಿಗಳ ವಿರುದ್ಧ ಜಯಸಾಧಿಸಿದ್ದರು ಎಂಬುದು ಗಮನಾರ್ಹ. ಜಾನ್ ಮೆಕೆನ್ರೋವನ್ನು ಕೂಡ ವಿಜಯ್ ಅಮೃತರಾಜ್ ಸೋಲಿಸಿದ್ದರು. 1980ರಲ್ಲಿ ವಿಶ್ವಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿದ ಮಹತ್ವದ ಸಾಧನೆ ವಿಜಯ್ ಅವರದ್ದಾಗಿತ್ತು. ಹದಿನಾರು ಸಿಂಗಲ್ಸ್ ಮತ್ತು 13 ಡಬಲ್ಸ್ ವಿಶ್ವ ಟೂರ್ನಿಗಳನ್ನು ಗೆದ್ದ ಅಮೋಘ ಸಾಧನೆ ಅವರದ್ದು.
ವಿಜಯ್ ಅಮೃತರಾಜ್ ಹಾಲಿವುಡ್ ನಟನಾಗಿ ಮತ್ತು ಹಲವು ನಿರ್ಮಾಣಗಳಲ್ಲಿ ಸಹಾ ಪಾಲ್ಗೊಂಡವರು. 1983ರಲ್ಲಿ ಜೇಮ್ಸ್ ಬಾಂಡ್ ಚಿತ್ರವಾದ 'ಆಕ್ಟೋಪಸಿ'ಯಲ್ಲಿ ರೋಜರ್ ಮೂರ್ ಜೊತೆಗೆ ಗೆಳೆಯನಾಗಿ ಪ್ರಧಾನ ಪಾತ್ರವೊಂದರಲ್ಲಿ ಚುರುಕಾದ ಅಭಿನಯ ನೀಡಿ ವಿಶ್ವಜನಪ್ರಿಯತೆ ಗಳಿಸಿದರು. ಸ್ಟಾರ್ ಟ್ರೆಕ್ 4ರ 'ದ ವೋಯೇಜ್ ಹೋಮ್', ಎನ್ ಬಿ ಎಸ್ ಟಿವಿ ಸರಣಿಯ 'ದ ಲಾಸ್ಟ್ ಪ್ರೆಸಿಂಕ್ಟ್', 'ವಾಟ್ ಎ ಕಂಟ್ರಿ', 'ಹಾರ್ಟ್ ಟು ಹಾರ್ಟ್' ಮುಂತಾದ ಅನೇಕ ಪ್ರದರ್ಶನಗಳಲ್ಲಿ ಅಭಿನಯಿಸಿದ್ದರು. ವಿಶ್ವಸುಂದರಿ ಸ್ಪರ್ಧೆಗಳಲ್ಲಿ ಅವರು ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. 'ಡೈಮೆನ್ಷನ್ಸ್' ಎಂಬ ಸಿಎನ್‍ಎನ್ ಐಬಿನ್ ವಾಹಿನಿಯ ಪ್ರಸಿದ್ಧ 'ಟಾಕ್ ಶೋ'ದ ನಿರ್ವಾಹಕರಾಗಿದ್ದರು. ಹಲವು ವಹಿವಾಟುಗಳನ್ನು ಯಶಸ್ವಿಯಾಗಿ ನಡೆಸಿದ ಚತುರರೆಂದೂ ವಿಜಯ್ ಹೆಸರಾದವರು.
ವಿಜಯ್ ಅನೃತರಾಜ್ ಅವರಿಗೆ ಪದ್ಮಶ್ರೀ ಗೌರವ ಸಂದಿದೆ. ವಿಶ್ವಸಂಸ್ಥೆಯ ಶಾಂತಿ ರಾಯಭಾರಿಯಾಗಿ ಸಹಾ ಅವರು ಕೆಲಸಮಾಡಿದ್ದಾರೆ. ಅವರದೇ ವಿಜಯ್ ಅಮೃತರಾಜ್ ಫೌಂಡೇಶನ್ ಸಹಾ ಸ್ಥಾಪಿಸಿದ್ದಾರೆ.
On the birth day of great tennis player. Commentator and actor Vijay Amritraj
ಕಾಮೆಂಟ್‌ಗಳು