ಜಮುನಾ
ಜಮುನಾ
ಕನ್ನಡತಿ ಜಮುನಾ ಜನಪ್ರಿಯ ನಟಿ, ನಿರ್ದೇಶಕಿ ಮತ್ತು ರಾಜಕಾರಣಿ. ತೆಲುಗು, ತಮಿಳು, ಹಿಂದೀ, ಕನ್ನಡ ಭಾಷೆಗಳ ತಾರೆಯಾದ ಇವರ 'ಸಾಕ್ಷಾತ್ಕಾರ' ಚಿತ್ರದಲ್ಲಿನ ಚೆಲುವು-ಒಲವಂತೂ ಕನ್ನಡಿಗರಿಗೆ ಅವಿಸ್ಮರಣೀಯ. ಇವರು ಹಿಂದಿಯಲ್ಲಿನ ನಟನೆಗೂ ಫಿಲಂಫೇರ್ ಪ್ರಶಸ್ತಿ ಪಡೆದವರು.
ಜಮುನಾ 1936ರ ಆಗಸ್ಟ್ 30ರಂದು ಹಂಪಿಯಲ್ಲಿ ಜನಿಸಿದರು. ಅವರ ಮೂಲ ಹೆಸರು ಜನಾ ಬಾಯಿ. ತಂದೆ ನಿಪ್ಪಾಣಿ ಶ್ರೀನಿವಾಸ ರಾವ್. ತಾಯಿ ಕೌಸಲ್ಯಾದೇವಿ. ಅಂತರಜಾತೀಯ ವಿವಾಹವಾಗಿದ್ದ ಈ ದಂಪತಿಗಳ ಕುಟುಂಬದ ಮಾತೃ ಭಾಷೆ ಕನ್ನಡ. ಆಕೆಯ ತಂದೆ ಅರಿಶಿನ ಮತ್ತು ತಂಬಾಕು ವ್ಯಾಪಾರಿಯಾಗಿದ್ದರು. ಜಮುನಾ ಏಳು ವರ್ಷದವರಿದ್ದಾಗ ಅವರ ಕುಟುಂಬವು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದುಗ್ಗಿರಾಲಕ್ಕೆ ಸ್ಥಳಾಂತರಗೊಂಡಿತು. ನಟಿ ಸಾವಿತ್ರಿ ದುಗ್ಗಿರಾಲಾದಲ್ಲಿ ನಾಟಕ ಮಾಡುತ್ತಿದ್ದಾಗ, ಜಮುನಾ ಅವರ ಮನೆಯಲ್ಲಿಯೇ ತಂಗಿದ್ದರು. ನಂತರ ಸಾವಿತ್ರಿ ಜಮುನಾ ಅವರನ್ನು ಚಿತ್ರಗಳಲ್ಲಿ ನಟಿಸಲು ಪ್ರೇರಿಸಿದರು.
ಜಮುನಾ ಶಾಲೆಯಲ್ಲಿ ರಂಗ ಕಲಾವಿದೆ. ತಾಯಿ ಆಕೆಗೆ ಸಂಗೀತ ಮತ್ತು ಹಾರ್ಮೋನಿಯಂ ಕಲಿಸಿದರು. ಡಾ. ಗರಿಕಿಪತಿ ರಾಜಾ ರಾವ್ ಅವರು ಈಕೆಯ ರಂಗ ಪ್ರದರ್ಶನವನ್ನು ವೀಕ್ಷಿಸಿ, 1952ರಲ್ಲಿ ತಮ್ಮ 'ಪುಟ್ಟಿಲ್ಲು' ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರು. ಜಮುನಾ ಎಲ್. ವಿ. ಪ್ರಸಾದ್ ಅವರ 'ಮಿಸ್ಸಮ್ಮ' (1955) ಚಿತ್ರದ ಮೂಲಕ ಪ್ರಸಿದ್ಧಿ ಪಡೆದರು. ಅವರು ಸುಮಾರು 200 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹಿಂದಿಯ 'ಮಿಲನ್' (1967) ಚಿತ್ರದಲ್ಲಿನ ಪೋಷಕ ಅಭಿನಯಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದರು.
ಕನ್ನಡದಲ್ಲಿ ಜಮುನಾ ಅವರು ಅಭಿನಯಿಸಿದ ಚಿತ್ರಗಳಲ್ಲಿ ಆದರ್ಶ ಸತಿ, ತೆನಾಲಿ ರಾಮಕೃಷ್ಣ, ಭೂಕೈಲಾಸ, ರತ್ನಗಿರಿ ರಹಸ್ಯ, ಸಾಕ್ಷಾತ್ಕಾರ, ಮಾಯೆಯ ಮುಸುಕು, ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ ಮುಂತಾದವು ಸೇರಿವೆ.
ಜಮುನಾ ಅವರಿಗೆ ಹಿಂದಿಯಲ್ಲಿ ಸಂದ ಫಿಲಂಫೇರ್ ಪ್ರಶಸ್ತಿ ಅಲ್ಲದೆ, ದಕ್ಷಿಣ ಭಾರತದ ಹಲವು ಫಿಲ್ಮ್‌ಫೇರ್ ಪ್ರಶಸ್ತಿಗಳು, ತಮಿಳುನಾಡು ರಾಜ್ಯ ಚಲನಚಿತ್ರ ಗೌರವ ಪ್ರಶಸ್ತಿ , ಎಂಜಿಆರ್ ಪ್ರಶಸ್ತಿ,ಎನ್‍ಟಿಆರ್ ರಾಷ್ಟ್ರೀಯ ಪ್ರಶಸ್ತಿ, ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಜಮುನಾ ಅವರು 1989-1991 ಅವಧಿಯಲ್ಲಿ ಲೋಕಸಭೆಯಲ್ಲಿ ರಾಜಮಂಡ್ರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ತೆಲುಗು ಕಲಾವಿದರ ಸಂಘವನ್ನು ಸ್ಥಾಪಿಸಿದ ಜಮುನಾ ಆ ಮೂಲಕ ಕಳೆದ 3 ದಶಕಗಳಲ್ಲಿ ಸಮಾಜ ಸೇವೆಯನ್ನೂ ಮಾಡುತ್ತಿದ್ದರು.
ಜಮುನಾ ಅವರು 2023ರ ಜನವರಿ 27ರಂದು ಈ ಲೋಕವನ್ನಗಲಿದರು.
On Remembrance Day of Great actress Jamuna
ಕಾಮೆಂಟ್‌ಗಳು