ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್ ಚಂದ್ರಿಕಾ


 ವಿದುಷಿ ಆರ್ ಚಂದ್ರಿಕಾ ನಮನ

Respects to departed soul great musician Vidushi R. Chandrika 🌷🙏🌷

ಮಹಾನ್ ಸಂಗೀತಗಾರ್ತಿ ವಿದುಷಿ ಆರ್.ಚಂದ್ರಿಕಾ ನಿಧನರಾಗಿದ್ದಾರೆ. ಅವರ ಗಾಯನದಲ್ಲಿನ ಮಾಧುರ್ಯ ಮತ್ತು ಸಾಹಿತ್ಯ ಉಚ್ಚಾರದ ಸುಸ್ಪಷ್ಟತೆಗಳು ಹೆಸರುವಾಸಿಯಾಗಿದ್ದವು. 

ಚಂದ್ರಿಕಾ ಚಿಕ್ಕಂದಿನಲ್ಲಿ ಹತ್ತು ವರ್ಷಗಳ ಕಾಲ ಚಿಂತಲಪಲ್ಲಿ ರಾಮಚಂದ್ರ ರಾಯರ ಶಿಷ್ಯೆಯಾಗಿದ್ದರು. ಮುಂದೆ ವಿದುಷಿ ನಾಗಮಣಿ ಶ್ರೀನಾಥ್ ಮತ್ತು ಮಹಾನ್ ಆರ್.ಕೆ.ಶ್ರೀಕಂಠನ್ ಅವರಿಂದ ಸಂಗೀತ ಕಲಿತರು. ಚಿಕ್ಕ ವಯಸ್ಸಿನಲ್ಲೇ ಕರ್ನಾಟಕ ಸಂಗೀತ ಕಲಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಕಾಲರ್‌ಶಿಪ್‌ಗಳನ್ನು ಗಳಿಸಿದ್ದರು. ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ಚಂದ್ರಿಕಾ ರ್‍ಯಾಂಕ್ ಪಡೆದಿದ್ದರು.

ಚಂದ್ರಿಕಾ ಅವರು ಎರಡು ಪದವಿಗಳನ್ನು ಗಳಿಸಿ,
ಆಕಾಶವಾಣಿಯ ನಿಲಯದ ಕಲಾ ಉದ್ಯೋಗಿಯಾಗಿ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಅವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ "ಟಾಪ್ ಗ್ರೇಡ್" ಕಲಾವಿದರಾಗಿದ್ದರು.

ಚಂದ್ರಿಕಾ 15 ನೇ ವಯಸ್ಸಿನಲ್ಲಿಯೇ ಸಂಗೀತ ಕಚೇರಿಗಳನ್ನು ನೀಡಲು ಪ್ರಾರಂಭಿಸಿದರು. ಮುಂದೆ ಭಾರತದಾದ್ಯಂತ ಮತ್ತು ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಕಚೇರಿ ನೀಡಿ ಹೆಸರಾಗಿದ್ದರು. ಪ್ರಸಿದ್ಧ ಸಂಸ್ಥೆಗಳಿಂದ ಬಿಡುಗಡೆಯಾದ ಅನೇಕ ಶ್ರವ್ಯ ಆಲ್ಬಮ್‍ಗಳಿಗೆ ಧ್ವನಿಯಾಗಿದ್ದರು. ಅವರ ಸಂಗೀತ ಕಚೇರಿಗಳು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಪ್ರಸಾರಗೊಂಡಿದ್ದವು. ಆಕಾಶವಾಣಿಯಲ್ಲಿನ ಅವರ ಸಂಗೀತ ಪಾಠಗಳೂ ಅವಿಸ್ಮರಣೀಯ. ಚಂದ್ರಿಕಾ ಅವರ ಸಂಗೀತ ಕಚೇರಿಗಳು ಹಿಂದೂ, ಡೆಕ್ಕನ್ ಹೆರಾಲ್ಡ್,  ಇಂಡಿಯನ್ ಎಕ್ಸ್‌ಪ್ರೆಸ್‌ ಸೇರಿದಂತೆ ಪ್ರಸಿದ್ಧ ನಿಯತಕಾಲಿಕಗಳಲ್ಲಿ ವಿಮರ್ಶಕರಿಂದ  ಪ್ರಶಂಸೆಗೆ ಪಾತ್ರವಾಗಿದ್ದವು.  ಅವರ ಹಾಡುಗಾರಿಕೆಯಲ್ಲಿನ  ಸುಲಲಿತ ಶೈಲಿ, ಸಾಹಿತ್ಯದಲ್ಲಿನ ಸುಸ್ಪಷ್ಟತೆ, ಧ್ವನಿಯಲ್ಲಿದ್ದ ಮೆರುಗುಗೊಳಿಸುವ ಮಾಧುರ್ಯ ಮುಂತಾದವು ಅವರನ್ನು ಭಾರತ ಮತ್ತು ವಿದೇಶಗಳಲ್ಲಿ ಹೆಸರುವಾಸಿಯಾಗಿಸಿದ್ದವು.  

ಅಗಲಿದ ಮಹಾನ್ ಕಲಾವಿದೆಗೆ ಭಕ್ತಿಯ ನಮನ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ