ಮಂದಾರವಲ್ಲಿ
ಎಂ. ಆರ್. ಮಂದಾರವಲ್ಲಿ
ಡಾ. ಎಂ. ಆರ್. ಮಂದಾರವಲ್ಲಿ ಬರಹಗಾರ್ತಿಯಾಗಿ ಹೆಸರು. ಜೊತೆಗೆ ಅಮೂಲ್ಯ ಚಿಂತಕರಾಗಿ, ಸರಳ, ಸಹೃದಯತೆಗಳಿಂದಾಗಿ ಎಲ್ಲರಿಗೂ ಆಪ್ತರು. ಮಂದಾರವಲ್ಲಿ ಅವರೂ, ಅವರ ಪತಿ ದಿವಂಗತ ಜಿ. ಕೆ. ರವೀಂದ್ರಕುಮಾರ್ ಅವರೂ ಸದ್ದುಗದ್ದಲವಿಲ್ಲದೆ, ಶಾಂತಿ - ಪ್ರೀತಿ ಅರಸಿದ ಮೌನ ಸಾಧಕರು.
ಮೇ 15 ಮಂದಾರವಲ್ಲಿ ಅವರ ಜನ್ಮದಿನ. ಅವರು ತುಮಕೂರು ಜಿಲ್ಲೆಗೆ ಸೇರಿದ ಅಮೃತ್ತೂರು ಎಂಬ ಹಳ್ಳಿಯಲ್ಲಿ ಬೆಳೆದರು. ಬೆಳೆದ ಮನೆಯಲ್ಲಿ ಎಲ್ಲದಕ್ಕೂ ಆಳುಗಳಿದ್ದರೂ ಇವರೂ ತಮ್ಮ ಕುಟುಂಬದಲ್ಲಿನ ಇತರ ಮಕ್ಕಳೂ ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತಲೇ ಬೆಳೆದರು. ಜಾತಿ, ಧರ್ಮ, ಅಂತಸ್ತು ಯಾವುದೇ ರೀತಿಯ ವಿಭಜನೆಯೂ ಇಲ್ಲದ ವಾತಾವರಣ ಕುಟುಂಬದಲ್ಲಿತ್ತು. ಹಳ್ಳಿಯಲ್ಲಿ ಅಂಗನವಾಡಿಗೆ ಹೋಗುತ್ತಿದ್ದರು. ಬುದ್ಧಿಗೆ ತಿಳಿಯುವ ಮುಂಚಿನ ಇವರ ಎಳೆಯ ವಯಸ್ಸಲ್ಲೇ ಅಮ್ಮ ಅಸುನೀಗಿದ್ದರು.
ಮಂದಾರವಲ್ಲಿ ಅವರು ಹಳ್ಳಿಯ ಬದುಕಿನಿಂದ ಮೈಸೂರಿಗೆ ಬಂದು ವನಿತಾ ಸದನ, ಕ್ರೈಸ್ತ್ ದ ಕಿಂಗ್ ಕಾನ್ವೆಂಟ್, ಮಹಾರಾಣಿ ಕಾಲೇಜುಗಳಲ್ಲಿ ಓದಿದರು. ಟೈಪ್ ರೈಟಿಂಗ್, ಷಾರ್ಟ್ ಹ್ಯಾಂಡ್ ಕೂಡಾ ಮಾಡಿದರು. ಹೋದಲ್ಲೆಲ್ಲ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆಯುತ್ತಿದ್ದರು. ಮಾನಸ ಗಂಗೋತ್ರಿಯಲ್ಲಿ ಮಾಸ್ಟರ್ ಡಿಗ್ರಿ ಮಾಡಿದರು. ಡೆಹ್ರಾಡೂನಿನ ಪ್ರತಿಷ್ಠಿತ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಿಜುವಲಿ ಹಾಂಡಿಕ್ಯಾಪ್ಡ್ ಸಂಸ್ಥೆಯಲ್ಲಿ ಹೆಲ್ಲೆನ್ ಕೆಲ್ಲರ್ ಅವಾರ್ಡ್ನ ಸ್ಕಾಲರ್ಷಿಪ್ ದೊರೆಯಿತು. ಅಲ್ಲಿಯೇ ಪಿಎಚ್.ಡಿ ಮಾಡುವ ಉತ್ಕಟ ಆಸೆಯೂ ಇತ್ತು. ಆದರೆ ಡೆಹ್ರಾಡೂನಿನಲ್ಲಿಯೇ ಹೋಗಿ ಮಾಡುವುದು ಸಾಧ್ಯವಾಗಲಿಲ್ಲ. ನಂತರ
ಯುಜಿಸಿ ಫೆಲೋಷಿಪ್ ದೊರೆತು ಭಾರತದಲ್ಲೇ ಮೊದಲ ಅಧ್ಯಯನ ಎಂಬ ಹೆಗ್ಗಳಿಕೆಯೊಂದಿಗೆ "Cognitive Development In Visually Handicapped - ಅಂಧಮಕ್ಕಳಲ್ಲಿ ಸಂಜ್ಞಾತ್ಮಕ ವಿಕಾಸ" ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದರು.
ನಾಲ್ಕುವರ್ಷದ ಅವಧಿಯ ಪಿಎಚ್.ಡಿ ಅಧ್ಯಯನದ ಸಮಯದಲ್ಲಿ ಮಂದಾರವಲ್ಲಿ ಮತ್ತು ಜಿ. ಕೆ. ರವೀಂದ್ರಕುಮಾರ್ ವಿವಾಹ ಆಗುವ ಕುರಿತ ಮಾತುಕತೆಗಳು ನಡೆದಿದ್ದವು. ಇವರ ಪಿಎಚ್.ಡಿ ಪ್ರಬಂಧ ಕುರಿತ ಸಿನಾಪ್ಸಿಸ್ ನೋಡಿದ್ದ ದೆಹಲಿಯ ಎನ್.ಸಿ.ಇ.ಆರ್.ಟಿ ಮುಖ್ಯಸ್ಥರಾಗಿದ್ದ ನರೇಂದ್ರ ವೈದ್ಯ ಅವರು ಕೆನಡಾ ದೇಶದಲ್ಲಿ ಇವರನ್ನು ನೌಕರಿಗೆ ಶಿಫಾರಸ್ಸು ಮಾಡಿ ಪ್ರಸ್ತಾಪ ಮುಂದಿಟ್ಟಾಗ, ಮಂದಾರವಲ್ಲಿ ಅವರು ರವೀಂದ್ರ ಕುಮಾರರ ಜೊತೆಗಿನ ಕನ್ನಡದ ನೆಲದ ಈ ಕ್ಷಣದ ಕಣ್ಣ ಮುಂದಿನ ಬದುಕೇ ತಮಗೆ ಸಾಕೆಂದರು. ‘ಜಗತ್ತಿಗೆ ಕೆನಡಾ ಮಹತ್ತಾಗೆ ಕಾಣುತ್ತೆ. ಆದರೆ ನನ್ನ ಮಹತ್ತು ರವೀಂದ್ರ. ಈ ಮಹತ್ತಿನ ಮುಂದೆ ಯಾವ ಕೆನಡಾ, ಯಾವ ಅಮೆರಿಕಾ?" ಎಂಬುದು ಮಂದಾರವಲ್ಲಿ ಅವರ ಅಚಲ ನಿರ್ಧಾರವಾಗಿತ್ತು.
ಆಕಾಶವಾಣಿಯಲ್ಲಿ ಆಗಾಗ ವರ್ಗಾವಣೆಯ ಹುದ್ದೆಯಲ್ಲಿದ್ದ ಪತಿ ರವೀಂದ್ರ ಕುಮಾರರ
ಜೊತೆ ಹರಿಯುತ್ತಲೇ ಹೋದ ಮಂದಾರವಲ್ಲಿ ಅವರ ಜೀವನದಿಗೆ ಸುಮ್ಮನೆ ಇರುವ ಜಾಯಮಾನ ಇರಲಿಲ್ಲ. ಆದ್ದರಿಂದ ಆಕಾಶವಾಣಿಯಲ್ಲಿ ಹಂಗಾಮಿ ಉದ್ಘೋಷಕಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ವಾರ್ತಾವಾಚಕಿ ಆಗಿ ಕಾರ್ಯ ನಿರ್ವಹಿಸಿದರು. ಜೊತೆಗೆ ಟೈಪಿಂಗ್ ಕೆಲಸಗಳು, ಟೈಲರಿಂಗ್, ಎಂಬ್ರಾಯ್ಡರಿ ಹೀಗೆ ಅನೇಕ ಆಸಕ್ತಿಗಳಲ್ಲಿ ಕೆಲಸ ಮಾಡಿದರು. ಎಲ್ಲ ಕ್ಷೇತ್ರಗಳೂ ಇವರಿಗೆ ವಿಪುಲವಾದ ಅನುಭವಗಳನ್ನು ಕೊಡುತ್ತ ಬಂದವು.
ಮಂದಾರವಲ್ಲಿ ಅವರ ಮುಂದೆ ಪ್ರಾಣಚೈತನ್ಯ ಚಿಕಿತ್ಸೆ, ಗಾಯತ್ರಿ ಯೋಗ ಇವುಗಳ ಮೂಲಕ ಕಣ್ಣಿಗೆ ಕಾಣದ ಚೈತನ್ಯವಲಯಗಳ ಅದ್ಭುತ ವಿಜ್ಞಾನದ ಲೋಕ ತೆರೆದುಕೊಂಡಿತು. ಹೀಗೆ ಬರೆದ ಮೊದಲ ಪ್ರಬಂಧ ‘ಗೊಂದಲಗಳ ನಾಡಿನಲ್ಲಿ’. ಅದು ಪ್ರಕಟವಾದದ್ದು ಚಂದ್ರಶೇಖರ ಪಾಟೀಲರ ಸಂಕ್ರಮಣ ಪತ್ರಿಕೆಯಲ್ಲಿ. ನಂತರ ಸ್ಫೂರ್ತಿ ಬಂದು ಇವರು ಬರೆದ ಕೆಲವು ವೈಚಾರಿಕ ಲೇಖನಗಳು, ಕಥೆಗಳು, ಹಾಸ್ಯ ಬರಹ ಮುಂತಾದವು ಕಸ್ತೂರಿ, ತುಷಾರ, ಉದಯವಾಣಿ, ಕನ್ನಡ ಪ್ರಭ ಮುಂತಾದೆಡೆ ಪ್ರಕಟವಾದವು.
ಗೊಂದಲಗಳ ನಾಡಿನಲ್ಲಿ, ಕಾಮನಬಿಲ್ಲು, ಮುತ್ತು ಬೆಳೆಯಲಿ ಕಡಲಲ್ಲಿ ಉಪ್ಪಿನೊಂದಿಗೆ, ತನ್ನನೇ ಕೊಡುವನು ಬಾರೆ ಸಖಿ, ಗುಬ್ಬಚ್ಚಿ ಸ್ನಾನ, ಬೊಗಸೆಯೊಳಗಿನ ಅಲೆ, ದಿವ್ಯ ಚಿಕಿತ್ಸೆ - ಆರೋಗ್ಯಕ್ಕೆ ಹೆಬ್ಬಾಗಿಲು ಮುಂತಾದವು ಮಂದಾರವಲ್ಲಿ ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.
ಆದರೂ ಮಂದಾರವಲ್ಲಿ ಅವರಿಗೆ ಬರವಣಿಗೆ ಮುಖ್ಯ ಅನಿಸಲಿಲ್ಲ. "ನಾನು ಎಂಬ ಒಳಜಗತ್ತೇ ನನಗೆ ಸವಾಲು ಹೊರತು, ಹೊರಜಗತ್ತು, ವ್ಯಕ್ತಿ, ಘಟನೆಗಳು ನನಗೆ ಸವಾಲು ಅಂತ ಅನ್ನಿಸಿಲ್ಲ" ಎಂಬುದು ಮಂದಾರವಲ್ಲಿ ಅವರ ಚಿಂತನೆ. ಅವರ ಬರಹಗಳಲ್ಲಿ ಕಂಡು ಬರುವ ಮನೋವಿಜ್ಞಾನದ ನೆಲೆಗಳು, ನಮ್ಮನ್ನು ಮಾನವ ಅಂತರಾಳಲೋಕದ ವಿಭಿನ್ನ ಕತ್ತಲೆ ಮತ್ತು ಬೆಳಕಿನ ಭಾವಗಳೆಡೆಗೆ ನಮ್ಮನ್ನು ಒರೆಹಚ್ಚುತ್ತಿವೆಯೇನೊ ಅನಿಸುತ್ತದೆ. ಅವರ 'ಗುಬ್ಬಚ್ಚಿ ಸ್ನಾನ'ದಂತಹ ಹಾಸ್ಯ ಬರಹಗಳ ಸಂಕಲನ ಕೂಡ ಕೇವಲ ಹಾಸ್ಯಮುಖಿಯಾಗದೆ, ವಿನೋದ ಶೈಲಿಯಲ್ಲಿ ಚಿಂತನಗಳನ್ನು ಹೊರಹೊಮ್ಮಿಸುವಂತಿವೆ.
ಒಮ್ಮೆ ಕದ್ರಾದ ಹೈಡ್ರೋ ಎಲೆಕ್ಟ್ರಿಕಲ್ ಪವರ್ ಪ್ರಾಜೆಕ್ಟ್ ನ ಚೀಫ್ ಎಂಜಿನಿಯರ್ ಹರಿಹರನ್ ಅಯ್ಯರ್ ಆಕಾಶವಾಣಿಗೆ ಕಾರ್ಯಕ್ರಮ ಕೊಡಲು ಬಂದಿದ್ದ ಸಂದರ್ಭದಲ್ಲಿ ರವೀಂದ್ರ ಅವರನ್ನು ಮಧ್ಯಾಹ್ನ ಊಟಕ್ಕೆ ಮನೆಗೆ ಕರೆತಂದರು. ಪ್ರಾಣಚೈತನ್ಯ ಚಿಕಿತ್ಸೆ ನೀಡುತ್ತಿದ್ದ ಅವರ ಬಳಿ ಮಂದಾರವಲ್ಲಿ ಅವರು ಪ್ರಾಣಚೈತನ್ಯ ಚಿಕಿತ್ಸೆಯಲ್ಲಿ ಅನೇಕ ಹಂತಗಳ ಪದವಿ ಪಡೆದರು. "ಇಲ್ಲಿ ಪ್ರತಿಯೊಂದರಲ್ಲೂ ಶುದ್ಧೀಕರಣಕ್ಕೇ ಪ್ರಾಧಾನ್ಯ. ಈ ಅನ್ವೇಷಣೆ ನಮ್ಮ ಮನಸ್ಸಿನ ವಲಯದೊಳಗೇ ನಡೆಯುತ್ತವೆ ಆದ್ದರಿಂದ ನಾನು ಎಂದರೆ ಏನು ಎಂಬ ಅನೇಕ ಪ್ರಶ್ನೆಗಳಿಗೆ ನೇರ ಉತ್ತರಗಳು ದೊರೆಯುತ್ತವೆ. ಸ್ವೀಕರಿಸಲು ಸಾಕಷ್ಟು ಸಾಮರ್ಥ್ಯ ಮತ್ತು ಗುರುವಿನ ಮಾರ್ಗದರ್ಶನದ ಅಗತ್ಯ ಬೀಳುತ್ತದೆ. ಈ ರೀತಿ ಮನದೊಳಗಿನ ಅನ್ವೇಷಣೆಯಲ್ಲಿ ಕೆಲವು ವರ್ಷಗಳು ಬರೆಯುವುದನ್ನೇ ಬಿಟ್ಟುಬಿಟ್ಟೆ. ಅದೊಂದು ರೀತಿ ನನಗೆ ಅತ್ಯಂತ ಆನಂದವಾದ ಸಮಯ. ಆ ಸಮಯದಲ್ಲಿ ದೊರೆತ ಗುರು ಪರಂಪರೆಗಳು ಮತ್ತು ಗುರುಮುಖೇನವೇ ಕಲಿತ ಪಾಠಗಳು ಅಪಾರ. ಉಪನಿಷತ್ತುಗಳು, ಭಗವದ್ಗೀತೆ, ಲಲಿತಾ ಸಹಸ್ರನಾಮ ಒಂದೇ ಎರಡೇ! ನನಗೆ ದೊರೆತ ಗುರು ವೇದಬ್ರಹ್ಮ ಎಂದು ಕರೆಯಲ್ಪಟ್ಟವರು. ‘ಪಿತಾ ಜ್ಞಾನಂ’ ಅವರು ನನಗೆ ತಂದೆ ಆಗಿದ್ದವರು. ಮೊಗೆಮೊಗೆದು ಜ್ಞಾನ ನೀಡಿದರು. ಒಂದಿಷ್ಟು ಕೂಡಾ ಬೇಸರಿಸದೆ ಹಿಡಿದಿಟ್ಟುಕೊಳ್ಳದೆ ಪ್ರತಿ ಸಂಶಯಗಳಿಗೂ ಅನುಭವದ ಉತ್ತರಗಳನ್ನೇ ಹುಡುಕಲು ಹೇಳುತ್ತಿದ್ದರು. ಅವರು, ಮಗುವಿನಂತೆ ಹೇಳುತ್ತಿದ್ದರು. ಮೌನ ಅಪಾರ ಮೌಲ್ಯದ್ದಾಗಿ ಕಂಡಿತು" ಎಂದು ಆ ಅನುಭವದ ಬಗ್ಗೆ ಮಂದಾರವಲ್ಲಿ ಹೇಳುತ್ತಾರೆ. 2024ರ ಮೇ 29ರಂದು ಇವರ 'ದಿವ್ಯ ಚಿಕಿತ್ಸೆ - ಆರೋಗ್ಯಕ್ಕೆ ಹೆಬ್ಬಾಗಿಲು' ಎಂಬ ಕೃತಿ ಬಿಡುಗಡೆಗಂಡಿತು. ಬದುಕಿನ ಶಿಸ್ತು, ಮನೋ ಶ್ರದ್ಧೆ, ಸಂಸ್ಕಾರದ ರೂಪಕಗಳ ತಿದ್ದು ತೀಡುವಿಕೆಯ ಕುರಿತಾದ ಇಲ್ಲಿನ ಬರಹಗಳು 'ಪ್ರಾಫಿಟ್ ಪ್ಲಸ್' ನಿಯತಕಾಲಿಕದಲ್ಲಿ ಮೂಡಿ ಅಪಾರ ಜನಪ್ರೀತಿ ಗಳಿಸಿವೆ. ಭಾಗವತದ ಕುರಿತಾಗಿ ಎಲ್ಲರಿಗೂ ತಿಳಿಯುವಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ.
"ಕಳೆದ ವರ್ಷಗಳಲ್ಲಿ ಏನೂ ಬರೆದಿಲ್ಲ.
ಬಹುಶಃ ನನಗೆ ಅತ್ಯಂತ ಆಪ್ತವಾದ ಮೌನದಲ್ಲಿ ರವೀಂದ್ರರೊಂದಿಗೇ ಇದ್ದೀನೇನೋ. ಈ ಇರವು ನನ್ನೊಳಗನ್ನು ಹೆಚ್ಚು ಶ್ರೀಮಂತಗೊಳಿಸುತ್ತಿದೆ. ಹೆಚ್ಚುಹೆಚ್ಚು ಆಂತರಿಕ ಶೋಧದಲ್ಲಿ ಮುಳುಗಿದ್ದೇನೆ. ವಿಚಾರಗಳಲ್ಲಿ ಮತ್ತಷ್ಟು ನಿಖರತೆ ಬೆಳೆದು ಗಟ್ಟಿಯಾಗುತ್ತಿದ್ದೇನೆ. ನೋವು, ಸಂಕಟ, ಕಷ್ಟ, ತಲ್ಲಣ, ಕಣ್ಣೀರು, ದುಃಖ, ಗದ್ಗದವಾದ ಮನಸ್ಸು, ಎಲ್ಲವನ್ನೂ ಹೊತ್ತು ಸಾಗಬಲ್ಲೆ ಆದರೆ ಎಲ್ಲವನ್ನೂ ಹೊರಚೆಲ್ಲಿಯೇ ನಡೆಯಬೇಕೆಂಬ ಒತ್ತಡವಿಲ್ಲ. ಯಾವುದೂ ಭಾರವೆನಿಸುತ್ತಿಲ್ಲ. ಅವುಗಳ ಒಳಗೆ ಮತ್ತೇನೋ ಕಾಣಿಸುತ್ತಿದೆ. ಜ್ಞಾನ ವಿಸ್ತಾರಗೊಳ್ಳುತ್ತಿದೆ." ಎನ್ನುತ್ತಾರೆ ಮಂದಾರವಲ್ಲಿ.
ಮಂದಾರವಲ್ಲಿ ಅವರು ಫೇಸ್ಬುಕ್ನಲ್ಲಿನ ನಮ್ಮ ಲೇಖನಕ್ಕೆ ಮೂಡಿಸುವ ಪ್ರತಿಕ್ರಿಯೆಯಲ್ಲೂ ಆಳ ಅನುಭಾವದ ವೈಚಾರಿಕ ಹೊಳಹುಗಳು ಅರಳಿ, ನಮ್ಮ ಮನ ಅರಳಿಸುವಂತಿರುತ್ತವೆ. .
ಈ ಬರಹ ಮಂದಾರವಲ್ಲಿ ಎಂಬ ಆಪ್ತ ಗೌರವಾನ್ವಿತರ ಸುಜ್ಞಾನದೆಡೆಗೆ ಇಣುಕಿ ಅವರಿಗೆ ಜನ್ಮದಿನದ ಶುಭಾಶಯ ಹೇಳುವ ಕಿರುಪ್ರಯತ್ನವಾಗಿದೆ. ಮಂದಾರವಲ್ಲಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು 🌷🙏🌷
Happy birthday Mandara Valli 🌷🙏🌷
ಕಾಮೆಂಟ್‌ಗಳು