ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್. ಎಸ್. ರಮಾಕಾಂತ್

 

ರುದ್ರಪಟ್ನಮ್ ಎಸ್.ರಮಾಕಾಂತ್

ವಿದ್ವಾನ್ ರುದ್ರಪಟ್ನಮ್ ಎಸ್. ರಮಾಕಾಂತ್ ಅವರು ಸಂಗೀತ ಲೋಕಖ್ಯಾತಿಯ ಹಾಸನ ಜಿಲ್ಲೆಯ ರುದ್ರಪಟ್ನಮ್‍ನ ಆರ್.ಕೆ. ಕುಟುಂಬದ 4ನೆಯ ತಲೆಮಾರಿನ ಮೇರು ಸಂಗೀತಕಲಾವಿದರಾಗಿದ್ದಾರೆ. ಸಂಗೀತಲೋಕದಲ್ಲಿನ ಅಮೂಲ್ಯ ಸೇವೆಯೇ ಅಲ್ಲದೆ ಜೀವಶಾಸ್ತ್ರ ಪ್ರಾಧ್ಯಾಪಕರಾಗಿಯೂ  ಸೇವೆ ಸಲ್ಲಿಸಿರುವ ಶ್ರೀಯುತರು ಅಂತತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರಾಗಿಯೂ ಹೆಸರಾಗಿದ್ದಾರೆ.

ರಮಾಕಾಂತ್ ಅವರು 1948ರ ನವೆಂಬರ್ 5ರಂದು ಮೇರುಕಲಾವಿದ ಪದ್ಮಭೂಷಣ ಸಂಗೀತ ಕಲಾನಿಧಿ ವಿದ್ವಾನ್  ಆರ್.ಕೆ. ಶ್ರೀಕಂಠನ್ ಮತ್ತು ಮೈತ್ರೇಯಿ ದಂಪತಿಯ ಸುಪುತ್ರರಾಗಿ  ಮೈಸೂರಿನಲ್ಲಿ ಜನಿಸಿದರು.

ತಮ್ಮ 5 ನೆಯ ವಯಸ್ಸಿನಲ್ಲೇ ಸಂಗೀತದಲ್ಲಿ ಒಲವನ್ನು ಮೂಡಿಸಿಕೊಂಡ ರಮಾಕಾಂತ್ ಅವರು, ಸಂಗೀತ ಶಿಕ್ಷಣವನ್ನು ತಮ್ಮ ತಂದೆಯವರಾದ ಮಹಾನ್ ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರಲ್ಲಿಯೂ ಮತ್ತು ತಮ್ಮ ದೊಡ್ಡಪ್ಪನವರಾದ ಹೆಸರಾಂತ ಪಿಟೀಲು ವಿದ್ವಾಂಸರಾಗಿದ್ದ ಕಲೈಮಾಮಣಿ ಸಂಗೀತಕಲಾರತ್ನ ವಿದ್ವಾನ್ ಆರ್.ಕೆ.ವೆಂಕಟರಾಮ ಶಾಸ್ತ್ರಿಗಳಲ್ಲಿಯೂ ಪಡೆದರು .

ಮೆದುವಾದ ಸುಮಧುರ, ಸಂಪದ್ಭರಿತ, ಸಿರಿಕಂಠದ ರಮಾಕಾಂತ್ ಅವರ ಸಂಗೀತವು, ಸಂಪ್ರದಾಯ ಬದ್ಧತೆಗೂ, ಘನವಾದ ಕಲ್ಪನೆಗೂ ಹೆಸರುವಾಸಿಯಾಗಿದೆ.  ಇವರು ದೇಶ ವಿದೇಶಗಳ  ಪ್ರಮುಖ ಸಂಗೀತ ಸಭೆಗಳಲ್ಲಿ ಮತ್ತು ಉತ್ಸವಗಳಲ್ಲಿ ಕಳೆದ 60 ವರ್ಷಗಳಿಂದ ಕಛೇರಿಗಳನ್ನು ನೀಡುತ್ತಾ ಬಂದಿದ್ದಾರೆ.  ಮಹಾನ್ ವಿದ್ವಾಂಸರಾಗಿದ್ದ ತಮ್ಮ ತಂದೆಯವರೊಂದಿಗೆ 45 ವರ್ಷಗಳ ಕಾಲ ಸಹಗಾಯನದಲ್ಲಿ  ಶೋಭಿಸಿದ್ದಾರೆ.  ಸಾರ್ಕ್ ದಾಕ್ಷಿಣ ಸಾಂಸ್ಕೃತಿಕ ಉತ್ಸವ, ದಸರಾ ಸಂಗೀತೋತ್ಸವ, ಸೋಮನಾಥಪುರದಲ್ಲಿನ ಸಾಂಸ್ಕೃತಿಕ ಉತ್ಸವ, ಕೇರಳದ ತಿರುವನಂತಪುರದಲ್ಲಿನ ಪ್ರಖ್ಯಾತ ಸೂರ್ಯ ಸಾಂಸ್ಕೃತಿಕ ಉತ್ಸವ; ಸಂಗೀತ ಸಭೆಗಳಾದ ಬೆಂಗಳೂರು ಗಾಯನ ಸಮಾಜ, ಮಲ್ಲೇಶ್ವರಂ ಸಂಗೀತ ಸಭಾ, ಕರ್ನಾಟಕ ಗಾನಕಲಾಪರಿಷತ್, ಮದ್ರಾಸಿನ ಮ್ಯೂಸಿಕ್ ಅಕಾಡೆಮಿ, ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ, ಚೆನ್ನೈನ ಕೃಷ್ಣ ಗಾನ ಸಭಾ, ಶ್ರೀ ಪಾರ್ಥಸಾರಥಿ ಸ್ವಾಮಿ ಸಭಾ, ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತ ಸಭಾ, ಕೊಯಮತ್ತೂರಿನ ರಸಿಕಪ್ರಿಯ, ಕೇರಳದ ಕಲ್ಲಿಕೋಟೆಯ ಸದ್ಗುರು ಸಂಗೀತ ಸಭಾ, ಆಂಧ್ರದ ವಿಜಯನಗರಂನ ವಿಜಯಕಲಾ ಭಾರತೀ, ಮಧುರೈ ಸದ್ಗುರು ಸಂಗೀತ ಸಭಾ, ತಿರುಚ್ಚಿ ಫೈನ್ ಆರ್ಟ್ಸ್ , ರಸಿಕ ರಂಜನಾ ಸಭಾ ಕಲ್ಕತ್ತೆ, ಹೈದೆರಾಬಾದಿನ ಕಲಾ ಸಾಗರಂ, ಎರ್ನಾಕುಲಂನ ರಸಿಕಪ್ರಿಯ, ನವದೆಹಲಿಯ ಮ್ಯೂಸಿಕ್ ಎಜುಕೇಶನ್ ಟ್ರಸ್ಟ್ , ತ್ರಿಚೂರಿನ ವಿವೇಕಾನಂದ ಸಭಾ, ಗುರುವಾಯೂರು ಚಂಬೈ ಸಂಗೀತೋತ್ಸವ ಹೀಗೆ ಇವರ ಸಂಗೀತ ನಾಡಿನೆಲ್ಲೆಡೆ ಹರಿದಿದೆ.   ಇದಲ್ಲದೆ 1989ರಲ್ಲಿ ಲಂಡನ್ ಭಾರತೀಯ ವಿದ್ಯಾ ಭವನದ ಆಹ್ವಾನದ ಮೇರೆಗೆ ಲಂಡನ್‍ನಲ್ಲಿ, ಸ್ವಿಡ್ಜರ್ಲ್ಯಾಂಡ್‍ನಲ್ಲಿ, 1990 - 92 ರಲ್ಲಿ ಆಸ್ಟ್ರೇಲಿಯಾದಲ್ಲಿ , 1993ರಲ್ಲಿ ಕೇಂದ್ರ ಸರ್ಕಾರದ ಐ.ಸಿ.ಸಿ.ಆರ್ ವತಿಯಿಂದ ಯುನೈಟೆಡ್ ಕಿಂಗ್ಡಮ್‍ನಲ್ಲಿ ಯೂನಿವರ್ಸಿಟಿ ಸಂಗೀತ ಸರಣಿಯಲ್ಲಿ, 2002 ರಿಂದ ಇಂದಿನವರೆಗೆ ಅನೇಕ ಬಾರಿ ಅಮೇರಿಕಾದ ಪ್ರವಾಸ ಮಾಡಿ ಕ್ಲೀವ್ ಲ್ಯಾಂಡ್ ಸಂಗೀತೋತ್ಸವದಲ್ಲಿ ಭಾಗವಹಿಸಿ, 2008 ರಲ್ಲಿ ಫ್ರಾನ್ಸ್ ಪ್ರವಾಸ ಮಾಡಿ ಸಂಗೀತ ಕಾರ್ಯಕ್ರಮಗಳನ್ನು ಮತ್ತು ಉಪನ್ಯಾಸಗಳನ್ನು ನೀಡಿ ಅಪಾರ ಹೆಸರನ್ನು ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಮೇರಿಕಾದ ಪಿಟ್ಸ್ ಬರ್ಗ್ ವೆಂಕಟೇಶ್ವರ ದೇವಾಲಯದವರು ಇವರನ್ನು 2006ರಲ್ಲಿ ಬೇಸಿಗೆ ಸಂಗೀತ ಶಿಬಿರವನ್ನು ನಡೆಸಲು ಆಹ್ವಾನಿಸಿದ್ದರು .

ಆಕಾಶವಾಣಿಯ "ಎ" ಟಾಪ್ ದರ್ಜೆ ಕಲಾವಿದರಾದ ರಮಾಕಾಂತ್ ಅವರು ಆಕಾಶವಾಣಿಯ ರೇಡಿಯೋ ಸಂಗೀತ ಸಮ್ಮೇಳನ, ರಾಷ್ತ್ರೀಯ ಕಾರ್ಯಕ್ರಮಗಳಲ್ಲೂ ಮತ್ತು ದೂರದರ್ಶನದ ಕಾರ್ಯಕ್ರಮಗಳಲ್ಲೂ ಸತತವಾಗಿ ಭಾಗವಹಿಸುತ್ತಿದ್ದಾರೆ. ಆಕಾಶವಾಣಿಯ ಕೇಂದ್ರ ಧ್ವನಿ ಪರೀಕ್ಷೆ ಸಮಿತಿಯ ( ಆಡಿಷನ್ ಬೋರ್ಡ್ ) ಸದಸ್ಯರಾಗಿದ್ದಾರೆ.

ರಮಾಕಾಂತ್ ಅವರು ಶ್ರೀ ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿರುವುದು ಅತ್ಯಂತ ವಿಶೇಷವಾದ ಮತ್ತು ಹೆಗ್ಗಳಿಕೆಯ ವಿಷಯವಾಗಿದೆ. ಆ ಪರಂಪರೆ ಹೀಗಿದೆ : ಶ್ರೀ ತ್ಯಾಗರಾಜರು - ವಾಲಾಜಪೇಟೆ ವೆಂಕಟರಮಣ ಭಾಗವತರು - ಮೈಸೂರು ಸದಾಶಿವರಾಯರು - ವೀಣಾಸುಬ್ಬಣ್ಣ - ಆರ್.ಕೆ.ವೆಂಕಟರಾಮ ಶಾಸ್ತ್ರಿ - ಆರ್.ಕೆ.ಶ್ರೀಕಂಠನ್ - ಆರ್. ಎಸ್. ರಮಾಕಾಂತ್ .

ವಿದ್ವಾನ್ ರಮಾಕಾಂತ್ ಅವರು ಅನೇಕ ಶಿಷ್ಯರುಗಳನ್ನು ತಯಾರು ಮಾಡಿದ್ದಾರೆ. 

ವಿದ್ವಾನ್ ರಮಾಕಾಂತ್ ಅವರಿಗೆ ಸಂದ ಕೆಲವು ಗೌರವಗಳು ಹೀಗಿವೆ :

 1. ಅಮೆರಿಕನ್ ಬೈಯೋಗ್ರಾಫಿಕಲ್ ಸೊಸೈಟಿ ಯ ಇಂಟರ್ನ್ಯಾಷನಲ್ “Who’s who” ಪಟ್ಟಿಯಲ್ಲಿ ಸೇರ್ಪಡೆ (1985).

2. ಅತ್ಯುತ್ತಮ ಸಂಗೀತಗಾರ ಎಂಬ ಗೌರವ - ಬೆಂಗಳೂರು ಗಾಯನ ಸಮಾಜ ಸಂಗೀತ ಸಮ್ಮೇಳನದಲ್ಲಿ ( 1975 ) ಮತ್ತು ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯಲ್ಲಿ (1993).

3. ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯಲ್ಲಿ ಶ್ರೀಪಾದ ಪಿನಾಕಪಾಣಿ ಅವರ ಅತ್ಯುತ್ತಮ ರಾಗಾಲಾಪನೆ ಪ್ರಶಸ್ತಿ (1996).

4. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಘದಿಂದ ಸಂಗೀತಕಲಾ ಪ್ರಪೂರ್ಣ ಬಿರುದು (1998 ).

5. ರೋಟರಿ ಕ್ಲಬ್, ಕಬ್ಬನ್ ಪಾರ್ಕ್ ಅವರಿಂದ ಎಕ್ಸೆಲೆನ್ಸ್ ಗೌರವ (2012).

6. ಸುಸ್ವರಲಯ ಸಂಸ್ಥೆಯಿಂದ ಸ್ವರಲಯಶೃಂಗ ಪ್ರಶಸ್ತಿ (2011)

7. ಕಂಚಿಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಗೌರವ (2011)

8. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ (2013)

9. ಮಧುರ ಮುರಳಿ ಬಿರುದು, ವಿಪಂಚಿ ಸಂಸ್ಥೆ, ಚೆನೈ, ಡಾ. ಎಂ. ಬಾಲಮುರಳಿಕೃಷ್ಣ ಅವರ 82ನೇ ಜನ್ಮದಿನೋತ್ಸವದ ಅಂಗವಾಗಿ (೨೦೧೨)

10. ಸ್ವರರಾಗ ಸಾರಗ್ಯರ್ ಬಿರುದು, ಶ್ರೀ ಶ್ರೀ ಅಂಡವನ್ ಸ್ವಾಮೀಜಿಯವರಿಂದ, ಚೆನೈ (2016)

11. ಗಾನವಾರಿಧಿ ಬಿರುದು, ವಿದ್ವಾನ್ ಎಂ. ಎ. ನರಸಿಂಹಚಾರ್ ಟ್ರಸ್ಟ್, ಬೆಂಗಳೂರು (2017)

12. ಅನನ್ಯ ಪುರಸ್ಕಾರ, ಅನನ್ಯ ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರು (2018)

13. ಸಂಗೀತ ಕಲಾ ಸಾಗರಂ ಬಿರುದು, ಬೈರವಿ ಫೈನ್ ಆರ್ಟ್ಸ್, ಕ್ಲೀವ್‌ಲ್ಯಾಂಡ್, ಯ.ಎಸ್.ಎ.    (2023)

ರಮಾಕಾಂತ್ ಅವರು ಸಂಗೀತವಲ್ಲದೆ, ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದು, ನಂತರ ಸಂಶೋಧನೆಯನ್ನು ನಡೆಸಿ, ಬೆಂಗಳೂರಿನ ಕಾಲೇಜು ಒಂದರಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ 30 ವರ್ಷಗಳ ಸೇವೆ ಸಲ್ಲಿಸಿದ್ದಾರೆ.  ಇವರು ಕರ್ನಾಟಕ ಮಾಧ್ಯಮಿಕ ಶಿಕ್ಷಣ ಇಲಾಖೆಯ ಸಂಗೀತ ಶಿಕ್ಷಣ (ಸೀನಿಯರ್ ಮತ್ತು ವಿದ್ವತ್ ಹಂತ ಪರೀಕ್ಷೆಗೆ) ಪಠ್ಯ ಪುಸ್ತಕದ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 1995 ರಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ವಿದ್ವಾನ್ ಆರ್.ಕೆ . ಶ್ರೀಕಂಠನ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ವತಿಯಿಂದ ಪ್ರತಿ ವರ್ಷವೂ ಜನವರಿ ತಿಂಗಳಲ್ಲಿ ಸಂಕ್ರಾಂತಿ ಸಂಗೀತೋತ್ಸವವೆಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಹಿರಿಯ ಹೆಸರಾಂತ ಕಲಾವಿದರಿಗೆ ಸನ್ಮಾನ, ಕಿರಿಯ ಹಿರಿಯ ಕಲಾವಿದರಿಂದ ಸಂಗೀತ ಮತ್ತು ಹರಿಕಥೆ, ಧ್ವನಿಸುರಳಿ ಮತ್ತು ಸಂಗೀತದ ಬಗ್ಗೆ ಕಿರು ಹೊತ್ತಿಗೆಗಳ ಬಿಡುಗಡೆ ಇತ್ಯಾದಿಗಳನ್ನು ನಡೆಸಿಕೊಂಡು ಬಂದಿದ್ದು ಸಂಗೀತ ಕ್ಷೇತ್ರಕ್ಕೆ  ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

ರಮಾಕಾಂತ್ ಅವರು ಒಬ್ಬ ಉನ್ನತ ವನ್ಯಜೀವಿ ಮತ್ತು ಭಾವಚಿತ್ರಗಳ ಛಾಯಾಚಿತ್ರಗ್ರಾಹಕರಾಗಿ ಅನೇಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ, ಗೌರವಗಳನ್ನು ಗಳಿಸಿದ್ದಾರೆ. ಇವರು ಇಂಗ್ಲೆಂಡಿನ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯಿಂದ ಎ.ಆರ್.ಪಿ.ಎಸ್ ಗೌರವ ಮತ್ತು ಫ್ರಾನ್ಸಿನ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಆರ್ಟ್ ಫೋಟೋಗ್ರಫಿಯ ಎ.ಎಫ್.ಐ.ಎ.ಪಿ ಮತ್ತು ಇ.ಎಫ್.ಐ.ಎ.ಪಿ ಗೌರವವನ್ನು ಗಳಿಸಿದ್ದಾರೆ. ಭಾರತದ ಎಫ್.ಐ.ಪಿ ಯಿಂದ ಇ.ಎಫ್.ಐ.ಪಿ. ಗೌರವವನ್ನು ಗಳಿಸಿದ್ದಾರೆ. 

ಮಹಾನ್ ಸಾಧಕರಾದ ವಿದ್ವಾನ್ ರುದ್ರಪಟ್ನಮ್ ಎಸ್.ರಮಾಕಾಂತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

On the birthday of Great Musician Rudrapatnam Ramakanth 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ