ಅಣಕು ರಾಮನಾಥ್
ಅಣಕು ರಾಮನಾಥ್
ಅಣಕು ರಾಮನಾಥ್ ಎಂದು ಖ್ಯಾತರಾಗಿರುವ ನರಸಿಂಹಮೂರ್ತಿ ರಾಮನಾಥ್ ಅವರು ಸುಸಂಸ್ಕೃತ ಮನೋಭಾವಗಳುಳ್ಳ ವಿನೋದ ಪ್ರವೃತ್ತಿಯ ಲೇಖಕ, ವಾಗ್ಮಿ, ಅಂಕಣಕಾರ, ಪ್ರಕಾಶಕ, ರಂಗಕರ್ಮಿ ಹೀಗೆ ಬಹುಮುಖಿ ಸಾಧಕರು.
ಏಪ್ರಿಲ್ 24, ರಾಮನಾಥ್ ಅವರ ಜನ್ಮದಿನ. ಅವರು ಓದಿದ್ದು ಸಿವಿಲ್ ಇಂಜಿನಿಯರಿಂಗ್.
ರಾಮನಾಥ್ ಅವರಿಗೆ ಬರಹದಲ್ಲಿ ಆಸಕ್ತಿ ಮೂಡಿ ತಾವು ಬರೆದದ್ದನ್ನು ಓದಿ ಅಭಿಪ್ರಾಯ ತಿಳಿಸಬೇಕೆಂದು ಮಾಸ್ಟರ್ ಹಿರಣ್ಣಯ್ಯನವರ ಮನೆ ಬಾಗಿಲಿಗೆ ಬಂದರು. ಹಿರಣ್ಣಯ್ಯನವರು ಓದಿ ಹೇಳುವೆ ಮಾರನೆ ದಿನ ಬಾ ಅಂದರು. ಮಾರನೆ ದಿನ ಹೋದಾಗ ಹಿರಣ್ಣಯ್ಯನವರು ತಮ್ಮ ಅಭಿಪ್ರಾಯ ಸಲಹೆಗಳನ್ನು ಬರೆದಿಟ್ಟಿದ್ದ ಲಕೋಟೆ ಸಿದ್ಧವಾಗಿತ್ತು. ಹಿರಣ್ಣಯ್ಯನವರು ರಾಮನಾಥರಿಗೆ ಹೀಗೆ ಹೇಳಲು ಮನೆಯವರಿಗೆ ಹೇಳಿದ್ದರು: “ನನ್ನ ಅಭಿಪ್ರಾಯ ಸಾಕು ಅನ್ನೋ ಹಾಗಿದ್ರೆ ಇದನ್ನು ತೊಗೊಂಡು ಹೋಗಲಿ. ನನ್ನ ನೋಡಬೇಕು ಅನ್ನೋ ಹಾಗಿದ್ರೆ ನನ್ನ ರೀಡಿಂಗ್ ರೂಮ್‍ಗೆ ಬರಲಿ". ರಾಮನಾಥ್ ಲಕೋಟೆಯನ್ನು ತೆರೆಯದೆಯೇ ಹಿರಣ್ಣಯ್ಯನವರು ಕುಳಿತಿದ್ದ ಕೊಟಡಿಗೆ ಬಂದರು. ಮಾತು ಸಾಗಿತು. ಹೊರಡುವಾಗ ಹಿರಣ್ಣಯ್ಯ "ಆಗಾಗ ಬರ್ತಾ ಇರಿ" ಎಂದರು. ಹೀಗೆ ಅಗಾಗ ಬನ್ನಿ ಅಂದದ್ದು ರಾಮನಾಥ್ ಅವರಿಗೆ ಹಿರಣ್ಣಯ್ಯನವರ ಜೊತೆ 22 ವರ್ಷಗಳ ನಿರಂತರ ಸಾನ್ನಿಧ್ಯದ ವರವಾಯಿತು. ಹಿರಣ್ಣಯ್ಯನವರೊಡನೆ ದೊರೆತ ಈ ಸಂಪರ್ಕ ರಾಮನಾಥರನ್ನು ವಿಶಿಷ್ಟ ಬರಹಗಾರನನ್ನಾಗಿ ಮತ್ತು ಮಾತುಗಾರನನ್ನಾಗಿ ರೂಪಿಸಿತು. ಬೀಚಿಯವರು ಆರಂಭಿಸಿದ್ದ "ನೀವು ಕೇಳಿದಿರಿ" ಎಂಬ ಅಂಕಣವನ್ನು ಹನ್ನೊಂದು ವರ್ಷಗಳಿಗಿಂತ ಹೆಚ್ಚು ಕಾಲ ಮುಂದುವರೆಸಿಕೊಂಡು ಬಂದದ್ದು ಇವರ ದಾಖಲೆ. ಅಣಕು ರಾಮನಾಥ್ ಇದ್ದಲ್ಲಿ ಹಾಸ್ಯದ ಹೊನಲು, ನಗೆ ಪ್ರವಾಹಗಳಿವೆ. ಅಣಕು ರಾಮನಾಥ್ ಅವರ ಕನ್ನಡದ ವಿಶಾಲ ವ್ಯಾಪ್ತಿ ಎಷ್ಟು ಹಿರಿದು ಎಂಬ ಅರಿವು ಮೂಡಿಸಿ ಪ್ರಭಾವ ಬೀರಿದ ಮತ್ತೊಬ್ಬರು ಅ. ರಾ. ಮಿತ್ರ ಅವರು.
ಅಣಕು ರಾಮನಾಥ್ ಅವರ ಪದ್ಯ ಪ್ರಕಾರದ ಬರಹಗಳಲ್ಲಿ ಆಯ್ದ ಅಣಕವಾಡುಗಳು (ಸಂ), ಕೇಸು ಸಾಗಲಿ, ಅಣಕ ಶತಕಂ, ಮಾಸದ ಅಣಕು ಗೀತೆಗಳು, ಅಣಕವಾಡಿನ ಅಂಗಳದಲ್ಲಿ, ಮಂಕುದಿಣ್ಣೆಯ ಕಗ್ಗ, ವಕ್ರೋಕ್ತಿ ವಿಲಾಸ, ಡುಂಡಿರಾಮ್ಸ್ ಲಿಮರಿಕ್ಸ್ ಸೇರಿವೆ. ಗದ್ಯ ಪ್ರಕಾರದ ಹಾಸ್ಯ ಬರಹಗಳಲ್ಲಿ ಅಯ್ಯೋ ಶಿವನೇ..., ಆಟೋಟೋಪ, ತುಂಟ ತೇಜು ನೂರೆಂಟು ಹೇಳಿದ, ಬೊಜ್ಜುಂ ಶರಣಂ ಗಚ್ಛಾಮಿ, ಹಾಸ್ಯವಲ್ಲರೀ, ನಿದ್ರಾಂಗನೆಯ ಸೆಳವಿನಲ್ಲಿ ಸೇರಿವೆ.
ರಾಮನಾಥ್ ಅವರದು ಇಂಗ್ಲಿಷಿನಲ್ಲಿ ಮೂಡಿಸಿದ ಸಾಹಿತ್ಯ ಬರಹಗಳು 2,000ಕ್ಕೂ ಹೆಚ್ಚು. Laugh lines, Off Track, Fun O’Rama ಎಂಬ ಮೂರು ಇಂಗ್ಲಿಷ್ ಪುಸ್ತಕಗಳು ಪ್ರಕಟಗೊಂಡಿವೆ.
ಹಿಂದಿಯಲ್ಲಿ ಒಂದು ಪುಸ್ತಕ ಬರಲಿದೆ. ಇಂಗ್ಲಿಷ್, ಹಿಂದಿ, ಕನ್ನಡ ಮತ್ತುಸಂಸ್ಕೃತ ಭಾಷೆಗಳ ನಡುವೆ ಅನೇಕ ಭಾಷಾಂತರ ಬರಹ ಮಾಡಿದ್ದಾರೆ. ನೂರು ವಿಡಂಬನೆಗಳ ಸಂಕಲನ (100 parodies ) ಮತ್ತು ವಿಡಂಬನೆಗಳ (parody CD) ತಂದವರಲ್ಲಿ ಇವರೇ ಪ್ರಥಮರೆಂಬ ಖ್ಯಾತಿಯಿದೆ. ಗದ್ಯ – ಪ್ರಶ್ನಾಂಕಣ ರೂಪದಲ್ಲಿ ರಾಮ್ ಬಾಣ, ರಾಮ್ ಬಾಣ – 2 ಮೂಡಿಬಂದಿವೆ. ಗದ್ಯ ಅನುವಾದಗಳಲ್ಲಿ ದ್ರೌಪದಿಯ ಅಸ್ಮಿತೆ, ಹಸಿರು ಬಾಗಿಲು, Visionary Statesman S.Nijalingappa ಮೂಡಿಬಂದಿವೆ. ಅಂಕಣ ರೂಪದಲ್ಲಿ ಗರಮಾಗರಂ, ವೀಕೆಂಡ್ ವಿನೋದ, ಯಾಕೋ... ಏನೋ... ಮೂಡಿಬಂದಿವೆ. ವಿನೋದರಂಗ ಅಥವಾ ಡ್ರಾಮಾರಾಮ ಎಂಬ ಪ್ರಹಸನ ಸಂಕಲನವೂ ಮೂಡಿ ಬಂದಿದೆ. ಅವರಿಗೆ 60 ತುಂಬಿದ ಸಂದರ್ಭದಲ್ಲಿ ಆತ್ಮೀಯ ಅಭಿಮಾನಿಗಳು ಕುರಿತು 'ಪನ್ ಡ್ರೈವ್' ಎಂಬ ಕೃತಿ ಮೂಡಿಸಿದ್ದಾರೆ.
ಅಣಕು ರಾಮನಾಥ್ 800ಕ್ಕೂ ಹೆಚ್ಚು ಮಾತಿನ ಕಾರ್ಯಕ್ರಮಗಳನ್ನು ಕರ್ನಾಟಕ, ಮುಂಬೈ, ದೆಹಲಿ, ಸಿಂಗಪೂರ, ಮಸ್ಕತ್, ಬಹರಿನ, ಕತಾರ್, ಮೆಲ್ಬರ್ನ್ ಮುಂತಾದೆಡೆಗಳಲ್ಲಿ ನೀಡಿದ್ದಾರೆ. ಹಿರಣ್ಣಯ್ಯನವರ ಪ್ರಸಿದ್ಧ ಪ್ರಹಸನಗಳಲ್ಲಿ ನಿರೂಪಕರಾಗಿ ಮಹತ್ವದ ಬೆಳವಣಿಗೆ ಸಾಧಿಸಿದ ಅಣಕು ರಾಮನಾಥ್, ಮಾತಿನ ಕಾರ್ಯಕ್ರಮಗಳಲ್ಲಿ ನಿರಂತರ ಸಕ್ರಿಯರಾಗಿ ಜನಪ್ರಿಯರಾಗಿದ್ದಾರೆ. ಅನೇಕ ಪ್ರಸಿದ್ಧ ಕಿರುತೆರೆಯ ವಾಹಿನಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಅನೇಕ ಪ್ರಸಿದ್ಧ ವೇದಿಕೆ ಮತ್ತು ಕಿರುತೆರೆಯ ಕಾರ್ಯಕ್ರಮಗಳಿಗೆ ಸಾಹಿತ್ಯ ಬರೆದಿದ್ದಾರೆ.
ಅಣಕು ರಾಮನಾಥ್ ಅವರು 'ಟೈಮ್ಸ್ ಆಫ್ ಬನಶಂಕರಿ' ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಗೆ 9 ವರ್ಷಗಳ ಕಾಲ ಸಂಪಾದಕರಾಗಿದ್ದರು. ವಿಜಯವಾಣಿ, ಸಿಡ್ನಿಯ ಹೊರನಾಡ ಚಿಲುಮೆ, ರಾಜ್ಯಪ್ರಗತಿ, ಸುಧಾ, ನಗೆಮುಗುಳು ಮುಂತಾದ ಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಸಂಸ್ಕೃತಗಳಲ್ಲಿ ಇವರಿಗೆ ಪ್ರಾವೀಣ್ಯತೆ ಸಿದ್ಧಿಸಿದೆ. ಸೈಗಲ್, ಮುಖೇಶ್ ಹಾಡುಗಳೆಂದರೆ ಪ್ರಾಣ. ಓದುವುದು, ಕ್ರಿಕೆಟ್, ಚೆಸ್ ಇವರ ಹವ್ಯಾಸಗಳಲ್ಲಿ ಸೇರಿವೆ.
ಅಣಕು ರಾಮನಾಥ್ ಅವರಿಗೆ 2020ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಸಂದಿವೆ.
ಅಣಕು ರಾಮನಾಥ್ ಅವರು ಪ್ರಕಾಶಕರಾಗಿ ತೇಜು ಪಬ್ಲಿಕೇಶನ್ಸ್, ನ್ಯೂ ವೇವ್ ಬುಕ್ಸ್ ಮತ್ತು ಶ್ರೀನಿವಾಸ ಪ್ರಕಾಶನದಡಿಯಲ್ಲಿ ತಮ್ಮ ಹಾಗೂ ಇತರರ ಅನೇಕ ಉತ್ತಮ ಕೃತಿಗಳನ್ನು ಪ್ರಕಟಿಸಿದ್ದಾರೆ.
ಸರಳತೆ, ಸಹೃದಯತೆಗಳು ಅಣಕು ರಾಮನಾಥ್ ಅವರ ಬಹುಶಕ್ತಿಗಳಲ್ಲಿ ಪ್ರಧಾನವಾದದ್ದು. ಆತ್ಮೀಯ ಸಹೃದಯಿ, ಸಾಧಕ, ಸಕ್ರಿಯ, ಪರಿಶ್ರಮಿಗಳಾದ ಅಣಕು ರಾಮನಾಥ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
.
Happy birthday Anaku Ramanath Sir 🌷🙏🌷
ಕಾಮೆಂಟ್‌ಗಳು