ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೆನ್ರಿ ವ್ಯಾಡ್ಸ್ವರ್ತ್ ಲಾಂಗ್‍ಫೆಲೊ


 ಹೆನ್ರಿ ವ್ಯಾಡ್ಸ್ವರ್ತ್ ಲಾಂಗ್‍ಫೆಲೊ 


ಹೆನ್ರಿ ವ್ಯಾಡ್ಸ್ವರ್ತ್ ಲಾಂಗ್‍ಫೆಲೊ ಇಂಗ್ಲಿಷ್ ಕಥನ ಗೀತೆಗಳಿಗಾಗಿ ಪ್ರಸಿದ್ಧನಾದ ಅಮೆರಿಕದ ಕವಿ. 

ವ್ಯಾಡ್ಸ್ವರ್ತ್ ಮೆಸಾಚುಸೆಟ್ಸಿನ ಭಾಗವಾಗಿದ್ದ ಪೋರ್ಟ್‍ಲೆಂಡ್‍ನಲ್ಲಿ 1807ರ ಫೆಬ್ರವರಿ 27ರಂದು ಜನಿಸಿದ. ಜಿಲ್ವ್ ವ್ಯಾಡ್ಸ್ವರ್ತ್ ಈತನ ತಾಯಿ. ತಂದೆ ಸ್ಟೀಫನ್ ಲಾಂಗ್‍ಫೆಲೊ ವಕೀಲನಾಗಿದ್ದ. ಸಮುದ್ರತೀರದ ಪಟ್ಟಣದಲ್ಲಿ ಬೆಳೆದದ್ದರಿಂದ ಸಮುದ್ರದ ಬಗೆಗೆ ಸೆಳೆತ, ಈ ಸೆಳತದ ಪ್ರಭಾವ ಇವನ ಒಟ್ಟು ಸಾಹಿತ್ಯದಲ್ಲಿ ಪ್ರತಿಬಿಂಬಿತವಾಯಿತು. ಬ್ರನ್ಸ್'ವಿರ್ಕ್ ಬೊಡ್ವಾನ್ ಕಾಲೇಜಿನಲ್ಲಿ ಓದಿದ. ಮುಂದೆ ಪ್ರಸಿದ್ಧ ಲೇಖಕನಾದ ನಾಥೇನಿಯಲ್ ಹಾಥರ್ನ್ ಆಗ ಇವನ ಸಹಪಾಠಿಯಾಗಿದ್ದ. 

ವ್ಯಾಡ್ಸ್ವರ್ತ್ ಆಧುನಿಕ ಭಾಷೆಗಳ ಬಗ್ಗೆ, ಜರ್ಮನ್ ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿದ. ಅನಂತರ ಹಾರ್ವರ್ಡ್ ನಲ್ಲಿ ದೀರ್ಘಕಾಲ ಪ್ರಾಧ್ಯಾಪಕನಾಗಿದ್ದ (1837-54). ಈ ಕಾಲದ ಬೌದ್ಧಿಕ ಜೀವನದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ. ಇವನ ಮೊದಲನೆಯ ಕವನ ಸಂಗ್ರಹ ವಾಯ್‍ಸಸ್ ಆಫ್ ದಿ ನೈಟ್ 1839ರಲ್ಲಿ ಪ್ರಕಟವಾಯಿತು, ಕೊನೆಯದು ಇನ್ ದಿ ಹಾರ್‍ಬರ್ 1882ರಲ್ಲಿ ಪ್ರಕಟವಾಯಿತು. ಕಾವ್ಯ ರಚನೆಯ ಈ ದೀರ್ಘ ಅವಧಿಯಲ್ಲಿ ಎ ಸಾಮ್ ಆಫ್ ಲೈಫ್ ಎಕ್‍ಸೆಲ್‍ಸಿಯರ್ ಮತ್ತು ದಿ ವಿಲೇಜ್ ಬ್ಲ್ಯಾಕ್‍ಸ್ಮಿತ್-ಇಂಥ ಪ್ರಸಿದ್ಧ ಹ್ರಸ್ವ ಕವನಗಳನ್ನೂ (1855), ಬ್ಯಾಲೆಡ್ಸ್ ಅಂಡ್ ಅದರ್ ಪೊಯೆಮ್ಸ್ (1841), ದಿ ಸಾಂಗ್ ಆಫ್ ಹಯವತ ಇವಾಂಜೆಲಿನ್ (1847) ಮತ್ತು ಟೇಲ್ಸ್ ಆಫ್ ಎ ವೇಸೈಡ್ ಇನ್ (1863, 1872, 1873) ಇಂಥ ಕಥನಕವನಗಳನ್ನೂ ರಚಿಸಿದ. 

ವ್ಯಾಡ್ಸ್ವರ್ತ್ ಶಿಕ್ಷಕನಾಗಿ, ಕವಿಯಾಗಿ, ಭಾಷಾಂತರಕಾರನಾಗಿ ಮತ್ತು ಸಂಪಾದಕನಾಗಿ, ಬಹುಕಾಲದ ಬೌದ್ಧಿಕ ಪ್ರತ್ಯೇಕತೆಯ ಅನಂತರ ಮತ್ತೆ ಅಮೆರಿಕವನ್ನು ಯುರೋಪಿನ ಸಂಸ್ಕೃತಿಯ ಮುಖ್ಯ ವಾಹಿನಿಗಳ ಬಳಿಗೆ ಕೊಂಡೊಯ್ದ ಸಾಹಿತಿ ಎಂಬ ಕಾರಣಕ್ಕಾಗಿ ಚಾರಿತ್ರಿಕವಾಗಿ ಗಣ್ಯನಾಗಿದ್ದಾನೆ.  1842ರಲ್ಲಿ ಈತ ಅಮೆರಿಕದಲ್ಲಿ ಡಿಕನ್ಸ್‍ನನ್ನು ಭೇಟಿಯಾಗಿದ್ದ; ಅದೇ ವರ್ಷ ಮತ್ತೆ ಲಂಡನ್‍ನಲ್ಲಿ ಭೇಟಿಯಾದ. ಅಲ್ಲಿಂದ ಮರಳಿ ಇವನು ಅಮೆರಿಕಕ್ಕೆ ಬರುವಾಗ ಪೊಯೆಮ್ಸ್ ಆನ್ ಸ್ಲೇವರಿ (1842) ರಚಿಸಿದ. 1843ರ ಹೊತ್ತಿಗೆ ಅಮೆರಿಕದಲ್ಲೇ ಅತ್ಯಂತ ಸುಪ್ರಸಿದ್ಧನಾದ ಕವಿಯಾಗಿ ಇವನು ಜನರ ಗಮನ ಸೆಳೆದಿದ್ದ. ಆ ತರುವಾಯ ಪ್ರಕಟವಾದ ಕಾವ್ಯಸಂಗ್ರಹಗಳು ಇವನ ಪ್ರಸಿದ್ಧಿಯನ್ನು ಹೆಚ್ಚಿಸಿದವು ಮತ್ತು ಇಂಗ್ಲಿಷ್ ಭಾಷೆ ಮಾತನಾಡುವ ಪ್ರಪಂಚದಲ್ಲಿ ಟೆನಿಸನ್ ಬಿಟ್ಟರೆ ಇವನೇ ಎನ್ನುವಷ್ಟು ಇವನ ಖ್ಯಾತಿ ಪ್ರಸರಿಸಿತು. 1863 ಮತ್ತು 1872ರಲ್ಲಿ ಟೇಲ್ಸ್ ಆಫ್ ವೇಸೈಡ್ ಇನ್ ಎಂಬ ಗ್ರಂಥವನ್ನು ಪ್ರಕಟಿಸಿದ. ಈತ ಇಲ್ಲಿನ ಕಥೆಗಳಲ್ಲಿ ಛಾಸರ್ ಮತ್ತು ಬೊಕಾಷಿಯೋ ತಮ್ಮ ಕ್ಯಾಂಟರ್‍ಬರಿ ಟೇಲ್ಸ್ ಮತ್ತು ಡೆಕಾಮೆರನ್ ಕೃತಿಗಳಲ್ಲಿ ಅನುಸರಿಸಿದ ಕ್ರಮವನ್ನನುಸರಿಸಿ ಪಾತ್ರಗಳಿಂದ ಪ್ರಸಂಗಗಳನ್ನು ಹೇಳಿಸಿದ. 1867ರಲ್ಲಿ ಇವನು ಮಾಡಿದ ಡಾಂಟೆ ಕಾವ್ಯದ ಭಾಷಾಂತರದಲ್ಲಿ (ಡಿವೈನ್ ಕಾಮಿಡಿ) ಪತ್ನಿಯನ್ನು ಕಳೆದುಕೊಂಡ ವಿಷಾದ ಮತ್ತು ವಿಯೋಗದ ಛಾಯೆ ಕಾಣಿಸಿಕೊಂಡಿದೆ. 1882ರ ಇನ್ ದ ಹಾರ್ಬರ್ ಕೃತಿಯಲ್ಲಿ ಬದುಕಿನ ಕೊನೆಯ ಘಟ್ಟದ ಚಿಂತನೆಗಳು ದಾಖಲಾಗಿವೆ. 1875ರಲ್ಲಿ ಐವತ್ತು ವರ್ಷಗಳ ಹಿಂದೆ (1825) ಬೊಡ್ವಾನ್‍ನಲ್ಲಿ ತನ್ನ ಸಹಪಾಠಿಗಳಾಗಿದ್ದವರನ್ನು ಕುರಿತು ಬರೆದ ಪತ್ರದಲ್ಲಿ “ಕ್ಯಾಟೋ ಗ್ರೀಕ್ ಕಲಿತದ್ದು, ಸಫೋಕ್ಲೀಸ್ ತನ್ನ ಅದ್ಭುತವಾದ ಈಡಿಪಸ್ ಗ್ರಂಥವನ್ನು ಬರೆದದ್ದು ಎಂಬತ್ತರ ವಯಸ್ಸಿನಲ್ಲಿ” ಈ ಮೊದಲಾದ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾನೆ. 

ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳು ವ್ಯಾಡ್ಸ್ವರ್ತ್'ನಿಗೆ ಗೌರವ ಪದವಿಗಳನ್ನು ನೀಡಿದ್ದವು. ಲಂಡನ್‍ನ ವೆಸ್ಟ್‍ಮಿನಿಸ್ಟರ್ ಅಬೆಯ ಪೊಯೆಟ್ಸ್ ಕಾರ್ನರ್‍ನಲ್ಲಿ ಗೌರವಪಡೆದ ಮೊದಲ ಅಮೆರಿಕನ್ ಬರೆಹಗಾರನೀತ ಎಂಬುದು ಇವನ ಹೆಗ್ಗಳಿಕೆ.

ವ್ಯಾಡ್ಸ್ವರ್ತ್ 1882 ಮಾರ್ಚ್ 24ರಂದು ನಿಧನನಾದ.

On Remembrance Day of Henry Wadsworth Longfellow

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ