ಸುರಹೊನ್ನೆ
11 ವರುಷ ಪೂರೈಸಿದ “ಸುರಹೊನ್ನೆ"
Great 11 year of www.surahonne.com
by Hema Mala which created abundant emerging talents
"ಸುರಹೊನ್ನೆ" ಎಂಬುದು ಸುಗಂಧಭರಿತ ಕಾಡುಹೂವು. ನಾವೀಗ ನಮ್ಮ ಅಂತರಜಾಲದಲ್ಲಿ, ಕಳೆದ ಹನ್ನೊಂದು ವರ್ಷದಿಂದ ಕನ್ನಡದ ಕಂಪುಬೀರುತ್ತಿರುವ 'ಸುರಹೊನ್ನೆ' ಜಾಲತಾಣವಾದ www.surahonne.com ಸುಂದರಹೂವಿನ ಬಗ್ಗೆ ಮಾತನಾಡುತ್ತಿದ್ದೇವೆ.
ಈ ಜಾಲತಾಣವನ್ನು ನಿರ್ಮಿಸಿದ ಸೃಜನಶೀಲ ಸೃಷ್ಟಿಕರ್ತೆ, ಪ್ರಸ್ತುತ ಮೈಸೂರಿನ ನಿವಾಸಿ, ಬರಹಗಾರ್ತಿ, ಹಲವು ಅಭಿರುಚಿಗಳ ಸಂಗಮರಾದ ಹೃದಯವಂತೆ ಬಿ. ಹೇಮಮಾಲಾ ಅವರು.
ಮೂಲತ: ಕೇರಳದ ಕಾಸರಗೋಡು ಜಿಲ್ಲೆಯ ಗಡಿನಾಡಿನವರಾದ ಹೇಮಮಾಲಾ, ದಕ್ಷಿಣ ಕನ್ನಡಜಿಲ್ಲೆಯಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ, ಉದ್ಯೋಗ ಮತ್ತು ಕೌಟುಂಬಿಕ ಜೀವನಕ್ಕೆ 1990ರಲ್ಲಿ ಮೈಸೂರಿಗೆ ಬಂದರು. ಜರ್ಮನಿ ಮೂಲದ ಬಹುರಾಷ್ತ್ರೀಯ ಉತ್ಪಾದನಾ ಸಂಸ್ಥೆಯಲ್ಲಿ 25ವರ್ಷ ಕೆಲಸ ಮಾಡಿದ ಇವರು, ಸ್ವಯಂ ನಿವೃತ್ತಿ ತೆಗೆದುಕೊಂಡು, ಮುಂದೆ ಪ್ರವೃತ್ತಿಗಳಿಗೆ ಗಮನ ಕೊಡುತ್ತ ಬಂದಿದ್ದಾರೆ.
ಮಾಲಾ ಅವರಿಗೆ ಬರಹ, ಪ್ರಯಾಣ, ಪ್ರವಾಸ, ಚಾರಣ ಇವೆಲ್ಲವುಗಳಲ್ಲಿ ಅಪಾರ ಆಸಕ್ತಿ. 'ಮಾಲಾ-ಅಯನ' ಎಂಬ ಹೆಸರಿನ ಬ್ಲಾಗ್ ತೆರೆದು ತಮ್ಮೆಲ್ಲ ಆಸಕ್ತಿಗಳಿಗೆ ಅಭಿವ್ಯಕ್ತಿ ತುಂಬುತ್ತಿದ್ದ ಹೇಮಮಾಲಾ ಆವರಿಗೆ ಇದೇಕೆ ಸೀಮಿತ ಪರಿಧಿಯ ಗೂಡಾಗಬೇಕು, ಇದನ್ನು ಬಹು
ಅಭಿವ್ಯಕ್ತಿಗಳ ಬಯಲಾಗಿಸಿದರೆ ಚೆನ್ನ ಎನಿಸಿ ‘ಸುರಹೊನ್ನೆ' ಎಂಬ ಬ್ಲಾಗ್ ನಿರ್ಮಿಸಿ, ಬರೆಯುವವರಿಗೆಲ್ಲ ಈ ಬ್ಲಾಗಿನ ಬಾಗಿಲು ತೆರೆದರು.
ಪ್ರತಿಭಾವಂತರ ಪರಿಚಯ ನೀಡುವ ಆಸಕ್ತಿ ಉಳ್ಳ ನನಗೆ ನನ್ನ 'ಕನ್ನಡ ಸಂಪದ' ಮತ್ತು 'ಸಂಸ್ಕೃತಿ ಸಲ್ಲಾಪ'ಕ್ಕಾಗಿ ಸಂವಹನ ನಡೆಸಿದ ಹಲವಾರು ಮಂದಿ, ಕೃತಜ್ಞತಾಪೂರ್ವಕವಾಗಿ ತಮ್ಮ ಬರಹದ ಪ್ರಾರಂಭಿಕ ನೆಲೆಯನ್ನು ಸ್ಮರಿಸಿದ್ದು 'ಸುರಹೊನ್ನೆ' ಎಂದು. ಹೀಗೆ 'ಸುರಹೊನ್ನೆ' ಹೊಸಬರು, ಹಳಬರು ಎಂಬ ಭೇದವಿಲ್ಲದೆ ಬಹುಮುಖಿ ಬರಹಗಾರರಿಗೆ ನೆಲೆನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬಿದೆ. ಹೀಗೆ ಅನೇಕ ನವಬರಹಗಾರರು / ನವಬರಹಗಾರ್ತಿಯರ ಪಡೆಯನ್ನು ಸೃಷ್ಟಿಸಿರುವ ಕನ್ನಡಲೋಕದ ಈ ಸುಗಂಧಪುಷ್ಪ ತನ್ನ 11 ವರ್ಷಗಳ ಯಶಸ್ವೀ ಪಯಣವನ್ನು ಪೂರೈಸಿದೆ. ಇಲ್ಲಿ ಮೂಡಿಬಂದಿರುವ ನವ್ಯಬರಹಗಾರರು 250ಕ್ಕೂ ಹೆಚ್ಚು. ಬೆಳಕು ಕಂಡಿರುವ ಬರಹಗಳು ಕಡೇಪಕ್ಷ ಹತ್ತು ಪಟ್ಟು ಎಂದುಕೊಂಡರೂ 3000 ಮೀರಿದ್ದು.
ಹೊಸ ಬರಹಗಾರರು ಬರೆದುದನ್ನು ಆದರದಿಂದ ಸ್ವೀಕರಿಸಿ, ಓದಿ, ಅರ್ಥೈಸಿ, ಅದಕ್ಕೊಂದು ವ್ಯವಸ್ಥಿತ ತಾಂತ್ರಿಕ ರೂಪ ಕೊಟ್ಟು, ಓದಲಿಕ್ಕನುಗೊಳಿಸಿ, ತೀಡಿ, ತಿದ್ದಿ, ಸೂಕ್ತ ಶೀರ್ಷಿಕೆ ಕೊಟ್ಟು ಪೋಸ್ಟಿಸುವುದು ಸಣ್ಣ ವಿಚಾರವಲ್ಲ. ಪರಿಶ್ರಮ ಬೇಡುವ ವಿಚಾರ. ಹೃದಯವಂತಿಕೆಯ ಪರಿಮಳವಿಲ್ಲದ ಮನ ಈ ಸೌರಭವನ್ನು ಹೊರಹೊಮ್ಮಿಸಲಾರದು. ಮಾಡುವುದನ್ನೆಲ್ಲ ನಿಃಸ್ವಾರ್ಥವಾಗಿ, ಪ್ರೀತಿಯಿಂದ, ಕಿಂಚಿತ್ತೂ ವ್ಯಾಪಾರೀ ಚಿಂತನೆಯಿಲ್ಲದೆ, ತಮ್ಮದೇನೂ ದೊಡ್ಡಸ್ಥಿಕೆ ಎಂಬುದಿಲ್ಲದೆ, ಸರಳ ಸಹೃದಯತೆಯಲ್ಲಿ ಹೊಸಬರನ್ನು ಸ್ವಾಗತಿಸಿ, ಹಳಬರನ್ನು ಗೌರವಿಸಿ, ಎಲ್ಲರ ಜೊತೆ ಸಂತಸ ಕಾಣುವ 'ಸುರಹೊನ್ನೆಯ' ಸುಗಂಧಭರಿತ ಹೂವಿನ ಹೃದಯವಾಗಿರುವ ಬಿ. ಹೇಮಮಾಲಾ ಅವರು ನೀಡಿರುವ ಕೊಡುಗೆ ಅಸಾಧಾರಣವಾದದ್ದು.
ಆತ್ಮೀಯ ಬಿ. ಹೇಮಮಾಲಾ ಅವರಿಗೆ 'ಸುರಹೊನ್ನೆ'ಯ ಅಮೂಲ್ಯ 11 ವರ್ಷಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಈ ಉದ್ಯಾನವನದಲ್ಲಿ ಅರಳಿರುವ ಪ್ರತಿಭಾವಂತ ಕುಸುಮಗಳಿಗೂ ಅಭಿನಂದನೀಯ ಮೆಚ್ಚುಗೆಗಳು. ನಿಮ್ಮಂತಹ ಹೃದಯಗಳ ಸಂತತಿ ಸಾವಿರವಾಗಲಿ. ನಿಮ್ಮಂತಹ ಸಹೃದಯ ಮನಗಳೇ ನಿಜ ಕನ್ನಡ ಕಸ್ತೂರಿಯ ಮತ್ತು ಸುರಹೊನ್ನೆಯ ದಿವ್ಯಪರಿಮಳ. ಈ ಪರಿಮಳವಿರುವವರೆಗೆ ನಮ್ಮ ಕನ್ನಡದ ಬೆಳಕು ಅಜರಾಮರ.
ಕಾಮೆಂಟ್‌ಗಳು