ಶೈಲಜಾ ಸಂತೋಷ್
ಶೈಲಜಾ ಸಂತೋಷ್
ಬದುಕಲ್ಲಿ ಹೇಗಿದ್ದರೆ ಚೆನ್ನ ಎಂಬುದಕ್ಕೆ ನೇರ ಉತ್ತರಗಳಿರುವುದಿಲ್ಲ. ಅದಕ್ಕೆ ಕೆಲವರ ಕಡೆ ಕೈತೋರಿಸಿ ಹೀಗಿದ್ದರೆ ಚೆನ್ನ ಎಂದು ಹೇಳಬಹುದು. ಹಾಗೆ ಪ್ರಭಾವ ಬೀರುವವರು ವಿರಳ. ಅವರು ಅತ್ಯಂತ ಸರಳರಾಗಿದ್ದುಕೊಂಡೇ, ತಾವು ಮಾಡುವ ಸರಳ ಕಾರ್ಯ ವೈಖರಿಯಲ್ಲೇ, ವಿಶಿಷ್ಟ ಛಾಪು ಹೊರಹೊಮ್ಮಿಸಿ, ಬಹುಕಾಲ ಜನ ಆನಂದದಿಂದ ನೆನಪಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ನನಗೆ ಶೈಲಜಾ ಸಂತೋಷ್ ತುಂಬಾ ನೆನಪಾಗುತ್ತಾರೆ.
ಶೈಲಜಾ ಅಂದರೆ ತಕ್ಷಣ ನಮ್ಮ ಕಣ್ಮುಂದೆ ಬರುವುದು ಅವರು ಕಿರುತೆರೆಯಲ್ಲಿ ಘನತೆಯೇ ಮೂರ್ತಿವೆತ್ತಂತೆ ನಡೆಸಿಕೊಡುತ್ತಿದ್ದ ಪರಿಚಯ, ಆದರ್ಶ ದಂಪತಿಗಳು ಮುಂತಾದ ಕಾರ್ಯಕ್ರಮಗಳು. ಅದು ನಮ್ಮಂತಹ ಸಾಮಾನ್ಯ ಕಣ್ಣಿಗೆ ಗೋಚರವಾಗುವ ಶೈಲಜಾ ಅವರ ಒಂದು ನೆಲೆಯಾದರೆ, ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳೆ ಮತ್ತು ಮಾನವ ಹಕ್ಕುಗಳ ಕುರಿತಾಗಿ ಉನ್ನತ ಮಟ್ಟದ ಅಧ್ಯಯನ, ವಿಷಯ ಪರಿಣಿತಿ, ಅಂತಾರಾಷ್ಟ್ರೀಯ ತಿಳುವಳಿಕೆಗಳನ್ನು ಗಳಿಸಿ, ಅನೇಕ ಕಾರ್ಯಾಗಾರಗಳನ್ನು ನಡೆಸುತ್ತಿರುವುದು ಮತ್ತೊಂದು ಉನ್ನತ ಮಜಲಿನದು.
ಶೈಲಜಾ ಸಂತೋಷ್ ಅವರು, ಮೂಲತಃ ಕುಂದಾಪುರದ ಹೈಕಾಡಿಯ ನಾಗೇರಿ ಊರಿನವರು. ಇವರ ತಂದೆ ಡಾ. ಸೂರ್ಯನಾರಾಯಣ ಆಚಾರ್ಯರು. ತಾಯಿ ಡಾ. ಅನಸೂಯಾ ದೇವಿ. ಬಾಲ್ಯದ ವಿದ್ಯಾಭ್ಯಾಸವನ್ನು, ಕುಂದಾಪುರದ ಆಸುಪಾಸಿನ ಹಳ್ಳಿಗಳಲ್ಲಿ ಪಡೆದು, ಮುಂದೆ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯದಲ್ಲಿ ಓದಿ, ವಿಶ್ವವಿದ್ಯಾಲಯಕ್ಕೆ, ತೃತೀಯ ರಾಂಕ್ ಪಡೆದು, ಆರ್ಟ್ಸ್ ವಿಭಾಗದಲ್ಲಿ ಪದವಿ ಗಳಿಸಿದರು. ಮುಂದೆ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಶೈಲಜಾ ಅವರು ಪತಿ ಸಂತೋಷ್ ಅವರ ಉತ್ತೇಜನ, ಒತ್ತಾಸೆಯಿಂದ, 1990ರಲ್ಲಿ ದೂರದರ್ಶನದಲ್ಲಿ, ಉದ್ಘೋಷಕರಾಗಿ ವೃತ್ತಿ ಆರಂಭಿಸಿ, ನಂತರ 1994ರಿಂದ ಉದಯ ಟಿವಿಯಲ್ಲಿ, ಕಾರ್ಯಕ್ರಮಗಳ ನಿರ್ಮಾಣ, ನಿರ್ವಹಣೆ ಮತ್ತು ನಿರೂಪಣೆ ಈ ವಿಭಾಗಗಳಲ್ಲಿ, ಕಾರ್ಯನಿರ್ವಹಿಸಿ, ಸರಿಸುಮಾರು 5,000 ಕ್ಕೂ ಮಿಗಿಲಾದ ಕಾರ್ಯಕ್ರಮಗಳನ್ನು ತಯಾರಿಸಿ ಕೊಟ್ಟರು. ಇವುಗಳಲ್ಲಿ ಬಹು ಜನಪ್ರಿಯವಾದ ಆದರ್ಶ ದಂಪತಿಗಳು, ಪರಿಚಯ, ವೈದ್ಯರೊಂದಿಗೆ, ಅತ್ತೆ ಸೊಸೆ, ಹೀಗೆ ಹಲವು ಸೇರಿವೆ. ಇವರ ನಿರ್ವಹಣೆ ಮತ್ತು ನಿರ್ದೇಶನದಲ್ಲಿ ಬಂದ ಡಾನ್ಸ್ ಡಾನ್ಸ್, ಕುಹೂ ಕುಹೂ, ಹರಟೆ, ನಾದ, ನಾಟ್ಯಾಂಜಲಿ, ಗೀತಾಂಜಲಿ, ಇಂದಿಗೂ ಜನರ ಮೆಚ್ಚುಗೆಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿವೆ. ಇವಿಷ್ಟೇ ಅಲ್ಲದೆ ಮೆಗಾ ಲೈವ್ ಶೋಸ್, ಇವರ ಟ್ರಂಪ್ ಕಾರ್ಡ್. ಇದೇ ಸಮಯದಲ್ಲಿ ಉಷೆ, ಉದಯ ನ್ಯೂಸ್, ಉದಯ ಮ್ಯೂಸಿಕ್, ಉದಯ ಕಾಮಿಡಿ ಮೊದಲಾದ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದರು. 2007ರ ನಂತರ, ಕನ್ನಡದ ಇತರ ಎಲ್ಲ ವಾಹಿನಿಗಳಾದ, ಕಸ್ತೂರಿ, ಸುವರ್ಣ, ಝೀ ಕನ್ನಡ ಮುಂತಾದವುಗಳಲ್ಲಿ ಕೆಲಸ ಮಾಡಿದರು.
ಶೈಲಜಾ ಅವರು ಅನೇಕ ಸಾಕ್ಷ್ಯ ಚಿತ್ರಗಳ ನಿರ್ಮಾಣ, ನಿರ್ವಹಣೆ, ನಿರ್ದೇಶನಗಳನ್ನು ನಿರ್ವಹಿಸಿ, ಹಿನ್ನಲೆ ದ್ವನಿ ನೀಡಿದ್ದು, ಇವು, ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ, ಮೈಸೂರಿನ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜ್ಸ್ ಸಂಸ್ಥೆಯಲ್ಲಿ ಅಧ್ಯಯನಕ್ಕಾಗಿ ತಯಾರು ಪಡಿಸಿದ ಚಿತ್ರಗಳ ಯಾದಿಯಲ್ಲಿ ಸೇರಿವೆ.
ಶೈಲಜಾ ಅವರು 2008ರಲ್ಲಿ, ಹ್ಯೂಮನ್ ರೈಟ್ಸ್ ವಿಷಯದಲ್ಲಿ ಮತ್ತೊಂದು ಮಾಸ್ಟರ್ಸ್ ಮಾಡಿಕೊಂಡು, ನಂತರ ಉನ್ನತ ಅಧ್ಯಯನಕ್ಕೆ ಸ್ಕಾಲರ್ ಶಿಪ್ ಪಡೆದು, ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಒಂದು ವರ್ಷ ಓದಿ, ತದ ನಂತರ, ತಾವು ಓದಿದ ಕಾಲೇಜಿನಲ್ಲಿ , ಟ್ರೈನ್ ದ ಟ್ರೈನರ್ ಇನ್ ಹ್ಯೂಮನ್ ರೈಟ್ಸ್ -ಪಿಜಿ diploma ಆರಂಭಿಸಿ, ಹಲವು ವರ್ಷ ಕಾರ್ಯ ನಿರ್ವಹಿಸಿ, ಐವತ್ತಕ್ಕೂ ಹೆಚ್ಚು ಕಾರ್ಯಾಗಾರ ನಡೆಸಿದ್ದಾರೆ. ಅನೇಕ ಅಂತರಾಷ್ಟ್ರೀಯ ಅಧಿವೇಶನಗಳಲ್ಲಿ ದುಡಿದ ಅನುಭವ ಇವರಿಗಿದೆ. ಮುಖ್ಯವಾಗಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಿಷಯದಲ್ಲಿ ಉನ್ನತ ಮಟ್ಟದ ಅಧ್ಯಯನ, ವಿಷಯ ಪರಿಣಿತಿ, ಅಂತಾರಾಷ್ಟ್ರೀಯ ತಿಳುವಳಿಕೆ ಪಡೆದಿದ್ದಾರೆ. ಇದಲ್ಲದೆ ನೆದರ್ ಲ್ಯಾಂಡ್ಸ್ ದೇಶದ Reflective Learning and Teaching ಮೂಲಕ, ಕೌನ್ಸೆಲಿಂಗ್ ವಿಷಯದಲ್ಲಿ ಮತ್ತೊಂದು ಡಿಪ್ಲೊಮಾ ಗಳಿಸಿದ್ದಾರೆ.
ಶೈಲಾಜಾ ಅವರು ರೋಟರಿ ಇಂಟರ್ನ್ಯಾಷನಲ್ Group Study Exchange ಎಂಬ ಅಧ್ಯಯನಶೀಲ ವಿನಿಮಯ ಯೋಜನೆಯ ಮೂಲಕ ಸಾಂಸ್ಕೃತಿಕ ರಾಯಭಾರಿಯಾಗಿ ಆಗಿ, ಅಮೆರಿಕಾ ವಾಸ, ಮತ್ತು ಪ್ರವಾಸ ಮಾಡಿದ್ದಾರೆ. ಅಮೆರಿಕಾದ ಅಕ್ಕ ಸಂಸ್ಥೆಗಾಗಿ ಮನೋರಂಜನೆ ಎನ್ನುವ ವಿನೂತನ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಅಮೆರಿಕಾದ ಉದ್ದಗಲಕ್ಕೂ ಸಂಚರಿಸಿ 13 ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈ ಕಾರ್ಯಕ್ರಮದಿಂದ ಒದಗಿಬಂದ ಹಣವನ್ನು ಭಾರತದಲ್ಲಿನ ಶಾಲೆಗಳ ಅಭಿವೃದ್ದಿಗೆ ನೀಡಲಾಗಿದೆ. ಹೀಗೆ ನಿರಂತರವಾಗಿ ಪ್ರವಾಸ, ಜನರ ಭೇಟಿ ಮತ್ತು ಜ್ಞಾನಗಳಿಕೆಯೇ ಜೀವನದಲ್ಲಿ ಒಂದೊಳ್ಳೆ ಕಲಿಕೆಯ ಅನುಭವ ಅನ್ನುತ್ತಾರೆ.
ಶೈಲಜಾ ಅವರಿಗೆ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ, ಲಯನ್ಸ್, ಪ್ರಸಿದ್ಧಿ ಫೌಂಡೇಷನ್, ರೋಟರಿ ಇಂಟರ್ ನ್ಯಾಶನಲ್ ಮುಂತಾದ ಅನೇಕ ಸಂಸ್ಥೆಗಳಿಂದ ಹಲವು ಬಾರಿ ವಿಶಿಷ್ಟ ಮಹಿಳಾ ಸಾಧಕಿ (Woman Achiever) ಗೌರವಗಳು ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಆತ್ಮೀಯರಾದ ನಮ್ಮ ಹೆಮ್ಮೆಯ ಶೈಲಜಾ ಸಂತೋಷ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Shylaja Santhosh
ಕಾಮೆಂಟ್‌ಗಳು