ಜಯಶ್ರೀ ಬಿ. ಕದ್ರಿ
ಜಯಶ್ರೀ ಬಿ. ಕದ್ರಿ
ಡಾ. ಜಯಶ್ರೀ ಬಿ. ಕದ್ರಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದರ ಜೊತೆಗೆ, ತಮ್ಮ ನಿರಂತರ ಅಧ್ಯಯನಶೀಲತೆ ಮತ್ತು ಬರೆಹಗಳಿಂದಲೂ ಹೆಸರಾಗಿದ್ದಾರೆ.
ಮಾರ್ಚ್ 13, ಜಯಶ್ರೀ ಅವರ ಜನ್ಮದಿನ.
ಅವರು ಹುಟ್ಟಿದ್ದು ಕೇರಳದ
ಕಾಸರಗೋಡಿನ ಕಿದೂರು ಗ್ರಾಮದಲ್ಲಿ.
ತಂದೆ ಗೋಪಾಲ ಕೃಷ್ಣ ಭಟ್. ತಾಯಿ ಬಿ ಚಂದ್ರಾವತಿ. ಇವರ ಓದು ನಡೆದದ್ದು ಕನ್ನಡ ಮಾಧ್ಯಮದಲ್ಲಿ. ಕಾಸರಗೋಡಿನ ಕಳತ್ತೂರಿನ ಇಚ್ಲಂಪಾಡಿ ಶಾಲೆಯಲ್ಲಿ ಇವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ತದನಂತರ ಸರಕಾರಿ ಪ್ರೌಢ ಶಾಲೆ ಕುಂಬಳೆ, ಸರಕಾರಿ ಕಾಲೇಜು ಕಾಸರಗೋಡು, ಮೈಸೂರಿನ ಮಾನಸ ಗಂಗೋತ್ರಿ ಹೀಗೆ ಸರಕಾರಿ ಶಾಲೆ ಕಾಲೇಜುಗಳಲ್ಲಿ ಇವರ ಓದು ಸಾಗಿತು. ಕಾಸರಗೋಡಿನ ಕಾಲೇಜಿನಲ್ಲಿ ಪಿಯುಸಿ ಯಲ್ಲಿ ಮಲಯಾಳ ಹಾಗೂ ಇಂಗ್ಲಿಷ್‍ನಲ್ಲಿ ಬೋಧಿಸುತ್ತಿದ್ದುದು ಇವರಿಗೆ ಕಷ್ಟವೆನಿಸುತ್ತಿತ್ತು. ತದ ನಂತರ ಕಲಾ ವಿಭಾಗ ಇವರ ಕೈ ಹಿಡಿಯಿತು. ಇಂಗ್ಲಿಷ್ ಮೇಜರ್ ತೆಗೆದುಕೊಂಡು ಬಿಎ, ಎಂ.ಎ. ಓದಿದರು.
ಜಯಶ್ರೀ ಅವರು ಬಿಎಸ್‍ಎನ್ಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಣರಾಜ್ ಅವರನ್ನು ವಿವಾಹವಾದ ನಂತರ ವೈವಾಹಿಕ ಜವಾಬ್ದಾರಿಗಳು, ಈಗ ಎಂಟೆಕ್ ವಿದ್ಯಾರ್ಥಿನಿಯಾಗಿರುವ ಮಗಳು ಅನುಷಾಳ ಪ್ರಗತಿ ಇವೆಲ್ಲವುಗಳ ನಿರ್ವಹಣೆ ಜೊತೆಗೆ, ಓದಿನಲ್ಲೂ ಆಸಕ್ತಿ ಕಳೆದುಕೊಳ್ಳದೆ ಎಂ ಎ ಮಾಡಿ ಹದಿನೈದು ವರ್ಷಗಳ ನಂತರ 2018 ರಲ್ಲಿ ಪಿಎಚ್.ಡಿ ಪದವಿ ಪಡೆದ ಶ್ರದ್ಧಾವಂತೆ ಸಾಹಸಿ. ಓದು ಇವರಿಗೆ ಆಪ್ಯಾಯಮಾನ. ಹೀಗೆ 2024ರ ಫೆಬ್ರುವರಿಯಲ್ಲಿ ಪತ್ರಿಕೋದ್ಯಮದಲ್ಲಿ ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.
ಜಯಶ್ರೀ ಅವರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ 12 ವರ್ಷ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. 2017 ರಿಂದ ಇವರಿಗೆ ಸರಕಾರಿ ಕೆಲಸ ಸಿಕ್ಕಿತು. ಮಂಗಳೂರಿನ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಕಾಲ ಬೋಧನೆ ಮಾಡಿದ ಇವರು ಮುಂದೆ ತುಮಕೂರು ಹುಳಿಯಾರಿನ ಬಿ ಎಂ ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿ, ಪ್ರಸಕ್ತ ಮಂಗಳೂರು ಸಮೀಪದ ಹಳೆಯಂಗಡಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕಿ (Assistant Professor of English) ಆಗಿ ಕೆಲಸ ಮಾಡುತ್ತಿದ್ದಾರೆ.
ಜಯಶ್ರೀ ಅವರು ಹವ್ಯಾಸಿ ನೆಲೆಯಲ್ಲಿ ಪತ್ರಿಕೆಗಳಿಗೆ ಮತ್ತು ಅಂತರಜಾಲ ತಾಣಗಳಿಗೆ ಲೇಖನ, ಪುಟ್ಟ ಕತೆ, ಕವಿತೆಗಳನ್ನು ಬರೆಯುತ್ತಿರುತ್ತಾರೆ. ಜಯಶ್ರೀ ಅವರ ಪ್ರಕಟಿತ ಕೃತಿಗಳಲ್ಲಿ 'ತೆರೆದಂತೆ ಹಾದಿ' ಎಂಬ ವೈಚಾರಿಕ ಲೇಖನಗಳ ಸಂಕಲನ; 'ಬೆಳಕು ಬಳ್ಳಿ' ಎಂಬ ಜೀವನ ಪ್ರೀತಿಯ ಬರಹಗಳು; ಮತ್ತು 'ಕೇಳಿಸದ ಸದ್ದುಗಳು' ಎಂಬ ಕವನ ಸಂಕಲನ ಸೇರಿವೆ.
ಜಯಶ್ರೀ ಬಿ. ಕದ್ರಿ ಅವರ 'ತೆರೆದಂತೆ ಹಾದಿ' ಕೃತಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ ಹಾಗೂ ಅವ್ವ ಪುಸ್ತಕಾಲಯ ಪುಸ್ತಕ ಪ್ರಶಸ್ತಿ ಸಂದಿದೆ. 'ಬೆಳಕು ಬಳ್ಳಿ' ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪುಸ್ತಕ ಪ್ರಶಸ್ತಿ ಸಂದಿದೆ.
ಸಾಹಿತ್ಯ ಅಲ್ಲದೆ ಪ್ರವಾಸ ಹಾಗೂ ಸಂಗೀತ ಜಯಶ್ರೀ ಅವರ ಆಸಕ್ತಿಗಳು. "ಬಾಲ್ಯದ ಬಡತನದ ಹೊರತಾಗಿಯೂ ನಮಗೆ ದೊರೆತ ವಿದ್ಯಾಭ್ಯಾಸ ಹಾಗೂ ಉತ್ತಮ ಹವ್ಯಾಸಗಳು ಇದ್ದ ಹಿರಿಯರ ಮಾರ್ಗದರ್ಶನಕ್ಕೆ ನಾನು ಋಣಿ. ಸದಾ ಹಸನ್ಮುಖಿಯಾಗಿ ಇದ್ದುಕೊಂಡು, ಲವಲವಿಕೆಯಿಂದ, ಕೆಚ್ಚಿನಿಂದ ಬದುಕಬೇಕು ಎಂದು ನನ್ನ ಆಸೆ. ಹೆಣ್ಣು ಮಕ್ಕಳ ಸಬಲೀಕರಣಕ್ಕೆ, ವ್ಯಕ್ತಿತ್ವ ವಿಕಾಸಕ್ಕೆ ಶಿಕ್ಷಣ ಹಾಗೂ ಸ್ವಾವಲಂಬನೆ ಅತ್ಯಗತ್ಯ ಎಂದು ದೃಢವಾಗಿ ನಂಬಿದ್ದೇನೆ" ಎನ್ನುವ ಜಯಶ್ರೀ ಬಿ. ಕದ್ರಿ ಅವರ ಸಾಧನೆ ನಮ್ಮ ಮುಂದಿರುವ ಪ್ರೇರಣೆ ಎನಿಸುವಂತದ್ದು.
ಆತ್ಮೀಯರಾದ ಜಯಶ್ರೀ ಬಿ. ಕದ್ರಿ ಅವರಿಗೆ ಜನ್ಮದಿನದ ಶುಭಹಾರೈಕೆಗಳು. ನಮಸ್ಕಾರ.
Happy birthday Jayashree B Kadri 🌷🌷🌷
ಕಾಮೆಂಟ್‌ಗಳು