ನಾಗ ಎಚ್. ಹುಬ್ಳಿ
ನಾಗ ಎಚ್. ಹುಬ್ಳಿ
ಡಾ. ನಾಗ ಎಚ್. ಹುಬ್ಳಿ ಅವರು ಕಥೆಗಾರರಾಗಿ, ಅನುವಾದಕರಾಗಿ, ಆದಿವಾಸಿ ಜನಾಂಗೀಯ ಸಂಸ್ಕೃತಿಗಳ ತಲಸ್ಪರ್ಶಿ ಸಂಶೋಧಕರಾಗಿ ಹೆಸರಾಗಿದ್ದಾರೆ.
ನಾಗ ಅವರು 1970ರ ಮೇ 28ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಹುಬ್ಬಳ್ಳಿ
ಧಾರವಾಡಗಳಲ್ಲಿ ಬೆಳೆದ ಇವರ ವಿದ್ಯಾರ್ಹತೆಗಳಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್.ಡಿ ಸೇರಿವೆ.
ಡಾ. ನಾಗ ಎಚ್. ಹುಬ್ಬಿ ಅವರು ಪ್ರಸಕ್ತ ಝಾರ್ಖಂಡ್ ರಾಜ್ಯದ ರಾಂಚಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅನೇಕ ನಿಯತಕಾಲಿಕಗಳಲ್ಲಿ ಮೂಡಿಬಂದಿರುವ ಇವರ ಸೃಜನಶೀಲ ಬರಹಗಳು, ಸಂಶೋಧನೆಗಳು ಮತ್ತು ಅನುವಾದಗಳು ಜನಪ್ರಿಯವಾಗಿವೆ.
ಪ್ರೊ. ನಾಗ ಅವರು ಆದಿವಾಸಿಗಳನ್ನು ಕುರಿತು ಕಳೆದ ಎರಡೂವರೆ ದಶಕಗಳಿಂದ ಝಾರ್ಖಂಡ್, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಂಡಗಳೊಂದಿಗೆ ಬೆರೆತು, ಅಲ್ಲಿನ ಜನಾಂಗೀಯ ಅಧ್ಯಯನ ನಡೆಸುತ್ತ ಬಂದಿದ್ದಾರೆ. ಈ ನೆಲೆಯಲ್ಲಿ ಅವರು ಬರೆದಿರುವ 'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು', 'ಆದಿವಾಸಿ ಸಂಸ್ಕೃತಿ' 'ಅಸುರ' ಮುಂತಾದವು ಗಮನಾರ್ಹ ಕೃತಿಗಳಾಗಿವೆ. ಇವರ ಸಂಶೋಧನಾತ್ಮಕ ಬರಹಗಳು ಆದಿವಾಸಿ ಜನಾಂಗದ ಮೂಲಬೇರುಗಳನ್ನು ಹಾಗೂ ಬದುಕನ್ನು ನಮ್ಮ ಕಣ್ಮುಂದೆ ಇರಿಸುತ್ತವೆ. ಆ ಸಮುದಾಯಗಳ ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ಅತ್ಯಂತ ಕುತೂಹಲ ಮೂಡಿಸುವಂತೆ ನಾಗ ಅವರು ತಮ್ಮ ಕೃತಿಗಳ ಮೂಲಕ ಕಟ್ಟಿಕೊಡುತ್ತಾರೆ. ಇವಲ್ಲದೆ ಎಡ್ಗರ್ ಥರ್ಸ್ಟನ್-ರಂಗಾಚಾರಿ ಅವರ ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳ ಸಂಶೋಧನೆಯನ್ನು ಕುವೆಂಪು ಭಾಷಾ ಪ್ರಾಧಿಕರಕ್ಕಾಗಿ ಕನ್ನಡದಲ್ಲಿ ಅನುವಾದಿಸಿಕೊಟ್ಟಿದ್ದಾರೆ.
ನಾಗ ಎಚ್. ಹುಬ್ಬಿ ಅವರ ಅನುವಾದಕಾರ್ಯ ಬೃಹತ್ ಸ್ವರೂಪದ್ದು. ಬಂಗಾಳಿಯ ಮಾನದಾ ದೇವಿ ಪ್ರಣೀತಾ ಅವರ ಕೃತಿಯನ್ನು ನೇರವಾಗಿ ಬಂಗಾಳಿಯಿಂದಲೇ ಅನುವಾದಿಸಿರುವ ಇವರ ಕೃತಿಯಾದ 'ವಿದ್ಯಾವಂತ ವೇಶ್ಯೆಯ ಕಥೆ' ಜನಪ್ರಿಯವಾಗಿದೆ. 2023ರ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಗಳಿಸಿದ ಶೀರ್ಷೇಂದು ಮುಖೋಪಾಧ್ಯಾಯರ 'ಸಾಮೀಪ್ಯ' ಕೃತಿಯನ್ನೂ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಾಲೂ ದೇವಕೀನಂದನ ಖತ್ರಿಯವರ ಹಿಂದಿಯ ಬೃಹತ್ ಕಾದಂಬರಿ ಅನುವಾದವಾದ 'ಭೂತನಾಥ'ಕ್ಕೆ ನಾಗ ಅವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಸಂದಿದೆ. ಆ್ಯಾಂಡ್ರ್ಯೂ ಲಾಂಗ್ ಅವರ 'The Secret of the Totem’ ಅನ್ನು 'ಕುಲಚಿಹ್ನೆಯ ರಹಸ್ಯ'ವಾಗಿ ಕನ್ನಡಕ್ಕೆ ತಂದಿದ್ದಾರೆ. 2024ರಲ್ಲಿ ಬಿಡುಗಡೆಯಾಗಿರುವ ಸಾವರ್ಕರ್ ಸಮಗ್ರ ಸಂಪುಟದ ಮೊದಲ ಸಂಪುಟದ ಇವರ ಅನುವಾದ 900 ಪುಟಗಳಷ್ಟು ಬೃಹತ್ ಗಾತ್ರದ್ದಾಗಿದೆ. ಎಂ. ಎಂ. ಕೊತಾರಿ ಅವರ ಕೃತಿಯ ಅನುವಾದವಾದ 'ಗಾಂಧಿ ನಿಜಕ್ಕೂ ಮಹಾತ್ಮರೆ' ಇವರ ಮತ್ತೊಂದು ಅನುವಾದ. ಮೃತ್ಯಂಜಯ ಶರ್ಮ ವಿರಚಿತ 'ರಾಜಾವಳಿ' ಯನ್ನೂ ಅನುವಾದಿಸಿದ್ದಾರೆ. ಕನ್ನಡದಿಂದ ಹಿಂದಿಗೆ 'ಪಾಠಶಾಲಾ ಮೇ ಗಾಂಧೀಜಿ' ಎಂಬ ಕೃತಿ ಅನುವಾದಿಸಿದ್ದಾರೆ.
ನಾಗ ಎಚ್. ಹುಬ್ಬಿ ಅವರು ಮಾಯಾವಿ ಕೊಳಲು ಎಂಬ ಕೃತಿಯನ್ನೂ ಪ್ರಕಟಿಸಿದ್ದಾರೆ. ಇವರ 'ಬದಲಾದರೆ ಯೋಚನೆ, ಗೆಲುವು ನಿಮ್ಮದೇ' ವ್ಯಕ್ತಿತ್ವ ವಿಕಸನಕ್ಕೆ ಸ್ಪೂರ್ತಿದಾಯಕ ಕಥೆಗಳನ್ನು ಹೊಂದಿವೆ. ಹಾಕಿ ಮಾಂತ್ರಿಕ 'ಮೇಜರ್ ಧ್ಯಾನಚಂದ್' ಇವರ ಮತ್ತೊಂದು ಕೃತಿ.
ಪ್ರಾಧ್ಯಾಪಕ, ಸಂಶೋಧಕ ಮತ್ತು ಬರೆಹಗಾರ ಡಾ. ನಾಗ ಎಚ್. ಹುಬ್ಳಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday Naga H Hubli Sir 🌷🙏🌷
ಕಾಮೆಂಟ್‌ಗಳು