ಜಯಶ್ರೀ ರವಿಕುಮಾರ್
ಜಯಶ್ರೀ ರವಿಕುಮಾರ್
ಜಯಶ್ರೀ ಕರಕುಶಲ ಆಭರಣ ಕಲೆ, ರಂಗಾಭಿನಯಗಳಲ್ಲಿ ಬಲು ಚತುರೆಯಾಗಿ ಹೆಸರಾಗಿದ್ದಾರೆ.
ಜಯಶ್ರೀ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಹುಚ್ಚೇಗೌಡರು. ತಾಯಿ ಗಾಯತ್ರಿ. ಪತಿ ಎo. ರವಿಕುಮಾರ್. ಪ್ರಸಕ್ತದಲ್ಲಿ ಇವರ ವಾಸ ಮೈಸೂರಿನಲ್ಲಿ. ಓದು ಇವರ ನೆಚ್ಚಿನ ಹವ್ಯಾಸ ಮತ್ತು ಸಂಗೀತ ಕೇಳುವುದು ಇವರಿಗೆ ಬಲು ಇಷ್ಟ.
"ಕಲೆಗಳಿಂದ ಮಾತ್ರವೇ ಸರ್ವತೋಮುಖ ಬೆಳವಣಿಗೆ ಸಾಧ್ಯ" ಎಂದು ಭಾವಿಸಿರುವ ಜಯಶ್ರೀ ಅವರು ತಮ್ಮ ಮಕ್ಕಳಿಗೆ ಭರತನಾಟ್ಯ, ನಾಟಕ, ಯಕ್ಷಗಾನ, ಸಂಗೀತ, ಕರಾಟೆ ಹೀಗೆ ಹಲವು ರಂಗಗಳಲ್ಲಿ ಕಲಿಕೆಯ ಅವಕಾಶ ಮಾಡಿಕೊಟ್ಟರು. ತಮ್ಮ ಮಕ್ಕಳು ಕಲಿಯುವ ಕಡೆ, ಪೋಷಕರಿಗೂ ಅವಕಾಶ ಇದ್ದುದರಿಂದ, ಇವರೂ ಆಸಕ್ತಿಯಿಂದ ಆ ತರಗತಿಗಳಿಗೆ ಸೇರಿಕೊಂಡರು. ಹಲವು ವರುಷಗಳ ಹಿಂದೆ ಜಯಶ್ರೀ ಅವರ ಮಕ್ಕಳು ಅರಿವು ಶಾಲೆಗೆ ಹೋಗುತ್ತಿದ್ದರು. ಅಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಪೋಷಕರು ಮಾತ್ರ ಭಾಗವಹಿಸಬೇಕಿತ್ತು. ಆಗ ಜಯಶ್ರೀ ಅವರು ಅಲ್ಲಿ ನಾಟಕ ಮತ್ತು ಕಂಸಾಳೆ ಕಲಿತು ಪ್ರದರ್ಶನ ಕೊಟ್ಟರು. (ಮುಂದೆ ಮಕ್ಕಳು ಬೇರೆ ಶಾಲೆಗೆ ಕಲಿಯಲು ಬಂದರು.)
ಜಯಶ್ರೀ ಅವರಿಗೆ ಕಂಸಾಳೆ ತಂಡದಲ್ಲಿ ಸರಳ ಎಂಬ ಗೆಳತಿಯಿಂದ 'ಉರಿಯ ಉಯ್ಯಾಲೆ' ಎಂಬ ನಾಟಕಕ್ಕೆ ಆಹ್ವಾನ ಬಂತು. ಅದು ಹಲವಾರು ಪ್ರದರ್ಶನಗಳನ್ನು ಕಂಡಿತು. ಆದರೆ ಕರೋನಾ ಕಾರಣದಿಂದ ಇವರ ಎಲ್ಲ ಚಟುವಟಿಕೆಗಳು ಸ್ತಬ್ಧವಾಯಿತು. ಮನೆಯಲ್ಲಿಯೇ ಕಲಿತು ಏನು ಮಾಡಬಹುದು ಎಂದು ಯೋಚಿಸುತ್ತಿದ್ದಾಗ, ಮಣ್ಣಿನ ಆಭರಣ ಕಲಿಕೆ ಬಗ್ಗೆ ಗೆಳತಿಯರ ಸ್ಟೇಟಸ್ ನೋಡಿ ನೀಲಿಯವರ ಬಳಿ ಸೇರಿಕೊಂಡರು. ಅಲ್ಲಿಂದ ಜಯಶ್ರೀ ಉದ್ಯಮಿಯಾಗಿ ತಮ್ಮನ್ನು ಗುರುತಿಸಿಕೊಂಡರು. ಮನೆಗೆ ಆರ್ಥಿಕವಾಗಿ ಆಧಾರವಾಗಬೇಕು ಎಂಬ ಮನದಾಳದ ಅವರ ಆಸೆ ಈ ರೀತಿ ಕೈಗೂಡಿತು.
ಇಂದು ಜಯಶ್ರೀ ಅವರು ಮಣ್ಣಿನ ಆಭರಣಗಳ ವಿನ್ಯಾಸಕಿಯಾಗಿ, ಉದ್ಯಮಿಯಾಗಿ ಮುಂದುವರಿಯುತ್ತಿದ್ದಾರೆ. ಯಾವುದೇ ಫಲಾಪೇಕ್ಷೆಗಳಿಲ್ಲದೆ ಇವರು ಕಲಿತ ವಿದ್ಯೆಗಳು ಮುಂದೆ ಇವರಿಗೆ ಆತ್ಮವಿಶ್ವಾಸ ನೀಡಿದೆ. ಮನೆಯವರ ಸಹಕಾರದಿಂದ ಇವರು ಕಲಿಕೆಯ ಜೊತೆಗೆ ಉದ್ಯಮಿಯಾಗಿದ್ದಾರೆ. ಮೈಸೂರು ಅಕಾಶವಾಣಿ, ಸರಗೂರಿನ ಜನಧ್ವನಿ ಸಮುದಾಯ ಬಾನುಲಿ ಕೇಂದ್ರಗಳಲ್ಲಿ ಇವರ ಸಂದರ್ಶನಗಳು ಮೂಡಿಬಂದಿದೆ.
ಜಯಶ್ರೀ ಅವರಿಗೆ, ಫೇಸ್ಬುಕ್ನಲ್ಲಿರುವ ಧೃತಿ ಮಹಿಳಾ ಮಾರುಕಟ್ಟೆಯು, ಮಣ್ಣಿನ ಆಭರಣಗಳನ್ನು ಖರೀದಿಸುವ ಸಂತೃಪ್ತ ಗ್ರಾಹರನ್ನು ನೀಡಿದೆ. ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಇವರ ಉದ್ಯಮ ಕಳೆದ ಸುಮಾರು ಮೂರ್ನಾಲ್ಕು ವರ್ಷದಿಂದ ನಡೆಯುತ್ತಿದೆ.
ಗೃಹಿಣಿಯಾಗಿ ಮಾತ್ರ ಗುರುತಿಸಿಕೊಂಡಿದ್ದ ಜಯಶ್ರೀ ಇಂದು ಕಲಾವಿದೆಯಾಗಿ ಮತ್ತು ಉದ್ಯಮಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ತಾವು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೂ ತಲುಪಿಸಬೇಕು ಮತ್ತು ತಾವು ಕಲಿಯುವಾಗ ಆದ ಪ್ರಮಾದಗಳು ಅವರೂ ಮಾಡದೇ, ಸುಲಭವಾಗಿ ಕಲಿಯುವಂತೆ ಮಾಡಲು ಆನ್‌ಲೈನ್ ಮೂಲಕ ಮಣ್ಣಿನ ಆಭರಣ ಕಲಿಕೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಜಯಶ್ರೀ ಅವರು ಪ್ರತಿ ಬಾರಿಯೂ ವೇದಿಕೆಯ ಮೇಲೆ ಇದ್ದಾಗ ಮನೆಯವರ ಚಪ್ಪಾಳೆ ತಟ್ಟಿ ಖುಷಿ ಪಟ್ಟಾಗ ಸಾರ್ಥಕ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. "ನಮ್ಮಲ್ಲಿ ಆನಂದವಿದ್ದಾಗ ಮನೆ, ಮಕ್ಕಳು, ಸಮಾಜದಲ್ಲಿ ಆರೋಗ್ಯಕರ ವಾತಾವರಣ ಇರುತ್ತದೆ. ವಯಸ್ಸು ಎಂಬುದು ಸಂಖ್ಯೆ ಮಾತ್ರ. ನಮ್ಮಲ್ಲಿ ಕಲಿಯುವ ಆಸಕ್ತಿ, ಬದ್ದತೆ ಇದ್ದರೆ ಸಾಕು ಅವಕಾಶಗಳ ಬಾಗಿಲು ಸದಾ ತೆರೆದಿರುತ್ತದೆ ಎಂಬ ಸದಾಶಯ ನನ್ನದು" ಎಂಬುದು ಅವರ ಹೃದಯಾದಾಳದ ಮಾತು.
ಜಯಶ್ರೀ ಅವರ ಹಸನ್ಮುಖ, ಅವರ ಕರಕುಶಲ ಆಭರಣಗಳ ಚಿತ್ರಗಳಲ್ಲಿರುವ ಜೀವ ಕಳೆ, ಅವರ ಹಾಡುಗಳ ಜೊತೆಗೆ ತಮ್ಮ ಹಾವಭಾವಗಳನ್ನು ಬೆರೆಸುವ ವರ್ಚಸ್ಸು, ತುಂಬಾ ಆಪ್ತವಾಗಿ ಮನಸೆಳೆಯುತ್ತದೆ
ಆತ್ಮೀಯರಾದ ಜಯಶ್ರೀ ಅವರಿಗೆ ಹುಟ್ಟುಹಬ್ಬದ ಶುಭಹಾರೈಸುತ್ತ, ಅವರ ಸಮಸ್ತ ಕುಟುಂಬದ ಬದುಕಿನ ಪಯಣ ಸುಮಧುರವಾಗಿರಲಿ ಎಂದು ಆಶಿಸೋಣ.
Jayashree and Ravikumar
Happy Birthday Jayashri Terracotta Jewellery 🌷🌷🌷
ಕಾಮೆಂಟ್‌ಗಳು