ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಫರೂಕ್ ಶೇಖ್


 ಫರೂಕ್ ಶೇಖ್


ಫರೂಕ್ ಶೇಖ್ ನಟರಾಗಿ, ಲೋಕೋಪಕಾರಿಯಾಗಿ ಮತ್ತು ದೂರದರ್ಶನ ನಿರೂಪಕರಾಗಿ ಹೆಸರಾಗಿದ್ದವರು. 

ಶೇಖ್ ಅವರು ಗುಜರಾತ್‌ನ ವಡೋದರದಿಂದ 90 ಕಿಮೀ ದೂರದಲ್ಲಿರುವ ಅಮ್ರೋಲಿ ಎಂಬ ಹಳ್ಳಿಯಲ್ಲಿ  1948ರ ಮಾರ್ಚ್ 25ರಂದು ಜನಿಸಿದರು. ತಾಯಿ ಫರೀದಾ. ತಂದೆ ಮುಸ್ತಫಾ ಶೇಖ್. ತಂದೆ ಮುಂಬೈನಲ್ಲಿ ವಕೀಲರಾಗಿದ್ದರು. ಜಮೀನ್ದಾರ್ ಕುಟುಂಬದಿಂದ ಬಂದ ಶೇಖ್, ಮುಂಬೈನ ನಾಗ್ಪಾಡಾದಲ್ಲಿ ಐಷಾರಾಮಿ ಪರಿಸರದಲ್ಲಿ ಬೆಳೆದರು. ತಮ್ಮ ತಂದೆ ತಾಯಂದಿರ ಐದು ಮಕ್ಕಳಲ್ಲಿ ಅವರು ಹಿರಿಯರಾಗಿದ್ದರು.

ಶೇಖ್ ಮುಂಬೈನ ಸೇಂಟ್ ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ,  ಸೇಂಟ್ ಕ್ಸೇವಿಯರ್ ಕಾಲೇಜಿನಿಂದ ಪದವಿ ಪಡೆದರು.  ಸಿದ್ಧಾರ್ಥ್ ಕಾಲೇಜ್ ಆಫ್ ಲಾದಲ್ಲಿ ಕಾನೂನು ಅಧ್ಯಯನ ಮಾಡಿದರು.  ಆದಾಗ್ಯೂ, ಅವರು ವಕೀಲಿ ವೃತ್ತಿಯನ್ನು ಕೈಗೊಳ್ಳದೆ,  ರಂಗಭೂಮಿಯನ್ನು ಆರಿಸಿಕೊಂಡರು.

ಸೇಂಟ್ ಕ್ಸೇವಿಯರ್‌ನಲ್ಲಿ ಶೇಖ್ ಅವರು ತಮ್ಮ ಭಾವಿ ಪತ್ನಿ ರೂಪಾ ಅವರನ್ನು ಭೇಟಿಯಾದರು. ಇಬ್ಬರೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು  ಒಂಬತ್ತು ವರ್ಷಗಳ ನಂತರ ವಿವಾಹವಾದರು.   ಈ ದಂಪತಿಗೆ ಸನಾ ಮತ್ತು ಶೈಸ್ತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಶೇಖ್ ಅವರು ರಂಗಭೂಮಿಯಲ್ಲಿನ ಇಫ್ತಾ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದರು.  ಸಾಗರ್ ಸರ್ಹಾದಿ ಅವರಂತಹ ಪ್ರಸಿದ್ಧ ನಿರ್ದೇಶಕರೊಂದಿಗೆ ನಾಟಕಗಳಲ್ಲಿ ಕೆಲಸ ಮಾಡಿದರು. 1973ರಲ್ಲಿ, ಶೇಖ್ ಕಾನೂನು ಶಾಲೆಯ ಅಂತಿಮ ವರ್ಷದಲ್ಲಿದ್ದಾಗ, ಎಂ. ಎಸ್.  ಸತ್ಯು ಅವರು, ತಮ್ಮ ಚೊಚ್ಚಲ ನಿರ್ದೇಶನದ 'ಗರಂ ಹವಾ'ಗಾಗಿ ಅವರನ್ನು ಸಂಪರ್ಕಿಸಿದರು. ಈ  ಚೊಚ್ಚಲ ಚಿತ್ರದ ಪೋಷಕ ಪಾತ್ರಕ್ಕೆ ಅವರು ಪಡೆದ ಸಂಭಾವನೆ ಕೇವಲ ರೂ. 750. ಅವರು ಮೊದಲು ರೇಡಿಯೊದಲ್ಲಿ ಕ್ವಿಜ್ ಮಾಸ್ಟರ್ ಆಗಿ ಮನ್ನಣೆ ಗಳಿಸಿದರು.  ಮುಂಬೈ ದೂರದರ್ಶನದ ಕಾರ್ಯಕ್ರಮಗಳಾದ ಯುವದರ್ಶನ್ ಮತ್ತು ಯಂಗ್ ವರ್ಲ್ಡ್‌ನಲ್ಲಿ ನಿರೂಪಕರಾಗಿ ಭಾಗವಹಿಸಿದ್ದುದು ಅವರನ್ನು ಮನೆಮಾತಾಗಿಸಿತ್ತು. 'ಗಮನ್' (1978) ಚಿತ್ರದಲ್ಲಿ ಶೇಖ್ ಟ್ಯಾಕ್ಸಿ ಡ್ರೈವರ್ ಆಗಿ ನಟಿಸಿದರು.

ಫಾರೂಕ್ ಶೇಖ್ ಅವರು 1973 ರಿಂದ 1993 ರವರೆಗೆ ಹಿಂದಿ ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ಮತ್ತು 1988 ಮತ್ತು 2002 ರ ನಡುವೆ ದೂರದರ್ಶನದಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದರು. 2008 ರಲ್ಲಿ ಚಲನಚಿತ್ರಗಳಲ್ಲಿನ ನಟನೆಗೆ ಮರಳಿದ ಅವರು 2013 ರಲ್ಲಿ ತಮ್ಮ  ಮರಣದವರೆಗೂ ಸಕ್ರಿಯರಾಗಿದ್ದರು. 

ಸತ್ಯಜಿತ್ ರೇ ಅವರ ಶತ್ರಂಜ್ ಕೆ ಖಿಲಾಡಿ (1977), ನೂರಿ (1979), ಚಶ್ಮೆ ಬದ್ದೂರ್ (1981), ಉಮ್ರಾವ್ ಜಾನ್ (1981), ಬಜಾರ್ (1982), ಸಾಥ್ ಸಾಥ್ (1982), ರಂಗ್ ಬಿರಂಗಿ (1982), ಕಿಸ್ಸಿ ಸೆ ನಾ ಕೆಹನಾ (1983), ಏಕ್ ಬಾರ್ ಚಲೇ ಆವೋ (1983), ಕಥಾ (1983), ಅಬ್ ಆಯೇಗಾ ಮಜಾ (1984), ಸಲ್ಮಾ (1985), ಫಾಸ್ಲೆ (1985), ಪೀಚಾ ಕರೋ (1986), ಬಿವಿ ಹೋ ತೋ ಐಸಿ (1988), ಮತ್ತು ಮಾಯಾ ಮೆಮ್ಸಾಬ್ (1993) ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದರು. ಅವರು ಸಾಗರ್ ಸರ್ಹಾದಿಯವರ ಲೋರಿ, ಕಲ್ಪನಾ ಲಜ್ಮಿಯವರ ಏಕ್ ಫಲ್ ಮತ್ತು ಮುಜಫರ್ ಅಲಿಯವರ ಅಂಜುಮನ್,  ತುಮ್ಹಾರಿ ಅಮೃತ ನಾಟಕಗಳಲ್ಲಿ ಅಭಿನಯಿಸಿದ್ದರು. ದೀಪ್ತಿ ನಾವಲ್ ಅವರೊಂದಿಗಿನ ಶೇಖ್ ಅವರ ಜೋಡಿ ಜನಪ್ರಿಯತೆ ಚಶ್ಮೆ ಬದ್ದೂರ್, ಕಥಾ, ಸಾಥ್ ಸಾಥ್, ಕಿಸ್ಸಿ ಸೆ ನಾ ಕೆಹನಾ, ರಂಗ್ ಬಿರಂಗಿ, ಏಕ್ ಬಾರ್ ಚಲೇ ಆವೋ, ಟೆಲ್ ಮಿ ಓಹ್ ಖುದಾ, ಫಾಸ್ಲೆ ಮತ್ತು ಲಿಸನ್ ಅಮಯ  ಎಂಬ ಒಂಭತ್ತು ಚಿತ್ರಗಳಲ್ಲಿ ಕಂಗೊಳಿಸಿತ್ತು.  ಇವರಿಬ್ಬರೂ ಟಿವಿ ಧಾರಾವಾಹಿ ಕಹಕಶನ್‌ನಲ್ಲಿ ಹಸರತ್ ಮೊಹಾನಿಯ ಸಂಚಿಕೆಯಲ್ಲಿಯೂ ಪ್ರಮುಖ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಶೇಖ್  ದೂರದರ್ಶನದಲ್ಲಿನ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳಲ್ಲಿಯೂ  ನಟಿಸಿದರು. ಫಿರೋಜ್ ಅಬ್ಬಾಸ್ ಖಾನ್ ನಿರ್ದೇಶಿಸಿದ ತುಮ್ಹಾರಿ ಅಮೃತಾ (1992)ದಲ್ಲಿ ಶಬಾನಾ ಅಜ್ಮಿ ಅವರೊಂದಿಗೆ ನಟಿಸಿದರು. ಜೀನಾ ಇಸಿ ಕಾ ನಾಮ್ ಹೈ (ಸೀಸನ್ 1) ಎಂಬ ಟಿವಿ ಶೋಅನ್ನು ಪ್ರಸ್ತುತಪಡಿಸಿದರು. 

ಶೇಖ್ ಅವರು 'ಲಾಹೋರ್‌' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟನಿಗಾಗಿ ಸಲ್ಲುವ 2010 ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದ್ದರು.

ಸಾರ್ವಜನಿಕ ಸೇವೆಯಲ್ಲಿಯೂ ನಿರತರಾಗಿದ್ದ ಶೇಖ್ ಯುನಿಸೆಫ್ ಪೋಲಿಯೊ ನಿರ್ಮೂಲನೆ ಕಾರ್ಯಕ್ರಮಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ಮುಂಬೈನಲ್ಲಿ 26/11 ಘಟನೆಯಲ್ಲಿನ ಸಂತ್ರಸ್ತ ಕುಟುಂಬಗಳಿಗೆ ಅಪಾರ ಸಹಾಯ ಮಾಡಿದ್ದರು.

ಫರೂಕ್ ಶೇಖ್ ಅವರು 2013ರ ಡಿಸೆಂಬರ್ 28ರಂದು ನಿಧನರಾದರು.


lovely actor, philanthropist and presenter Farookh Sheikh 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ