ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆಳಗಲ್ಲು ವೀರಣ್ಣ


 ಬೆಳಗಲ್ಲು ವೀರಣ್ಣ


ನಾಡೋಜ ಬೆಳಗಲ್ಲು ವೀರಣ್ಣ ವೃತ್ತಿ ರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಮಹಾನ್ ಕಲಾವಿದರು.  ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಬೊಂಬೆ ಆಟದ ಪ್ರಕಾರವನ್ನು ಐತಿಹಾಸಿಕ ಮತ್ತು ಸಾಮಾಜಿಕ ಕಥಾ ಪ್ರಸಂಗಗಳಿಗೂ ವಿಸ್ತರಿಸಿದ ಕಲಾವಿದರೆಂಬ ಕೀರ್ತಿ ಇವರದಾಗಿತ್ತು.

ಬೆಳಗಲ್ಲು ವೀರಣ್ಣ ಅವರು ಸಿಳ್ಳೆಕ್ಯಾತ ಜನಾಂಗದಲ್ಲಿ 1930ರ ದಶಕದಲ್ಲಿ ಜನಿಸಿದರು.  ಇವರ ತಂದೆ ದೊಡ್ಡ ಹನುಮಂತಪ್ಪ  ಪ್ರಸಿದ್ಧ ಪಿಟೀಲು ವಾದಕರಾಗಿ ಮತ್ತು ಬಯಲಾಟದ ಸ್ತ್ರೀ ವೇಷಧಾರಿಯಾಗಿ ಹೆಸರಾಗಿದ್ದರು.‍ ಇವರ ಅಜ್ಜ ಗಂಜಿ ಹನುಮಂತಪ್ಪ ಜ್ಯೋತಿಷ್ಯ ಮತ್ತು ರಮಲ ವಿದ್ಯಾ ಪಂಡಿತರಾಗಿದ್ದರು.

ವೀರಣ್ಣನವರು ಬಾಲ್ಯದಲ್ಲೇ ತಂದೆಯ ಬಯಲಾಟದ ವಿದ್ಯೆಯನ್ನು ಮೈಗೂಡಿಸಿಕೊಂಡಿದ್ದರು.  ಅವರ ಧ್ವನಿ ಮತ್ತು ಗಾಯನ ಸಿರಿಯನ್ನು ಮೆಚ್ಚಿಕೊಂಡಿದ್ದ ಜೋಳದರಾಶಿ ದೊಡ್ಡನಗೌಡರು ತಮ್ಮ ಕಂಪನಿ ನಾಟಕಗಳಿಗೆ ಸೇರಿಸಿಕೊಂಡು ಪ್ರೋತ್ಸಾಹಿಸಿದರು.

ವೀರಣ್ಣ ಅವರಿಗೆ ಅವರ ಗುರುಗಳಾದ ವೈ.ಎಂ. ಚಂದ್ರಯ್ಯಸ್ವಾಮಿ ಅವರು ಹೇಳಿ ಕಲಿಸಿದ್ದೇ ಶಿಕ್ಷಣ.  ವೀರಣ್ಣನವರು ಹಲವು ಕಂಪನಿಗಳಲ್ಲಿ ನಟರಾಗಿ, ಗಾಯಕರಾಗಿ ದುಡಿದರು.  ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಬಾಲ ನಟರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಖಳನಾಯಕನಾಗಿ, ಹಾಸ್ಯಗಾರನಾಗಿ,  ಹೀಗೆ ಅನೇಕ ಬಗೆಯ ಪಾತ್ರಗಳಲ್ಲಿ ಅಭಿನಯಿಸಿದ್ದರು.  ಕಂದಗಲ್ಲು ಹನುಮಂತರಾಯರ ರಕ್ತರಾತ್ರಿ ನಾಟಕದ ಶಕುನಿ ಪಾತ್ರ ಇವರಿಗೆ ಅಪಾರ ಯಶಸ್ಸು ತಂದಿತು. ಇವರು ಕೆಲಸ ಮಾಡಿದ ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಹೊನ್ನಪ್ಪ ಭಾಗವತರ ಶ್ರೀ ಉಮಾಮಹೇಶ್ವರ ನಾಟ್ಯ ಸಂಘ, ಬಳ್ಳಾರಿ ಲಲಿತಮ್ಮನವರ ಶ್ರೀ ಲಲಿತ ಕಲಾ ನಾಟ್ಯ ಸಂಘ, ಚಂದ್ರಯ್ಯ ಸ್ವಾಮಿಯವರ ಶ್ರೀ ನಟರಾಜ ನಾಟಕ ಮಂಡಳಿ ಮುಂತಾದವು ಸೇರಿವೆ. 

ವೀರಣ್ಣನವರು ತಮ್ಮದೇ ಆದ "ನಾಟಕ ಕಲಾ ಮಿತ್ರ ಮಂಡಳಿ" ಸ್ಥಾಪಿಸಿ ಎರಡು ದಶಕಕ್ಕೂ ಮಿಗಿಲು ಕಾಲ ನಡೆಸಿದರು. ಆ ಸಾಧನೆಯ ಬೆಳಕಿನಲ್ಲಿ ಬೆಳಗಲ್ಲು ವೀರಣ್ಣನವರು ಮುಂದೆ ಆರಂಭಿಸಿದ್ದು, ನೆಳಲು-ಬೆಳಕಿನ ತೊಗಲು ಗೊಂಬೆಯಾಟ.

ವಿಜಯ ಸಾಸನೂರ ಅವರು 1980ರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾಗ, ವೀರಣ್ಣನವರಿಗೆ ಕರ್ನಾಟಕದ ಅಪರೂಪದ ಕಲೆಯಾದ ತೊಗಲು ಗೊಂಬೆಯಾಟವನ್ನು ಪುನರುಜ್ಜೀವನಗೊಳಿಸುವ ಕುರಿತು ಹುರಿದುಂಬಿಸಿದಾಗ, ವೀರಣ್ಣನವರು ತಮ್ಮ ರಕ್ತ ಸಂಬಂಧಿ, ರಾಜ್ಯ ಪ್ರಶಸ್ತಿ ವಿಜೇತ ಹೊಲೆಪ್ಪ ಅವರ  ಸಹಕಾರದಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಮಾಯಣದ ಕಥೆಯ 'ಪಂಚವಟಿ' ಪ್ರಸಂಗವನ್ನು ತೊಗಲುಗೊಂಬೆಯಾಟ ಆಡಿಸಿದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ನೀಡಿದ ಆರ್ಥಿಕ ಸಹಾಯ ಮತ್ತು ಕಲಾ ಪ್ರಶಂಸೆಯ ಪ್ರೋತ್ಸಾಹದಿಂದ ವೀರಣ್ಣನವರು ತೊಗಲುಗೊಂಬೆಯಾಟದ ಕಾಯಕವನ್ನು ಮುಂದುವರೆಸಲು ಸಾಧ್ಯವಾಯಿತು.  ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ. ಎಚ್.ಎಲ್. ನಾಗೇಗೌಡರು ಹಲವು ರೀತಿಯ ಪ್ರೋತ್ಸಾಹ ನೀಡಿ ವೀರಣ್ಣನವರ ತೊಗಲುಗೊಂಬೆಯಾಟ ಕಲೆಯು ಸಮರ್ಥ ರೀತಿಯಲ್ಲಿ ನೆಲೆ ನಿಲ್ಲಲು ಸಹಾಯ ಮಾಡಿದರು. ಅಲ್ಲಿಂದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳವನ್ನು ಆರಂಭಿಸಿದ ವೀರಣ್ಣ ಅವರು ಈ ಕ್ಷೇತ್ರದಲ್ಲಿ ಸಾಧಿಸಿದ್ದು ಅಪಾರ. ಅವರಿಗೆ ವೈ. ರಾಘವೇಂದ್ರ ರಾವ್ ಸಾಹಿತ್ಯದಲ್ಲಿ  ಹಾಗೂ ವಿ.ಟಿ. ಕಾಳೇಮಾಸ್ಟರ್ ಸಂಡೂರು ಅವರು ಕಲಾಚಿತ್ರ ತಯಾರಿಕೆಯಲ್ಲಿ ಜೊತೆ ನೀಡಿದರು.  ಪ್ರೊ.ಎಂ.ಎಂ. ಕಲ್ಬುರ್ಗಿ ಮತ್ತು ಡಾ. ಹೆಚ್.ಜೆ. ಲಕ್ಕಪ್ಪಗೌಡರಂತಹ ಹಿರಿಯ ಬರಹಗಾರರು ವೀರಣ್ಣನವರಿಗೆ ಸಾಹಿತ್ಯವನ್ನೊದಗಿಸಿ ಪ್ರಯೋಗಗಳ ಯಶಸ್ಸಿಗೆ ಕಾರಣರಾದರು.  ಗಿರೀಶ್ ಕಾರ್ನಾಡರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ "ಭಾರತ ಸ್ವಾತಂತ್ರ್ಯ ಸಂಗ್ರಾಮ" ತೊಗಲು ಗೊಂಬೆಯಾಟಕ್ಕೆ  ಸಹಾಯ ನೀಡಿದರು.‍ ವೀರಣ್ಣನವರ ಬೊಂಬೆಯಾಟ ಕೇವಲ ಪೌರಾಣಿಕ ಪ್ರಸಂಗಗಳಿಗೇ ಮೀಸಲಾಗದೆ ಐತಿಹಾಸಿಕ ಮತ್ತು ಸಾಮಾಜಿಕ ಕಥಾ ಪ್ರಸಂಗಗಳನ್ನೊಳಗೊಂಡು ವ್ಯಾಪಕವಾಗಿ ಬೆಳೆದಿತ್ತು.  ಸಾಮಾಜಿಕ ಸಮಸ್ಯೆಗಳನ್ನು ಕುರಿತು ಸಹಾ ತಮ್ಮ ತೊಗಲು ಗೊಂಬೆಯಾಟದ ಮೂಲಕ ಜನರಿಗೆ ಅರಿವು ಮೂಡಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದರು.‍ 1991ರಿಂದ ಮೊದಲ್ಗೊಂಡಂತೆ ಸುಮಾರು ಐದು ಸಾವಿರಕ್ಕೂ ಅಧಿಕ ಬಾಪೂಜಿ ತೊಗಲುಗೊಂಬೆಯಾಟದ ಪ್ರದರ್ಶನಗಳನ್ನು ನೀಡಿದ್ದರು. ಗೌತಮ ಬುದ್ಧ, ವಿವೇಕಾನಂದ ಮತ್ತು ಅಂಬೇಡ್ಕರ್ ಕುರಿತು ಸಹಾ ಕಾರ್ಯಕ್ರಮ ರೂಪಿಸಿದ್ದರು. 

ಬೆಳಗಲ್ಲು ವೀರಣ್ಣ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಜೂರಿಚ್ ನಲ್ಲಿ ನಡೆದ ಭಾರತ ಉತ್ಸವ ಅಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಪ್ರದರ್ಶನ ನೀಡಿದ್ದರು.

ಬೆಳಗಲ್ಲು ವೀರಣ್ಣ ಅವರಿಗೆ ಕೇಂದ್ರ ಸರ್ಕಾರದ ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. 

ಹಿರಿಯ ವಯಸ್ಸಿನಲ್ಲಿದ್ದ ಬೆಳಗಲ್ಲು ವೀರಣ್ಣ ಅವರು 2023ರ ಏಪ್ರಿಲ್ 2ರಂದು ರಸ್ತೆ ಅಪಘಾತದಲ್ಲಿ ಅಸುನೀಗಿದ್ದು ದುರದೃಷ್ಟಕರ. ಈ ಮಹಾನ್ ಕಲಾಚೇತನಕ್ಕೆ ನಮನ.

On Remembrance Day of Great Folk artist Belagallu Veeranna 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ