ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೇಶವಮೂರ್ತಿ


ಆರ್. ಆರ್. ಕೇಶವಮೂರ್ತಿ


ಆರ್ ಆರ್ ಕೇಶವಮೂರ್ತಿ ಅಗ್ರಗಣ್ಯರೆನಿಸಿದ್ದ ಪಿಟೀಲು ವಿದ್ವಾಂಸರಲ್ಲಿ ಒಬ್ಬರು.

ಆರ್ ಆರ್ ಕೇಶವಮೂರ್ತಿಗಳು ಸಂಗೀತದ ಕಾಶಿ ಎನಿಸಿರುವ  ರುದ್ರಪಟ್ಟಣದಲ್ಲಿ 1914ರ  ಮೇ 27 ರಂದು  ಜನಿಸಿದರು. ಅವರ  ತಂದೆ ರಾಮಸ್ವಾಮಯ್ಯನವರು.  ತಾಯಿ ಸುಬ್ಬಮ್ಮನವರು. ಇವರ ತಾತ ವೆಂಕಟರಾಮಯ್ಯನವರು ಸುಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಗೀತಕಾರರು. ಅವರದ್ದು ಸಂಗೀತದ ಮನೆತನ.  ಹೀಗೆ  ತಂದೆಯಿಂದಲೇ ಅವರ ಸಂಗೀತದ ಮೊದಲ ಕಲಿಕೆ ಪ್ರಾರಂಭವಾಯಿತು. 

1923ರ ವೇಳೆಗೆ ಮೈಸೂರಿಗೆ ಬಂದ ಕೇಶವಮೂರ್ತಿಗಳು ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಅಭ್ಯಾಸ ಪ್ರಾರಂಭಿಸಿದರು. ಚಿಕ್ಕರಾಮರಾಯರಲ್ಲಿ ಗಾಯನ ಕಲಿಕೆ ನಡೆಸಿದರು. ಕಟ್ಟುನಿಟ್ಟಾದ ಪಾಠ, ಹಠದ ಸಾಧನೆ. ದಿನಕ್ಕೆ ಎಂಟು ಗಂಟೆಗಳ ಸತತ ಅಭ್ಯಾಸ ಅಂದಿನ ದಿನದ ಅವರ ಕಲಿಕೆಯ ವಿಧಾನವಾಗಿತ್ತು. ಟಿ. ಚೌಡಯ್ಯನವರಂತೆ ಅವರು  ಪಿಟೀಲು ಅಭ್ಯಾಸ ಮಾಡಿದ್ದು ಏಳುತಂತಿಗಳಲ್ಲಿ. ವಿದ್ವಾಂಸರ ಕಚೇರಿಗಳಲ್ಲಿ ಹಾಡುಗಾರರ ಮರ್ಜಿಯಂತೆ ನಾಲ್ಕು ತಂತಿ ಇಲ್ಲವೇ ಏಳುತಂತಿ ಪಿಟೀಲಿನ ಜೊತೆಗಾರಿಕೆ ನಿರ್ವಹಿಸಿದರು.

ಕೇಶವಮೂರ್ತಿಗಳು 1934ರಲ್ಲಿ ಬೆಂಗಳೂರಿನಲ್ಲಿ ವಾಸ ಕೈಗೊಂಡರು. ತೆಲುಗು, ಕನ್ನಡ, ತಮಿಳು, ಹಿಂದಿ, ಭಾಷೆಗಳಲ್ಲಿ ಅವರು  ಪ್ರಭುತ್ವ ಪಡೆದಿದ್ದರು. ಗುರುಗಳ ಹೆಸರಿನಲ್ಲಿ ಗಾನವಿಶಾರದ ಬಿಡಾರಂ ಕೃಷ್ಣಪ್ಪ ಸ್ಮಾರಕ ಸಂಗೀತ ವಿದ್ಯಾಲಯ ಸ್ಥಾಪನೆ ಮಾಡಿ ನೂರಾರು ವಿದ್ಯಾರ್ಥಿಗಳನ್ನು ಕಚೇರಿ ಮಾಡುವ ಮಟ್ಟಕ್ಕೆ ತಂದರು. ಶಿಷ್ಯರಲ್ಲಿ ಅನೇಕರು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದರು. ಅವರ ಶಿಷ್ಯರಲ್ಲಿ ಟಿ. ರುಕ್ಮಿಣಿ, ಆನೂರು ಎಸ್. ರಾಮಕೃಷ್ಣ, ಗಿಟಾರ್‌ ವಾದನದಲ್ಲೂ ಕರ್ನಾಟಕ ಸಂಗೀತಾಭ್ಯಾಸ ಮಾಡಿ ಕಚೇರಿ ನೀಡಿ ವಿಸ್ಮಯ ಮೂಡಿಸಿದ ಉದಯೋನ್ಮುಖ ಕಲಾವಿದ ನಿಖಿಲ್ ಜೋಶಿ, ಜ್ಯೋತ್ಸ್ನಾ ಶ್ರೀಕಾಂತ್‌,  ಅಂಬಳೆ ಕೃಷ್ಣಮೂರ್ತಿ, ನಳಿನಿ ಮೋಹನ್ ಮುಂತಾದವರ ಪಟ್ಟಿ ಬೆಳೆಯುತ್ತದೆ.

ಕೇಶವಮೂರ್ತಿಗಳು ಹಲವಾರು ಸಂಗೀತ ಗ್ರಂಥಗಳ ರಚನೆ ಮಾಡಿದರು. ಬಾಲಶಿಕ್ಷಾ, ವಾಗ್ಗೇಯಕಾರರ ಕೃತಿಗಳು, ಭಾರತೀಯ ವಾಗ್ಗೇಯಕಾರರು, ರಾಗಲಕ್ಷಣ ಮತ್ತು ರಾಗಕೋಶ, ಲಕ್ಷ್ಯ- ಲಕ್ಷಣ ಪದ್ಧತಿ, ಸಂಗೀತ ಲಕ್ಷ್ಯ ವಿಜ್ಞಾನ, ಹಿಂದುಸ್ತಾನಿ ಸಂಗೀತ ರಾಗಕೋಶ, ಮೇಳರಾಗ ಮಾಲಿಕಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಅವರು ಪ್ರಕಟಿಸಿದರು.

ಆರ್ ಆರ್ ಕೇಶವಮೂರ್ತಿಗಳಿಗೆ  ಗಾನ ಸಾಹಿತ್ಯ ಶಿರೋಮಣಿ, ಸಂಗೀತ ವಿದ್ಯಾಸಾಗರ, ಸಂಗೀತಶಾಸ್ತ್ರ ಪ್ರವೀಣ, ಸಂಗೀತ ಕಲಾರತ್ನ, ಕರ್ನಾಟಕ ಕಲಾತಿಲಕ, ಲಯಕಲಾನಿಪುಣ, ಸಂಗೀತ ಕಲಾಪ್ರಪೂರ್ಣ, ಕನಕಪುರಂದರ ಪ್ರಶಸ್ತಿ, ವೀಣೆಶೇಷಣ್ಣ ಪ್ರಶಸ್ತಿ ಹೀಗೆ ಹಲವಾರು ಗೌರವಗಳು ಅರ್ಪಿತವಾದವು.

ಮಹಾನ್ ಸಂಗೀತ ವಿದ್ವಾಂಸರಾದ ಆರ್ ಆರ್ ಕೇಶವಮೂರ್ತಿಗಳು 2006ರ ಅಕ್ಟೋಬರ್ 23ರಂದು ಈ ಲೋಕವನ್ನಗಲಿದರು. 

On the birth anniversary of great musician Vidwan R. R. Keshavamurthy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ