ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮನೋಹರ ಪ್ರಸಾದ್


 ಮನೋಹರ ಪ್ರಸಾದ್ ಇನ್ನಿಲ್ಲ


ಮನೋಹರ ಪ್ರಸಾದ್ ಪತ್ರಕರ್ತರಾಗಿ, ಕಥೆಗಾರರಾಗಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾಗಿ, ಕಾರ್ಯಕ್ರಮ ನಿರೂಪಕರಾಗಿ …ಹೀಗೆ ಬಹುರೂಪಿಯಾಗಿ ಪ್ರಸಿದ್ಧರಾಗಿದ್ದವರು.

ಮೇ 15, ಮನೋಹರ ಪ್ರಸಾದ್ ಅವರ ಜನ್ಮದಿನವಾಗಿತ್ತು. ಕಾರ್ಕಳ ತಾಲೂಕಿನ ಕರುವಾಲು ಅವರು ಜನಿಸಿದ ಊರು. ‌ ಅವರು ಮಂಗಳೂರಿನಲ್ಲಿ ಕಾಲೇಜು ಶಿಕ್ಷಣವನ್ನು ಪೂರ್ತಿಗೊಳಿಸಿ ಪತ್ರಿಕಾ ವೃತ್ತಿ ಜೀವನವನ್ನು ಆರಂಭಿಸಿದರು. 

ಮನೋಹರ ಪ್ರಸಾದರು ಉದಯವಾಣಿಯ ಮಂಗಳೂರು ಕಚೇರಿಯಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ಮುಖ್ಯ ವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಹಾಗೂ ಸಹಾಯಕ ಸಂಪಾದಕರಾಗಿ 36 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿ ನಿವೃತ್ತರಾದವರು.  ಅವರು ತಮ್ಮ ವೃತ್ತಿ ಬದುಕಿನಲ್ಲಿ ತಮ್ಮ ಸುದ್ದಿ, ಲೇಖನ ಮತ್ತು ಸಾರ್ವಜನಿಕ ಸಂಪರ್ಕದ ಮೂಲಕ ಚಿರಪರಿಚಿತರಾಗಿ, ಜನರ ಅಪಾರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾದವರು. ಕರಾವಳಿ ಭಾಗದಲ್ಲಿ ತಮ್ಮ ಅಗಾಧ ಜ್ಞಾನ ಸಂಪನ್ನತೆಯ ಮೂಲಕ ನಡೆದಾಡುವ ವಿಶ್ವಕೋಶ ಎನಿಸಿದವರು.

ಮನೋಹರ ಪ್ರಸಾದ್  ಸೃಜನಶೀಲ ಬರೆಹಗಾರರಾಗಿ, ಅನೇಕ ಕಥೆ, ಕವನಗಳನ್ನು ಬರೆದಿದ್ದು ಹಲವಾರು ಕೃತಿ ಪ್ರಕಟಿಸಿದ್ದರು. ಕರ್ನಾಟಕ ಕರಾವಳಿಯ ಇತಿಹಾಸದ ಕುರಿತಾಗಿ 608 ಸಂಶೋಧನಾ ಲೇಖನಗಳನ್ನು ಬರೆದಿದ್ದರು. 

ಮನೋಹರ ಪ್ರಸಾದ್ ಅವರು ಬೊಗ್ಸಾಣೆ (ಕೊಂಕಣಿ), ಸೀತಾನದಿ (ಕನ್ನಡ), ದಬಕ್‌ ದಬಕ್‌ ಐಸಾ (ತುಳು), ಐಸ್‌ಕ್ರೀಂ (ತುಳು) ಮುಂತಾದ ಚಿತ್ರಗಳಲ್ಲಿ ಮತ್ತು ಹಲವು ಕಿರುತೆರೆಯ ಕಥಾನಕಗಳಲ್ಲಿ ನಟಿಸುವ ಮೂಲಕ ಬಹುಮುಖ ಪ್ರತಿಭೆಯನ್ನು ಅನಾವರಣ ಗೊಳಿಸಿದ್ದರು. ಅವರೊಬ್ಬ ಅತ್ಯುತ್ತಮ ಧ್ವನಿಯುಳ್ಳ ಕಾರ್ಯಕ್ರಮ ನಿರೂಪಕರಾಗಿದ್ದರು. 

ಮನೋಹರ ಪ್ರಸಾದ್ ತಮ್ಮ ಸಾಧನೆ ಹಾಗೂ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಗೌರವ ಪ್ರಶಸ್ತಿ, ಕರಾವಳಿ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್‌ ಅಮೃತೋತ್ಸವ ಪುರಸ್ಕಾರ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳಲ್ಲದೆ ಅನೇಕ ಅಂತಾರಾಷ್ಟ್ರೀಯ ಪುರಸ್ಕಾರಗಳಿಗೂ ಪಾತ್ರರಾಗಿದ್ದರು.   ಅವರ ಪತ್ರಿಕಾಲೋಕದ ಸಾಧನೆಗಳ ಕುರಿತಾದ ಭಾವ'ಚಿತ್ರ'ಯಾನ ಹಾಗೂ ಮನೋಭಿನಂದನ ಕೃತಿಗಳು ಸಹಾ ಬಿಡುಗಡೆಯಾಗಿ ಜನಪ್ರಿಯಗೊಂಡಿದ್ದವು.

ಪ್ರತಿ ವರ್ಷ ಅವರ ಹುಟ್ಟಿದ ಹಬ್ಬದ ಶುಭಾಶಯ ಬರೆದಾಗ ಪ್ರೀತಿಯಿಂದ ಪ್ರತಿಕ್ರಿಯಿಸುತ್ತಿದ್ದರು.  ತಮಗಿದ್ದ ಪ್ರತಿ ಸ್ನೇಹವನ್ನೂ ಆಪ್ತವಾಗಿ ಗಮನಿಸುತ್ತ, ಹಲವು ಬಾರಿ ತುಂಬ ಪೊಸೆಸಿವ್ ಅನ್ನುವಷ್ಟು ಹಚ್ಚಿಕೊಳ್ಳುವ  ಮನ ಅವರದಾಗಿತ್ತು ಎಂಬುದು ಅವರನ್ನು ಬಲ್ಲವರಿಗೆ ತಿಳಿದಿರುತ್ತದೆ.  

ಮನೋಹರ್ ಪ್ರಸಾದ್ 2024ರ ಮಾರ್ಚ್ 1ರಂದು ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಹಸನ್ಮುಖಿಯಾಗಿದ್ದ ಅವರ ಮಾತುಗಳನ್ನು ಕೇಳಿದ್ದ ನಮಗೆ ಅವರ ಸುಂದರ ವ್ಯಕ್ತಿತ್ವ ಕಣ್ಣಮುಂದೆಯೇ ಇರುವಂತಿದೆ.‍‍ ಅಗಲಿದ ಆತ್ಮೀಯ ಮನೋಹರ ವ್ಯಕ್ತಿತ್ವದ ಮನೋಹರ ಪ್ರಸಾದರ ನೆನಪು ಅವಿಸ್ಮರಣೀಯ.🌷🙏🌷

Manohar Prasad

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ