ಕೂರ್ಮಾವತಾರ
ಕೂರ್ಮಾವತಾರ
ಕೂರ್ಮಾವತಾರ ಮಹಾವಿಷ್ಣುವಿನ ದಶಾವತಾರಗಳಲ್ಲಿ ಎರಡನೆಯದು. ಅಷ್ಟಾದಶಾಪುರಾಣಗಳಲ್ಲಿ 15ನೆಯದಾದ ಕೂರ್ಮಪುರಾಣ ಈ ಅವತಾರವನ್ನು ವರ್ಣಿಸುತ್ತದೆ. ಈಗ ನಡೆಯುತ್ತಿರುವ ಶ್ವೇತವರಾಹ ಕಲ್ಪದ ಚಾಕ್ಷುಷ ಮನ್ವಂತರದಲ್ಲಿ ಇದು ನಡೆಯಿತು.
ದೇವಾಸುರರಲ್ಲಿ ದೇವತೆಗಳ ಬಲ ದಿನೇದಿನೇ ಕ್ಷಯಿಸುತ್ತ ಬಂದು ಅಸುರರ ಪ್ರಾಬಲ್ಯ ಹೆಚ್ಚಿದುದರಿಂದ ಮಧಾಂಧರಾದ ರಾಕ್ಷಸರು ದೇವತೆಗಳಿಗೆ ಹೆಚ್ಚಿನ ಕಿರುಕುಳ ಕೊಟ್ಟರು. ಇದನ್ನು ಸಹಿಸಲಾರದ ಇಂದ್ರಾದಿ ದೇವತೆಗಳು ಬ್ರಹ್ಮಪುರಸ್ಸರರಾಗಿ ವಿಷ್ಣುವಿನ ಮೊರೆಹೊಕ್ಕರು. ಅವರ ಮೊರೆಯನ್ನು ಕೇಳಿ ಕನಿಕರಗೊಂಡ ವಿಷ್ಣು ಅವರಿಗೆ ಸಮುದ್ರಮಥನ ಮಾಡಿ ಅಮೃತವನ್ನು ಪಡೆದು ಅಜರರು ಅಮರರೂ ಆಗುವ ಉಪಾಯವನ್ನು ಉಪದೇಶಿಸಿದ.
ವಾಸುಕಿಯನ್ನು ಹಗ್ಗವನ್ನಾಗಿಯೂ ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ ಮಾಡಿಕೊಂಡು ಕ್ಷೀರಸಮುದ್ರವನ್ನು ಕಡೆದರೆ ಅಮೃತ ದೊರೆಯುವುದು, ಅದನ್ನು ಪಾನಮಾಡಿದರೆ ತಾವೆಲ್ಲರೂ ಅಮರರಾಗಿ ಸುಖಸಂತೋಷಗಳಿಂದ ಅನಂತಕಾಲದವರೆಗೂ ಇರಬಹುದು ಎಂದು ದೇವತೆಗಳು ರಾಕ್ಷಸರ ಮನಸ್ಸನ್ನು ಉಪಾಯದಿಂದ ಒಲಿಸಿದರು.
ಅನಂತರ ದೇವಾಸುರರೆಲ್ಲರೂ ಕಲೆತು ಕ್ಷೀರಸಮುದ್ರವನ್ನು ಮಥನಮಾಡಲು ಉಪಕ್ರಮಿಸಿದರು. ಆದರೆ ಕಡೆಗೋಲಾಗಿದ್ದ ಆ ಮಹಾಪರ್ವತ ಸಮುದ್ರತಳಕ್ಕಿಳಿದುಬಿಟ್ಟಿತು. ದಿಕ್ಕುತೋಚದ ದೇವತೆಗಳು ಮತ್ತೆ ಮಹಾವಿಷ್ಣುವಿಗೆ ಶರಣುಹೋಗಲು ಆತ ತನ್ನೊಂದು ಅಂಶದಿಂದ ಕೂರ್ಮರೂಪವನ್ನು ತಾಳಿ ತನ್ನ ಬೆನ್ನಿನ ಮೇಲೆ ಪರ್ವತವನ್ನು ಎತ್ತಿ ನಿಲ್ಲಿಸಿಕೊಂಡು ದೇವಾಸುರರು ಸಮುದ್ರಮಥನ ಮಾಡಲು ಅವಕಾಶ ಕಲ್ಪಿಸಿದ.
ಕೂರ್ಮಾವತಾರದಲ್ಲಿ ಮಹಾವಿಷ್ಣು ಇಂದ್ರದ್ಯುಮ್ನನ ಪ್ರಸಂಗದ ಮೂಲಕ ಋಷಿಗಳಿಗೆ ಚತುರ್ವಿಧ ಪುರುಷಾರ್ಥಗಳ ಮಹತ್ವವನ್ನು ವರ್ಣಿಸಿ ಉಪದೇಶಿಸಿದ್ದಾನೆ.
Art by: Sukanta Das
The Kurma - Avatar of Lord Vishnu
ಕಾಮೆಂಟ್‌ಗಳು