ಜಿ. ಗುರುಪ್ರಸನ್ನ
ಜಿ ಗುರುಪ್ರಸನ್ನ
ವಿದ್ವಾನ್ ಜಿ ಗುರುಪ್ರಸನ್ನ ಖಂಜಿರ ಕಲಾವಿದರಾಗಿ ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ.
ಡಿಸೆಂಬರ್ 24, ಗುರುಪ್ರಸನ್ನ ಅವರ ಜನ್ಮದಿನ. ತಂದೆ ಕೆ. ಗುಂಡಪ್ಪ. ತಾಯಿ ಲೀಲಾವತಿ. ಇವರದ್ದು ಸಂಗೀತ ರಸಿಕರ ಕುಟುಂಬ.
ಗುರು ಪ್ರಸನ್ನ ಅವರು ತಮ್ಮ 6 ನೇ ವಯಸ್ಸಿನಲ್ಲೇ ಶ್ರೀ ಅಯ್ಯನಾರ್ ಸಂಗೀತ ಕಾಲೇಜಿನ ವಿದ್ವಾಂಸರಾದ ಆರ್. ಸತ್ಯಕುಮಾರ್ ಅವರ ಮಾರ್ಗದರ್ಶನದಲ್ಲಿ ಮೃದಂಗವನ್ನು ಕಲಿಯಲು ಪ್ರಾರಂಭಿಸಿದರು. ಮುಂದೆ ಬಹುಮುಖ ತಾಳವಾದ್ಯ ಮಾಂತ್ರಿಕರಾದ ವಿದ್ವಾನ್ ಅನೂರ್ ಆರ್. ಅನಂತಕೃಷ್ಣ ಶರ್ಮಾ ಅವರಲ್ಲಿ ತಮ್ಮ ಕಲಿಕೆಯನ್ನು ಮುಂದುವರೆಸಿದರು. ಖಂಜಿರ ಮಾಂತ್ರಿಕ ವಿದ್ವಾನ್ ಜಿ. ಹರಿಶಂಕರ್ ಅವರ ವಾದನ ಶೈಲಿಯಿಂದ ಪ್ರೇರಿತರಾದ ಗುರುಪ್ರಸನ್ನ ಅವರು ವಿದ್ವಾನ್ ಜಿ. ಹರಿಶಂಕರ್ ಅವರ ಪ್ರಧಾನ ಶಿಷ್ಯರಾದ ವಿದ್ವಾನ್ ಶ್ರೀ ಸಿ.ಪಿ.ವ್ಯಾಸ ವಿಟ್ಠಲ ಅವರಲ್ಲಿ ಖಂಜಿರ ತರಬೇತಿ ಪಡೆದರು.
ಗುರುಪ್ರಸನ್ನ ಅವರು ಉನ್ನತದರ್ಜೆಯ ತಂತ್ರಜ್ಞರಾಗಿ ಪ್ರಸಿದ್ಧ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿನ ಅಧಿಕಾರಿಗಳಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ.
ಗುರುಪ್ರಸನ್ನ ಅವರು ಆಕಾಶವಾಣಿ ಮತ್ತು ದೂರದರ್ಶನದ 'ಎ' ದರ್ಜೆಯ ಕಲಾವಿದರಾಗಿದ್ದಾರೆ. ಅವರು ಸಾಂಪ್ರದಾಯಿಕ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಕಛೇರಿಗಳು, ಜುಗಲ್ಬಂದಿಯ ವಿಶಿಷ್ಟ ಸಂಗೀತ ವಾದ್ಯವೃಂದಗಳು ಮತ್ತು ತಾಳವಾದ್ಯ ಮೇಳಗಳಿಗಾಗಿ ಎಲ್ಲ ಪ್ರಸಿದ್ಧ ಸಂಗೀತಗಾರರು ಮತ್ತು ಅಂತರರಾಷ್ಟ್ರೀಯ ಕಲಾವಿದರೊಂದಿಗೆ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ಯುಎಸ್‍ಎ, ಯುಕೆ, ಫ್ರಾನ್ಸ್, ಬೆಲ್ಜಿಯಂ, ಇಟಲಿ, ಜರ್ಮನಿ, ಹಾಂಗ್ ಕಾಂಗ್, ಆಸ್ಟ್ರೇಲಿಯ, ಮಲೇಷ್ಯಾ, ಯುಎಇ ಒಳಗೊಂಡಂತೆ ಅನೇಕ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಗುರುಪ್ರಸನ್ನ ಅವರಿಗೆ ಶ್ರೀ ಕಂಚಿ ಕಾಮಕೋಟಿ ಪೀಠದ "ಆಸ್ಥಾನ ವಿದ್ವಾನ್", ಸಂಗೀತ ನಾಟಕ ಅಕಾಡೆಮಿಯಿಂದ "ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರ", "ಅನನ್ಯ ಯುವ ಪುರಸ್ಕಾರ", ಕರ್ನಾಟಕ ಗಾನಕಲಾಪರಿಷತ್ತಿನ ಗಾನಕಲಾಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಮಹತ್ವದ ಸಾಧಕರಾದ ವಿದ್ವಾನ್ ಗುರುಪ್ರಸನ್ನ ಅವರಿಗೆ ಜನ್ಮದಿನದ ಶುಭಹಾರೈಕೆಗಳು. ನಮಸ್ಕಾರ.
Happy birthday Khanjira Guruprasanna G
ಕಾಮೆಂಟ್‌ಗಳು