ಅಬ್ದುಲ್ ರಶೀದ್
ಅಬ್ದುಲ್ ರಶೀದ್
ಅಬ್ದುಲ್ ರಶೀದ್ ಬಾನುಲಿಯ ಧ್ವನಿಯಾಗಿ, ಸಾಹಿತ್ಯಲೋಕದ ಬರೆಹಗಾರರಾಗಿ, ಸಾರ್ವಜನಿಕ ಲೋಕದಲ್ಲಿ ಪ್ರತಿಯೊಬ್ಬರಿಗೂ ಬೇಕಾದ ಆತ್ಮೀಯರಾಗಿ ಪ್ರಸಿದ್ಧರಾಗಿದ್ದಾರೆ. "ಕಥೆ, ರೇಡಿಯೋ, ಫೋಟೊ, ತಿರುಗಾಟ, ಕವಿತೆ, ಪ್ರೀತಿ, ಮುನಿಸು, ಒಟ್ರಾಶಿ ಬದುಕು" ಎಂದು ತಮ್ಮನ್ನು ಕಂಡುಕೊಳ್ಳುವ ಅವರ ಬದುಕಿನ ನೆಲೆ ಬಹು ವಿಶಾಲತೆ ಉಳ್ಳದ್ದು.
ಫೆಬ್ರುವರಿ 28, ಅಬ್ದುಲ್ ರಶೀದ್ ಅವರ ಜನ್ಮದಿನ. ಕೊಡಗು ಜಿಲ್ಲೆಯ ಸುಂಟಿಕೊಪ್ಪ ಅವರು ಜನಿಸಿದ ಊರು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂ.ಎ. ಗಳಿಸಿದರು.
ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾಗಿ ಅಬ್ದುಲ್ ರಶೀದ್ ಅವರ ವೃತ್ತಿ ಜೀವನ ಮಂಗಳೂರು, ಶಿಲ್ಲಾಂಗ್, ಗುಲ್ಬರ್ಗಾ, ಮಡಿಕೇರಿ, ಮೈಸೂರು ನಿಲಯಗಳಲ್ಲಿ ಸಾಗಿದೆ. ಅವರ ವೈವಿಧ್ಯಮಯ ಪ್ರಸಿದ್ಧ ರೇಡಿಯೋ ಕಾರ್ಯಕ್ರಮಗಳಲ್ಲಿ 'ಹಳ್ಳಿ ರೇಡಿಯೋ' ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಹತ್ವದ್ದು. ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದ ಕುಗ್ರಾಮಗಳಿಗೂ ಭೇಟಿ ನೀಡಿ, ಅಲ್ಲಿಂದಲೇ ನೇರ ಪ್ರಸಾರದ ಮೂಲಕ ಹಳ್ಳಿಗರ ಕಷ್ಟವನ್ನು ಅಧಿಕಾರಿಗಳಿಗೆ ಮುಟ್ಟಿಸುತ್ತ ಬಂದ ಅಪೂರ್ವ ಕಾರ್ಯಕ್ರಮವಿದು. ಸಾರ್ವಜನಿಕ ಪ್ರಸಿದ್ಧತೆಗಳ ಮಾನದಂಡದಿಂದ ಹೊರಗಿರುವ ಅನೇಕ ಮಹತ್ವದ ಸಾಧಕರನ್ನು ಕೂಡ ಸಂದರ್ಶಿಸಿ ಸಮಾಜಕ್ಕೆ ಅವರುಗಳ ನೆನಪು ತಂದುಕೊಡುವ ಮಹತ್ವದ ಕೆಲಸವನ್ನು ರಶೀದ್ ಮಾಡುತ್ತಿದ್ದಾರೆ. ಬಾನುಲಿಯಲ್ಲಿ ಅವರ ಮಧುರ ಕನ್ನಡ ಧ್ವನಿಯನ್ನು ಕೇಳುವುದೇ ಆನಂದ.
ಅಂತರಜಾಲ ಸಾಹಿತ್ಯ ಪತ್ರಿಕೆ 'ಕೆಂಡಸಂಪಿಗೆ'ಯ ಸಂಪಾದಕರಾದ ಅಬ್ದುಲ್ ರಶೀದ್ 'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' , ‘ಹೊತ್ತುಗೊತ್ತಿಲ್ಲದ ಕಥೆಗಳು' ಅಂತಹ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. 'ನನ್ನ ಪಾಡಿಗೆ ನಾನು' ಇವರ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಬಹಳಷ್ಟು ಕವಿತೆಗಳನ್ನು ಒಳಗೊಂಡಿರುವ ಸಂಕಲನ. ಶಿಲ್ಲಾಂಗ್‍ನಲ್ಲಿ ಆಕಾಶವಾಣಿಗಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಲಂಕೇಶ್ ಪತ್ರಿಕೆಗೆ ’ಶಿಲ್ಲಾಂಗ್ ನಿಂದ ಪತ್ರ’ ಬರೆಯುತ್ತಿದ್ದ ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ’ಕಾಲು ಚಕ್ರ’ ಎಂಬ ಅಂಕಣ ಬರೆಯುತ್ತಿದ್ದರು. ಇವರ 'ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ಮುಂತಾದ ಬಹುಮುಖಿ ಗದ್ಯಬರಹಗಳ ಸಂಕಲನಗಳು ಪ್ರಕಟಗೊಂಡಿವೆ. 'ಹೂವಿನ ಕೊಲ್ಲಿ' ಇವರ ಕಾದಂಬರಿ. 'ದ ಮೈಸೂರ್ ಪೋಸ್ಟ್' (The Mysore Post) ಎಂಬ ಇವರ ಬ್ಲಾಗ್ ಕೂಡ ಜನಪ್ರಿಯ. 'ಲಕ್ಷದ್ವೀಪ ಡೈರಿ' ಇವರ ಮತ್ತೊಂದು ಪ್ರಖ್ಯಾತ ಸರಣಿ ಬರಹ.
ಪ್ರಕೃತಿ ಪ್ರೀತಿ, ಛಾಯಾಗ್ರಹಣ, ಓದು, ತಿರುಗಾಟ, ಜನ ಸಂಪರ್ಕ ಹೀಗೆ ರಶೀದ್ ಅವರಿಗೆ ಎಲ್ಲ ಬದುಕಿನ ಸೌಂದರ್ಯತೆಗಳೂ ಬಲು ಆಪ್ತ.
ಅಬ್ದುಲ್ ರಶೀದ್ ಅವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣಮಹೋತ್ಸವ ವಿಶೇಷ ಪ್ರಶಸ್ತಿ, ವರ್ಧಮಾನಪ್ರಶಸ್ತಿ, ಶಿವಮೊಗ್ಗೆಯ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಅಬ್ದುಲ್ ರಶೀದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Abdul Rasheed Sir 🌷🙏🌷

ಕಾಮೆಂಟ್‌ಗಳು