ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಕ್ಷ್ಮಣ ಕೊಡಸೆ


 ಲಕ್ಷ್ಮಣ ಕೊಡಸೆ


ಲಕ್ಷ್ಮಣ ಕೊಡಸೆ ಕಥಾಲೋಕದಲ್ಲಿ ಮತ್ತು ಪತ್ರಿಕಾಲೋಕದಲ್ಲಿ ಪ್ರಸಿದ್ಧರಾಗಿದ್ದಾರೆ.

ಲಕ್ಷ್ಮಣ ಕೊಡಸೆ 1953ರ ಏಪ್ರಿಲ್ 14ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಸೆ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಕರಿಯನಾಯ್ಕ, ತಾಯಿ ಭರ್ಮಮ್ಮ. ಅಲ್ಪಸ್ವಲ್ಪ ವಿದ್ಯೆ ಕಲಿತ ತಂದೆಯವರಿಗೆ ಮಗನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂಬ ಹಂಬಲವಿತ್ತು.  ಲಕ್ಷ್ಮಣರು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದರು. ವಾಹನ ಸೌಕರ‍್ಯವಿರದಿದ್ದ ಕಾಲವದು. ಓದಿನ ಹಂಬಲದಿಂದ ನಡೆದೇ ಶಾಲೆಗೆ ಹೋಗಿ ಎಸ್.ಎಸ್.ಎಲ್.ಸಿ. ತೇರ್ಗಡೆಯಾದಾಗ ತಂದೆಗೆ ಹಿಡಿಸಲಾರದ ಸಂತಸವಾಯ್ತು. ಮುಂದೆ ಬೆಂಗಳೂರಿನ ರೇಣುಕಾಚಾರ‍್ಯ ಕಾಲೇಜಿಗೆ ಪಿ.ಯುಗಾಗಿ ಬಂದರು. ಓದಲು ದೂರದೂರಿಗೆ ಹೋಗಿ ಬಿಡುತ್ತಾನೆಂದು ತಾಯಿಗೆ ದುಃಖ, ಮಗ ಓದಿ ಮುಂದೆ ಬರುತ್ತಾನೆಂದು ತಂದೆಗೆ ಸಂತಸ. ರಜಕ್ಕೆ ಊರಿಗೆ ಹೋದರೆ ಮನೆಯಲ್ಲಿ ಹಬ್ಬದ ವಾತಾವರಣ. 

ಲಕ್ಷ್ಮಣ ಕೊಡಸೆ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. (ಆನರ್ಸ್‌) ಪದವಿ ಗಳಿಸಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕನ್ನಡ ಅಧ್ಯಯನ ಕೇಂದ್ರದಿಂದ ಎಂ.ಎ. ಪದವಿ ಗಳಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಅವರಿಗೆ ಆಸಕ್ತಿಯಿತ್ತು. 1972ರಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಎಂ.ಇ.ಎಸ್. ಕಾಲೇಜು ನಡೆಸಿದ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದರು. ನಂತರ ಹಲವಾರು ಸಣ್ಣಕಥೆಗಳನ್ನು ಬರೆದರು. ಅವರಿಗೆ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟವಿತ್ತು. ಉದಯಕಲಾ ಸಂಘ, ಯುವ ಬರಹಗಾರರು ಮತ್ತು ಕಲಾವಿದರ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಛಾಯಾಗ್ರಹಣ ಮತ್ತು ಯಕ್ಷಗಾನ ಕಲೆಯಲ್ಲಿ ಅವರಿಗೆ ವಿಶೇಷ ಆಸಕ್ತಿಯಿತ್ತು. 

ಲಕ್ಷ್ಮಣ ಕೊಡಸೆ ಅವರು ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಪತ್ರಿಕಾರಂಗ. ಕೆಲಕಾಲ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿರುವ ಸಾಹಿತ್ಯ ಪರಿಷತ್ ಪತ್ರಿಕೆಯ ಗೌರವ ಸಂಪಾದಕರಾಗಿ ಪ್ರೊ. ದೊಡ್ಡರಂಗೇಗೌಡ ಅವರೊಡನೆ ಅನುಭವ ಪಡೆದರು. 1978ರಲ್ಲಿ ಪ್ರಜಾವಾಣಿಯ ಬಳಗ ಸೇರಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ,  ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದರು. ದೆಹಲಿ ಮತ್ತು ತಿರುವನಂತಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸುದ್ಧಿ ವಿವರಗಳನ್ನು ವಿಶೇಷ ರೀತಿಯಲ್ಲಿ ಪ್ರಜಾವಾಣಿಯಲ್ಲಿ ಪ್ರಕಟಿಸಿದ ಹೆಗ್ಗಳಿಕೆ ಇವರದಾಯಿತು. 

ಬಲಿ, ಮೈತ್ರಿ, ವಿಚಾರಣೆ,  ಅವ್ವ, ಊರು-ಮನೆ ಮಂತಾದ ಕಥಾ ಸಂಕಲನಗಳು; ಪಯಣ, ಭೂಮಿ ಹುಣ್ಣಿಮೆ, ಪಾಡು, ಮೆಲುಕು, ನೆರಳು, ಪಾಲು, ಹಾಲಪ್ಪ, ಕಾಮಾಕ್ಷಿ ಸಂಸಾರನೌಕೆ ಮುಂತಾದ ಕಾದಂಬರಿಗಳು; ಅಪ್ಪನ ಪರಪಂಚ, 'ಕೊಡಚಾದ್ರಿ' ಸಾಧಕರ ನುಡಿಚಿತ್ರ, ಅಜಲು, ಹಾಯಿದೋಣಿ, ಸಹಪಥಿಕ, ಬಿ. ವೆಂಕಟಾಚಾರ್ಯ,  ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಕುವೆಂಪು ಮತ್ತು ಬಲ್ಲಿದರೊಡನೆ ಒಂದು ಅನುಸಂಧಾನ, ನಮ್ಮ ಜೆಪಿ, ಅಬ್ದುಲ್ ಹಮೀದ್, ಡಾ. ಪದ್ಮನಾಭನ್ ಪಲ್ಪು, ಬೆಂಗಳೂರು ನಗರ ಜಿಲ್ಲಾ ರಂಗಮಾಹಿತಿ, 'ಲಕ್ಷ್ಮಣ ರೇಖೆ' ಅಂಕಣ ಬರಹಗಳು, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರೊಡನೆ ಸಹಪಥಿಕ,  ಕ್ರಿಸ್ತನ ಕುರಿತಾದ ಕವನ ಸಂಕಲನ ಸಂಪಾದಿತ ಕೃತಿ ‘ಕ್ರಿಸ್ತಾಂಜಲಿ', ಕೆ. ಷರೀಫಾ ಅವರೊಡನೆ 'ಒಡನಾಡಿ ಅರಸು', ಕೆಚ್ಚೆದೆಯ ಕನ್ನಡಿಗ ಟೀಪು ಸುಲ್ತಾನ (ಸಂಗ್ರಹ - ಸಂಪಾದನೆ), ಎಚ್. ದಂಡಪ್ಪ ಅವರೊಡನೆ 'ಮೆಕ್ಕಲು' ಸಮಕಾಲೀನ ಸಾಂಸ್ಕೃತಿಕ ಪರಿಸರ (ಸಂಪಾದನೆ), ಹಾಸುಹೊಕ್ಕು, ಗೆದ್ವವರು, ಟಿ. ಆರ್. ನರಸಿಂಹರಾಜು ಮುಂತಾದವು ಲಕ್ಷ್ಮಣ ಕೊಡಸೆ ಅವರ ವೈವಿಧ್ಯಪೂರ್ಣ ಬರೆಹಗಳಲ್ಲಿ ಸೇರಿವೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹಲವಾರು ಸಾಹಿತ್ಯಕ ಪ್ರಶಸ್ತಿಗಳು ಲಕ್ಷ್ಮಣ ಕೊಡಸೆ ಅವರನ್ನರಸಿ ಬಂದಿವೆ.

ಲಕ್ಷ್ಮಣ ಕೊಡಸೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


On the birthday of journalist and writer Lakshman Kodase


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ