ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಡೇ ಗುಲಾಂ ಅಲಿಖಾನ್


ಬಡೇ ಗುಲಾಂ ಅಲಿಖಾನ್ 

ಬಡೇ ಗುಲಾಂ ಅಲಿಖಾನ್ ಹಿಂದೂಸ್ಥಾನಿ ಸಂಗೀತ ವಿದ್ವಾಂಸರಲ್ಲಿ ಪ್ರಸಿದ್ಧರಾದವರು.

ಬಡೇ ಗುಲಾಂ ಅಲಿಖಾನ್ 1902ರ ಏಪ್ರಿಲ್ 2ರಂದು ಲಾಹೋರ್ ಬಳಿಯ ಕುಸೂರ್‍ನ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರಿಗೆ ಐದು ವರ್ಷದ ಬಾಲಕನಿರುವಾಗಲೆ ಸೋದರ ಮಾವ ಕಾಲೀಖಾನ್ ಅವರಿಂದ ಸಂಗೀತ ದೀಕ್ಷೆ ದೊರಕಿತು. ತಂದೆ ಅಲಿ ಭಕ್ಷ್‍ಖಾನ್ ಪಟಿಯಾಲ ದೊರೆಯ ಆಸ್ಥಾನ ವಿದ್ವಾಂಸರು.  ಇವರ ಮನೆತನವೇ ಸಂಗೀತಗಾರರದ್ದು. 

ಬಡೇ ಗುಲಾಂ ಅಲಿಖಾನರು ಓದಿನ ವಿದ್ಯೆಯಲ್ಲಿ ನಿರಕ್ಷರಿ. ಬಾಲ್ಯದಿಂದಲೂ ಇವರದ್ದು ಹೋರಾಟದ ಜೀವನವಾಯಿತು. ತಂದೆ ಮತ್ತೊಂದು ಮದುವೆ ಮಾಡಿಕೊಂಡ ಮೇಲೆ ತಾಯಿ ಸೋದರರ ಹೊಟ್ಟೆ ತುಂಬಿಸಿ ತಮ್ಮ ಹೊಟ್ಟೆ ತುಂಬಿಕೊಳ್ಳುವ ಬಿಕ್ಕಟ್ಟಿನ ಪ್ರಸಂಗ ಎದುರಾಯಿತು. ಸಾರಂಗಿ ವಾದಕನಾಗಿ ಎಳೆಯ ಪ್ರಾಯದಲ್ಲೆ ಸಂಪಾದನೆಗೆ ಪ್ರಾರಂಭಿಸಿದರು. ಅದು ಲಾಭಕರ ಎನಿಸಲಿಲ್ಲವಾಗಿ ಸ್ವಪ್ರಯತ್ನದಿಂದ ಶ್ರೇಷ್ಠ ಹಾಡುಗಾರರಾದರು.

ಖಾನ್ ಸಾಹೇಬರು ಸಾರ್ವಜನಿಕ ಸಂಗೀತಸಭೆಯಲ್ಲಿ ಭಾಗವಹಿಸಲು ಆರಂಭಿಸಿದುದು ಸ್ವಲ್ಪ ತಡವಾಗಿ. 1939ರಲ್ಲಿ ಕಲ್ಕತ್ತೆಯ ಸಂಗೀತ ಮಹಾಸಭೆಯಲ್ಲಿ ಇವರು ನೀಡಿದ ಶಾಸ್ತ್ರೀಯ ಸಂಗೀತದಿಂದಾಗಿ ಇವರ ಖ್ಯಾತಿ ಭಾರತವನ್ನು ಬೆಳಗಿ ಆಚೆಗೂ ಪಸರಿಸಿತು. ತರುವಾಯ ಮುಂಬಯಿಯಲ್ಲಿ ಜರುಗಿದ ಇತರ ಕಾರ್ಯಕ್ರಮಗಳಂತೂ ರಸಿಕ ಜನರಿಗೆ ಹುಚ್ಚು ಹಿಡಿಸಿಬಿಟ್ಟವು. ಪಟಿಯಾಲಾ ಘರಾಣಿಯ ಪತಾಕೆ ಆಫ್ಘಾನಿಸ್ತಾನದ ಕಾಬೂಲಿನಲ್ಲೂ ಹಾರಿತು.

ಬಡೇ ಗುಲಾಂ ಅಲಿಖಾನ್ ಅವರದ್ದು ಸ್ವರಮಾಧುರ್ಯ, ಸಲೀಸಾದ ಹಾಡುಗಾರಿಕೆ, ಮಂದ್ರ-ಮಧ್ಯಮ-ತಾರ ಸಪ್ತಕಗಳನ್ನು ನಿರಾಯಾಸವಾಗಿ ನಡೆಸಬಲ್ಲ ರಸವತ್ತಾದ ಕಂಠಶ್ರೀ, ಸ್ವರವೆತ್ತಿದರೆ ರೇಶಿಮೆಯ ನಯವಾದ ಎಳೆಯಧಾರೆ ಧಾರೆ. ತಮ್ಮದೇ ಆದ ಒಂದು ಶೈಲಿ. ರಚನೆಗಳ ರಸಭಾವಗಳನ್ನು ಅನುಭವಿಸಿ, ಹದವಾಗಿ ಹಾಡುವ ಮೋಹಕತೆ ಇವು ಇವರ ವೈಶಿಷ್ಟ್ಯವೆನಿಸಿತ್ತು.  ಶಾಸ್ತ್ರೀಯ ಸಂಗೀತದಂತೆ ಲಘು ಶಾಸ್ತ್ರೀಯ ಠುಮರಿ, ಟಪ್ಪಾ, ಗಝಲ್, ದೌದ್ರಾ ಮೊದಲಾದ ಪ್ರಕಾರಗಳಲ್ಲೂ ಸಾಹೇಬರದು ಎತ್ತಿದ ಕೈ.

ಭಾರತ ವಿಭಜನೆಯಾದಾಗ ಮಕ್ಕಳು ನೌಕರಿಗಾಗಿ ಪಾಕಿಸ್ತಾನ ಸೇರಿದರೂ ಖಾನರು ಮಾತ್ರ ಭಾರತದಲ್ಲೇ ಉಳಿದುಕೊಂಡರು.
ಸಾಹೇಬರು ತಮ್ಮ ಅನೇಕಾನೇಕ ಧ್ವನಿಮುದ್ರಿಕೆಗಳ ಮೂಲಕ ತಮ್ಮ ಸಂಗೀತದ ವೈವಿಧ್ಯ, ಮಾಧುರ್ಯ, ಸ್ವರಸಂಪತ್ತನ್ನು ಭಾರತಕ್ಕೆ ಕಾಣಿಕೆಯಾಗಿ ಸಲ್ಲಿಸಿದ್ದಾರೆ. ಇಂದಿಗೂ ಬಡೇ ಗುಲಾಂ ಅಲಿಖಾನ್ ಅವರ ಕೇದಾರ, ಮಾಲಕಂಸ, ಭೈರವಿ, ಕಾಮೋದ ರಾಗಗಳ ಧ್ವನಿ ಮುದ್ರಿಕೆಗಳು, ಇವರ ಗಝಲ್ ಠುಮರಿಗಳು ಸಂಗೀತಲೋಕದಲ್ಲಿ ಶಾಶ್ವತವಾಗಿ ಉಳಿಯುವಂಥವಾಗಿವೆ.

ಬಡೇ ಗುಲಾಂ ಅಲಿಖಾನರು 1968ರ ಏಪ್ರಿಲ್ 25ರಂದು ತಮ್ಮ 65ನೆಯ ವಯಸ್ಸಿನಲ್ಲಿ ನಿಧನರಾದರು.

On the birth anniversary of great musician Ustad Bade Ghulam Ali Khan


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ